ಬದುಕಿನ ಎಲ್ಲ ಹಂತದಲ್ಲೂ ಹಣ ಬೇಕು. ಹಣವಿಲ್ಲದಿದ್ದರೆ ಜೀವನವಿಲ್ಲ ಜೀವವೂ ಇಲ್ಲ. ಹಣವೇ ಬದುಕೆಂದು ಅದಕ್ಕೆ ಅಂಟಿಕೊಂಡಿದ್ದೇವೆ. ಹಣ ಗಳಿಕೆಯಲ್ಲಿ ಬಿದ್ದರೆ ಬದುಕುವುದಕ್ಕೆ ಇನ್ನುಳಿದ ಯಾವ ಕಾರಣಗಳು ಕಾಣುವುದಿಲ್ಲ. ಹೋದಲೆಲ್ಲ ಹಣದ ಖಜಾನೆ ಸಿಕ್ಕುತ್ತಿರಬೇಕೆಂದೆನಿಸುತ್ತದೆ. ಜಗದಲ್ಲಿರುವ ಧನವೆಲ್ಲ ನನ್ನದಾಗಲಿ ಎಂದು ಯೋಚಿಸುವ ಮನಸ್ಸಿಗೆ ಹಣ ಸಿಗದಿದ್ದರೆ ಬದುಕೇ ಕೊನೆಗೊಂಡಿತು ಎನಿಸುತ್ತದೆ.ಹೀಗಾಗಿ ಬದುಕನ್ನು ಯಾವಾಗಲೂ ಹಣದ ಸುತ್ತಲೂ ಸುತ್ತಿಸುತ್ತೇವೆ.
ಅಮೂಲ್ಯವಾದ ಜೀವನವನ್ನು ಅಕ್ಷರಶಃ ಹಣಮಯವಾಗಿಸಿ ಬಿಟ್ಟಿದ್ದೇವೆ. ನಾವೆಲ್ಲ ಹಪ ಹಪಿಸುವಂತೆ ಮಾಡಿದ ಹಣ ಭರ್ತಿ ಖುಷಿ ನೀಡುತ್ತದೆ. ಆದರೆ ಆ ಖುಷಿಯೇ ಎಲ್ಲವೂ ಅಲ್ಲ ಎಂಬುದನ್ನರಿಯಲು ಬಹು ಕಾಲ ಬೇಕಾಗಿಲ್ಲ. ಕಾಯಿಲೆ ಕಸಾಲೆ ಬಿದ್ದಾಗ ಹಣಕ್ಕಿಂತ ಹೆಚ್ಚಾಗಿ ಪ್ರೀತಿ ತೋರುವ ಜೀವಗಳ ಮಡಿಲು ಬೇಕೆನಿಸುತ್ತದೆ. ಕೊಂಚ ಸುಧಾರಿಸಿಕೊಂಡರೆ ಸಾಕು ಮತ್ತೆ ಇನ್ನೂ ಹೆಚ್ಚು ಹೆಚ್ಚು ಹಣದ ಹುಚ್ಚು ಮೆತ್ತಿಕೊಳ್ಳುತ್ತದೆ. ಹಣದಾಚೆಗೆ ಯೋಚಿಸಲು ಪುರುಸೊತ್ತಾಗುವುದಿಲ್ಲ.ಪ್ರೀತಿ, ಮಮತೆ, ಕರುಣೆ, ದಯೆ, ತ್ಯಾಗ, ಸಹಾಯ, ಸಹಕಾರದಂಥ ಮೌಲ್ಯಗಳು ಮೌಲ್ಯವನ್ನು ಕಳೆದುಕೊಂಡು ಮೂಲೆ ಸೇರಿವೆ. ಮೌಲ್ಯಗಳಿಗೆ ಮೌಲ್ಯ ನೀಡುವವರಿಗೆ ‘ಬದುಕಲು ಬಾರದ ಹುಚ್ಚರು’ ‘ಆದರ್ಶವಾದಿಗಳು’ ‘ಓಬಿರಾಯನ ಕಾಲದವರು’ ಎಂಬ ಹಣೆ ಪಟ್ಟಿ ಹಚ್ಚಿ ನಗಾಡುತ್ತೇವೆ. ಸಂಪತ್ತಿನ ಓಟದಲ್ಲಿ ಮೊದಲ ಸ್ಥಾನ ಪಡೆಯುವುದೊಂದೇ ಕಣ್ಮುಂದಿನ ಗುರಿಯೆಂಬಂತೆ ಹಣವನ್ನು ಅಪ್ಪಿಕೊಳ್ಳಲು ಹಲುಬುತ್ತೇವೆ.ಇದನ್ನರಿತ ಕವಿ ಬೇಂದ್ರೆ ‘ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತು.’ಎಂದಿದ್ದಾರೆ.
