Homeಲೇಖನ"ಬಾಡದಿರಲಿ ಸ್ನೇಹ" ಕವನ ಸಂಕಲನ ವಿಶ್ಲೇಷಣಾತ್ಮಕ ಲೇಖನ

“ಬಾಡದಿರಲಿ ಸ್ನೇಹ” ಕವನ ಸಂಕಲನ ವಿಶ್ಲೇಷಣಾತ್ಮಕ ಲೇಖನ

     ‘ ಬಾಡದಿರಲಿ ಸ್ನೇಹ ‘ ಇದೊಂದು ಅಪೂರ್ವ ಕವನ ಸಂಕಲನ. ಶರಣೆ ಬಸಮ್ಮ ಭರಮಶೆಟ್ಟಿ(ರಾಂಪುರ ಪಿ ಏ)ಯವರು ಈ ಕೃತಿಯ ಕವಯಿತ್ರಿ.ಇವರು ಮೂಲತಃ ಸಿಂದಗಿಯವರು. ಬಸಮ್ಮನವರು ಎಂಭತ್ತರ ದಶಕದ  ತಮ್ಮ ಇಳಿವಯಸ್ಸಿನಲ್ಲಿಯೇ ಈ ಕವನ ಸಂಕಲನ ಪ್ರಕಟಿಸಿರುವುದು ‘ ವಯಸ್ಸಾಗುವುದು ದೇಹಕ್ಕೆ ಮಾತ್ರ,ಮನಸ್ಸಿಗಲ್ಲ’ ಎಂಬುದಕ್ಕೆ ಅವರ ಜೀವನೋತ್ಸಾಹ ಸಾಕ್ಷಿಯಂತಾಗಿದೆ.ಬದುಕಿನುದ್ದಕ್ಕೂ ಹುಟ್ಟಿದಾರಭ್ಯದಿಂದ ಸಾಕಷ್ಟು ಕಷ್ಟನಷ್ಟಗಳನ್ನು ವಿಧವಿಧ ಏಳುಬೀಳುಗಳನ್ನು ಕಂಡುಂಡ ಕವಯಿತ್ರಿ ಹೃದಯದ ಕುಲುಮೆಯಲ್ಲಿ ತಮ್ಮ ಅನುಭವಗಳನ್ನು ಹದವಾಗಿ ಬೇಯಿಸಿ ಅಕ್ಷರ ರೂಪಕ್ಕಿಳಿಸಿರುವ ಪರಿ ಉದಯೋನ್ಮುಖ ಕವಿಗಳನ್ನು ಬೆಕ್ಕಸ ಬೆರಗಾಗಿಸುವಂತಹದು.
   ಇಲ್ಲಿಯವರೆಗೂ ತಮ್ಮ ಮನಸಿನ ಸಂತಸಕ್ಕೆ ಅಲ್ಲಲ್ಲಿ ಬರೆದಿಡುತ್ತಲಿರುವ ಕವಯಿತ್ರಿ, ಬಾಳ ಬುತ್ತಿ ಬಿಚ್ಚಿದಾಗ ಗ್ರಾಮೀಣ ಸುಪ್ತ ಪ್ರತಿಭೆಗೆ ಪ್ರೋತ್ಸಾಹದ ಕೊರತೆಯಿಂದ ಮೂಲೆಗುಂಪಾಗಿ ಕುಳಿತಿರುವ ಭಾವ-ವಿಭಾವ- ಅನುಭಾವದಲೆಗಳು ತರಂಗ ತರಂಗಗಳಾಗಿ ಸ್ಪುರಿಸುತ್ತಾ ಪ್ರಕಟಣೆಯ ಕಾಯಕಲ್ಪಕ್ಕೆ ಹಾತೊರೆಯುತ್ತಿರುವ ಸುವರ್ಣಾವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಲಿದ್ದಿತೆಂಬುದನ್ನು ಸಾಬೀತುಪಡಿಸುವಂತಿವೆ.
‘ಅರಸುವ ಬಳ್ಳಿ ಕಾಲ್ತೊಡಕಿದಂತಾಗಿ’ ಅಕ್ಕನ ಅರಿವು, ಪುಣೆಯ ಅಂತರ್ ರಾಷ್ಟ್ರೀಯ ಬಸವ ಅಧ್ಯಯನ ಕೇಂದ್ರದ ಸಂಸ್ಥಾಪಕರಾದ ರಾಮದುರ್ಗದ  ಡಾ.ಶಶಿಕಾಂತ ಪಟ್ಟಣ ಅವರ ಮಾರ್ಗದರ್ಶನದಲ್ಲಿ ಪ್ರೋತ್ಸಾಹ ಲಭಿಸಲು ಉತ್ಸಾಹದಿಂದ ಹಿರಿಹಿರಿ ಹಿಗ್ಗಿದ ಬಸಮ್ಮ ಭರಮಶೆಟ್ಟಿ ರಾಂಪುರ ಪಿ ಏ ಅವರು ಡಾ.ಗೌರಮ್ಮ ನಾಶಿಯವರ ಬೆಂಬಲದೊಂದಿಗೆ ಈ ಕವನ ಸಂಕಲನ ಪ್ರಕಟವಾಗಲು ರಹದಾರಿ ನಿರ್ಮಿಸಿಕೊಂಡಿರುವರು.
“ಹೆಣ್ಣೀನ ಜನುಮಕ ಅಣ್ಣತಮ್ಮರು ಬೇಕ
ಬೆನ್ನತಟ್ಟುವರ ಸಭೆಯೊಳಗ ಅಣ್ಣಯ್ಯ
ಹೊನ್ನ ತುಂಬುವರ ಉಡಿಯೊಳಗ.”ಎಂಬ ಜಾನಪದ ಗರತಿಯರ ನುಡಿಗಡಣದಂತೆ ಡಾ.ಶಶಿಕಾಂತ ಪಟ್ಟಣರವರು ಬೆನ್ನೆಲುಬಿನಂತೆ ಹುರಿದುಂಬಿಸಿ ಈ ಕೃತಿಯನ್ನು ಪ್ರಕಟಿಸಲು ಕವಯಿತ್ರಿಯರ ತುಂಬಾ ವರುಷಗಳ ಉತ್ಕಟ ಹೆಬ್ಬಯಕೆಯ ಕನಸು ನನಸಾಗಿ ಸಾಕಾರಗೊಂಡು ಬೀದರಿನ ಬಸವಕಲ್ಯಾಣದಲ್ಲಿ ಬಿಡುಗಡೆಯಾದ ನಂತರ ಸಹೃದಯರ ಕೈಸೇರುವಂತಾದುದು ರೋಮಾಂಚನಕಾರಿ ಸಂಗತಿಯೇ ಸರಿ.

