ಲೇಖನ; ಅರೆ! ಹೊಸ ವರ್ಷ ಹೀಗೂ ಆಚರಿಸುವುದುಂಟೆ?

Must Read

ಅರೆ! ಮೊನ್ನೆ ಮೊನ್ನೆ ತಾನೆ ಹೊಸ ವರ್ಷದ ಆಗಮನವನ್ನು ಸಡಗರದಿಂದ ಆಚರಿಸಿದಂತಿತ್ತು. ಮತ್ತೆ ಬಂತು ಹೊಸ ವರ್ಷ! ಎನ್ನುವ ಅಚ್ಚರಿಯ ಭಾವ ಪ್ರತಿ ವರ್ಷವೂ ಮೂಡುವುದುಂಟು. ಜನವರಿ ೧ ಪಶ್ಚಿಮದ ಕ್ಯಾಲೆಂಡರ್ ಪ್ರಕಾರ ವಿಶ್ವದ ಅನೇಕ ರಾಷ್ಟ್ರ ಗಳು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳುಗುತ್ತವೆ. ಭಾರತದಲ್ಲಿ ಚಂದ್ರಮಾನ ಪಂಚಾಂಗದಲ್ಲಿ ಚೈತ್ರ ಶುದ್ಧ ಪ್ರತಿಪದೆ ಅಂದರೆ ಯುಗಾದಿಯಂದು ವರ್ಷದಾರಂಭ. ಋತುಗಳ ರಾಜ ವಸಂತನ ಆಗಮನ. ಚಳಿಗಾಲ ಕಳೆದು ಗಿಡ ಮರಗಳೆಲ್ಲ ತಮ್ಮ ಹಳೆಯ ಎಲೆಗಳನ್ನು ಕಳಚಿಕೊಂಡು ಹೊಸ ಹೊಸ ಚಿಗುರುಗಳಿಂದ ಕಂಗೊಳಿಸುವ ಕಾಲ. ಪ್ರಕೃತಿ ಮಾತೆ ನವ ನವೀನ ಉಡುಗೆ ತೊಟ್ಟು ನಮ್ಮ ಕಣ್ಮನ ಸೆಳೆದು ನವೋಲ್ಲಸಿತಗೊಳಿಸುವ ಸಮಯದಲ್ಲಿ ನವ ವರ್ಷದಾರಂಭ ನಮ್ಮದು.

ಸಾಮಾನ್ಯವಾಗಿ ಹಳೆಯ ವರ್ಷದ ಮನುಷ್ಯನ ಪ್ರತಿಕೃತಿಯನ್ನು ದಹಿಸಿ, ಪಟಾಕಿ ಸಿಡಿಸುವುದು ಕುಣಿದು ಕುಪ್ಪಳಿಸುವುದು. ಸ್ನೇಹಿತರೆಲ್ಲ ಒಗ್ಗೂಡಿ ಗುಂಡು ಹಾಕಿ ಪಾರ್ಟಿ ಮಾಡುವ ದೃಶ್ಯಗಳು ನಮ್ಮ ದೇಶದಲ್ಲಿ ಸರ್ವೇ ಸಾಮಾನ್ಯ. ಹಲವು ದೇಶಗಳಲ್ಲಿ ಹೊಸ ವರ್ಷದ ಆಗಮನವನ್ನು ವಿಭಿನ್ನ ರೀತಿಯಲ್ಲಿ ವಿಶಿಷ್ಟವಾಗಿ ಸ್ವಾಗತಿಸುವ ಸಂಪ್ರದಾಯವಿದೆ. ಇವು ನಮಗೆ ತಮಾಷೆ ಮತ್ತು ಅತಿರೇಕವೆನಿಸಿದರೂ ನಿಜ.ಬನ್ನಿ ಕೆಲ ತಮಾಷೆ ರೀತಿಯ ಹೊಸ ವರ್ಷದ ಸ್ವಾಗತಾಚರಣೆ ತಿಳಿಯೋಣ

