ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ
ಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ?
ವಾಯುವಿನ ಸ್ಥಳವನರಿದವರುಂಟೆ ?
ಅಂಬುಧಿಯ ಗುಣವನಳೆದವರುಂಟೆ ?
ಲಿಂಗದ ಪ್ರಮಾಣ ಹೇಳಬಹುದೆ ?
ಚಂದ್ರ ಮಂಡಲ ತಾರಾಮಂಡಲ
ಸೂರ್ಯ ಮಂಡಲ ಇತ್ತಿತ್ತಲಯ್ಯಾ !
ಪಂಚಮುಖವಾಗಿ, ನೊಸಲಕಣ್ಣು
ಚತುಭು೯ಜ ಅನುಮಾತ್ರವೆ ?
ಒಬ್ಬ ಶರಣನಾಗಿ ಗುಹೇಶ್ವರನೆಂಬ
ಘನನೆಲೆಯ ಬಲ್ಲಡೆ ಅಲ್ಲಿಂದತ್ತ ಶರಣು ಶರಣು.
ಅಲ್ಲಮ ಪ್ರಭುದೇವರ ವಚನ
ಸವಸಂ : 2, ವಚನ-1159 ಪುಟ-343.
ಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ?
————————————-
ಗಗನವು ಒಂದು ಕಣ್ಣಿಗೆ ಕಾಣುವ ಬೃಹತ್ ದೂರದ ನಿರಾಕಾರದ ಪ್ರತಿರೂಪ ಭೂಮಂಡಲದ ಸೌರ್ಯವ್ಯೂಹ ತಾರೆ ಚುಕ್ಕೆ ಗ್ರಹ ಆಸರೆಯ ತವರು .ಅಂತಹ ದೊಡ್ಡ ಮತ್ತು ಅತ್ಯಂತ ಎತ್ತರದ ಗಗನಕ್ಕೆ ನಾವು ನಿಚ್ಚಣಿಕೆಯನ್ನು ಇಡಲು ಸಾಧ್ಯವೇ ? ನಿಚ್ಚಣಿಕೆ ವಿಷಯಾದಿಯ ಸಂಕೇತ ,ಗಗನವು ಬೃಹತ್ ಘನ ತುದಿ ಮೊದಲಿಲ್ಲದ ನೋಟ ,ಆರಂಭ ಕೊನೆಯಿಲ್ಲದ ವಿಸ್ತಾರ ಪಂಚಮಹಾಭೂತಗಳನ್ನೊಳಗೊಂಡ ದಿವ್ಯ ಕಾಯ .ಅಂತಹ ಘನ ವಿಸ್ತಾರದ ಗಗನಕ್ಕೆ ನಿಚ್ಚಣಿಕೆ ಇಡಲು ಸಾಧ್ಯವೇ ? ಎಂದು ಪ್ರಶ್ನಿಸಿದ್ದಾರೆ ಅಲ್ಲಮರು.ಗಗನವು ಘನವೆನಿಸಿದರು ಹಿಡಿಯಲಾಗದು. ಗಗನಕ್ಕೆ ನಿಚ್ಚಣಿಕೆ ಇಡಲಾಗದು ಅಲ್ಲಿ ಆಧಾರವಿರುವದಿಲ್ಲ .
ವಾಯುವಿನ ಸ್ಥಳವನರಿದವರುಂಟೆ ?
—————————————
ವಾಯು ಪಂಚಮಹಾಭೂತಗಳಲ್ಲಿ ಅತ್ಯಂತ ಪ್ರಮುಖ ಶಕ್ತಿ . ವಾಯು ಎಲ್ಲೆಡೆಗೆ ನಿರಾಳವಾಗಿ ಹರಿಯುವ ಇರುವ ಗುಣವನ್ನು ಹೊಂದಿದೆ ,ವಾಯುವನ್ನು ನಾವು ಗ್ರಹಿಸುತ್ತವೆ ಅನುಭವಿಸುತ್ತೇವೆ ಆದರೆ ಅದನ್ನು ಹಿಡಿದಿಡಲು ಅಥವಾ ಅದರ ನಿರ್ಧಿಷ್ಟ ಸ್ಥಾನವನ್ನು ಗುರುತಿಸಲು ಸಾಧ್ಯವೇ ಎಂದಿದ್ದಾರೆ ಅಲ್ಲಮರು..ವಾಯುವಿನ ಗುಣವನ್ನು ಇರುವೆ ಬಲ್ಲದು ಮನುಷ್ಯನು ವಾಯುವನ್ನು ಅನುಭವಿಸುವನು ಆದರೆ ಅದರ ಸ್ಥಳವನ್ನು ಹುಡುಕಲು ಸಾಧ್ಯವಿಲ್ಲ ಎಂದಿದ್ದಾರೆ ಅಲ್ಲಮರು
ಅಂಬುಧಿಯ ಗುಣವನಳೆದವರುಂಟೆ ?