  ಒಬ್ಬ ಗೃಹಿಣಿ ಅಲ್ಪ ವಿದ್ಯಾಪಾರಂಗತಳಾಗಿದ್ದರೂ ಕೂಡ ಜೀವನದುದ್ದಕ್ಕೂ ತಾವು ಪಟ್ಟಪಾಡನ್ನೇ ಹುಟ್ಟು ಹಾಡಾಗಿಸಿ ನೋವು ನಲಿವು, ಪ್ರೀತಿ ವಾತ್ಸಲ್ಯ , ಸಿಹಿಕಹಿ ಅನುಭವಗಳನ್ನು ಮನಸಾರೆ ಕವನಗಳಲ್ಲಿ ವಸ್ತು ವಿಷಯಗಳನ್ನಾಗಿಸಿಕೊಂಡು  ಧಾರೆಯೆರೆದಿರುವ  ಈ ಸಂಕಲನದ ಪ್ರತಿಯೊಂದು ಕವನಗಳು ಮನುಕುಲದ ಅವರವರ ಬಾಳಿನ ಬವಣೆಗೆ ಹಿಡಿದ ಕೈಗನ್ನಡಿಯಂತೆ ಸಂಕಲನದುದ್ದಕ್ಕೂ ತಲಸ್ಪರ್ಶಿಯಾಗಿ ಮೂಡಿ ಬಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಚಿಕ್ಕವರಿದ್ದಾಗಲೇ ಹೆತ್ತ ತಂದೆಯವರನ್ನು ಕಳೆದುಕೊಂಡಿದ್ದರಿಂದ,ತಮ್ಮ ತಂದೆಯ ಸ್ವರೂಪರಂತಾಗಿದ್ದ ಚಿಕ್ಕಪ್ಪನವರಾದ ಲಿಂ‌.ಶಿವಶರಣಪ್ಪ ಧೂಳಪ್ಪ ಸ್ವಾಧಿ, ನಿವೃತ್ತ ತಹಶೀಲ್ದಾರರವರು ಅತ್ಯಂತ ಪ್ರೀತಿ ಮಮತೆ ಕಕ್ಕುಲಾತಿಯಿಂದ ತಮ್ಮನ್ನು ಸಾಕಿ ಸಲಹಿ ಬೆಳೆಸಿ ಬಾಳಿಗೆ ಬೆಳಕಾಗಿರುವದನ್ನು ತುಂಬು ಹೃದಯದಿಂದ ಕವಯಿತ್ರಿ ಸ್ಮರಿಸುತ್ತಲಿರುವರು.
   ಬಾಡದಿರಲಿ ಸ್ನೇಹ ಕೃತಿಯ ಕವನಗಳಲ್ಲಿ ಹುದುಗಿರುವ ಬಸಮ್ಮನವರ ಭಾವತೀವ್ರತೆ ಮಮತೆ ಪ್ರೀತಿ ಶಾಂತಿ ಸಮಾನತೆಗೆ ಹಾತೊರೆಯುವ ಮನಸ್ಸು ಒಂದೊಂದು ಕವನಗಳ ಸಾಂದ್ರತೆಯನ್ನು ವರ್ಧಿಸುವಂತಿವೆ. ಹಲವಾರು ಕಷ್ಟ ಕಾರ್ಪಣ್ಯಗಳನ್ನು ಸವಾಲಾಗಿ ಎದುರಿಸುತ್ತಾ ಅವುಗಳನ್ನು ಸಕಾರಾತ್ಮಕ ಭಾವದಿಂದ ಅನುಭವಿಸಿರುವ ಇವರು ಬದುಕಿನ ಸ್ನೇಹಮಯ ಪರಿಸರವನ್ನು ಬಿತ್ತಿ ಬೆಳೆಯುತ್ತಾ ಕವನಗಳಲ್ಲಿ ತಮ್ಮ ಸ್ವಂತಿಕೆಯನ್ನು ಬಿಂಬಿಸಿರುವರು.

