ಲೇಖನ : ಅರಿವಿನ ಗುರು ಡಾ ಗುರುಲಿಂಗ ಕಾಪಸೆ

Must Read

ಗುರುಲಿಂಗ ಕಾಪಸೆ ಎಂಬ ಬಹು ದೊಡ್ಡ ದೈತ್ಯ ಪ್ರತಿಭೆ ಬಹುಮುಖ ವಿದ್ವಾಂಸ ಬಾಲ್ಯದಲ್ಲಿ ಮುಲ್ಕಿ ಮುಗಿಸಿ ಮುಂದೆ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಹಲವು ವರ್ಷಗಳ ನಂತರ ಬಸವೇಶ್ವರ ವಿದ್ಯಾವರ್ಧಕ ಸಂಘ ಬಾಗಲಕೋಟೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ತಮ್ಮ ತುಂಬು ಜೀವನದ ಅನುಪಮ ಸೇವೆ ಸಲ್ಲಿಸಿದ್ದಾರೆ.

ಮಧುರ ಚೆನ್ನರ ಸಾಮಿಪ್ಯ ಅವರನ್ನು ಅರವಿಂದರ ಪ್ರಭಾವಕ್ಕೆ ಒಳಪಡಿಸಿದರೆ ತಪೋವನದ ಶ್ರೀ ಕುಮಾರ ಸ್ವಾಮೀಜಿ ಇವರ ನಿಕಟ ಸಂಬಂಧ ವಚನ ಸಾಹಿತ್ಯ ಲಿಂಗ ತತ್ವ ಚಿಂತನೆಗೆ ಕಾರಣವಾಯಿತು. ನಾಟಕ ಕಾವ್ಯ ಮಕ್ಕಳ ಸಾಹಿತ್ಯ ಪ್ರವಾಸಕಥನ ಅನುವಾದ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಕೃಷಿ ಮಾಡಿದ ಅತ್ಯಂತ ಅಪರೂಪದ ಸರಳ ಸಜ್ಜನಿಕೆಯ ಸ್ನೇಹಪರ ಜೀವಿ.

ತಮ್ಮ ತೊಂಬತ್ತಾರು ವರ್ಷಗಳ ಸುದೀರ್ಘ ಅವಧಿಯಲ್ಲಿ ಎಲ್ಲಾ ಏರುಪೇರು ಸಾವು ನೋವು ಕಷ್ಟಗಳನ್ನು ಅನುಭವಿಸಿ ನಿಶ್ಚಿಂತರಾಗುತ್ತಿದ್ದರು. ಗುರುಲಿಂಗ ಕಾಪಸೆ ಅವರು ಸಾಹಿತಿಯಾಗಿ, ಪ್ರಾಧ್ಯಾಪಕರಾಗಿ ಮತ್ತು ಕನ್ನಡ ಸಂಘಟನೆಗೆ ಸೇವೆ ಸಲ್ಲಿಸಿದವರಾಗಿ ಹೆಸರುವಾಸಿಯಾಗಿದ್ದರು.

1928ರ ಏಪ್ರಿಲ್ 2 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಿ.ಕೆ. ಲೋಣಿಯಲ್ಲಿ ಜನಿಸಿದರು. 1945ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿಯೇ ತಮ್ಮೂರಿನಲ್ಲಿ ಶಿಕ್ಷಕರಾಗಿ ಸೇವೆ ಆರಂಭ ಮಾಡಿದ ಕಾಪಸೆ ಅವರು ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