ಜೀವನಕ್ಕೆ ಹಣ ಬೇಕೆನ್ನುವುದು ಪ್ರಕೃತಿ. ಸ್ವಾರ್ಥ, ದುರಾಸೆ, ಅನೈತಿಕತೆ, ಅಪ್ರಾಮಾಣಿಕತೆ, ಭ್ರಷ್ಟಾಚಾರದಿಂದ ಹಣದ ರಾಶಿ ಹಾಕಿ ವಿಜೃಂಭಿಸುವುದು ವಿಕೃತಿ.ಹಣದ ಹುಚ್ಚಿನಲ್ಲಿ ಮುಳುಗಿರುವುದರಿಂದ ಕಂಗೆಡುತ್ತೇವೆ. ಜೀವನದ ಸರಳ ಸುಂದರ ಸಂಬಂಧಗಳು,ಸುಖದ ಬಾಗಿಲುಗಳು ತೆರೆದಿದ್ದರೂ ಕಾಣುವುದೇ ಇಲ್ಲ. ವಿಕಾಸ ಮುಖಿ ಚಲನೆ ಎಂಬ ಹೆಸರಿಟ್ಟುಕೊಂಡ ಹಣದ ಬಿರುಗಾಳಿ ನಮ್ಮ ಜೀವನ ಶೈಲಿ ಹಾಗೂ ಯೋಚನಾ ಲಹರಿಯನ್ನೇ ಬದಲಿಸಿ ಬಿಟ್ಟಿದೆ. ಭಾವ ದಿಗಂತ, ಜ್ಞಾನ ಪರಿಧಿಗಳು, ಆದ್ಯಾತ್ಮಿಕ ಚಿಂತನೆ ನೆಲ ಕಚ್ಚಿವೆ. ಮಗುವಿದ್ದಾಗಿನಿಂದ ಇತರರ ಗಮನ ಸೆಳೆಯುವ ಹಂಬಲ ಮನುಷ್ಯನಲ್ಲಿ. ಕ್ರಮೇಣ ಪ್ರಸಿದ್ಧಿಯ ಹಂಬಲವಾಗಿ ರೂಪುಗೊಳ್ಳುತ್ತದೆ.ಹಣ ಗಳಿಸಿ ಖ್ಯಾತಿ ಗಳಿಸಬೇಕೆಂಬ ಹುಚ್ಚು ಹಿಡಿಸಿಕೊಂಡವರನ್ನು ಕುರಿತೇ ಪ್ರಾಯಶಃ ಡಿವಿಜಿಯವರು ತಮ್ಮ ಕಗ್ಗದಲ್ಲಿ ಹೀಗೆ ಹೇಳಿದ್ದಾರೆ. ‘ಅಕ್ಕಿಯೊಳಗನ್ನವನು ಮೊದಲಾರು ಕಂಡವರು? ಅಕ್ಕರದ ಬರಹಕ್ಕೆ ಮೊದಲಿಗನದಾರು? ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ! ದಕ್ಕುವುದೆ ನಿನಗೆ ಜಸೆ – ಮಂಕುತಿಮ್ಮ’
ಏನೆಲ್ಲ ಸಾಧನ ಸಲಕರಣೆಗಳನ್ನು ಅವಿಷ್ಕರಿಸಿದವರೇ ಅಜ್ಞಾತರಾಗಿರುವಾಗ ನೀನು ಯಾವ ಲೆಕ್ಕ ಎಂದು ಎಚ್ಚರಿಸಿದ್ದಾರೆ. ಹಣದಲ್ಲಿ ಸುಖದ ಗೆಲುವನ್ನು ಹುಡುಕುವುದನ್ನು ಬಿಡೋಣ. ಹಣದ ಹುಚ್ಚಿನಿಂದ ಹೊರ ಬಂದು ಹೊಸ ಜೀವನ ಆರಂಭಿಸುವುದಕ್ಕೆ ಮುಂದಾಗೋಣ. ಆಗ ನೆಮ್ಮದಿಯ ಜೀವನ ನಮ್ಮನ್ನು ಅಪ್ಪಿಕೊಳ್ಳಲು ಕಾದಿರುತ್ತದೆ.
ಜಯಶ್ರೀ ಅಬ್ಬಿಗೇರಿ, ಬೆಳಗಾವಿ ೯೪೪೯೨೩೪೧೪೨