ಬ್ರೆಡ್ಡಿನ ತುಂಡು ಗೋಡೆಗೆ ಎಸೆದರೆ ಪಾಪ ಪರಿಹಾರ
ನಮ್ಮಲ್ಲೂ ಬಹುತೇಕರು ಹೊಸ ವರ್ಷ ಆಗಮನದ ಮುನ್ನವೇ ವ್ಯಾಯಾಮ, ವಾಕಿಂಗ್ ಪ್ರಾರಂಭಿಸುವುದು. ತೂಕ ಇಳಿಸುವುದು, ಕರಿದ ಪದಾರ್ಥ ತಿನ್ನುವುದನ್ನು ಬಿಡುವುದು. ಸಿಗರೇಟು, ಕುಡಿಯುವುದನ್ನು ಬಿಡುವುದು. ಕೆಟ್ಟದ್ದನ್ನೆಲ್ಲ ಬಿಟ್ಟು ಹೊಸ ಉತ್ತಮ ಹವ್ಯಾಸಗಳನ್ನು ಕಲಿತುಕೊಳ್ಳಬೇಕೆನ್ನುವ ಕೆಲವು ಗೊತ್ತುವಳಿಗಳನ್ನು ಮಾಡಿಕೊಳ್ಳುತ್ತಾರೆ. ಆ ಗೊತ್ತುವಳಿಗಳ ಪಾಲನೆಯಲ್ಲಿ ಬಹುತೇಕರು ಆರಂಭ ಶೂರರು ಅಂತ ಬೇರೆ ಹೇಳಬೇಕಿಲ್ಲ. ಐರ್ಲೆಂಡಿನ ಜನ ತಮ್ಮಲ್ಲಿಯ ದುಷ್ಟ ಶಕ್ತಿಯನ್ನು ತ್ಯಜಿಸಲು ಒಳ್ಳೆಯದನ್ನು ಮೈಗೂಡಿಸಿಕೊಳ್ಳಲು ಬ್ರೆಡ್ಡಿನ ಚೂರುಗಳನ್ನು ಸಂಗ್ರಹಿಸಿ ಗೋಡೆಗೆ ಎಸೆದು ಹಿಂದಿನ ವರ್ಷ ಮಾಡಿದ ಪಾಪಕ್ಕೆ ಪರಿಹಾರ ಮಾಡಿಕೊಳ್ಳುತ್ತಾರೆ.

ತಟ್ಟೆ ಲೋಟಗಳನ್ನು ಒಡೆದು ರಾಶಿ ಹಾಕುವುದು
ದಿನ ನಿತ್ಯ ಅಡುಗೆ ಮನೆಯಲ್ಲಿ ಉಪಯೋಗಿಸುವ ತಟ್ಟೆ ಲೋಟಗಳು ಅಕಸ್ಮಾತ್ತಾಗಿ ಕೈ ಜಾರಿ ಬಿದ್ದು ಒಡೆದು ಹೋದರೆ ಅದೆಷ್ಟು ಹಳಹಳಸುತ್ತೇವೆ ಅಲ್ವಾ? ಆದರೆ ಡೆನ್ಮಾರ್ಕಿನಲ್ಲಿ ತಟ್ಟೆ ಲೋಟ ಪಾತ್ರೆಗಳನ್ನು ಪಕ್ಕದ ಮನೆಯ ಬಾಗಿಲಿನ ಮುಂದೆ ಎಸೆದು ಪುಡಿ ಪುಡಿಯಾಗುವ ಹಾಗೆ ಜಜ್ಜುತ್ತಾರೆ. ಈ ರೀತಿಯ ವಿಲಕ್ಷಣ ಆಚರಣೆ ಅವರಿಗೆ ಬೇಸರ ತರುವ ಬದಲು ಸಂತಸ ತರುವದಂತೆ ಇನ್ನೊಂದು ಅಚ್ಚರಿಯೆಂದರೆ ಯಾರ ಮನೆಯ ಮುಂದೆ ಹೆಚ್ಚಿನ ಮಟ್ಟದಲ್ಲಿ ಒಡೆದ ಪಾತ್ರೆಗಳ ರಾಶಿ ಬಿದ್ದಿರುತ್ತದೆಯೋ ಅವರು ಅದೃಷ್ಟವಮತರೆಂದು ಲೆಕ್ಕ!