*ಸಾಹಿತ್ಯ ಕೃಷಿ*
ಡಾ.‍ಗುರುಲಿಂಗ ಕಾಪಸೆ ಅವರು ‘ಮಧುರಚೆನ್ನರ ಜೀವನ ಹಾಗೂ ಕೃತಿಗಳು’ ಕುರಿತು ಮಹಾಪ್ರಬಂಧ ಮೂಡಿಸಿದ್ದರು. ‘ಹಲಸಂಗಿ ಗೆಳೆಯರು’ ಎಂಬ ಡಾ. ಕಾಪಸೆ ಅವರು ಸಂಪಾದಿಸಿದ ಮಧುರ ಚೆನ್ನರ ಲೇಖನಗಳಲ್ಲಿ, ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಇದು ಕನ್ನಡ ವಿಶ್ವವಿದ್ಯಾಲಯದ ಮೂಲಕ ಕಾಪಸೆ ಅವರು “ಜಾನಪದ ಅಧ್ಯಯನ” ಕ್ಕೆ ಕೊಟ್ಟ ವಿಶಿಷ್ಠ ಕೊಡುಗೆಯಾಗಿದೆ.

ಗುರುಲಿಂಗ ಕಾಪಸೆ ಅವರ ಕೃತಿಗಳಲ್ಲಿ ಅಕ್ಕಮಹಾದೇವಿ, ಮಧುರಚೆನ್ನ, ಶ್ರೀಅರವಿಂದರು, ಬಸವೇಶ್ವರರು, ಹಲಸಂಗಿ ಗೆಳೆಯರು ಸೇರಿವೆ. ಶಾಲ್ಮಲೆಯಿಂದ ಗೋದಾವರಿಯವರೆಗೆ ಇವರ ಪ್ರವಾಸಕಥನ. ಮಕ್ಕಳಿಗಾಗಿ ಕವಿ ರವಿಂದ್ರರು, ಶಿ.ಶಿ.ಬಸವನಾಳ ಕೃತಿ ರಚಿಸಿದ್ದರು. ಸಾಹಿತ್ಯ ವಿಮರ್ಶೆಯಲ್ಲಿ ಸಾಹಿತ್ಯ ಸಂಬಂಧ, ಬೇಂದ್ರೆ-ಮಧುರಚೆನ್ನ ಸಖ್ಯಯೋಗ ಮುಂತಾದವು ಸೇರಿವೆ.

ಸಂಪಾದಿತ ಕೃತಿಗಳಲ್ಲಿ ಕಾಲ-ಕವಿ (ಕಾವ್ಯ), ಪಾರಮಾರ್ಥ ಗೀತಾ ಪ್ರವಚನ, ಹರಿಹರನ ಐದು ರಗಳೆಗಳು, ಅರವಿಂದ ಪರಿಮಳ, ಹೈಮವತಿ ಶೈಶವಲೀಲೆ (ಗಿರಿಜಾ ಕಲ್ಯಾಣ ಸಂಗ್ರಹ), ಚೆಂಬೆಳಕು (ಕಣವಿ ಅಭಿನಂದನ ಗ್ರಂಥ), ಬೆಳಗಲಿ (ದು.ನಿಂ.ಬೆಳಗಲಿ ಅಭಿನಂದನ ಗ್ರಂಥ), ಕನ್ನಡ ಮರಾಠಿ ಸಾಹಿತ್ಯ ಬಾಂಧವ್ಯ, ಭವ್ಯ ಮಾನವ ಕಾವ್ಯ ದರ್ಶನ, ಜ್ಞಾನಸಿಂಧು, ಪಿ.ಧೂಲಾಸಾಹೇಬ, ಮಧುರಚೆನ್ನರ ಲೇಖನಗಳು, ಕನ್ನಡ ಕಾವಲು, ಚಾಮರಸ, ಮುಗಿಯದ ಹಾಡು, ಆತ್ಮಶೋಧ (ಮಧುರಚೆನ್ನರ ಸಮಗ್ರ ಸಾಹಿತ್ಯ ಶೋಧ) ಮುಂತಾದ ವೈವಿಧ್ಯಗಳಿವೆ.

