“ಕವಿಯ ಹ್ರದಯವೊಂದು ವೀಣೆ, ಲೋಕವದನು ಮಿಡಿವುದು.” ಸೃಜನಶೀಲ ಕವಿ ಮನಸ್ಸು ಲೋಕದ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸುತ್ತದೆ ಎಂಬ ಕವಿವಾಣಿಯು ಹೃದಯಂಗಮವಾಗಿದೆ. ಅತಿಸೂಕ್ಷ್ಮ ಹಾಗೂ ಗಂಭೀರ ಭಾವನೆಗಳನ್ನು ಆರು ಸಾಲಿನಲ್ಲಿ ಅಭಿವ್ಯಕ್ತಪಡಿಸಿರುವ ಭಾವಪೂರ್ಣ ಭಾಷಾಶೈಲಿ ಬದ್ಧತೆ ಧ್ವನಿಸುವ ಸಂಗೀತಾತ್ಮಕತೆ ಮನೋಜ್ಞವಾದಂತಹವು ಎಂಬುದು ಶ್ರೀಮತಿ ಶಾಲಿನಿ ರುದ್ರಮುನಿಯವರ ಅಭಿಪ್ರಾಯವಾಗಿದೆ.
“ಧರಿಸಿ ರುಳಿಯನು ಬಾಳೆ ನಲಿದಳು
ಮೆರೆಸಿ ಮೆಂಟಿಯ ಪಾದ ಕಮಲಕೆ
ಒರೆಸಿನೆಲವನುನಸುಕಿನಲ್ಲಿಹಸನುಗೊಳಿ
ಹೀಗೆ ಪ್ರಾರಂಭವಾಗುವ ಕಾವ್ಯ ಮಾಲೆಯು ಸಂಪ್ರದಾಯದಂತೆ ಕಾವ್ಯದ ಒಳಹೋಗುವ ಮುನ್ನ ಗಣನಾಯಕನಿಗೆ ಸತ್ಯಭಾಮೆ ಸ್ವರೂಪಿಣಿ ಕವಿಯಿತ್ರಿ ಸ್ವಾಗತಿಸುವ ಷಟ್ಪದಿಯ ಪರಿ ಮನಮೋಹಕವಾಗಿದೆ. ಎಲ್ಲಕ್ಕಿಂತ ಗಮನ ಸೆಳೆದಿದ್ದು ಬಜ್ಜಿ ಬೋಂಡಾ ವಸ್ತುವುಳ್ಳ ಕೀರ್ತನೆಯು ಸರ್ವರ ಬಾಯಲ್ಲಿ ನೀರೂರಿಸುವಂತಹದಾಗಿದೆ !.ಉದಾ-
“ಶಾಲೆ ಬಿಡುತಲೆ ಮಳೆಯು ಹಿಡಿಯಲು
ನಲ್ಲೆ ಬಂದಳು ಮನೆಗೆ ನಡಗುತ
ನಲ್ಲಕೇಳಿದಬಜಿಯಮಾಡೆಲೆಬಾಲೆಕೋಮಲೆಯೆ
ಒಲ್ಲೆ ಎನಲು ಮನಸು ಬಾರದೆ
ಮೆಲ್ಲ ಮೆಲ್ಲನೆ ಹದವ ಜೋಡಿಸಿ
ಬಲ್ಲಿದವನನು ಮನದಿ ನೆನೆದಳು ನಲ್ಲೆ ಶಾಮಲೆಯು!”.
“ಹೆಸರು ಕಾಳಿನ ಜೊತೆಗೆ ಸೇರಿಸಿ
ತುಸುವೆ ಅಲಸಂದಿಯನು ಕೂಡಿಸಿ
ಹಸಿಯಕಡಲೆಯಬೇಳೆಬೆರೆಸಿದಹಿಟ್ಟುಕಲೆ
ಎಸಳು ಈರುಳ್ಳಿಯನು ಸೇರಿಸಿ
ಹಸಿಯ ಕೊತ್ತಂಬರಿಯ ಬೆರಸುತ
ತುಸುವೆಜೀರಿಗೆಮೆಣಸುಉಪ್ಪನುಹದಕೆ
ಮಳೆಗಾಲದ ತಂಪೆನಿಸುವ ದಿನಗಳಲ್ಲಿ ಶಾಲೆ ಬಿಟ್ಟು ಮನೆಗೆ ಬಂದರೆ ಬೋಂಡಾ ಬಜಿಯ ಘಮ ಘಮ ಸುವಾಸನೆಯ ಅಮಲು ಶಬ್ದಾಲಂಕಾರ ಸ್ವರೂಪದಲ್ಲಿದ್ದು ಅದರ ರುಚಿ ಮನಸೂರೆಗೊಳ್ಳುವಂತೆ ಚಿತ್ರಿತವಾಗಿದೆ.