ಪ್ರಾಣಿಗಳು ಭವಿಷ್ಯ ಹೇಳುತ್ತವಂತೆ!
ಹಸ್ತ ತೋರಿಸಿ ಭವಿಷ್ಯ ತಿಳಿದುಕೊಳ್ಳಲು ಉತ್ಸುಕರಾಗಿರುವ ಜನ ನಮ್ಮಲ್ಲಿ ಹೆಚ್ಚು ಸಿಗುತ್ತಾರೆ. ರೋಮಾನಿಯನ್ನರ ಕತೆಯೇ ಬೇರೆ, ಅವರ ಪ್ರಕಾರ ಪ್ರಾಣಿಗಳು ಭವಿಷ್ಯ ಹೇಳುತ್ತವಂತೆ ಇನ್ನೂ ಒಂದು ವಿಷೇಷವೆಂದರೆ ಪ್ರಾಣಿಗಳು ಮಧ್ಯರಾತ್ರಿಯಲ್ಲಿ ಮಾತನಾಡುವ ಸಾಮರ್ಥ್ಯ ಹೊಂದಿವೆ ಎಂಬ ನಂಬಿಕೆ ಇದೆ. ಒಂದು ವೇಳೆ ಪ್ರಾಣಿಗಳು ಮಧ್ಯರಾತ್ರಿ ಪ್ರತಿಕ್ರಿಯೆ ನೀಡಿದರೆ ಬರುವ ವರ್ಷದಲ್ಲಿ ದುರದೃಷ್ಟಗಳು ಮಾಯವಾಗಿ ಅದೃಷ್ಟ ಖುಲಾಯಿಸುತ್ತಂತೆ ಇದನ್ನು ಬಲವಾಗಿ ನಂಬಿದ ರೋಮಾನಿಯನ್ನರು ಆಕಳು ಅಥವಾ ಕುದುರೆಗಳು ಪ್ರತಿಕ್ರಿಯಿಸಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ.

ಸಮುದ್ರಕ್ಕೆ ಹೂವು ಸಮರ್ಪಣೆ
ಹಬ್ಬ ಹರಿದಿನಗಳಲ್ಲಿ ದೇವರ ಮುಂದೆ ಎರಡೂ ಕೈ ಜೋಡಿಸಿ ಕಣ್ಮುಚ್ಚಿ ನಮ್ಮ ಆಸೆ ಕನಸು ಈಡೇರಿಸುವಂತೆ ಪ್ರಾರ್ಥಿಸುತ್ತೇವೆ. ಆದರೆ ಬ್ರೆಜಿಲ್‌ನ ರಿಯೋ ಡಿ ಜನೈರೋದ ಜನ ಕಡಲ ಕಿನಾರೆಯಲ್ಲಿ ಹೊಸ ವರ್ಷವನ್ನು ಸಡಗರದಿಂದ ಬರಮಾಡಿಕೊಳ್ಳುವರು. ಅದರೊಂದಿಗೆ ಇಲ್ಲಿಯ ಜನರು ತಮ್ಮ ಮನೋಕಾಮನೆಗಳು ಇಷ್ಟಾರ್ಥಗಳು ಸಿದ್ದಿಯಾಗಲಿ ಎಂದು ಬಿಳಿ ಬಟ್ಟೆ ತೊಟ್ಟು ಸಮುದ್ರಕ್ಕೆ ಹೂವುಗಳನ್ನು ಅರ್ಪಿಸುವ ಸಂಪ್ರದಾಯ ಜನಾಕರ್ಷಣೀಯವಾಗಿದೆ.

ಹಳದಿ ಬಣ್ಣ ಬಲು ಇಷ್ಟ
ನಮ್ಮಲ್ಲಿ ಬಣ್ಣಗಳಲ್ಲಿ ಕೆಲ ಸಮಾರಂಭಗಳಿಗೆ ಕೆಲವು ಶುಭ ಕೆಲವು ಅಶುಭವೆಂದು ನಂಬಲಾಗಿದೆ. ಥೈಲ್ಯಾಂಡ್ ಜನರಿಗೆ ಹಳದಿ ಬಣ್ಣವೆಂದರೆ ಅದೇನೋ ಆಕರ್ಷಣೆ. ಹೊಸ ವರ್ಷಕ್ಕೂ ಮುನ್ನ ಯಾವುದೇ ವಸ್ತು ಖರೀದಿಸಿದರೂ ಹಳದಿ ರಂಗಿಗೆ ಹೆಚ್ಚು ಒತ್ತು ಕೊಟ್ಟು ಖರೀದಿಸುವರಂತೆ ಇನ್ನೂ ವಿಚಿತ್ರವೆಂದರೆ ಹಳದಿ ಬಣ್ಣದ ಒಳ ಉಡುಪುಗಳನ್ನೇ ಖರೀದಿಸಿ ಧರಿಸುವರು.