ಅನುವಾದ
ಇದೇ ನಿಜವಾದ ಮೂರ್ತಿಪೂಜೆ ಮತ್ತು ಇದೇ ನಿಜವಾದ ಧರ್ಮ (ಮರಾಠಿಯಿಂದ ಕನ್ನಡಕ್ಕೆ), ಬಸವೇಶ್ವರಾಂಚೆ ವಚನ (ಕನ್ನಡದಿಂದ ಮರಾಠಿಗೆ) ಪ್ರಕಟವಾಗಿವೆ.

ಪ್ರಶಸ್ತಿಗಳು
ಗುರುಲಿಂಗ ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ವರದರಾಜ ಆದ್ಯ ಪ್ರಶಸ್ತಿ,
ಆನಂದಕಂದ ಪ್ರಶಸ್ತಿ,
ಸ.ಸ. ಮಾಳವಾಡ ಪ್ರಶಸ್ತಿ,
ರಾಜ್ಯ ಸಾಹಿತ್ಯ ಅಕಾಡೆಮಿ
ಗೌರವ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಫೆಲೋಶಿಪ್,
ಕರ್ನಾಟಕ ಸಾಹಿತ್ಯ
ಅಕಾಡೆಮಿಯ ಅಧ್ಯಕ್ಷತೆ,
ಧಾರವಾಡ ಜಿಲ್ಲಾ ಕನ್ನಡ
ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ,
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿದ್ದವು.

2000 ಇಶ್ವಿಯಲ್ಲಿ ಹೊಸ ವಿಜಯ ಕರ್ನಾಟಕ ದಿನಪತ್ರಿಕೆ ಆರಂಭವಾಗಿತ್ತು. ನಾನಾಗ ಬೆಂಗಳೂರಿನ ಕೆ ಎಲ್ ಇ ಸಂಸ್ಥೆ ಫಾರ್ಮಸಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಸ್ನೇಹಿತರಾದ ಡಾ ಬಂಡು ಕುಲಕರ್ಣಿ ಉಪಸಂಪಾದಕ ಸುರಂ ( ಈಗಿಲ್ಲ)ಇವರ ಜೊತೆಗೆ ಮಾತನಾಡಿ ಸಂಜೆ ಸಮಯ ಕಳೆಯಲು ಆಗಾಗ ಹೋಗುತ್ತಿದ್ದೆ.

