ಲೇಖನ : ಬ್ರಿಟಿಷರ ಪಾಲಿನ ಸಿಂಹ ಸ್ವಪ್ನ ಮೈಲಾರ ಮಹದೇವಪ್ಪ

Must Read

   ಸೂರ್ಯನು ಮುಳುಗದ ಸಾಮ್ರಾಜ್ಯವೆಂದು ಇಂಗ್ಲಿಷ್ ರಾಜ್ಯಕ್ಕೆ ಹೆಸರಿತ್ತು. ಇಡೀ ಜಗತ್ತನ್ನು ಆಕ್ರಮಿಸಿದ ಬ್ರಿಟಿಷರು ಎಲ್ಲೆಲ್ಲೂ ತಮ್ಮ ಅಧಿಪತ್ಯ ಮೆರೆಯಬೇಕೆಂಬ ಯೋಚನೆ ಆಸೆ ಇತ್ತು. ಬ್ರಿಟಿಷರ ವಿರುದ್ಧ ನಡೆದ ಶಾಂತಿಯುತ ಮತ್ತು ಕ್ರಾಂತಿಕಾರಕ ಸಂಘರ್ಷಗಳಲ್ಲಿ ಅನೇಕರು ಹುತಾತ್ಮರಾದರು.ಗಾಂಧೀಜಿಯವರಿಂದ ಪ್ರಭಾವಗೊಂಡ ಮೈಲಾರ ಮಹದೇವಪ್ಪ ಮುಂದೆ ಅಹಿಂಸಾ ಮಾರ್ಗ ಮೂಲಕವೇ  ಹಲವು ಹೋರಾಟ ನಡೆಸಿ ಕೊನೆಗೆ ಬ್ರಿಟಿಷರ ಕೋವಿಗೆ ತುತ್ತಾದರು.

      ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಎಂಬುದೊಂದು ಹಳ್ಳಿ. ಆ ಹಳ್ಳಿಯಲ್ಲಿ ದೇಶಭಕ್ತರೊಬ್ಬರು ಭಾಷಣ ಮಾಡುತ್ತಿದ್ದರು. ಅವರ ಭಾಷಣದಲ್ಲಿ “ವಿದೇಶೀ ವಸ್ತ್ರಗಳನ್ನು ತ್ಯಜಿಸಿ ನಮ್ಮ ದೇಶದಲ್ಲೇ ತಯಾರು ಮಾಡಿದ ಬಟ್ಟೆಗಳನ್ನು ತೊಡಬೇಕು” ಎಂದೆಲ್ಲ ಹೇಳುತ್ತಿದ್ದರು. ಆ ಮಾತು ಕೇಳುತ್ತಿದ್ದ 8-10 ವರ್ಷದ ಒಬ್ಬ ಬಾಲಕ ತನ್ನ ತಲೆ ಮುಟ್ಟಿ ನೋಡಿದ. ಅವನ ತಲೆಯ ಮೇಲೆ ವಿದೇಶಿ ಟೊಪ್ಪಿಗೆ ಇತ್ತು. ಕೂಡಲೆ ಟೊಪ್ಪಿಗೆಯನ್ನು ತೆಗೆದು ನೆಲಕ್ಕೆಸೆದ. ಹೀಗೆ ಟೊಪ್ಪಿಗೆ ನೆಲಕ್ಕೆಸೆದ ಹುಡುಗನ ಹೆಸರು ಮೈಲಾರ ಮಹಾದೇವ.

