ಮಹಿಳಾ ಸಾಹಿತ್ಯದ ಚರಿತ್ರೆ ಎಂದರೆ ಮಹಿಳೆಯರು ತಮ್ಮ ಅನುಭವಗಳು, ಸಮಾಜದ ಸ್ಥಿತಿ, ರಾಜಕೀಯ ಅಭಿಪ್ರಾಯಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ ಪಯಣವಾಗಿದ್ದು, ಇದು ಪ್ರಾಚೀನ ಕಾಲದಿಂದಲೂ ಇದ್ದು, ಅಮೇರಿಕಾದ ಕ್ರಾಂತಿಯಂತಹ ಸಂದರ್ಭಗಳಲ್ಲಿ ತೀವ್ರಗೊಂಡಿತು; ಇವರು ಮನೆ, ಸಮಾಜ ಮತ್ತು ಪ್ರಕೃತಿಯೊಂದಿಗಿನ ಸಂಬಂಧಗಳನ್ನು ಕಾದಂಬರಿ, ಕವಿತೆಗಳ ಮೂಲಕ ನಿರೂಪಿಸಿ, ಮಹಿಳೆಯರ ಸ್ಥಾನಮಾನದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ, ಇದು ಮುಖ್ಯವಾಗಿ ಸ್ತ್ರೀವಾದಿ ಚಿಂತನೆಗಳನ್ನು ಜಗತ್ತಿಗೆ ಪರಿಚಯಿಸಿದೆ.
ಮಹಿಳಾಪರ ಚಿಂತನೆ ಆಲೋಚನೆಗಳು ಕಥೆ ಕಾದಂಬರಿ ಕಾವ್ಯ ಸಾಹಿತ್ಯ ರಚನೆಯಲ್ಲಿ ಮುಕ್ತವಾಗಿ ಬರೆಯಲು ಆರಂಭಿಸಿದರು ಕನ್ನಡತಿಯರು. 12 ನೆಯ ಶತಮಾನದ ಶ್ರೇಷ್ಠ ವಚನಕಾರ್ತಿಯರು ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜ ಕಟ್ಟಿದರು.
ನವ್ಯ ನವೋದಯ ಪ್ರಗತಿಶೀಲ ಬಂಡಾಯ ದಲಿತ ಸಾಹಿತ್ಯ ಹೀಗೆ ಎಲ್ಲಾ ಘಟ್ಟಗಳಲ್ಲಿ ವಚನ ಸಾಹಿತ್ಯ ಮತ್ತು ಶರಣೆಯರ ಸಾಹಿತಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳನ್ನು ಮರೆಯಲಾಗದು. ಕನ್ನಡ ಸಾಹಿತ್ಯದಲ್ಲಿ ಜಯದೇವಿ ತಾಯಿ ಲಿಗಾಡೆ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತು ಸಮಗ್ರ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮವಾಗಿ ದುಡಿದವರು ಶಾಂತಾದೇವಿ ಮಾಳವಾಡ ಅವರು.
ಶಾಂತಾದೇವಿ ಮಾಳವಾಡ ಇವರು 1922 ಡಿಸೆಂಬರ್ 10 ರಂದು ಬೆಳಗಾವಿ ಯಲ್ಲಿ ಜನಿಸಿದರು. ತಾಯಿ ಜಯವಂತಿದೇವಿ; ತಂದೆ ಕರ್ಜಗಿ ಮುರಿಗೆಪ್ಪ ಶೆಟ್ಟರು. ತವರು ಮನೆ ಹೆಸರು ಕರ್ಜಗಿ ದಾನಮ್ಮ. ಎರಡು ವರ್ಷದವಳಿದ್ದಾಗ ತಂದೆಯನ್ನು ಹಾಗು ಹತ್ತು ವರ್ಷದವಳಿದ್ದಾಗ ತಾಯಿಯನ್ನು ಕಳೆದುಕೊಂಡ ದಾನಮ್ಮ ಅಜ್ಜಿಯ ಮಡಿಲಲ್ಲಿ ಬೆಳೆದಳು. ವನಿತಾ ವಿದ್ಯಾಲಯದಲ್ಲಿ ಹೈಸ್ಕೂಲ ಎರಡನೆಯ ತರಗತಿಯವರೆಗೆ ಅಂದರೆ ಒಂಬತ್ತನೆಯ ತರಗತಿ ಕಲಿತು, ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು.