—————————————–
ಅಂಬುಧಿ ಸಮುದ್ರದ ಆಳ ಅಗಲ ಮತ್ತು ಅದರ ಗುಣವನ್ನು ಅಳೆಯಲು ಸಾಧ್ಯವೇ ? ಕಾರಣ ನಿರಂತರ ಅಲೆಗಳೊಂದಿಗೆ ಕ್ರಿಯಾಶೀಲವಾದ ತುಂಬಾ ಗಾಂಭೀರ್ಯ ಶಾಂತ ಮತ್ತು ಒಮ್ಮೊಮ್ಮೆ ಸುನಾಮಿಯ ರುದ್ರ ರೂಪವನ್ನು ತಾಳುತ್ತದೆ ,ಹೀಗಾಗಿ ಸಮುದ್ರದ ಗುಣವನ್ನು ಅಳೆಯುವುದು ಸಾಧ್ಯವಿಲ್ಲ .ಅದು ಗುಣವನ್ನು ಮೀರಿದ ಘನವು .
ಲಿಂಗದ ಪ್ರಮಾಣ ಹೇಳಬಹುದೆ ?
———————————
ಲಿಂಗವು ಬ್ರಹ್ಮಾಂಡದ ಸಂಕೇತ .ಜಗದಗಲ ಮಿಗಿಲಗಳ ಮಿಗೆಯಗಲ ನಿಮ್ಮಗಲ ಎಲ್ಲ ಎಲ್ಲೆ ಸೀಮೆಯನ್ನು ಮೀರಿದ ಘನವು ಲಿಂಗ ಕಾಣಬಾರದ ಪ್ರಜ್ಞೆ ನಿರಾಕಾರ ತತ್ವದ ಸಾಕಾರ ರೂಪ . ಲಿಂಗವು ಜ್ಞಾನ ಸಾಕ್ಷಾತ್ಕಾರ ಅರಿವಿನ ಕುರುಹು ಎಂದು ಶರಣರು ವ್ಯಾಖ್ಯಾನಿಸಿದ್ದಾರೆ .ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ .ಹೀಗಾಗಿ ಲಿಂಗವನ್ನು ಪ್ರಮಾಣೀಕರಿಸಲು ಸಾಧ್ಯವಿಲ್ಲ .ಅಗಮ್ಯ ಅಗೋಚರ ಅಪ್ರತಿಮ ಅಪ್ರಮಾಣ ಲಿಂಗವು .ಹೀಗಾಗಿ ಅದರ ಅಳತೆ ಉದ್ದ ಮಾನದಂಡಗಳ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಅಲ್ಲಮರು.
ಚಂದ್ರ ಮಂಡಲ ತಾರಾಮಂಡಲ ಸೂರ್ಯ ಮಂಡಲ ಇತ್ತಿತ್ತಲಯ್ಯಾ !
——————————————————————
ಚಂದ್ರ ಸೂರ್ಯ ತಾರಾಮಂಡಲಗಳು ಇತ್ತಿತ್ತಲಾಗಿ ರಚಿತಗೊಂಡಿವೆ. ನಕ್ಷತ್ರ ಗ್ರಹ ಧೂಮಕೇತು ಕ್ಷುದ್ರ ಗ್ರಹಗಳು ಸೂರ್ಯನಿಂದ ಸಿಡಿದು ಬಂದ ಘನಗಳು ಅವುಗಳು ಇತ್ತೀಚಿಗೆ ರಚನೆಗೊಂಡ ಸೂರ್ಯ ಮಂಡಲವು .
ಪಂಚಮುಖವಾಗಿ, ನೊಸಲಕಣ್ಣು ಚತುಭು೯ಜ ಅಣು ಮಾತ್ರವೆ ?