ಬಾಡದಿರಲಿ ಸ್ನೇಹ ಪ್ರೀತಿ, ಮುಗುಳು ನಗೆ ಮಲ್ಲಿಗೆ, ಹೆಣ್ಣು ಬಾಳ ಹೊನ್ನು,ಅವ್ವನ ಮಡಿಲು,ಮುಗುಳು ನಗೆಗೆ ಮುಪ್ಪಿಲ್ಲ, ತುತ್ತಿನೊಳಗೊಂದು ಮುತ್ತು, ಬಿರಿದ ನೆಲ ನಕ್ಕಿತು, ಕತ್ತಲೆಯ ಏಣಿ,ಕುದಿಯುತ್ತಿದೆ ಕಡಲು, ಇಳೆಗೆ ಉಡುಗೊರೆ, ಸೂರು ಕಳೆದುಕೊಂಡವರು, ಮುಪ್ಪು, ಬಳಲಿದ ಭೂಮಿ,ಮೌನ ವೀಣೆ ಮಿಡಿಯಿತು, ಬಾಳಿನ ಬೆಳಕು ನನ್ನವ್ವ,ಜೀವಂತ ಶವ, ಶಾಂತಿಯ ಲೋಕ, ಇತ್ಯಾದಿ ಒಟ್ಟು ಎಂಭತ್ತು ಕವನಗಳನ್ನೊಳಗೊಂಡಿರುವ ಕ್ರೃತಿಯಾಗಿರುತ್ತದೆ.

ಬದುಕಿನ ಪಯಣದಲ್ಲಿ ಜೋಡೆತ್ತಿನ
ಬಂಡಿಯಾಗುವ ಆಸೆ ಪ್ರೀತಿಯ
ಇಬ್ಬನಿಗಾಗಿ ಹಂಬಲಿಸಿಹ
ಪ್ರೀತಿಯ ಸಾಗರವೆ ಕೈಗೆಟುಕಿದರೆ
ಮನಸು ಬಯಸುವುದು
ಒಂದೇ ಬಾಡದಿರಲಿ ಪ್ರೀತಿ
ಬಾಡದಿರಲಿ ಸ್ನೇಹ
ಆರದಿರಲಿ ಪ್ರೀತಿಯ ಕಾವು