      8 ನೆಯ ಜೂನ್ 1911ರಂದು ಮೋಟೆಬೆನ್ನೂರಿನಲ್ಲಿ ಜನಿಸಿದರು. ತಂದೆ ಮಾರ್ತಾಂಡಪ್ಪ, ಮಹಾದೇವನ ತಾಯಿ ಬಸಮ್ಮ ದೇಶಪ್ರೇಮಿ. ಆ ಹೊತ್ತಿಗೆ ಬ್ರಿಟಿಷರ ವಿರುದ್ಧ ಹೋರಾಡಿದ್ದ ಆ ತಾಯಿ ಜೈಲುವಾಸವನ್ನು ಅನುಭವಿಸಿದವರು. ಆ ತಾಯಿಗೆ ತಕ್ಕ ಮಗ ಮಹಾದೇವ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೋಟೆಬೆನ್ನೂರಿನಲ್ಲಿ ಮುಗಿಸಿದ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಹತ್ತಿರವಿದ್ದ ಹಂಸಭಾವಿಯ ಶಾಲೆಗೆ ಹೋದ. ಆದರೆ ಆತನಿಗೆ ಓದು ರುಚಿಸಲಿಲ್ಲ. ಸ್ವದೇಶೀ ಬಟ್ಟೆಗಳ ವಿಚಾರ ಯಾವಾಗಲೂ ಮನಸ್ಸಿನಲ್ಲಿ ಗುನುಗುಡುತ್ತಿತ್ತು. ಮಹಾತ್ಮಾ ಗಾಂಧೀಜಿ ಖಾದಿ ಬಟ್ಟೆಯ ಬಗೆಗೆ ಒಲವು ಹೊಂದಿದ್ದು, ಎಲ್ಲ ಕಡೆಯಲ್ಲೂ ಆ ವಿಚಾರ ಪ್ರಚಾರ ಮಾಡುತ್ತಿದ್ದರು. ಬಾಲಕ ಮಹಾದೇವನಿಗೆ ಖಾದಿ ಬಟ್ಟೆಯನ್ನು ಕುರಿತು ಪ್ರಚಾರಮಾಡಬೇಕೆಂಬ ಆಸೆ ಹೆಚ್ಚಾಯಿತು.

      ಮಹಾದೇವನಿಗೆ ಹನ್ನೆರಡು-ಹದಿಮೂರರ ಹರೆಯ. ವಿಜಯಪುರ ಜಿಲ್ಲೆಯಲ್ಲಿ ಕಲಾದಗಿ ಎಂಬ ಒಂದು ಗ್ರಾಮ ಅಲ್ಲಿ ಆ ಕಾಲದಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು. ಮಹಾದೇವ ಅಲ್ಲಿಗೆ ಹೋದ. ಅಲ್ಲಿ ಖಾದಿಯನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಂಡ. ಖಾದಿಯನ್ನು ಹೊತ್ತು ಊರೂರು ತಿರುಗಿ ಮಾರಾಟ ಮಾಡಿದ. ಖಾದಿ ಬಳಕೆಯನ್ನು ಕುರಿತು ಪ್ರಚಾರವನ್ನೂ ನಡೆಸಿದ.

     ಮಹಾದೇವ ಅವರಿಗೆ ಸಬರಮತಿ ಆಶ್ರಮದಿಂದ ಕರೆ ಬಂದಿತು. ಮಹಾದೇವ ಅಲ್ಲಿಗೆ ಹೋದರು. ಆ ವೇಳೆಗೆ ಪ್ರಸಿದ್ಧ ದಂಡಿ ಸತ್ಯಾಗ್ರಹ ನಡೆಯುತ್ತಿತ್ತು. ಗಾಂಧೀಜಿಯವರೊಡನೆ ದಂಡಿಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದವರಿಗೆ ಸೆರೆಮನೆ ವಾಸದ ಶಿಕ್ಷೆಯಾಯಿತು. ಮಹಾದೇವ ಆರು ತಿಂಗಳು ಸೆರೆಮನೆಯಲ್ಲಿ ಕಳೆದರು.

      ದಂಡಿಯಾತ್ರೆ ಮುಗಿದು ಮಹಾದೇವ ಹುಟ್ಟೂರಿಗೆ ವಾಪಸ್ಸು ಬಂದರು. ಆ ಹೊತ್ತಿಗಾಗಲೇ ದಂಡಿಯಾತ್ರೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ ಸ್ವಾತಂತ್ರ್ಯ ಸೇನಾನಿ ಎಂಬುದಾಗಿ ಅವರಿಗೆ ಹೆಸರು ಬಂದಿತ್ತು. ಊರಿನಲ್ಲಿ ಮಹಾದೇವ ಅವರಿಗೆ ಅದ್ದೂರಿಯ ಸ್ವಾಗತ ಸಿಕ್ಕಿತು.