ಕುರ್ಚಿಗಳನ್ನು ಹೊರಗೆಸೆಯುತ್ತಾರೆ
ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ನಲ್ಲಿಯ ಜನರು ಮನೆಯಲ್ಲಿರುವ ಹಳೆಯ ಕುರ್ಚಿಗಳನ್ನು ಪೀಠೋಪಕರಣಗಳನ್ನು ಹೊರಗೆಸೆದು ಹೊಸ ವರ್ಷವನ್ನು ಆಚರಿಸುತ್ತಾರೆ ಇದರಿಂದ ರಸ್ತೆಯಲ್ಲಿ ಓಡಾಡುವ ಜನರಿಗೆ ತೀವ್ರವಾದ ಗಾಯಗಳಾಗುವ ಅಪಾಯವಿದೆ ಹೀಗಾಗಿ ವಿಚಿತ್ರ ಸಂಪ್ರದಾಯ ಆಚರಣೆಗೆ ಪೋಲಿಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೆಲವೊಂದು ನಿಯಮಗಳನ್ನು ರೂಪಿಸಿದ್ದಾರೆ.

೧೨ ದ್ರಾಕ್ಷಿ ತಿನ್ನುತ್ತಾರೆ
ಡಿಸೆಂಬರ್ ೩೧ ಮಧ್ಯರಾತ್ರಿ ಸರಿಯಾಗಿ ಹನ್ನೆರಡು ಗಂಟೆ ಹೊಡೆದ ಕೂಡಲೇ ಹೊಸ ವರ್ಷವನ್ನು ಭರ್ಜರಿಯಾಗಿ ಬರ ಮಾಡಿಕೊಳ್ಳಲು ಕೇಕ್ ಕತ್ತರಿಸುವುದು ಸರ್ವೇ ಸಾಮಾನ್ಯ ದೃಶ್ಯ. ಸ್ಪೇನ್ ಜನರು ನಮ್ಮ ಹಾಗೆ ಮಾಡುವುದಿಲ್ಲ. ಗಡಿಯಾರದ ಮುಳ್ಳು ೧೨ ಗಂಟೆ ತೋರಿಸುವುದನ್ನು ಕುತೂಹಲದಿಂದ ಕಾಯುತ್ತ ೧೨ ಗಂಟೆ ಹೊಡೆದ ಕೂಡಲೇ ೧೨ ದ್ರಾಕ್ಷಿ ತಿನ್ನುತ್ತಾರೆ. ಪ್ರತಿ ತಿಂಗಳಿಗೆ ಒಂದೊಂದು ದ್ರಾಕ್ಷಿಯಂತೆ ೧೨ ತಿಂಗಳಿಗೆ ೧೨ ದ್ರಾಕ್ಷಿಗಳು. ಹೀಗೆ ೧೨ ದ್ರಾಕ್ಷಿ ತಿನ್ನುವುದರಿಂದ ವರ್ಷದ ೧೨ ತಿಂಗಳು ಒಳ್ಳೆಯದಾಗುವದೆಂಬ ನಂಬಿಕೆ. ಸ್ಪೇನ್ ಜನರದ್ದು.