ಒಂದು ಮುಂಜಾನೆ ಪತ್ರಿಕೆಯಲ್ಲಿ ಕಾರಾಗೃಹದ ಕಾರ್ಯಕ್ರಮದಲ್ಲಿ ಅಂದಿನ ಸಚಿವೆ ಶ್ರೀಮತಿ ಮೋಟಮ್ಮ ಅವರ ಎದುರಿಗೆ ಕೈದಿಗಳ ಪ್ರಾರ್ಥನೆ ಅಂಬಿಗ ನಾ ನಿನ್ನ ನಂಬಿದೆ ಎಂಬ ಪುರಂದರ ದಾಸರ ಪದವನ್ನು ಹಾಡಲಾಯಿತು ಎಂದು ವರದಿಯಾಗಿತ್ತು. ಅದಕ್ಕೆ ಪ್ರತಿಯಾಗಿ ವಚನ ಸಾಹಿತ್ಯದ ಅಗ್ರ ವಚನಕಾರ್ತಿ ಅಕ್ಕ ಮಹಾದೇವಿ ಅವರ ಪದ್ಯವಿದು ಎಂದು ನಾನು ವಾಚಕರ ವಾಣಿಯಲ್ಲಿ ಬರೆದು ಬಿಟ್ಟೆ ಅದು ಪ್ರಕಟವಾಯಿತು. ಅದರ ಮೇಲೆ ಸಾಕಷ್ಟು ಚರ್ಚೆಗಳು ನಡೆದವು. ನನಗೆ ಬೆಂಬಲಕ್ಕೆ ನಿಂತವರು ಒಂದಿಬ್ಬರು ಮಾತ್ರ ಅವರಲ್ಲಿ ಡಾ ಗುರುಲಿಂಗ ಕಾಪಸೆ ಸರ್. ಅವರ ತಮ್ಮ ಈಶ್ವರ ಕಾಪಸೆ ನಮ್ಮ ಬೆಳಗಾವಿಯ ಮನೆಯಲ್ಲಿ ಬಾಡಿಗೆಗೆ ಇದ್ದರು. ಅವರನ್ನು ಭೇಟಿ ಮಾಡಲು ಬಂದ ಗುರುಲಿಂಗ ಕಾಪಸೆ ಅವರು ಆಧಾರಸಹಿತ ಅಕ್ಕ ಮಹಾದೇವಿ ವಚನ ಸಂಪುಟದಲ್ಲಿ ನನಗೆ ಒದಗಿಸಿದ್ದರು. ಅದರ ನಂತರ ತಪೋವನದ ಅಧ್ಯಕ್ಷರಾದರು. ಹೀಗೆ ಇಪ್ಪತೈದು ವರ್ಷಗಳ ನಿರಂತರ ಒಡನಾಟ ಚರ್ಚೆ ವಿಷಯ ವಿನಿಮಯ ಪತ್ರ ವ್ಯವಹಾರಗಳು ಇದ್ದವು. ಹಲವಾರು ಕಾರ್ಯಕ್ರಮಗಳಲ್ಲಿ ನಾವಿಬ್ಬರೂ ವೇದಿಕೆ ಹಂಚಿ ಕೊಂಡಿದ್ದವು. ನನ್ನ ಬರವಣಿಗೆಯನ್ನು ಮುಕ್ತವಾಗಿ ಕೊಂಡಾಡುವ ಅಪರೂಪದ ಪ್ರಬುದ್ಧ ಪ್ರಾಮಾಣಿಕ ಸಾಹಿತಿ ವಿದ್ವಾಂಸ ಡಾ ಗುರುಲಿಂಗ ಕಾಪಸೆ ಅವರು.

*ಬಯಲಾದ ಜೀವ*
96 ವರ್ಷದ ತುಂಬು ಜೀವನ ನಡೆಸಿ, ತಮ್ಮ ನಡೆ, ನುಡಿ, ಸರಳ ಆದರ್ಶಗಳಿಂದ ಸದಾಕಾಲ ಇತರರಿಗೆ ಮಾದರಿಯಾಗಿದ್ದ ಗುರುಲಿಂಗ ಕಾಪಸೆ ಅವರು 2024ರ ಮಾರ್ಚ್ 26ರಂದು ನಿಧನರಾದರು. ಅವರ ಇಚ್ಛೆಯಂತೆ ಅವರ ದೇಹವನ್ನು ವೈದ್ಯಕೀಯ ಉದ್ದೇಶಗಳಿಗೆ ದಾನ ಮಾಡಲಾಯಿತು. ಇಂತಹ ಶರಣ ನಮ್ಮ ಮಧ್ಯೆ ಬದುಕಿ ಬಯಲಲ್ಲಿ ಬಯಲಾದರು.
__________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಸ್ವರ ಗಾರುಡಿಗ ಸಿದ್ಧರಾಮ ಜಂಬಲದಿನ್ನಿ

ಹೈದ್ರಾಬಾದ ಕರ್ನಾಟಕದ ಇನ್ನೊಂದು ಅಪೂರ್ವದ ಕಲಾವಿದ ಶ್ರೇಷ್ಠ ಗಾಯಕ ಸಿದ್ಧರಾಮ ಜಂಬಲದಿನ್ನಿ ನಾಡು ನುಡಿ ಸಂಸ್ಕೃತಿಯ ಹಿರಿಯ ರಾಯಭಾರಿ . ರಾಯಚೂರಿನ ಬಿಸಿಲು ಬೇಗೆಯಲ್ಲಿ ಹಿಂದುಸ್ತಾನ್...

More Articles Like This

error: Content is protected !!
Join WhatsApp Group