‘ ಬಾಡದಿರಲಿ ಸ್ನೇಹ ‘ ಶೀರ್ಷಿಕೆಯುಳ್ಳ ಈ ಕವನದ ಸಾಲುಗಳು ಓದುಗರ ಮನಂಬುಗುವಂತೆ ಚಿತ್ರಣಗೊಂಡಿರುತ್ತವೆ. ಭೂಲೋಕದಲ್ಲಿ ಉತ್ಪಾದಿಸುವ ಪ್ರತಿಯೊಂದೂ ಒಂದಿಲ್ಲೊಂದು ರೂಪದಲ್ಲಿ ಬಾಡುವಂತಹವುಗಳೇ ಆದರೆ ಸ್ನೇಹ ಮಾತ್ರ ಬಾಡದಿರುವಂತಹದು ಎಂಬ ಕವಿಯಿತ್ರಿಯ ಪರಿಕಲ್ಪನೆ ‘ನಿತ್ಯಂ ಪೊಸತು’ ಉಕ್ತಿಯಂತೆ ಸದಾಕಾಲ ಹಚ್ಚಹಸಿರು ಆಗಿಯೇ ಕಂಗೊಳಿಸುವಂತಹದೆಂಬುದಕ್ಕೆ ಶ್ರೀಕ್ರೃಷ್ಣ- ಸುಧಾಮ, ದುರ್ಯೋಧನ-ಕರ್ಣ ಮೊದಲಾದವರ ಸ್ನೇಹ ಸಾಂಗತ್ಯ ಇಂದಿಗೂ ಬಾಡದಂತೆ ಉಳಿದು ಬಂದಿರುವುದು ಸರ್ವರಿಗೂ ಅನುಭವಗೋಚರವಾದುದು.

‘ಮುಗುಳುನಗೆ ಮಲ್ಲಿಗೆ’ಈ ಕವನದಲ್ಲಿ ಮೂಡಿರುವ ವಿಶಿಷ್ಟ ಭಾವ ಹೀಗಿದೆ-

ಪ್ರಸವ ವೇದನೆಯನ್ನು ನುಂಗಿ
ಮಗುವಿಗೆ ಜನ್ಮ ನೀಡಿ ನಿದ್ದೆ
ಗಣ್ಣಲ್ಲಿ ಮುಗುಳು ನಗೆ ನಗುವ
ಕಂದನ ನೋಡಿ ಮರಿತಾಳ
ತನ್ನೆಲ್ಲ ನೋವಾ ಮಡದಿ
ಮುಗುಳು ನಗೆ ನಗತಾರ
ಮಗುವಿನ ಜನ್ಮದಾತ
ನಗು ತುಂಬಿರಲು ಮಲ್ಲಿಗೆಯಂತೆ ನಗುವ
ಮಗುವೆ ಮುಗುಳು ನಗೆ ಮಲ್ಲಿಗೆ

ಕವಿ ಸಮಯದಲ್ಲಿ ಚಿಲುಮೆಯಂತೆ ಚಿಮ್ಮಿರುವ ದೃಷ್ಟಾಂತದಿಂದೊಡಗೂಡಿರುವ ಸಹಜಾನುಭವವುಳ್ಳ ಈ ಕವನದ  ವಸ್ತು ವಿಷಯ ಸಾರ್ವಕಾಲಿಕವಾದುದು.

ಸಿಂದಗಿ ತಾಲೂಕಿನ ಹಿರಿಯ ಅನುಭವಿಗಳಾದ ಶ್ರೀಮತಿ ಬಸಮ್ಮ ಭರಮಶೆಟ್ಟಿಯವರು  ಬಸವಾದಿ ತತ್ವಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಜನಸಾಮಾನ್ಯರಿಗೆ ತಲುಪಿಸಲು ಮಾಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ.ಎಲ್ಲ ಶರಣ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕೆಂಬ ಮಹಾನ್ ಕಾಳಜಿಯುಳ್ಳ ಇವರು ಸಾಮಾಜಿಕ ಹಾಗೂ ತಾತ್ವಿಕ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಅನೇಕ ಕವನಗಳನ್ನು ರಚಿಸಿದ್ದಾರೆ.ಈ ಎಲ್ಲಾ ಕವನಗಳು ಆಡುನುಡಿ ಸೊಗಡಿನಲ್ಲಿ ಅತ್ಯುತ್ತಮ ಶೈಲಿಯಲ್ಲಿ ನಿರಕ್ಷರರಿಗೂ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ನಿರೂಪಿಸಿರುವದರಿಂದ ಸರ್ವರ ಮನಮುಟ್ಟುವಂತೆ ಹೃದಯ ತಟ್ಟುವಂತಿರುತ್ತವೆಯಲ್ಲದೇ ಶರಣ ತತ್ವದ ಆಧಾರಿತ ಆಧ್ಯಾತ್ಮಕ ಸಂಘದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಹಿರಿಯ ಸಾಹಿತಿಗಳ ಚಿಂತಕರ ಒಡನಾಟದ ಪರಿಸರವುಳ್ಳ ಸಾಹಿತ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ಈ ಕವನ ಸಂಕಲನದ  ಬರಹಗಾರರಾದ ಶ್ರೀ ನಿತ್ಯಾನಂದ ಶಿವಯೋಗಿಗಳು ಶ್ರೀ ಸಂಗನ ಬಸವೇಶ್ವರ ಆರೂಢ ಮಠ ರಾಂಪೂರ ಪಿ.ಏ.ಈ  ಪರಮ ಪೂಜ್ಯರ  ಅಮೂಲ್ಯ ಮುನ್ನುಡಿ ಹಾಗೂ ಈ ಕವನ ಸಂಕಲನದ ಪ್ರಕಟಣೆಗೆ ಸಹಕರಿಸಿ ಬಿಡುಗಡೆಗೆ ರಹದಾರಿ ಹುಟ್ಟು ಹಾಕಿ ಬೆನ್ನುಡಿ ಬರೆದು ಬೆಂಬಲಿಸಿರುವ ಆಧುನಿಕ ಬಸವಣ್ಣರೆಂದೆ ಜನಜನಿತರಾಗಿರುವ ಸರ್ವರ ಅಣ್ಣ ಡಾ.ಶಶಿಕಾಂತ ಪಟ್ಟಣವರ ಉತ್ಸಾಹಪೂರಿತ ಪ್ರೋತ್ಸಾಹ ಸ್ಮರಣೀಯವಾದುದು.