ಶಾಂತಾದೇವಿ ಮಾಳವಾಡ ಅವರು ತಮ್ಮ 15 ನೆಯ ವಯಸ್ಸಿನಲ್ಲಿ 1937 ನೆಯ ಇಸವಿಯಲ್ಲಿ ಪ್ರೊ. ಸ.ಸ. ಮಾಳವಾಡರ ಜೊತೆ ಮದುವೆ ಆಯಿತು. ಮುಂದೆ ತಮ್ಮ ಪತಿಯ ಒತ್ತಾಸೆಯಿಂದಾಗಿ ಶಾಂತಾದೇವಿಯವರು ಮನೆಯಲ್ಲಿಯೆ ಇಂಗ್ಲೀಷ್,ಹಿಂದಿ, ಪ್ರಾಚೀನ ಕನ್ನಡ ಸಾಹಿತ್ಯ ಹಾಗು ವಚನ ಸಾಹಿತ್ಯದ ಅಧ್ಯಯನ ಮಾಡಿದರು. 1940 ರಲ್ಲಿ ಕನ್ನಡ ಜಾಣ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪತಿಯ ಪ್ರೋತ್ಸಾಹದಿಂದ 1938ರಲ್ಲಿ ಅಕ್ಕನ ಬಳಗ ವೆಂಬ ಮಹಿಳಾ ಸಂಘಟನೆಯನ್ನು ಹುಟ್ಟು ಹಾಕಿದರು.
ಶಾಂತಾದೇವಿ ತಾಯಿಯ ಮಮತೆ ತಂದೆಯ ಪ್ರೀತಿ ಕಾಣದ ಮುಗ್ಧ ಬಾಲಕಿ ಸುಮಾರು ಹತ್ತು ಸಲ ಅವರಿಗೆ ಗರ್ಭಪಾತವಾಯಿತು.ಮಕ್ಕಳಿಲ್ಲದ ಕೊರಗು ಬಿಟ್ಟು ಸಂಪೂರ್ಣ ಸಾಹಿತ್ಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದರು.ಅರಿವು (ಜ್ಞಾನ, ಅರಿವು), ಆಚಾರ (ಅಭ್ಯಾಸ) ಅನುಭವ (ಆಧ್ಯಾತ್ಮಿಕ ಅನುಭವ), ಕಾಯಕ (ದೈಹಿಕ ದುಡಿಮೆಯಿಂದ ಗಳಿಸುವುದು), ಸತ್ಯ ಮತ್ತು ಪರಿಶುದ್ಧತೆಯನ್ನು ಕಾಪಾಡುವುದು, ದಾಸೋಹ (ಯಾವುದೇ ಅಹಂ’ ಇಲ್ಲದೆ ದುಡಿದವರಿಗೆ ನೀಡುವುದು ಶರಣ ಸಂಸ್ಕೃತಿಯ ತತ್ವಗಳು. ಬಾಲ್ಯದಿಂದಲೂ ಇಂತಹ ಅಪೂರ್ವ ಶರಣ ಸಂಸ್ಕೃತಿ ಮೈಗೂಡಿಸಿಕೊಂಡ ಶಾಂತಾದೇವಿ ಮುಂದೊಂದು ದಿನ ನಾಡಿನ ಅಗ್ರ ಲೇಖಕಿ ಸಾಹಿತಿ ಲೇಖಕಿಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
*ಸಾರ್ವಜನಿಕ ಸೇವೆ*
ಅಕ್ಕನ ಬಳಗ ಸ್ಥಾಪನೆ ( 1940) ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು (1965) ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿಯ ಸದಸ್ಯರು (1974-1978) ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರು (1979) ಧಾರವಾಡ ಆಕಾಶವಾಣಿ ಆಡಿಶನ್ ಕಮಿತಿ ಸದಸ್ಯರು(1961-1962) ಗಾಂಧಿ ಶಾಂತಿ ಪ್ರತಿಷ್ಠಾನದ ಮಹಿಳಾವಿಭಾಗದ ಕಾರ್ಯಾಧ್ಯಕ್ಷರು(1967-1970) ಕರ್ನಾಟಕ ವಿದ್ಯಾವರ್ಧಕ ಸಂಘ,ಧಾರವಾಡ ದ ಉಪಾಧ್ಯಕ್ಷರು (1974-1978) ಉತ್ತರ ಕರ್ನಾಟಕ ಲೇಖಕಿಯರ ಸಂಘ (ಹುಬ್ಬಳ್ಳಿ-ಧಾರವಾಡ) ದ ಆಜೀವ ಗೌರವಾಧ್ಯಕ್ಷರು
*ಸಾಹಿತ್ಯ ಕೃತಿಗಳು*
ಕಥಾಸಂಕಲನ ಮೊಗ್ಗೆಯ ಮಾಲೆ, ಕುಂಕುಮ ಬಲ
*ಗದ್ಯ ಸಾಹಿತ್ಯ*
ಹಚ್ಚೇವು ಕನ್ನಡದ ದೀಪ.