—————————————————————
ಪಂಚಮುಖವಾಗಿ, ನೊಸಲಕಣ್ಣು ಚತುಭು೯ಜ ಇಲ್ಲಿ ಇವುಗಳನ್ನು ಸೃಷ್ಟಿಯ ಶಿಲ್ಪಿ ಸೃಷ್ಟಿಕರ್ತ ಎಂಬ ಅರ್ಥದಲ್ಲಿ ತಿಳಿಯಬೇಕು .ಪರಮಾರ್ಥ ಬ್ರಹ್ಮ ಶಿವ ವಿಷ್ಣು ಎಂಬ ಅರ್ಥದಲ್ಲಿ ತೆಗೆದುಕೊಂಡರು ಸಹಿತ ಒಟ್ಟಾರೆ ಸೃಷ್ಟಿಕರ್ತ ಎಂಬ ಅರ್ಥವನ್ನು ನಾವು ಗಮನಿಸಬೇಕು. ಪಂಚಮುಖ ಅಂದರೆ ಬ್ರಹ್ಮ ನೊಸಲಕಣ್ಣು ಶಿವ ಹಾಗೂ ಚತುರ್ಭುಜ ವಿಷ್ಣು ಎಂಬ ಅರ್ಥವನ್ನು ಒಳಗೊಂಡಿದೆ ಇವರೆಲ್ಲರು ತೃಣಮಾತ್ರರೆ ಅಣುಮಾತ್ರವೆ ? ಎಂಬ ಸಂಶಯವನ್ನು ವ್ಯಕ್ತಪಡಿಸುವ ಅಲ್ಲಮರು ಅದಕ್ಕೆ ಪಾರಿಭಾಷಿಕ ಪರ್ಯಾಯ ಅರ್ಥವನ್ನು ನೀಡುವ ಕ್ರಮಕ್ಕೆ ಮುಂದಾಗಿದ್ದಾರೆ .
ಒಬ್ಬ ಶರಣನಾಗಿ ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ ಅಲ್ಲಿಂದತ್ತ ಶರಣು ಶರಣು.
—————————————————————————–
ಒಬ್ಬ ಶರಣನು ಪರಿಪೂರ್ಣದ ಪ್ರತಿನಿಧಿ ಮೌಲ್ಯಗಳ ಮೊತ್ತ ,ಉತ್ತಮ ನಡೆ ನುಡಿಯ ರಾಯಭಾರಿ.ಇಂಥ ಶರಣನು ಗುಹೇಶ್ವರನೆಂಬ ನೆಲೆಯನ್ನು ಅರಿತವನು ಸತ್ಯದ ನೆಲೆಯನ್ನು ಬಲ್ಲವನಾಗಿರುತ್ತಾನೆ ಅಂತಹ ಶರಣ ತತ್ವವನ್ನು ಪಾಲಿಸುವ ಶರಣನಿಂದ ನಿಜವಾದ ಬೌದ್ಧಿಕ ಜೈವಿಕ ವಿಕಾಸವಾಗುತ್ತದೆ . ಇಲ್ಲದಿದ್ದರೆ ಬ್ರಹ್ಮ ವಿಷ್ಣು ರುದ್ರರು ನಿರ್ಮಿಸಿದ ಜಗತ್ತು ಅಣು ಮಾತ್ರವೂ. ಸೃಷ್ಟಿ ಸ್ಥಿತಿ ಮತ್ತು ಲಯಗಳು ಕೇವಲ ಅನು ನೆಪ ಮಾತ್ರವು . ನಿಜದ ನೆಲೆಯಲ್ಲಿ ಬದುಕುವ ಲಿಂಗ ತತ್ವವು ಘನವು ಎಂದಿದ್ದಾರೆ ಅಲ್ಲಮರು .ಗುಹೇಶ್ವರ ಎಂಬ ಪರಮ ಸತ್ಯವನ್ನು ಅರಿಯುವ ಸದ್ಭಕ್ತನೇ ದೇವರು .ಅಂತಪ್ಪ ಶರಣನಿಗೆ ನಾನು ಶರಣು ಶರಣು ಎನ್ನುತ್ತೇನೆ ಎಂದಿದ್ದಾರೆ ಅಲ್ಲಮರು .ಅತ್ಯಂತ ಸಮಯೋಚಿತ ಅರ್ಥಪೂರ್ಣವಚನವಾಗಿದೆ
———————————————–
ಡಾ.ಶಶಿಕಾಂತ .ಪಟ್ಟಣ ರಾಮದುರ್ಗ
9552002338