spot_img
spot_img

ಲೇಖನ : ಆ ನಾಲ್ಕು ಜನ ಯಾರು ?

Must Read

spot_img
- Advertisement -

ಹೌದು, ದಿನ ಬೆಳಗಾದರೆ ಮಾಡೋಕೆ ನೂರೆಂಟು ಕೆಲಸ ಇದ್ರು ಅದೇನೋ ದುಗುಡ, ದುಮ್ಮಾನಗಳು ಕಾಡುತ್ತಲೇ ಇರುತ್ತವೆ. ಎಲ್ಲಿಯವರೆಗೆ ಎಂದರೆ ನಾವು ಮಾಡುವ ಕೆಲಸದ ಮೇಲೆ ಗುರಿ ಮತ್ತು ಶ್ರದ್ದೆ ಎಲ್ಲಿಯವರೆಗೂ ಇರುವುದಿಲ್ಲವೋ ಅಲ್ಲಿಯವರೆಗೆ. ನಾವಾಯ್ತು ನಮ್ಮ ಕೆಲಸವಾಯ್ತು ಎಂದು ಬಲವಾದ ಹೆಜ್ಜೆಗಳನ್ನು ಇಡುತ್ತಾ ಸಾಗುತ್ತಲಿರಬೇಕು ಆದರೂ ತಾವು ಈ ಬದುಕು ಕರೆದಾಗ ಎದ್ದು ಹೋಗಲೇಬೇಕು ಎಂಬ ಸಣ್ಣ ಅರಿವು ಇಲ್ಲದ ಮತ್ತು ಸಾಯುವವರೆಗೂ ನಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಮುಚ್ಚಿದರು ಮುಚ್ಚಲಾರದಷ್ಟು ಸಂಕಟಗಳು ಬಾಧಿಸುತ್ತಿದ್ದರು ಮತ್ತೊಬ್ಬರ ವಿಚಾರಗಳಿಗೆ ತಲೆಹಾಕುವವರೇ ಹೆಚ್ಚು. ಕೆಲವರಿಗೆ ಅವರ ಬದುಕಲ್ಲೇನಾಗ್ತಿದೆ, ಇವರ ಬದುಕಲ್ಲೇನಾಗ್ತಿದೆ ಎಂಬುದರ ಕುರಿತಾಗಿಯೇ ಕುತೂಹಲ ಹೆಚ್ಚು ಹಾಗಾಗಿ ಅವರ ಆಲೋಚನೆಗಳು, ವಿಚಾರಗಳಿಗೆ ಅಲ್ಲಿ ಹೆಚ್ಚಿನ ಅಹ್ವಾನ ಕಡಿಮೆ. ನಮ್ಮ ಬದುಕಿನಲ್ಲಿ ಗಟ್ಟಿತನ ತಂದುಕೊಳ್ಳಲು ನಮ್ಮನ್ನು ಆಡಿಕೊಳ್ಳುವ, ನಮ್ಮ ಬಗ್ಗೆಯೇ ಗಮನಹರಿಸುವ ಸಣ್ಣ ಮನಸ್ಥಿತಿಯವರು ನಮಗೆ ಬೇಕು ಅವರೇ ನಮ್ಮ ಬದುಕಿಗೆ ಸ್ಫೂರ್ತಿ. ನಾವು ಸುಮ್ಮನಿದ್ದರೂ ಹೇ ಏನನ್ನಾದ್ರೂ ಮಾಡಿ ಎಂಬಂತಹ ಬೆಂಬಲದ ಮಾತುಗಳನ್ನು ಚುಚ್ಚುವಂತೆ ಅಲ್ಲಲ್ಲಿ ನಮ್ಮತನವನ್ನು ಅರಹುವ, ಹರಟೆ ಕಟ್ಟೆಗಳ ಅಜೆಂಡಾಗಳು ಹಿಂದಿನಿಂದ ಅರಹುತ್ತಲೇ ಇರುತ್ತವೆ.

