*ಗರ್ವದಿಂದ ಮಾಡುವ ಭಕ್ತಿ*
————————————
ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು;
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ;
ಕೊಡದೆ ತ್ಯಾಗಿ ಎನಿಸಿಕೊಂಬುದು
ಮುಡಿಯಿಲ್ಲದ ಶೃಂಗಾರ;
ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ
ಸುಜಲವ ತುಂಬಿದಡೆ,
ಮಾರಯ್ಯಪ್ರಿಯ ಅಮರೇಶ್ವರಲಿಂಗವ
ಮುಟ್ಟದ ಭಕ್ತಿ.
– *ಶರಣೆ ಆಯ್ದಕ್ಕಿ ಲಕ್ಕಮ್ಮನ ವಚನ*
ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಲಿಂಗಸುಗೂರು ತಾಲೂಕಿನ ಗುಡಗುಂಟಿ ಅಮರೇಶ್ವರ ಕ್ಷೇತ್ರದಿಂದ ಬಂದ ಅನುಭಾವಿ ವಚನನಕಾರರು ಹಾಗೂ ಕೂಲಿ ಕಾರ್ಮಿಕರು.
ಆಯದ ಅಕ್ಕಿ ಅಂದರೆ ಕೂಲಿಗಾಗಿ ಕಾಳು( Barter system ).ಅಂದಿನ ಶ್ರಮಿಕ ಸೇವೆಗೆ ಹಣದ ಬದಲಾಗಿ ಧಾನ್ಯ ಕೊಡುವ ಪದ್ಧತಿ ಇತ್ತು. ಈಗಲೂ ಹಳ್ಳಿಯಲ್ಲಿ ಇಂತಹ ಶ್ರಮಿಕರಿಗೆ ಆಯಗಾರರು ಎಂದೆನ್ನುತ್ತಾರೆ.ಕಮ್ಮಾರ ಕುಂಬಾರ ಬಡಿಗೇರ ಹಡಪದ ಮಡಿವಾಳ ಚಮ್ಮಾರ ಸಿಂಪಿ ಮುಂತಾದ ಜನಾಂಗದವರು ಶ್ರೀಮಂತರಿಂದ ವರ್ಷಕ್ಕೊಮ್ಮೆ ಬೆಳೆ ಬಂದಾಗ ಅವರಲ್ಲಿ ಕಾಳು ಕಡಿ ಪಡೆದುಕೊಂಡು ಅವರಿಗೆ ತಮ್ಮ ಶ್ರಮದ ಸೇವೆ ನೀಡುತ್ತಾರೆ.
ವಚನಕಾರರಲ್ಲಿಯೇ ವಿಶಿಷ್ಟವಾಗಿ ಕಾಣುವ ಆಯ್ದಕ್ಕಿ ಲಕ್ಕಮ್ಮ ದಿಟ್ಟ ನಿಲುವಿನ ಗಣಾಚಾರಿ ಶರಣೆ.ಗಂಡ ಮಾರಯ್ಯನವರು ಒಂದು ದಿನ ಅಗತ್ಯಕ್ಕಿಂತ ಹೆಚ್ಚಿನ ಆದಾಯವನ್ನು ಮನೆಗೆ ತಂದಾಗ ಅದನ್ನು ಪ್ರಶ್ನಿಸಿ ಮಹಾಮನೆಯ ಸೇವೆಗೆ ಬಸವಣ್ಣನವರಿಗೆ ಆ ಹೆಚ್ಚಿನ ಅಕ್ಕಿಯನ್ನು ಮರಳಿ ನೀಡು ಬಾ ಎಂದು ಗಂಡನನ್ನೆ ಎಚ್ಚರಿಸುತ್ತಾಳೆ ಲಕ್ಕಮ್ಮ .
ಈ ವಚನದಲ್ಲಿ ದಾಸೋಹ ಮಾಡುವ ಭಕ್ತನ ಮನಸ್ಥಿತಿ ಹೇಗಿರಬೇಕು ಎಂಬುದರ ಬಗ್ಗೆ ಅತ್ಯಂತ ಮಾರ್ಮಿಕವಾಗಿ ತಿಳಿಸಿದ್ದಾಳೆ ಲಕ್ಕಮ್ಮ .
*ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು;*
——————————————–
ಮಾಡುವಂತಿರಬೇಕು ಮಾಡದಂತಿರಬೇಕು ಮಾಡುವ ಮಾಟದಲ್ಲಿ ತಾನಿಲ್ಲದಂತಿರಬೇಕು ಎಂದೆನ್ನುವ ಅಪ್ಪ ಬಸವಣ್ಣನವರ ವಾಣಿಯಂತೆ ಮಾಡಿ ನೀಡಿ ಹೋಹೆನೆಂದಾಗ ಕೈಲಾಸವೇನು ಕೈ ಕೂಲಿಯೇ ಎಂದು ಲಕ್ಕಮ್ಮ ಶರಣೆ ಪ್ರಶ್ನೆ ಮಾಡಿದ್ದಾಳೆ. ದಾಸೋಹ ಮತ್ತು ಕಾಯಕ ಒಂದಕ್ಕೊಂದು ಪೂರಕವಾದ ಶರಣರ ಸಮತೆಯ ಚಳವಳಿ.
ಕಾಯಕವು ಸತ್ಯ ಶುದ್ಧವಾಗಿರಬೇಕು ಪ್ರಾಮಾಣಿಕತೆಯಿಂದ ಪರಾಮರ್ಶಿಸಿರಬೇಕು. ದಾಸೋಹ ಮಾಡುವಲ್ಲಿ ವಿನಯ ಭಾವ ಕಿಂಕರತ್ವವಿರಬೇಕು .ಮಾಡಿದೆನೆನ್ನುವುದು ಮನದಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ ಎಂದು ಬಸವಣ್ಣನವರು ಹೇಳಿದಂತೆ ಭಕ್ತಿ ದಾಸೋಹ ವಿನಮ್ರ ಭಾವದಿಂದಿರಬೇಕು.
ಗರ್ವದಲ್ಲಿ ಅಹಂಕಾರದಲ್ಲಿ ಮಾಡುವ ಭಕ್ತಿ ದಾಸೋಹವು ತಾವು ಮಾಡುವ ದ್ರವ್ಯಕ್ಕೆ ಕೇಡು ಮತ್ತು ಹಾನಿ ಎಂದಿದ್ದಾಳೆ ಲಕ್ಕಮ್ಮ .
ದಾನಿಗಳು ಶ್ರೀಮಂತರು ತಮ್ಮ ಒಣ ಪ್ರತಿಷ್ಠೆಗೆ ದಾಸೋಹ ಎಂಬ ಹೆಸರಿನಲ್ಲಿ ಭಕ್ತಿ ಮಾಡಿ ಅನ್ನ ದಾಸೋಹ ವಸ್ತ್ರ ದಾಸೋಹ ಮಾಡುವವರು ತಮ್ಮ ಜೇಷ್ಠತೆಯನ್ನು ಮೆರೆಯುತ್ತಾರೆ. ಹೀಗಾಗಿ ಇದು ಅಂತಹ ದಾಸೋಹ ಭಕ್ತಿ ಒಪ್ಪದ ಮಾತು ಇಂತಹ ಪ್ರತಿಷ್ಠೆಗೆ ಬಳಸಿದ ಗರ್ವದ ಭಕ್ತಿಯ ಹಣವು ಆಸ್ತಿ ದ್ರವ್ಯಕ್ಕೆ ಕೇಡು ಹಾನಿ ಎಂದಿದ್ದಾಳೆ ಆಯ್ದಕ್ಕಿ ಲಕ್ಕಮ್ಮ .
*ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ;*
———————————–
ನಡೆಯಲ್ಲಿ ಎಚ್ಚತ್ತು ನುಡಿಯಲ್ಲಿ ತಪ್ಪಿದರೆ ಹಿಡಿದಿರ್ಪ ಲಿಂಗವು ಘಟಸರ್ಪ ನೋಡಾ ಎಂದು ಬಸವಣ್ಣನವರು ಹೇಳಿದಂತೆ, ನಡೆ ನುಡಿಗಳ ಸಮನ್ವಯವೆ ಶರಣ ತತ್ವ .