     ಮಹಾದೇವ ತಮ್ಮ ಹೆಂಡತಿ ಸಿದ್ದಮ್ಮ ಅವರನ್ನು ಸಿದ್ಧಮತಿ ಎಂದು ಕರೆಯುತ್ತಿದ್ದರು. ಸಬರಮತಿಯ ಸುಖವಾಸ ತನಗಷ್ಟೇ ಅಲ್ಲದೆ ಹೆಂಡತಿಗೂ ಆಗಬೇಕೆಂದು ಅವರನ್ನೂ ಸಬರಮತಿಗೆ ಕರೆದುಕೊಂಡು ಹೋದರು. ಅಲ್ಲಿ ಸಿದ್ದಮ್ಮ ಬ್ರಿಟಿಷ್ ಸರಕಾರಕ್ಕೆ ಅಸಹಕಾರ ನೀಡುವ ಚಳವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು. ಊರಿಗೆ ಬಂದಿದ್ದ ಮಹಾದೇವ ಇಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು. ಹಿಂಡಲಗಾ ಜೈಲಿನಲ್ಲಿದ್ದಾಗ ಗಾಂಧೀಜಿಯವರು ಅಲ್ಲಿಗೆ ಭೇಟಿ ನೀಡಿ ಮಹಾದೇವರನ್ನು ಕಂಡು ಅವರನ್ನು ಪ್ರೋತ್ಸಾಹಿಸಿದರು.

      ಮಹಾದೇವರಿಗೆ ಜೈಲಿನಿಂದ ಬಿಡುಗಡೆಯಾಯಿತು. ಹಲವಾರು ಬಾರಿ ಜೈಲಿಗೆ ಹೋಗಿದ್ದರಿಂದ ದೇಹದ ಆರೋಗ್ಯದ ಬಗೆಗೆ ಅವರಿಗೆ ಕಾಳಜಿ ಉಂಟಾಯಿತು. ಶಿಸ್ತುಬದ್ಧವಾದ ವ್ಯಾಯಾಮವನ್ನು ಕಲಿಯಬೇಕೆನಿಸಿತು. ವ್ಯಾಯಾಮವನ್ನು ಕಲಿತರು. ವ್ಯಾಯಾಮ ಕಲಿಯುವಾಗಲೇ ಔಷಧಗಳ ಶಾಸ್ತ್ರವನ್ನು ಅಭ್ಯಾಸ ಮಾಡಿದರು. ಹಳ್ಳಿಗರ ಸೇವೆ ಮಾಡುವ ಉದ್ದೇಶದಿಂದ ಒಂದು ಸೇವಾಶ್ರಮವನ್ನು ಪ್ರಾರಂಭಿಸಿದರು. ಗಂಡ-ಹೆಂಡತಿ ಇಬ್ಬರೂ ಸೇವಾಶ್ರಮದ ಸಂಚಾಲಕರಾಗಿ ಚರಕದಿಂದ ನೂಲು ತೆಗೆಯುವುದು, ಪ್ರಕೃತಿ ಚಿಕಿತ್ಸೆ, ವ್ಯಾಯಾಮ ಮುಂತಾದವುಗಳನ್ನು ಹಳ್ಳಿಯ ಜನರಿಗೆ ಅಭ್ಯಾಸ ಮಾಡಿಸಿದರು. ಸೇವಾಶ್ರಮದಲ್ಲಿ ತಯಾರಿಯಾಗುತ್ತಿದ್ದ ಖಾದಿಯನ್ನು ಊರೂರಿಗೆ ಕೊಂಡು ಹೋಗಿ ಮಾರಾಟ ಮಾಡಿದರು. ‘ಮಹಾದೇವನ ಖಾದಿ’ ಎಂದೇ ಇದು ಪ್ರಸಿದ್ಧಿಯಾಯಿತು. ಇದರ ಜೊತೆಯಲ್ಲಿ ಪತಿ-ಪತ್ನಿಯರ ಸ್ವಾತಂತ್ರ್ಯದ ತುಡಿತ, ಹೋರಾಟ ಜನಪ್ರಿಯವಾಯಿತು. ಊರಿನ ಜನರು ಇವರ ಗುಣಗಾನ ಮಾಡಿದರು.