ಆ ನಾಲ್ಕು ಜನ ಯಾರು?
ಹೌದು ಆ ನಾಲ್ಕು ಜನ ಇಂತವರೇ ಎಂಬುದು ಯಾರಿಗೂ ತಿಳಿದಿಲ್ಲ. ನಾವು ಏನನ್ನೇ ಮಾಡಬೇಕು ಎಂದು ಯೋಜನೆಗಳನ್ನು ಹಾಕಿಕೊಂಡರೆ, ನಮ್ಮ ಬದುಕಿನ ಕುರಿತಾಗಿ ನಾವು ಯೋಚಿಸುತ್ತಿದ್ದರೆ ಕೆಲವರಿಗೆ ಅದು ಮೃಷ್ಟಾನ್ನ ಭೋಜನ ಸವಿದಂತೆ. ಎಲೆ ಅಡಿಕೆ ಅಗಿದು ಉಗಿದಂತೆ ನಮ್ಮತನದ ಸಂಗತಿಗಳನ್ನು ಎಲ್ಲೆಂದರೆ ಅಲ್ಲಿ ಉಗಿಯುತ್ತಲೇ ಇರುತ್ತಾರೆ ಅದು ಅವರ ಅಸ್ವಸ್ತ ಮಾನಸಿಕ ಸ್ಥಿತಿ ಎಂದು ನಾವು ಭಾವಿಸಬೇಕಿದೆ. ಎಲ್ಲವೂ ಅವರ ಪಾಲಿಗೆ ಅವರು ಸರಿ ಎಂದಾದರೆ ಅಂಕು ಡೊಂಕಿರುವವರ ಕುರಿತು ಮಾತನಾಡಿ ಏಕೆ ತಮ್ಮ ಬಾಯಿಯನ್ನು ಹೊಲಸು ಮಾಡಿಕೊಳ್ಳುತ್ತಾರೋ ತಿಳಿಯದು. ಇನ್ನು ತಮ್ಮ ಯೋಚನೆ, ತಾವು, ತಮ್ಮ ಕಾಯಕ ಎಂದು ಮುಳುಗಿದವರು ಸರಿಯಾದ ನಿರ್ಣಯ ಮತ್ತು ಕಾಯಕ ಮಾಡುತ್ತಿದ್ದದ್ದೇ ಆದರೆ ನಾಲ್ಕು ಜನ ನಮ್ಮನ್ನ ನೋಡಿದ್ರೆ ಏನಂದುಕೊಳ್ತಾರೆ ಎಂದುಕೊಳ್ಳುವುದನ್ನು ಬಿಡಬೇಕು. ಎಲ್ಲಿ ಹೋದರೂ ಆ ನಾಲ್ಕು ಜನಗಳಿರುತ್ತಾರೆ ಆದರೆ ಅವರಿಗೆ ಹೆಸರಿಲ್ಲ. ಅವರಿಗೆ ನಾವೇ ಒಂದು ಹೆಸರಿನಿಂದ ಕರೆಯಬೇಕು ಆ ಹೆಸರು ದೂಷಿಗಳು ಅಥವಾ ನಿಂದಕರು. Yes ನಿಂದಕರಿರಬೇಕು ಆಗಾಗ ನಮ್ಮನ್ನು ಎಚ್ಚರಿಸುವ ನಿಂದಕರಿರಬೇಕು. ಅವರ ಬದುಕಿಗೆ ಬೇಕಾದ ಗೆಲುವಿನ ಸೂತ್ರಗಳನ್ನು ಮತ್ತು ತಂತ್ರಗಳನ್ನು ತಯಾರಿಸಿಕೊಳ್ಳುವ ಬದಲಿಗೆ ಮತ್ತೊಬ್ಬರನ್ನು ನಿಂದಿಸಿ ಕೇಕೆ ಹೊಡೆದು, ಬೊಬ್ಬೆ ಹಾಕಿ, ಕಿವಿಯಿಂದ ಕಿವಿಗೆ ಇಲ್ಲಸಲ್ಲದ್ದನ್ನು ಅರಹುವ ನಾಲ್ಕು ಜನರು ಉದ್ದಾರವಾದ ಪ್ರಕರಣಗಳೆಲ್ಲೂ ನಮಗೆ ಸಿಗದು. ನಮ್ಮನ್ನು ನಿಂದಿಸುತ್ತಿದ್ದಾರೆ ಎಂದು ನೊಂದುಕೊಳ್ಳದಿರಿ ಜನರಿಗೆ ನಾವು ಹೇಗೆ ಬದುಕಿದ್ರು ಸಮಸ್ಯೆ, ಮಾಡ್ತಾನೆ ಇರ್ತಾರೆ ಇನ್ನೊಬ್ಬರ ಬಗ್ಗೆ ವಿಮರ್ಶೆ ಹಾಗಾಗಿ ಬೇಡದ್ದನ್ನು ನಿಮ್ಮ ಕರ್ಣಗಳಿಗೆ ತಾಕಿಸಿಕೊಳ್ಳದಿರಿ. ಇರಬೇಕು ನಿಂದಕರು ನಿಂದಕರಿರಬೇಕು.

“ನಿಂದಕರಿರಬೇಕು ಇರಬೇಕು ನಿಂದಕರಿರಬೇಕು
ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಧಿಯೊ ಹಾಂಗೆ
ಅಂದಂದು ಮಾಡಿದ ಪಾಪದ ಮಾಮಲ
ತಿಂದು ಹೋಗುವರಯ್ಯ ನಿಂದಕರು” ಹೀಗೆ ಪುರಂದರ ದಾಸರು ಆ ಕಾಲಕ್ಕೆ ನಿಂದಕರ ಕುರಿತು ಹಾಡಿ ಹೇಳಿದ್ದಾರೆ. ಸರ್ವಕಾಲಕ್ಕೂ ಅವರುಗಳು ಅದೇ ಕಾಯಕದಲ್ಲಿ ತೊಡಗಿರುವಾಗ ತಲೆಕೆಡಿಸಿಕೊಳ್ಳದಿರಿ.

- Advertisement -

ಕಾಲ ಮೊದಲಿನಂತಿಲ್ಲ. ಎಲ್ಲವೂ ಬದಲಾಗಿದೆ, ಎಲ್ಲರೂ ಬದಲಾಗುತ್ತಿದ್ದಾರೆ. ಎಷ್ಟೇ ಸೂಕ್ಷ್ಮವಾಗಿದ್ದರು ನಿಮ್ಮನ್ನು ನೊಂದುಕೊಳ್ಳುವಂತೆ ಮಾಡುವವರು ಇದ್ದೇ ಇರುತ್ತಾರೆ. ಹೊಡೆದರೆ ಎರಡು ಏಟು ನೋವಾಗುವುದಿಲ್ಲ ಆದರೆ ಕೆಲವು ಮಾತುಗಳು ಅಷ್ಟು ನೋವುಂಟು ಮಾಡಬಹುದು. ಆದರೆ ಅವುಗಳಿಗೂ ನೀವು ಕಿವಿಗೊಡದಿದ್ದರೆ ಬದುಕಿನಲ್ಲಿ ನೆಮ್ಮದಿಯಿಂದ ನಾಳೆಯ ಕನಸುಗಳತ್ತ ಹೆಜ್ಜೆ ಇರಿಸಲು ಸಾಧ್ಯ. ಯಾವಾಗಲು ಆನೆಯಷ್ಟು ಬಲ, ಸಿಂಹದಂತಹ ಗಾಂಭಿರ್ಯ, ಕುದುರೆಯಂತಹ ಶ್ರದ್ದೆ ಇರಬೇಕು. ಅವರಿವರ ಕೊಂಕು ನುಡಿಗಳಿಗೆ ಘಾಸಿ ಮಾಡಿಕೊಳ್ಳದಿರಿ. “ಅಜಾಪುತ್ರಂ ಬಲಿಂ ದದ್ಯಾತ್ ದೇವೋ ದುರ್ಬಲಘಾತಕಃ”ಎಂಬ ಸಂಸ್ಕೃತ ನುಡಿ ಆಗಾಗ ನನಗೆ ನೆನಪಾಗುತ್ತಲೇ ಇರುತ್ತದೆ. ಯಾಕೆ ಅಂದ್ರೆ ನಾವು ಎಲ್ಲಿಯವರೆಗೂ ದುರ್ಬಲರು ನಮ್ಮಿಂದ ಏನೂ ಆಗದು ಎಂದು ಕೈಕಟ್ಟಿ ಕುಳಿತುಕೊಳ್ತೀವೋ ಅಲ್ಲಿಯವರೆಗೂ ನಾಲ್ಕು ಜನರು ನಮ್ಮ ತಲೆಯಲ್ಲೂ, ಮನಸ್ಸಲ್ಲೂ, ಕೆಲಸದಲ್ಲೂ ಮನೆ ಮಾಡಿರ್ತಾರೆ. ದುರ್ಬಲರು ಸಣ್ಣಪುಟ್ಟದ್ದಕ್ಕೂ ನೊಂದುಕೊಳ್ತಿವಿ ಅಂತ ಗೊತ್ತಾದಾಗ ನಮ್ಮ ಗುರಿ ತಪ್ಪಿಸಲು ಸದಾ ಸಿದ್ಧಸೂತ್ರ ಎಣೆಯುವ ಕೊಂಕು ಮಾತುಗಳಿಗೆ ಪ್ರಶಸ್ತ್ಯ ನೀಡಿ ಕೇಳಿಸಿಕೊಳ್ತಿವಿ ಅಂದಾಗ ನಮ್ಮ ಸುತ್ತಲೂ ಅದನ್ನೇ ಮಾಡುವವರು ಇದ್ದೇ ಇರುತ್ತಾರೆ. ಎಲ್ಲರಿಗೂ ಅವರದೇ ಆದ ಶ್ರದ್ದೆ, ಸಂಕಲ್ಪ, ಗುರಿ ಉದ್ದೇಶಗಳು ಬದುಕಿನಲ್ಲಿ ಗೆಲ್ಲಬೇಕು ಎಂದುಕೊಂಡು ನಡೆಯುವವರು ಇರುತ್ತಾರೋ ಅಲ್ಲಿಯವರೆಗೂ ಇವುಗಳು ಶನಿಯಂತೆ ಕಾಡದೆ ಬಿಡವು. ಶನಿಯು ಯಾರನ್ನು ಕಾಡದೆ ಬಿಟ್ಟಿದ್ದಾನೆ ಹೇಳಿ, ಜಗದ್ರಕ್ಷಕ ಶಿವನನ್ನು ಕಾಡದೆ ಬಿಟ್ಟಿಲ್ಲ, ಅವನಿಗಿಂತಲೂ ದೊಡ್ಡ ಶನಿಗಳು ನಮ್ಮನ್ನು ಕಾಡುತ್ತವೆ ಎಂದು ಭಾವಿಸಿ ಅದರಿಂದ ಹೊರಬಂದುಬಿಡಬೇಕು. “ಅಜಾಪುತ್ರಂ ಬಲಿಂ ದದ್ಯಾತ್ ದೇವೋ ದುರ್ಬಲಘಾತಕಃ”ಹರಕೆ ಫಲಿಸಲು, ಹರಕೆ ತೀರಿಸಲು ಜನರು ದುರ್ಬಲವಾದ ಆಡಿನ ಮರಿಯನ್ನು ಬಳಿಕೊಡುತ್ತಾರೆ ಹೊರತು ಹುಲಿ, ಸಿಂಹ, ಕುದುರೆಗಳನ್ನಲ್ಲ ಹಾಗಾಗಿ ನಾವು ಏನಾಗಬೇಕು ಎಂಬುದು ನಮ್ಮ ಮೇಲೆಯೇ ನಿಂತಿರುತ್ತದೆ.