ಶಾಂಪೇನ್‌ನಲ್ಲಿ ಬೂದಿ ಬೆರೆಸಿ ಕುಡಿಯುತ್ತಾರೆ
ಪ್ರತಿ ಬಾರಿ ಹೊಸ ವರ್ಷಕ್ಕೆ ಹೊಸ ಗೊತ್ತುವಳಿಗಳನ್ನು ಒಂದು ಕಾಗದದಲ್ಲಿ ಬರೆದು ಕೆಲ ದಿನ ಪಾಲಿಸಿ ನಂತರ ಕಾಗದವನ್ನು ಬಿಸಾಕುವುದು ನಮ್ಮಲ್ಲಿ ಸಾಮಾನ್ಯ. ರಷ್ಯನ್ನರು ನಮ್ಮ ಹಾಗೆ ಒಂದು ಕಾಗದದಲ್ಲಿ ಮುಂದಿನ ವರ್ಷದಲ್ಲಿ ಈಡೇರಿಸಿಕೊಳ್ಳಬೇಕಾದ ಮನದ ಬಯಕೆಗಳನ್ನು ಬರೆಯುತ್ತಾರೆ. ಆದರೆ ಅವರು ಅದನ್ನು ಕಸದ ಬುಟ್ಟಿಗೆ ಬಿಸಾಕದೇ ಸುಡುತ್ತಾರೆ. ಹಾಳೆ ಸುಟ್ಟು ಬಂದ ಬೂದಿಯನ್ನು ಶಾಂಪೇನ್‌ನಲ್ಲಿ ಬೆರೆಸಿ ಹೊಸ ವರ್ಷದ ಆರಂಭಕ್ಕೆ ಕೆಲ ನಿಮಿಷಗಳು ಬಾಕಿ ಇರುವಾಗ ಕುಡಿಯುತ್ತಾರೆ. ಹೀಗೆ ಕುಡಿಯುವುದರಿಂದ ಕಾಗದದಲ್ಲಿ ಬರೆದುಕೊಂಡ ಬಯಕೆಗಳೆಲ್ಲ ಈಡೇರುತ್ತವೆ ಎಂಬುದನ್ನು ಬಲವಾಗಿ ನಂಬಿದ್ದಾರೆ.

ಗೋರಿಗಳಿಗೆ ಅಲಂಕಾರ
ನಮ್ಮಲ್ಲಿ ಹಾಡು ಹಗಲಲ್ಲಿ ಸ್ಮಶಾನಕ್ಕೆ ಹೋಗಲು ಅಂಜುತ್ತೇವೆ ಅಂಥದ್ದರಲ್ಲಿ ಚಿಲಿ ದೇಶದ ಜನತೆ ಹೊಸ ವರ್ಷದ ಮಧ್ಯರಾತ್ರಿಯ ವೇಳೆ ಸ್ಮಶಾನಕ್ಕೆ ತೆರಳಿ ತಮ್ಮ ಪೂರ್ವಜರ ಗೋರಿಗಳನ್ನು ಅಲಂಕರಿಸಿ ದೀಪಗಳನ್ನು ಬೆಳಗುತ್ತಾರೆ. ಪೂರ್ವಜರು ಸದಾ ತಮ್ಮೊಂದಿಗಿರಲಿ ಎಂಬ ಸದಾಶಯದಿಂದ ಈ ಆಚರಣೆಯಲ್ಲಿ ತೊಡಗಿದ್ದಾರೆ.