ಅರಿವು ಆಚಾರಕ್ಕೆ ಪೂರಕವಾಗಿರಬೇಕು. ಅರಿವಿದ್ದು ಆಚಾರವಿರದಿದ್ದರೆ ಅದು ಅರಿವಿಂಗೆ ಹಾನಿ. ಅರಿವೆಂಬ ಜ್ಯೋತಿಗೆ ಮಾಡುವ ಅವಮಾನವಾಗಿದೆ.ಒಳ್ಳೆಯ ಅನುಭಾದ ನುಡಿಗಳನ್ನಾಡಿ ಅದರ ಹಾಗೆ ನಡೆಯದ ಆಷಾಡಭೂತಿಗಳ ನಡೆಯನ್ನು ಲಕ್ಕಮ್ಮ ಪ್ರಶ್ನಿಸಿದ್ದಾಳೆ. ನಡೆಯಿಲ್ಲದ ನುಡಿಯು ಜ್ಞಾನ ಮತ್ತು ಅರಿವಿನ ಕೇಡು ಹಾನಿ ಎಂದಿದ್ದಾಳೆ .
*ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ;*
—————————————————————
ಸಮಾಜ ಸೇವೆಗೆ ಕೊಡದೆ ದಾಸೋಹ ಮಾಡದೆ ತಾನು ದಾನಿ ತ್ಯಾಗಿ ಎಂದೆನಿಸಿಕೊಳ್ಳುವವನು ಒಬ್ಬ ಹೀನ ಮನಸ್ಸಿನ ವ್ಯಕ್ತಿ. ಸಮಾಜದಲ್ಲಿ ತಾವೊಬ್ಬ ತ್ಯಾಗಿಗಳು ದಾನಿಗಳು ದಾಸೋಹಿಗಳು ಎಂದೆಲ್ಲಾ ಬಿರುದು ಬಾವಲಿಗಳನ್ನು ಪಡೆದು ದಾನಿ ರತ್ನಾಕರ ದಾನಶೂರ ಕರ್ಣ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಜನರು ಎಂದಿಗೂ ಸಮಾಜ ಸೇವೆಗೆ ಏನನ್ನೂ ಕೊಡದೆ ದೊಡ್ಡವರೆನಿಸಿಕೊಳ್ಳುತ್ತಾರೆ.ಇಂತಹ ತ್ಯಾಗಿಗಳು ಡೋಂಗಿ ದಾಸೋಹಿಗಳು ತಲೆಗೆ ಕೂದಲಿಲ್ಲದೆ ಮಾಡಿಸಿಕೊಂಡ ಶೃಂಗಾರದಂತೆ. ಕೇಶವಿದ್ದರೆ ಮಾತ್ರ ಶೃಂಗಾರದ ಅಂದ ಚೆಂದ. ಬೋಳು ತಲೆಗೆ ಮಲ್ಲಿಗೆ ಸಂಪಿಗೆ ಜಾಜಿ ಹೂವಿನ ಮಾಲೆ ಕಟ್ಟಿ ಅಲಂಕರಿಸಿದರೆ ಅದು ನಿಲ್ಲುವುದೆ? ಹಾಗೆ ಕೊಡದೆ ನೀಡದೆ ತ್ಯಾಗಿ ಎಣಿಸಿಕೊಳ್ಳುವವನ ಕೃತ್ಯವಾಗುತ್ತದೆ.
*ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಬದಲ್ಲಿ ಸುಜಲವ ತುಂಬಿದಡೆ,*
—————————————————————
ಲಿಂಗ ತತ್ವದಲ್ಲಿ ನಂಬಿಕೆ ಶೃದ್ಧೆ ವಿಶ್ವಾಸವಿಟ್ಟು ಭಕ್ತಿ ಮಾಡಿದರೆ ಅದು ಅನುಪಮ ಹಾಗೂ ಅನುಕರಣೀಯವಾದ ಸತ್ಕಾರ್ಯವೆನಿಸುತ್ತದೆ . ಗುರು ಲಿಂಗ ಜಂಗಮ ಕಾಯಕ ದಾಸೋಹದಲ್ಲಿ ನಂಬಿಕೆ ದೃಢತೆ ಇಲ್ಲದ ಭಕ್ತಿಯು ,ಅಡಿಯಲ್ಲಿ ಒಡೆದ ಕೊಡದ ( ಕುಂಭದ ) ತುಂಬ ನೀರು ಸುರಿದಂತೆ . ಅಂತಹ ಒಡಕು ಗಡಿಗೆ ಮಡಿಕೆಯ ಕೊಡದಲ್ಲಿ ಸುಜಲವ ಸುರಿದರೇನು ಉಪಯೋಗ ? ಅದು ವ್ಯರ್ಥವಾಗಿ ಹರಿದು ಹೋಗುತ್ತದೆ.ಮನುಷ್ಯನಲ್ಲಿ ಭಕ್ತಿ ಶೃದ್ಧೆ ವಿಶ್ವಾಸ ದೃಢತೆ ಬೇಕು ಅಂದಾಗ ಮಾತ್ರ ಅದು ಗಟ್ಟಿ ಕುಂಭವಾಗಿ ನಿಲ್ಲುತ್ತದೆ ಹಾಗೂ ಅದರಲ್ಲಿ ಜ್ಞಾನ ಅರಿವೆಂಬ ಸುಜಲವು ನಿಲ್ಲುತ್ತದೆ.
*ಮಾರಯ್ಯಪ್ರಿಯ ಅಮರೇಶ್ವರಲಿಂಗವ ಮುಟ್ಟದ ಭಕ್ತಿ.*
—————————————————–
ಗರ್ವದಿಂದ ಮಾಡಿದ ಭಕ್ತಿ ದ್ರವ್ಯಕ್ಕೆ ಹಾನಿ,ನಡೆ ನುಡಿಯಲ್ಲಿ ಸಾಮ್ಯತೆ ಇರದ ನುಡಿಯು ಅರಿವಿನ ಹಾನಿ,ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ, ಇಂತಹ ಘಟನೆಗಳು ಒಡೆದ ಮಡಿಕೆಯಲ್ಲಿ ಸುಜ್ಞಾನ ಅರಿವೆಂಬ ಸುಜಲವ ಸುರಿಯಲು ಹರಿದು ಹೇಗೆ ವ್ಯರ್ಥವಾಗುತ್ತದೆಯೋ ಅದೇ ರೀತಿಯಲ್ಲಿ ನಿಷ್ಠೆ ಬದ್ಧತೆ ಪ್ರಾಮಾಣಿಕತೆ ಇಲ್ಲದ ಭಕ್ತಿಯು ಮಾರಯ್ಯಪ್ರಿಯ ಅಮರೇಶ್ವರಲಿಂಗವ ಮುಟ್ಟಲಾಗದು. ಜಂಗಮ ಸಮಾಜಕ್ಕೆ ಇಂತಹ ಸೇವೆಗಳು ಮುಟ್ಟಲಾರವು ಎಂದು ಎಚ್ಚರಿಸಿದ್ದಾಳೆ ಸತ್ಯ ಶುದ್ಧ ಕಾಯಕದ ರೂವಾರಿ ಆಯ್ದಕ್ಕಿ ಲಕ್ಕಮ್ಮ.
ಇಲ್ಲಿ ಅಮರೇಶ್ವರ ಲಿಂಗವೆಂಬುದು ಚೈತನ್ಯ ಹೊಂದಿದ ಜಂಗಮ ಲಿಂಗ ಪ್ರಜ್ಞೆ .
———————————————–
*ಡಾ.ಶಶಿಕಾಂತ.ಪಟ್ಟಣ ರಾಮದುರ್ಗ -9552002338*