ಧಾರವಾಡ: ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ, ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಮತ್ತು ಪ್ರಾ.ಶಾ. ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ಗುರು ತಿಗಡಿ ಅವರ ಸೇವಾ ನಿವೃತ್ತಿಯ ಸಂದರ್ಭದಲ್ಲಿ ಜುಲೈ-೩೦ ರಂದು ಮಧ್ಯಾಹ್ನ ೨.೩೦ ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಅಭಿನಂದಿಸಲಾಗುವುದೆಂದು ಗುರು ತಿಗಡಿ ಅಭಿನಂದನಾ ಸಮಿತಿ ಅಧ್ಯಕ್ಷ ಶಂಕರ ಹಲಗತ್ತಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.
೩೨ ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆಸಲ್ಲಿಸಿರುವ ತಿಗಡಿ ಅವರು ಶಿಕ್ಷಕರ ಧ್ವನಿಯಾಗಿ, ಶಿಕ್ಷಕರ ಸಹಕಾರಿ ಸಂಘದ ಅಭಿವೃದ್ಧಿಯ ಹರಿಕಾರರಾಗಿ, ಶಿಕ್ಷಕ ಧುರೀಣರಾಗಿ ಬಹುಮುಖ ಸೇವೆ ಸಲ್ಲಿಸಿ ಸಮಸ್ತ ಶಿಕ್ಷಕ-ಶಿಕ್ಷಕಿಯರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ ಎಂದರು.
ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭವನ್ನು ಶಾಸಕ ಅಮೃತ ದೇಸಾಯಿ ಉದ್ಘಾಟಿಸುವರು. ಗುರು ತಿಗಡಿ ಅವರ ಬದುಕು-ಸಾಧನೆಯನ್ನು ಕೇಂದ್ರೀಕರಿಸಿ ಹೊರತಂದಿರುವ ‘ಗುರುಪಥ’ ಅಭಿನಂದನಾ ಗ್ರಂಥವನ್ನು ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವ್ಹಿ.ಸಂಕನೂರ ಬಿಡುಗಡೆಗೊಳಿಸುವರು.
ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಹು.ಧಾ.ಮ.ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ, ಮಾಜಿ ಶಾಸಕಿ ಸೀಮಾ ಮಸೂತಿ, ಜಿ.ಪಂ. ಮಾಜಿ ಸದಸ್ಯರುಗಳಾದ ತವನಪ್ಪ ಅಷ್ಟಗಿ ಮತ್ತು ಕಲ್ಲಪ್ಪ ಪುಡಕಲಕಟ್ಟಿ, ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಬೆಂಗಳೂರು ಪೋಲೀಸ್ ಅಪರಾಧ ವಿಭಾಗದ ಡಿಸಿಪಿ ಬಿ.ಎಸ್. ಅಂಗಡಿ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಡಯಟ್ ಪ್ರಿನ್ಸಿಪಾಲ್ ಎನ್.ಕೆ. ಸಾವಕಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರೆಂದು ಹಲಗತ್ತಿ ತಿಳಿಸಿದರು.
‘ಗುರುಪಥ’ ಪ್ರಧಾನ ಸಂಪಾದಕ ರಂಗನಾಥ ವಾಲ್ಮೀಕಿ ಅಭಿನಂದನಾ ಗ್ರಂಥವನ್ನು ಪರಿಚಯ ಮಾಡಲಿದ್ದು, ಬಿಇಓ ಉಮೇಶ ಬಮ್ಮಕ್ಕನವರ, ಹಿರಿಯ ಪತ್ರಕರ್ತ ಡಾ.ಸಿದ್ಧನಗೌಡ ಪಾಟೀಲ, ಹಿರಿಯ ವಕೀಲ ಎ.ಸಿ. ಚಾಕಲಬ್ಬಿ ಹಾಗೂ ಗೋವಾದ ಡಾ.ಪ್ರಕಾಶ ಮೋರಕಾರ ಅಭಿನಂದನಾಪರ ಮಾತನಾಡುವರು. ಈ ಸಂದರ್ಭದಲ್ಲಿ ಗುರು ತಿಗಡಿ ಅವರ ತಂದೆ ಯಲ್ಲಪ್ಪ, ತಾಯಿ ನಿಂಗವ್ವ ಹಾಗೂ ವಿದ್ಯಾ ಗುರುಗಳಾದ ಎನ್.ಟಿ.ಉಪಾಧ್ಯೆ ಹಾಗೂ ಕೆ.ಎಸ್. ಕೋನಣ್ಣವರ ಅವರನ್ನು ಗೌರವಿಸಲಾಗುವುದು. ತಿಗಡಿ ಅವರ ಪತ್ನಿ ಗೌರವ್ವ ಹಾಗೂ ಪುತ್ರ ಡಾ.ವಿಕಾಸ ಅವರೂ ಸಹ ಪಾಲ್ಗೊಳ್ಳುವರೆಂದು ಅವರು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹೊರ ಜಿಲ್ಲೆಗಳ ಶಿಕ್ಷಕರ ಸಂಘಗಳ ಪ್ರತಿನಿಧಿಗಳು, ಜಿಲ್ಲೆಯ ವಿವಿಧ ತಾಲೂಕುಗಳ ಶಿಕ್ಷಕ ಸಂಗಾತಿಗಳು ಈ ವಿಶೇಷ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಸಮಾರಂಭದಲ್ಲಿ ‘ಗುರುದರ್ಶನ ಪ್ರಸ್ತುತಿ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಜರುಗಲಿದ್ದು, ಬಾಬಾಜಾನ ಮುಲ್ಲಾ, ಎನ್.ಬಿ. ದ್ಯಾಪೂರ, ಕು.ಅಕ್ಸಾ ಮುಲ್ಲಾ, ಶಿವಾನಂದ ಹೂಗಾರ, ರಾಜು ಲಕ್ಕಮ್ಮನವರ, ಶಿವಾನಂದ ಬಡಿಗೇರ ನಡೆಸಿಕೊಡಲಿದ್ದಾರೆಂದು ಶಂಕರ ಹಲಗತ್ತಿ ನುಡಿದರು.
ಗುರು ತಿಗಡಿ ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಂಕರ ಘಟ್ಟಿ, ಪದಾಧಿಕಾರಿಗಳಾದ ಎಲ್.ಐ.ಲಕ್ಕಮ್ಮನವರ, ಭೀಮಪ್ಪ ಕಾಸಾಯಿ, ಮಲ್ಲಿಕಾರ್ಜುನ ಉಪ್ಪಿನ, ಆರ್.ನಾರಾಯಣಸ್ವಾಮಿ ಚಿಂತಾಮಣಿ, ಎಚ್.ಎಸ್. ಬಡಿಗೇರ, ರಾಜು ಮಾಳವಾಡ, ಅಯ್ಯಪ್ಪ ಮೊಖಾಸಿ ಸುದ್ದಿಗೋಷ್ಠಿಯಲ್ಲಿ ಇದ್ದರು.