     ಸ್ವಾತಂತ್ರ್ಯ ಹೋರಾಟ ದಿನ ದಿನ ಬೆಳೆಯುತ್ತ ಹೋಯಿತು. 1942ರಲ್ಲಿ ಗಾಂಧೀಜಿಯವರು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಘೋಷಣೆ ಮಾಡಿದರು. ದೇಶದೆಲ್ಲೆಡೆ ಗಾಂಧೀಜಿಯವರ ಘೋಷಣೆಗೆ ಭಾರತೀಯರ ಬೆಂಬಲ ದೊರೆಯಿತು. ದಕ್ಷಿಣ ಭಾಗದ ಈ ಚಳವಳಿಗೆ ಮೈಲಾರ ಮಹಾದೇವ ನೇತೃತ್ವ ವಹಿಸಿದರು. ಹಳ್ಳಿ ಹಳ್ಳಿಗಳಲ್ಲಿ ತಿರುಗಿ ಗಾಂಧೀಜಿಯವರ ಘೋಷಣೆಯನ್ನು ಪ್ರಚಾರ ಮಾಡಿದರು. ಅವರ ಮಾತುಗಳು ದೇಶಭಕ್ತಿಯನ್ನು ಬಡಿದೆಬ್ಬಿಸಿದವು.

     ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕಾದರೆ ಅವರು ನಡೆಸುತ್ತಿರುವ ಆಡಳಿತಕ್ಕೆ ಧಕ್ಕೆ ಉಂಟುಮಾಡಿ ಅವರಿಗೆ ಆಡಳಿತ ನಡೆಸುವುದು ಸಾಧ್ಯವಿಲ್ಲ ಎನಿಸಬೇಕಿತ್ತು. ಮಹಾದೇವ ತಮ್ಮ ಸಂಗಡಿಗರೊಂದಿಗೆ ಇಂಥ ಸಾಹಸಕ್ಕೆ ಅಣಿಯಾದರು. ರೈಲು ಓಡಾಟದ ಮೇಲೆ ಇವರು ಗಮನವಿಟ್ಟರು. ಸವಣೂರು ಎಂಬಲ್ಲಿ ರೈಲು ನಿಲ್ದಾಣವನ್ನು ಬ್ರಿಟಿಷ್ ಪೊಲೀಸರಿಗೆ ಗೊತ್ತಾಗದಂತೆ ಸುಟ್ಟುಹಾಕಿದರು. ಹೊನ್ನತ್ತಿ ಎಂಬಲ್ಲಿ ಪೊಲೀಸರ ಬಂದೂಕು ಅಪಹರಿಸಿದರು. ಬಾಳೆಹೊಸೂರಿನ ಪೊಲೀಸ್ ಕೇಂದ್ರವನ್ನು ಸುಟ್ಟರು.

     ಮಹಾದೇವ ಮತ್ತು ಸಂಗಡಿಗರ ಈ ಕೃತ್ಯಗಳಿಂದ ಬ್ರಿಟಿಷ್ ಸರ್ಕಾರ ನಡುಗಿತು. ಮಹಾದೇವಪ್ಪನವರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸಿತು. ಹಗಲಿರುಳೆನ್ನದೆ ಬ್ರಿಟಿಷ್ ಪೊಲೀಸರು ಮಹಾದೇವ ಹಾಗೂ ಅವರ ತಂಡದವರಿಗಾಗಿ ಶೋಧ ನಡೆಸಿದರು.