ಕವಯಿತ್ರಿಯ ಎಂಥ ಅತ್ಯದ್ಭುತ ಪರಿಕಲ್ಪನೆಯ ಷಟ್ಪದಿಗಳಿವು ನೋಡಿ!. ಕನ್ನಡ ಭಾಷೆಯನ್ನು ಅದರ ಕಾವ್ಯ ಪರಂಪರೆಯನ್ನು ಅತ್ಯಂತ ಕಾಳಜಿಪೂರ್ವಕ ಅಭಿಮಾನದಿಂದ ರಚಿಸಿದ ರೀತಿಯು ,’ ರೀತಿರಾತ್ಮಾ ಕಾವ್ಯಸ್ಯ’ ವ್ಯಾಖ್ಯೆಯನ್ನು ಧ್ವನಿಸುವಂತಿದೆ.ಹೀಗೆ ಪ್ರತಿ ಕವನವು ಹೊಸತನವನ್ನು ತೊಟ್ಟು ನಿಂತಾಗಲೂ ನದಿಯ ಗಮ್ಯ ಶರಧಿ ಎಂಬಂತೆ ಕೊನೆಗೆ ಬಂದು ಸೇರುವುದು ಆ ಸಾಗರ ನಿವಾಸಿ ವಿಷ್ಣುವಿನಲ್ಲಿಯೇ.
ಈ ಕೃತಿಯ ಕೀರ್ತನೆಗಳುದ್ದಕ್ಕೂ ಬಿತ್ತರಿಸಿರುವ ಭಾವಗಳಲ್ಲಿ ತವರೂರನ್ನು ನೆನೆಯುವ ಮಗಳಾಗಿ, ಶಾಲಾಮಕ್ಕಳ ಭವಿಷ್ಯದ ದಿಕ್ಸೂಚಿ ಮಾರ್ಗದರ್ಶಕಿಯಾಗಿ, ಶಾಲಾ ಮಕ್ಕಳು ರಜೆಯಲ್ಲಿ ದೂರವಾದಾಗ ಅವರಿಗಾಗಿ ಹಂಬಲಿಸುವ ತಾಯಿಯಾಗಿ,ಪತಿ ಪ್ರಭುವಿನ ಸವಿ ಖಾದ್ಯ ಸಿದ್ಧಪಡಿಸುವ ಮನದರಸಿಯಾಗಿ, ಎಲ್ಲಕ್ಕಿಂತ ಮಿಗಿಲಾಗಿ ಈ ಲೋಕನಾಥನ ಪರಮಪ್ರಿಯ ಸದ್ಭಕ್ತಳಾಗಿ, ಬಡತನದ ಬವಣೆಯ ಬದುಕಿನ ಕಷ್ಟಕಾರ್ಪಣ್ಯಗಳಲ್ಲಿ’ ಈಸಿ ಜೈಸಿದ ‘ ಸಾವಿತ್ರಿಯ ಜೀವನೋತ್ಸಾಹ ಪ್ರಶಂಸಾರ್ಹವಾದುದು.
ಹೆತ್ತ ತಾಯಿಗಿಂತ ಮಿಗಿಲಾಗಿ ಪೋಷಕರಾಗಿ ತನ್ನ ಬಾಳಿಗೆ ಬೆಳಕಾದ ಆತ್ಮೀಯ ಸಹೋದರಿ ದಿ.ಮಹಾದೇವಿ ಅಕ್ಕ ಮತ್ತು ಪೂಜ್ಯ ಗುರುಮಾತೆ ದಿ.ಕಾಶೀಬಾಯಿ ಸಿದ್ಧೋಪಂತ ಇವರೀರ್ವರ ಸಂಸ್ಮರಣೆಗಾಗಿ ಈ ಕೃತಿರತ್ನವನ್ನು ಲೇಖಕಿ ಹೃತ್ಪೂರ್ವಕವಾಗಿ ಭಕ್ತಿಯಿಂದ ಸಮರ್ಪಿಸಿ ಕೃತಾರ್ಥರಾಗಿರುವರು. ಶ್ರೀಮತಿ ಶಾಲಿನಿ ರುದ್ರಮುನಿಯವರ ಮುನ್ನುಡಿ ಮತ್ತು ಶ್ರೀಮತಿ ಪ್ರಮೀಳಾ ಸವಡಿ ಇವರ ಬೆನ್ನುಡಿಯ ಅಮೂಲ್ಯ ಬರಹಗಳು ಈ ಕೃತಿಗೆ ಕಳಶಪ್ರಾಯದಂತಿವೆ.ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವನಹಳ್ಳಿ ಗ್ರಾಮದ ಅಚ್ಯುತ ಪ್ರಕಾಶನದವರು ಈ ಕವನ ಸಂಕಲನವನ್ನು ಆಕರ್ಷಕ ಮುಖಪುಟ ವಿನ್ಯಾಸದೊಂದಿಗೆ ಪ್ರಕಟಿಸಿದ್ದಾರೆ. ಅಂತರ್ಜಾಲದ ಹುಚ್ಚು ವ್ಯಾಮೋಹದ ಪರಿಸರದಲ್ಲಿರುವ ಇಂದಿನ ಯುವ ಬರಹಗಾರರಿಗೆ ಭಾಮಿನಿ ಷಟ್ಪದಿಯನ್ನೊಳಗೊಂಡಿರುವ ಆದಿಪ್ರಾಸದಿಂದೊಡಗೂಡಿರುವ ಪ್ರತಿಯೊಂದು ಕೀರ್ತನೆಗಳಲ್ಲಿ ಲೇಖಕಿಯ ಸರಳ ಸಹಜ ಭಾಷಾ ಸೊಗಡಿನ ವೈಖರಿ ತುಂಬಾ ಸ್ವಾರಸ್ಯಕರವಾಗಿ ಒಡಮೂಡಿಬಂದಿರುತ್ತದೆ. ಔಚಿತ್ಯಪೂರ್ಣ ಶೀರ್ಷಿಕೆಯುಳ್ಳ , ಶ್ರೀ ಕೃಷ್ಣನ ವೈವಿಧ್ಯಮಯ ಮಹಿಮೆಯನ್ನು ಕೃತಿಯುದ್ದಕ್ಕೂ ಲೇಖಕಿ ಕೊಂಡಾಡಿರುವದು ಅವರ ಅಧ್ಯಾತ್ಮದೊಲವಿಗೆ ಹಿಡಿದ ಕೈಗನ್ನಡಿಯಂತಾಗಿದೆ. ನವೋದಯ, ನವ್ಯ ಸಾಹಿತ್ಯ, ಪ್ರಿಯರಾಗಿರುವ ಈ ಯುಗದ ಸಾಹಿತಿಗಳು ಛಂದೋಲಯಬದ್ಧ ಕೃತಿ ರಚನೆಯಿಂದ ಬಲು ದೂರವಾಗಿರುವ ಇಂದಿನ ದಿನಮಾನದಲ್ಲಿ ನನ್ನ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯು ಭಾಮಿನಿ ಷಟ್ಪದಿಯಲ್ಲಿ ಹರಿಸಿರುವ ವಿಶಿಷ್ಟ ಅನುಭಾವ ಲಹರಿ ‘ಭಾಮಿನಿ ಕೀರ್ತನೆಗಳು’ ಎಂಬ ಈ ಕೃತಿಯು ಕನ್ನಡ ಸಾಹಿತ್ಯದ ಸಾಹಿತಿಗಳಿಗೆ ಅತ್ಯಂತ ಅಪೂರ್ವ ಅತ್ಯುಪಯುಕ್ತ ವಿಚಾರಧಾರೆಯುಳ್ಳ ಮಾದರಿ ಪುಸ್ತಕವೆಂಬುದರಲ್ಲಿ ಅತಿಶಯೋಕ್ತಿಯೇನಿಲ್ಲ ಎಂಬ ಇನ್ನೋರ್ವ ವಿದ್ಯಾರ್ಥಿನಿ ಸಖಿ, ಶಿಕ್ಷಕಿ ಪ್ರಮೀಳಾ ಸವಡಿ ಅವರ ಅಭಿಪ್ರಾಯ ಚೋತೋಹಾರಿಯಾಗಿದೆ.ಛಂದೊಬದ್ಧ ಕಾವ್ಯ ರಚನೆ ಸಾವಿತ್ರಿಯ ಅದಮ್ಯ ಸುಪ್ತ ಪ್ರತಿಭೆಗೆ ಸಾಕ್ಷಿಯಂತಿದೆಯಲ್ಲದೆ ಷಟ್ಪದಿ ಬರಹಗಾರರಿಗೆ ಸ್ಪೂರ್ತಿಯ ಸೆಲೆಯೇ ಆಗಿದ್ದು ಸರ್ವರೂ ಓದಲೇಬೇಕಾದ ಅನುಪಮ ಕಾವ್ಯ ಸಂಕಲನವೆಂಬುದು ಅಕ್ಷರಶಃ ಸತ್ಯ.ಸಾವಿತ್ರಿಯವರ ಈ ಸಂಕಲನದ ಭಾಮಿನಿ ಷಟ್ಪದಿಯ ಕೀರ್ತನೆಗಳು ಕನ್ನಡಿಗರ ಮನೆ ಮನಗಳನ್ನು ತಲುಪಿ ಸಹೃದಯ ಗಾಯಕರ ಮನಮಿಡಿಯುವದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ ಎಂಬುದಂತೂ ಅಕ್ಷರಶಃ ಸತ್ಯ !!

ಪ್ರೊ. ಶಕುಂತಲಾ.ಚನ್ನಪ್ಪ. ಸಿಂಧೂರ.
ಸಾಹಿತ್ಯ ಸಂಶೋಧಕರು, ವಿಮರ್ಶಕರು.ಗದಗ