   ತಾವು ಸಂಸಾರ ಜೀವನದಿಂದ ನಿವೃತ್ತರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹುಮ್ಮಸ್ಸಿನಿಂದ ಸಂಪೂರ್ಣವಾಗಿ ತೊಡಗಿಸಿಕೊಂಡು ಬಸಮ್ಮನವರು ಬಹಳ ಶೃದ್ಧೆಯಿಂದ ಎರಡು ಕವನ ಸಂಕಲನಗಳನ್ನು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಧಾರೆಯೆರೆದಿದ್ದು, ಪ್ರತಿಯೊಬ್ಬ ಸಹ್ರೃದಯರು ಓದಿ ಪುನೀತರಾದರೆ ಕವಿಯಿತ್ರಿಯ ಶ್ರಮ ಸಾರ್ಥಕವಾಗುವದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ.  ‘ಬಾಡದಿರಲಿ ಸ್ನೇಹ’ ಕವನ ಸಂಕಲನವನ್ನು ಅಕ್ಷರ ಮಂಟಪ ಹಂಪಿನಗರ ಬೆಂಗಳೂರು ಇವರು ಸುಂದರ ಮುಖಪುಟ ವಿನ್ಯಾಸದೊಂದಿಗೆ ಪ್ರಕಟಿಸಿರುವರು. ತಂದೆಯ ಪ್ರೀತಿ ಮಮತೆ ನೀಡಿ ಎಲ್ಲಾ ಕರ್ತವ್ಯವನ್ನು  ನಿಭಾಯಿಸಿದ ಚಿಕ್ಕಪ್ಪ ಲಿಂ.ಶಿವಶರಣಪ್ಪ ಧೂಳಪ್ಪ ಸ್ವಾದಿ ನಿವೃ ತ್ತ ತಹಶೀಲ್ದಾರರು ಇವರಿಗೆ ಲೇಖಕಿ ಈ ಗ್ರಂಥ ಪುಷ್ಪ ಅರ್ಪಿಸಿ ಕೃತಾರ್ಥರಾಗಿರುವುದು ಅನುಕರಣೀಯವಾದುದು. ಈ ಕವಿಯಿತ್ರಿಯವರಂತೆ ಸರ್ವರೂ ತಂತಮ್ಮ ಆಸಕ್ತಿ ಕ್ಷೇತ್ರಕ್ಕನುಗುಣವಾಗಿ ಸಾಧನೆಗೈಯುತ್ತಾ ಜೀವನ ಪಾವನವಾಗಿಸಿಕೊಂಡರೆ ಲೇಸಲ್ಲವೇ!.
—**—
ಪ್ರೊ. ಶಕುಂತಲಾ.ಚನ್ನಪ್ಪ ಸಿಂಧೂರ
ಸಾಹಿತ್ಯ ಸಂಶೋಧಕರು,ವಿಮರ್ಶಕರು,
ಗದಗ. 
RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group