ಬಟಾಟೆಯಿಂದ ಭವಿಷ್ಯ
ನಾವೆಲ್ಲ ಯಾವ ರಾಶಿಗೆ ಯಾವ ಫಲ? ಮುಂದಿನ ವರ್ಷ ನಮ್ಮ ಭವಿಷ್ಯ ಹೇಗಿದೆ? ಎಂದು ತಿಳಿಯಲು ಹಸ್ತ ಸಾಮುದ್ರಿಕಾ ಶಾಸ್ತ್ರ, ಗಿಳಿ ಶಾಸ್ತ್ರ ಸಂಖ್ಯಾ ಶಾಸ್ತ್ರ ಜ್ಯೋತಿಷ್ಯ ಶಾಸ್ತ್ರ ಇತ್ಯಾದಿ ಶಾಸ್ತ್ರ ಗಳ ಮೊರೆ ಹೋಗುತ್ತೇವೆ. ಆದರೆ ‘ಪೆರು’ವಿನಲ್ಲಿಯ ಜನರು ಮುಂದಿನ ವರ್ಷ ಭವಿಷ್ಯ ತಿಳಿಯಲು ಕುರ್ಚಿ ಅಥವಾ ಸೋಫಾ ಸೆಟ್‌ನ ಕೆಳಭಾಗದಲ್ಲಿ ೩ ಬಟಾಟೆಗಳನ್ನು ಇಡುತ್ತಾರೆ ಅದರಲ್ಲಿ ೧ನ್ನು ಪೂರ್ಣವಾಗಿ ಸುಲಿದಿರುತ್ತಾರೆ ಇನ್ನೊಂದನ್ನು ಅರ್ಧ ಸುಲಿದಿಟ್ಟಿರುತ್ತಾರೆ. ೩ನೇಯದನ್ನು ಸುಲಿಯದೇ ಹಾಗೇ ಇಟ್ಟಿರುತ್ತಾರೆ. ಮಧ್ಯರಾತ್ರಿ ಆಗುತ್ತಿದ್ದಂತೆ ಅದರಲ್ಲಿ ೧ ಬಟಾಟೆಯನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಹೀಗೆ ಆಯ್ಕೆಯಾದ ಬಟಾಟೆ ಮುಂದಿನ ವರ್ಷದ ಆರ್ಥಿಕ ಭವಿಷ್ಯವನ್ನು ಹೇಳುತ್ತದೆ. ಸುಲಿದ ಬಟಾಟೆ ಸಿಕ್ಕರೆ ಆ ವರ್ಷ ಲಾಭವಿಲ್ಲ ಎಂದರ್ಥ. ಅರ್ಧ ಸುಲಿದ ಬಟಾಟೆ ಬಂದರೆ ಆ ವರ್ಷ ಸಾಮಾನ್ಯವಾಗಿರುತ್ತದೆ ಎಂಬ ನಂಬಿಕೆ. ಸುಲಿಯದೇ ಇದ್ದ ಬಟಾಟೆ ದೊರೆತರೆ ಆ ವರ್ಷ ಭರ್ಜರಿ ಲಾಭದಾಯಕವಾಗಿರುತ್ತದೆ ಎಂದು ಅರ್ಥ. ಹೀಗೆ ಮುಂದಿನ ವರ್ಷದ ಭವಿಷ್ಯ ತಿಳಿಯಲು ಪೆರುವಿನ ಜನತೆ ಬಟಾಟೆಯ ಮೊರೆ ಹೋಗುತ್ತಾರೆ.

ಹೀಗೆ ಅವರವರ ಭಾವಕ್ಕೆ ವಿಭಿನ್ನ ಆಚರಣೆಗಳು ವಿಶ್ವದಾದ್ಯಂತ ನಡೆಯುತ್ತವೆ. ಬರುವ ಹೊಸ ವರ್ಷದಲ್ಲಿ ಸುಂದರ ಮನಸ್ಸಿನ ಕನಸುಗಳೆಲ್ಲ ನನಸಾಗಲಿ ಮುನ್ನುಗ್ಗಿ ಗುರಿ ಮುಟ್ಟುವುದೊಂದೆ ನಿಮ್ಮ ಧ್ಯೇಯವಾಗಿರಲಿ. ಹೊಸ ವರ್ಷ ಹೊಸ ಹರುಷ ತರಲಿ.
—————————————————————-

ಜಯಶ್ರಿ.ಜೆ. ಅಬ್ಬಿಗೇರಿ
ಉಪನ್ಯಾಸಕರು
ಬೆಳಗಾವಿ
೯೪೪೯೨೩೪೧೪

 

LEAVE A REPLY

Please enter your comment!
Please enter your name here

Latest News

ಸ್ವರ ಗಾರುಡಿಗ ಸಿದ್ಧರಾಮ ಜಂಬಲದಿನ್ನಿ

ಹೈದ್ರಾಬಾದ ಕರ್ನಾಟಕದ ಇನ್ನೊಂದು ಅಪೂರ್ವದ ಕಲಾವಿದ ಶ್ರೇಷ್ಠ ಗಾಯಕ ಸಿದ್ಧರಾಮ ಜಂಬಲದಿನ್ನಿ ನಾಡು ನುಡಿ ಸಂಸ್ಕೃತಿಯ ಹಿರಿಯ ರಾಯಭಾರಿ . ರಾಯಚೂರಿನ ಬಿಸಿಲು ಬೇಗೆಯಲ್ಲಿ ಹಿಂದುಸ್ತಾನ್...

More Articles Like This

error: Content is protected !!
Join WhatsApp Group