ನಿಮ್ಮ ನಿಷ್ಠೆಯ ಕಾಯಕದಿಂದ ನೀವು ಹೆಸರು ಮಾಡುತ್ತಿದ್ದೀರಿ ಎಂದರೆ ಸಾಕು ನಿಮ್ಮ ಅಳಿತಪ್ಪಿಸಲೆಂದೆ ಒಂದಷ್ಟು ಪಡೆಗಳು ಬಲೆ ಬೀಸುತ್ತಲೇ ಇರುತ್ತವೆ. ಎಲ್ಲರೂ ಅವರವರಿಗೆ ಅವರೇ ಮೆಚ್ಚು ಆದರೆ ಬೇರೆಯವರನ್ನು ಆಡಿಕೊಳ್ಳುವ ಹುಚ್ಚು ಕೆಲವರಿಗೆ ಜನ್ಮಗತವಾಗಿಯೇ ಬಂದಿರುತ್ತದೆ. ಬೆಳೆಯುವವರಿಗೆ ಗುರಿಯತ್ತ ಗಮನವಿರಬೇಕೆ ಹೊರತು ಯಾರು ನಮ್ಮ ಬಗ್ಗೆ ಏನನ್ನು ಗ್ರಹಿಸುತ್ತಾರೋ ಎನ್ನುವುದರ ಕಡೆಯಲ್ಲ. ಒಂದು ವೇಳೆ ನೀವು ಅದನ್ನು ಕೇಂದ್ರೀಕರಿಸುತ್ತೀರಿ ಎಂದರೆ ನಿಮ್ಮ ಬೆಳವಣಿಗೆ ಅಲ್ಲಿಯೇ ಕುಂಠಿತಗೊಳ್ಳುತ್ತದೆ ಎಂದರ್ಥ “ಬೆಳೆಯುವ ಕುಡಿಯನ್ನು ಮೊಳಕೆಯಲ್ಲೇ ಚಿವುಟಿ” ಎಂಬಂತೆ ಪ್ರಾರಂಭದಲ್ಲಿಯೇ ನಿಮ್ಮನ್ನು ಹೊಸಕಿಹಾಕುವ ಸಂಚುಗಳಿಗೆ ಬಲಿಯಾಗಬೇಡಿ. ನೀವು ಯಾವುದೋ ಹೊಸತೊಂದು ಯೋಜನೆ ರೂಪಿಸಿದ್ದೀರಿ ಎಂದರೆ ಅದಕ್ಕೆ ಬೇಲಿ ಹಾಕಲು ತಯಾರಿ ನಡೆಸುವವರು ಸುತ್ತಲೂ ಇರುತ್ತಾರೆ, ಹಾಗಾಗಿ ನಿಮ್ಮ ಗುರಿ ಉದ್ದೇಶಗಳನ್ನು ತಲುಪುವವರೆಗೂ ಸದ್ದಿಲ್ಲದಂತೆ ಕೆಲಸ ನಡೆಸಿ ಫಲ ನಿಮ್ಮ ಕಾಯಕದ ಮೇಲೆ ನಿಂತಿರುತ್ತದೆ ಹೊರತು ನಿಮ್ಮನ್ನು ಬೆನ್ ತಟ್ಟುವವರಂತೆ ನಟಿಸುವವರ ಮೇಲಲ್ಲ. ಬಿಟ್ಟುಬಿಡಿ ಬೇಡದ ಸಂಗತಿಗಳೆಡೆ ಮನಸ್ಸು ಹರಿಸುವುದನ್ನು ನಿಲ್ಲಿಸಿ.