      ಸರ್ಕಾರದ ವಿರುದ್ಧ ಜನತೆ ತನ್ನ ಅಸಮ್ಮತಿ, ವಿರೋಧ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗ. ಬ್ರಿಟನ್ ಸರಕಾರ ಭಾರತದ ಮೇಲೆ ವಿಧಿಸಿದ್ದ ಎಲ್ಲ ಕಾನೂನುಗಳಿಗೆ ಸಹಕರಿಸಬಾರದೆಂದು ನಡೆಸಿದ ಹೋರಾಟ ‘ಅಸಹಕಾರ ಚಳವಳಿ’
ದಂಡಿ ಸತ್ಯಾಗ್ರಹದಲ್ಲಿ :
1930ರ ಮಾರ್ಚ್ 12ರಂದು ಗಾಂಧಿಯವರು ತಮ್ಮ ಸುಪ್ರಸಿದ್ಧ ಉಪ್ಪಿನ ಸತ್ಯಾಗ್ರಹವನ್ನಾರಂಭಿಸಿದರು. 78 ಮಂದಿ ಅನುಯಾಯಿಗಳೊಂದಿಗೆ ಗಾಂಧಿಯವರು ಅಹಮದಾಬಾದಿನಿಂದ 240 ಮೈಲಿ ದೂರದಲ್ಲಿ ಸಮುದ್ರ ದಂಡೆಯಲ್ಲಿರುವ ದಂಡಿಗೆ ಹೊರಟರು. ಅವರಲ್ಲಿ ಮಹಾದೇವ ಕರ್ನಾಟಕದಿಂದ ಏಕೈಕ ಪ್ರತಿನಿಧಿಯಾಗಿ ಉಪ್ಪಿನ ಸತ್ಯಾಗ್ರಹದಲ್ಲಿ ಮಹಾತ್ಮಾ ಗಾಂಧೀಜಿಯವರೊಂದಿಗೆ ಭಾಗವಹಿಸಿದರು. ಉಪ್ಪಿನ ತಯಾರಿಕೆಯಲ್ಲಿ ಸರ್ಕಾರ ಹೊಂದಿದ್ದ ಏಕಸ್ವಾಮ್ಯವನ್ನು ವಿರೋಧಿಸಿ ಕಾನೂನು ಭಂಗ ಮಾಡುವುದು ಅವರ ಉದ್ದೇಶ. ಏಪ್ರಿಲ್ 6ರಂದು ಅವರು ದಂಡಿಯನ್ನು ತಲುಪಿ, ಸಮುದ್ರಸ್ನಾನ ಮಾಡಿ ನೈಸರ್ಗಿಕ ಉಪ್ಪನ್ನು ಕೈಯಲ್ಲಿ ಹಿಡಿದರು. ನಾಡಿನಾದ್ಯಂತ ಜನರು ಗಾಂಧಿಯವರ ಕರೆಯಂತೆ ಸತ್ಯಾಗ್ರಹವನ್ನಾಚರಿಸಿದರು. ಸುಮಾರು ಒಂದು ಲಕ್ಷ ಜನ ದಸ್ತಗಿರಿಯಾದರು. ಗಾಂಧಿಯವರ ದಸ್ತಗಿರಿ ಆಯಿತು. ಸರ್ಕಾರ ಅವರನ್ನು ಸೆರೆಯಲ್ಲಿಟ್ಟಿತ್ತು. ಸತ್ಯಾಗ್ರಹವನ್ನು ಅಂತ್ಯಗೊಳಿಸುವ ಬಗ್ಗೆ ಗಾಂಧಿ-ಇರ್ವಿನ್ ಒಪ್ಪಂದಕ್ಕೆ ಸಹಿಯಾಯಿತು. ಸತ್ಯಾಗ್ರಹಿಗಳು ಬಿಡುಗಡೆಯಾದರು. ಕೆಲವೊಂದು ಮಿತಿಗಳೊಳಗೆ, ಸ್ವಂತ ಉಪಯೋಗಕ್ಕಾಗಿ ಉಪ್ಪನ್ನು ತಯಾರಿಸಲು ಅವಕಾಶ ಲಭ್ಯವಾಯಿತು.

