ವಿಜ್ಞಾನ ಸ್ನಾತಕೋತ್ತರ ಪದವಿಧರೆಯಾದರೂ ಸಹಿತ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಜೀವನದಲ್ಲಿ ಸಕ್ರಿಯವಾಗಿ ದುಡಿಯುವ ಹಿರಿಯ, ಜೀವ ಮಾನವ ಮೌಲ್ಯಗಳಿಗೆ ನಿರಂತರ ತುಡಿತವುಳ್ಳ ಅಪರೂಪದ ವ್ಯಕ್ತಿತ್ವ ಪ್ರೊ ಶಾರದಾ ಮೇಡಂ ಅವರದು. ಅಧ್ಯಯನ ಪರಿಸರ ಪ್ರೇಮ, ಆರೋಗ್ಯ ಚಿಂತನೆ,ಗ್ರಾಮೀಣ ಅಭಿವೃದ್ಧಿ, ಶೈಕ್ಷಣಿಕ ಗುಣಮಟ್ಟ ಹೀಗೆ ಅನೇಕ ರಂಗಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಸದಾ ಹಸನ್ಮುಖಿಯಾಗಿರುವ ಮಾತೆ ‘ಅನುಭವ ಕಳಶ ಅಮೃತ ವರುಷ’ ಎಂಬ ಅಭಿನಂದನ ಗ್ರಂಥದ ಕಥಾನಾಯಕಿ.
ಬಸವಣ್ಣನವರ ಜನ್ಮಭೂಮಿ ವಿಜಯಪುರದಲ್ಲಿ ಜನಿಸಿದ ತಾಯಿ ಪ್ರೊ.ಶಾರದಮ್ಮನವರು ನಡೆ-ನುಡಿ ಒಂದಾಗಿಸಿ ಕೊಂಡು,ಕಾಯಕ ನಿಷ್ಠೆಯಲ್ಲಿ ಜಾಗ್ರತರಾಗಿ ಪಾವನ ಬದುಕನ್ನು ತಮ್ಮದಾಗಿಸಿಕೊಂಡವರು ಎಂಬುದು ಗುಳೇದಗುಡ್ಡದ ಶ್ರೀ.ಮ.ನಿ.ಪ್ರ.ಒಪ್ಪತ್ತೇಶ್ವರ ಮಹಾಸ್ವಾಮೀಜಿಯವರು ಆಶಯ ನುಡಿಗಳನ್ನು ಅಭಿವ್ಯಕ್ತಪಡಿಸಿರುವರು.
ಅಕ್ಕನ ಅರಿವು, ವಚನ ಅಧ್ಯಯನ ವೇದಿಕೆಗಳ ಸಂಯುಕ್ತ ಸಂಯೋಜನೆಯಲ್ಲಿ ಪ್ರೊ.ಶಾರದಮ್ಮನವರ ಅಮೃತ ಮಹೋತ್ಸವ ಏರ್ಪಡಿಸಿ ಅವರ ಜೀವನ ಗಾಥೆಯನ್ನು ಈ ಕ್ರತಿಯ ಮೂಲಕ ಪರಿಚಯಿಸಿರುವ ಕಾರ್ಯ ಶ್ಲಾಘನೀಯವಾಗಿದೆ. ನಮ್ಮ ಜನ್ಮಕ್ಕೆ ಜೀವ ಕೊಟ್ಟು ತಿದ್ದಿ ಬುದ್ದಿ ಹೇಳಿ ಸಮಾಜದಲ್ಲಿ ಗಣ್ಯ ವ್ಯಕ್ತಿಯನ್ನಾಗಿಸಿ ಮೂರ್ತಿ ಮಾಡಿರುವ ಮಕ್ಕಳು, ಮೊಮ್ಮಕ್ಕಳು,ಅಳಿಯರನ್ನು ಒಡಹುಟ್ಟಿದ ಮಕ್ಕಳಿಗಿಂತ ಮಿಗಿಲಾಗಿ ಪೋಷಿಸಿರುವ ಹೆತ್ತವರ ಪಾತ್ರ ಮಾದರಿಯಾದುದು. ಸ್ಪರ್ಧಾತ್ಮಕ ಜಗತ್ತಿನ ಪರಿಚಯ ಮಾಡಿ ನಮ್ಮೆಲ್ಲರ ಬದುಕಿಗೆ ಬೆಂಬಲವಾಗಿ ನಿಂತು ಕಾಮಧೇನು ಕಲ್ಪವೃಕ್ಷ ವಾಗಿರುವ,ಪರದೇಶದಲ್ಲಿದ್ದರೂ ನಿತ್ಯ ನಮಗಾಗಿ ಮಿಡಿಯುವ ಪ್ರಾಮಾಣಿಕ ಮಾತೆ ಮಮತೆಯ ಪುತ್ಥಳಿ ಅವ್ವಾ ಸಾಹಿತ್ಯ ಸಂಸ್ಕೃತಿ ಸಮಾಜಮುಖಿ ಜೀವಿಯಷ್ಟೆ ಅಲ್ಲದೆ ಪ್ರಿಯ ಸಖಿಯಂತಿರುವದು ನಮ್ಮ ಸೌಭಾಗ್ಯ.ಬಸವಾದಿ ಶರಣರ ಸಂತರ ಶುಭಾಶೀರ್ವಾದ ಅವರಿಗೆ ಸದಾಕಾಲವಿರಲಿ ಎಂಬುದು ಡಾ.ಪ್ರೀಯದರ್ಶಿನಿ ಸುರೇಶ, ಆಶಿಷ, ಅನಿಫ ಉಗಲವಾಟ ಮತ್ತು ಡಾ.ಪ್ರತಿಭಾ, ವಿನಯ, ಮಾಹಿನ, ಮಾನಸ್ವಿ ಕುಟುಂಬ ಬಾಂಧವರ ಶುಭ ಹಾರೈಕೆಗಳಾಗಿವೆ.
ಮೈಸೂರಿನ ಶ್ರೇಷ್ಠ ವಿಭಾ ಪ್ರಕಾಶಕರು ಬಸವಾಭಿಮಾನಿಗಳಾದ ತಾರಾ ಪ್ರಿಂಟರ್ಸ್ ಮಾಲಿಕರಾದ ಶಶಿಕುಮಾರ, ಕಾರ್ತಿಕ್ ಅವರು ಈ ಪುಸ್ತಕ ಪ್ರಕಟಿಸಿರುವರು. ಶ್ರೀಮತಿ ಜ್ಯೋತಿ ಅವರು ಅಕ್ಷರ ಜೋಡಣೆಗೈದಿರುವರು. ಸುಂದರ ಅರ್ಥಪೂರ್ಣ ಮುಖಪುಟ ವಿನ್ಯಾಸವನ್ನು ಅನಂತ ಅವರು ಸ್ರಜಿಸಿದ್ದಾರೆ. ಔಚಿತ್ಯ ಪೂರ್ಣ ಅನ್ವರ್ಥಕನಾಮದಂತಹ ಶೀರ್ಷಿಕೆಯುಳ್ಳ ಆಕರ ಗ್ರಂಥಪುಷ್ಪವಿದು.ನಾಡಿನ ಹಿರಿಯ ಜೀವ ಕಾಯಕ ಯೋಗಿನಿ ದಾಸೋಹ ಮೂರ್ತಿ ಪ್ರೊ.ಶಾರದಾ ಪಾಟೀಲ-ಲಿಂ.ಪ್ರೊ. ಹಣಮರಡ್ಡಿ ರಾಮರಡ್ಡಿ ಮೇಟಿ ಇವರಿಗೆ ಸಂಪಾದಕ ಮಂಡಳಿಯವರು ಗೌರವಪೂರ್ವಕವಾಗಿ ಈ ಗ್ರಂಥ ಪುಷ್ಪ ಅರ್ಪಣೆ ಮಾಡಿರುವರು .ಅಧ್ಯಯನಾಸಕ್ತರಿಗೆ, ಸಂಶೋಧಕರಿಗೆ ಮಾರ್ಗದರ್ಶನವೀಯುವಂತಹ ಸರ್ವರೂ ಓದಲೇಬೇಕಾದ ಅತ್ಯುಪಯುಕ್ತ ವಿಚಾರಧಾರೆಯ ಆಕರ ಗ್ರಂಥವಿದು ಎಂಬುದರಲ್ಲಿ ಎರಡು ಮಾತಿಲ್ಲ.
–**–
ಪ್ರೊ. ಶಕುಂತಲಾ.ಚನ್ನಪ್ಪ. ಸಿಂಧೂರ.
ಸಾಹಿತ್ಯ ಸಂಶೋಧಕರು, ವಿಮರ್ಶಕರು.ಗದಗ