ಕನ್ನಡದ ತಾಯಿ.
ಮಹಿಳೆಯರ ಅಲಂಕಾರ
ಸೊಬಗಿನ ಮನೆ
ಮಹಿಳೆಯರ ಆತ್ಮಶ್ರೀ.
ರಸಪಾಕ
ಸಾರ್ವಜನಿಕ ರಂಗದಲ್ಲಿ ಮಹಿಳೆ.
ದಾಂಪತ್ಯಯೋಗ
ವಧುವಿಗೆ ಉಡುಗೊರೆ.
ಜನನೀ ಜನ್ಮ ಭೂಮಿಶ್ಚ.
ಮಹಿಳಾ ಚೇತನ.
ಸಮುಚ್ಚಯ.
*ಕಾದಂಬರಿ*
ಬಸವ ಪ್ರಕಾಶ.
ದಾನದಾಸೋಹಿ ದಾನಮ್ಮ.
ವೀರ ಶೂರರಾಣಿ ಕೆಳದಿ ಚೆನ್ನಮ್ಮ
*ಮಕ್ಕಳ ಸಾಹಿತ್ಯ*
ಬೆಳವಡಿ ಮಲ್ಲಮ್ಮ.
ಕೆಳದಿ ಚೆನ್ನಮ್ಮ.
ನಾಗಲಾಂಬಿಕೆ.
ನೀಲಾಂಬಿಕೆ
ಕುಟುಂಬ.
ಬಸವಯುಗದ ಶಿವಶರಣೆಯರು
ಭಾರತದ ಮಾನಸಪುತ್ರಿಯರು
ಗಂಗಾಂಬಿಕೆ
ಶಿವಯೋಗಿಣಿ
ಎಣ್ಣೆ ಹೊಳೆಯ ನಂದಾದೀಪ
ಪುರಾತನ ಶರಣರು
ದಾನದಾಸೋಹಿ ದಾನಮ್ಮ.
*ಪ್ರಶಸ್ತಿ ಗೌರವಗಳು*
ಜ.ಚ.ನಿ. ಪೀಠಾರೋಹಣ ಬೆಳ್ಳಿಹಬ್ಬ ‘ ಸಾಹಿತ್ಯಸುಮ ‘ ಬಂಗಾರದ ಪದಕ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1973)
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1983)
ಸಾವಿತ್ರಮ್ಮ ದೇ.ಜ.ಗೌ. ಪ್ರಶಸ್ತಿ (1991)
ಷಷ್ಟ್ಯಬ್ದಿ ಸಮಾರಂಭ (‘ ಪ್ರಶಾಂತ’ ಆಭಿನಂದನ ಗ್ರಂಥ ಸಮರ್ಪಣೆ:1982)
1999 ರಲ್ಲಿ ಬಾಗಲಕೋಟೆಯಲ್ಲಿ ನಡೆದ 68 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೇಷ್ಠ ಸಾಹಿತಿ ಶಾಂತಾದೇವಿ ಮಾಳವಾಡ ಅವರು 7 ಆಗಸ್ಟ್ 2005 ರಲ್ಲಿ ಬಯಲಲ್ಲಿ ಬಯಲಾದರು. ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ನೇಹ ಪ್ರೀತಿ ಮತ್ತು ಆತ್ಮ ಸ್ಥೈರ್ಯದ ಸಂಕೇತವಾದ ಕನ್ನಡ ಸಾಹಿತ್ಯದ ದಿಗ್ಗಜೆ ಶಾಂತಾದೇವಿ ಮಾಳವಾಡ ಅವರು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಕೊಟ್ಟ ಕೊಡುಗೆ ಅಪಾರವಾಗಿದೆ.
__________________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