    ಹಾವೇರಿ ಜಿಲ್ಲೆಯ ಹೊಸ ರಿತ್ತಿಯಲ್ಲಿ ಕಂದಾಯವನ್ನು ಬಲವಂತವಾಗಿ ವಸೂಲಿ ಮಾಡಿ ಜನರನ್ನು ಹಿಂಸಿಸುತ್ತಿದ್ದ ಸರಕಾರದ ಕೇಂದ್ರವಿತ್ತು. ಅದನ್ನು ಆಕ್ರಮಿಸಿಕೊಳ್ಳಬೇಕೆಂದು ನಿರ್ಧಾರವಾಯಿತು. ತಮ್ಮೊಟ್ಟಿಗೇ ಇದ್ದ ಪತ್ನಿ ಸಿದ್ದಮ್ಮನನ್ನು ಹಾಗೂ ಮಗಳಾದ ಕಸ್ತೂರಿದೇವಿಯನ್ನು ಹುಬ್ಬಳ್ಳಿಗೆ ಕಳುಹಿಸಿದರು.    1943ರ ಏಪ್ರಿಲ್ 1 ರಂದು ಬೆಳಗಿನ ಸಮಯ. ಹೊಸರಿತ್ತಿಯ ಸಮೀಪದ ವೀರಭದ್ರ ದೇವಾಲಯದಲ್ಲಿ ಪೊಲೀಸರ ತುಕಡಿಯಿತ್ತು. ಅದರ ಪಕ್ಕದಲ್ಲೇ ಖಜಾನೆ. ಮಹಾದೇವ ತನ್ನ ಸಂಗಡಿಗರೊಂದಿಗೆ ಮುತ್ತಿಗೆ ಹಾಕಿದರು. ಮಹಾದೇವ ಅವರ ಧೈರ್ಯಕ್ಕೆ ಹೆದರಿ ಹಲವು ಪೊಲೀಸರು ಓಟ ಕಿತ್ತರು. ಮಹಾದೇವ ಖಜಾನೆಯ ಬೀಗ ಮುರಿಯುವುದರಲ್ಲಿ ನಿರತರಾಗಿದ್ದರು. ಅಡಗಿ ಕುಳಿತಿದ್ದ ಒಬ್ಬ ಪೊಲೀಸ್ ಮಹಾದೇವನ ಎದೆಗೆ ಗುಂಡು ಹೊಡೆದ. ಮಹಾದೇವ ರಕ್ತದ ಮಡುವಿನಲ್ಲಿ ಬಿದ್ದರು. ಅವರ ಸಂಗಡಿಗರು ಗುಂಡು ಹೊಡೆದ ಪೊಲೀಸನನ್ನು ಹೊಡೆಯಲು ಹೋದರು. ನಮ್ಮದು ಅಹಿಂಸಾತ್ಮಕ ಹೋರಾಟ, ಪೊಲೀಸರನ್ನು ಕೊಲ್ಲದಿರಿ, ಹಿಂಸೆ ಮಾಡದಿರಿ ಎಂದು ಮಹಾದೇವ ಸಂಗಡಿಗರನ್ನು ತಡೆದರು. ಮಹಾದೇವನ ಉಸಿರಾಟ ನಿಂತಿತು. ದೇಶದೆಲ್ಲೆಡೆ ಈ ಸುದ್ದಿ ಹರಡಿತು. ಪತ್ನಿ ಸಿದ್ಧಮ್ಮ ಗಂಡನ ಬಲಿದಾನದ ತ್ಯಾಗವನ್ನು ಧೈರ್ಯವಾಗಿ ಎದುರಿಸಿದರು. ಮಹಾದೇವರಿಗಾಗಿ ದೇಶ ಮರುಗಿತು. ಈ ಮರುಕ ಹಾಡಾಗಿ ಹರಿಯಿತು.

ದಿಟ್ಟನ ಹೆಸರನು ಹುಟ್ಟಿದ ಕೂಸಿಗೆ ಇಟ್ಟರೂ ತೀರದು ಉಪಕಾರ!

ಆಶಯ : ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ಸ್ವಾತಂತ್ರ್ಯಯೋಧರು ಎಂದು ಕರೆಯುತ್ತಾರೆ. ಒಂದು ಉದ್ದೇಶಕ್ಕಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟ ಇಂಥ ಯೋಧರು ಭಾರತದಲ್ಲಿ ಹಲವಾರು ಮಂದಿ ಇದ್ದಾರೆ. ದೇಶವೇ ಮುಖ್ಯ ಅದರ ಮುಂದೆ ಉಳಿದೆಲ್ಲವೂ ಗೌಣ. ದೇಶದ ಉಳಿವಿಗಾಗಿ ಎಂಥ ತ್ಯಾಗಕ್ಕೂ ಸಿದ್ಧರಾಗಿದ್ದವರು ಈ ಹಿರಿಯರು. ಸ್ವಾರ್ಥವನ್ನು ಮರೆತು ದೇಶದ ಪ್ರಗತಿಯನ್ನೇ ಮುಖ್ಯ ಗುರಿಯಾಗಿರಿಸಿಕೊಂಡರು ಇಂಥ ಅಸಂಖ್ಯಾತ ಯೋಧರನ್ನು ನಾವು ಕೃತಜ್ಞತೆಯಿಂದ ಸ್ಮರಿಸಬೇಕು. ಸ್ವಾತಂತ್ರ್ಯಯೋಧರ ಹೋರಾಟದಿಂದ ಸ್ವಾತಂತ್ರ್ಯ ಪಡೆದೆವು. ಸೈನಿಕರ, ಪೊಲೀಸರ ಸೇವಾನಿಷ್ಠೆಯಿಂದ ನಾವು ನಾಡಿನೊಳಗೆ ನೆಮ್ಮದಿಯಿಂದ ಬದುಕುತ್ತಿದ್ದೇವೆ. ನಮ್ಮ ಮೇಲೆ ಎಷ್ಟು ಜನರ ಋಣವಿದೆಯಲ್ಲವೆ?
ಮಹಾದೇವ ಅವರೊಂದಿಗೆ ವೀರಯ್ಯ ಹಿರೇಮಠ ಮತ್ತು ತಿರಕಪ್ಪ ಮಡಿವಾಳ ಹುತಾತ್ಮರಾದರು.

ಲಾಲಾ ಲಜಪತ ರಾಯ್
ಬಿಪಿನ ಚಂದ್ರ ಪಾಲ್
ಭಗತ ಸಿಂಗ್ ಸುಖದೇವ್ ರಾಜಗುರು
ಚಂದ್ರಶೇಖರ ಆಜಾದ್
ಇಂತವರ ಸಾಲಿನಲ್ಲಿ ನಿಲ್ಲುವ ಉತ್ತರ ಕರ್ನಾಟಕದ ಹೆಮ್ಮೆಯ ಮಗ  ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಯೋಧ ಬ್ರಿಟಿಷ್ ಸರ್ಕಾರದ ವಿರುದ್ಧ ಬಂಡೆದ್ದ ಸಿಂಹ ಸ್ವಪ್ನ ಮೈಲಾರ ಮಹದೇವಪ್ಪ ಅವರು ಸದಾ ಅಜರಾಮರ.

ಮೈಲಾರ ಮಹಾದೇವಪ್ಪನವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅಹಿಂಸಾ ಮಾರ್ಗವನ್ನು ಅನುಸರಿಸುತ್ತಾ ದೇಶಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ ಮಹಾನ್ ಕ್ರಾಂತಿಕಾರಿ ಯೋಧ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಡಿ.೨೪ರಂದು ಡಾ.ಅನೀಲ ಕಾಕೋಡ್ಕರ್ ಅವರಿಗೆ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸಿಂದಗಿ: ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದಿಂದ ಕೊಡ ಮಾಡುವ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿಯನ್ನು ಈ ಬಾರಿ ಪದ್ಮವಿಭೂಷಣ ಭಾರತೀಯ ಪರಮಾಣು ವಿಜ್ಞಾನಿ ಡಾ.ಅನೀಲ ಕಾಕೋಡ್ಕರ್ ಅವರಿಗೆ...

More Articles Like This

error: Content is protected !!
Join WhatsApp Group