ಇಂತಹ ನಿಂದಕರು ಬೇಕು. ನಿಂದಕರ ಮಾತುಗಳಿಗೆ ಅಳುಕದೆ, ಅವರ ಟೀಕೆಗಳಿಗೆ ಕುಗ್ಗದೆ ಮುಂದೆ ಸಾಗಬೇಕು. ಮತ್ತೊಬ್ಬರ ವಿಚಾರಗಳನ್ನು ಗೌರವಿಸದ ವ್ಯಕ್ತಿಗಳನ್ನು ನೀವೆಂದಿಗೂ ಗಣನೆಗೆ ತೆಗೆದುಕೊಳ್ಳದಿರಿ. ನಿಂದಕರು ಹೆಸೆವ ಟೀಕೆಯ ಕಲ್ಲುಗಳನ್ನು ಹೂಗಳೆಂದು ಭಾವಿಸಿ. ಅಕ್ಕರೆ ತೋರದ ಲೋಕ ನಕ್ಕರೆ ತಲೆಕೆಡಿಸಿಕೊಳ್ಳದಿರಿ ಸಮಾಜಕ್ಕೆ ಸಮಾಧಾನ ಮಾಡಲು ಹೋದರೆ ನಾವು ಬದುಕಿದ್ದು ಸಹ ನಟನೆ ಮಾಡಿದಂತಾಗುತ್ತದೆ. ಸಮಯ ಸಂಧರ್ಭಕ್ಕೆ ತಕ್ಕಂತೆ ನಗುವಲ್ಲದ ನಗು ಬೀರುವವರನ್ನು ನಿಮ್ಮ ವ್ಯಾಪ್ತಿಯಿಂದ ಮಿತವಾಗಿ ದೂರವಿಡಿ. ಅಂತೆ, ಕಂತೆ, ಸಂತೆಗಳನ್ನೆಲ್ಲ ಮೂಟೆ ಕಟ್ಟಿ, ನಿಂದಕರ ಎಡೆಮುರಿ ಕಟ್ಟಲು ನಿಮ್ಮ ಕಾಯಕದಲ್ಲಿ ಮಾತ್ರ ನಿರತರಾಗಿ. ಊರ ಮಾರಿಗಳಂತೆ ಅನಿಸಿದನ್ನೆಲ್ಲ ಎಲುಬಿಲ್ಲದ ನಾಲಿಗೆಯಲ್ಲಿ ಹಲುಬುವ ಆ ನಾಲ್ಕು ಜನ ನಮ್ಮನ್ನ ಮಾತ್ರ ನಿಂದಿಸುತ್ತಾರೆ ಎಂಬ ಉಹಾತ್ಮಕ ಕಲ್ಪನೆ ಬೇಡವೆ ಬೇಡ ಏಕೆಂದರೆ ಇಡೀ ಪ್ರಪಂಚದಲ್ಲಿ ಎಲ್ಲಿಯೇ ಹೋದರೂ ಅಂತಹ ನಿಂದಕ ನಾಲ್ಕು ಜನರು ನಾವಿದ್ದೇವೆ ಎಂದು ಮೂಗು ತೂರಿಸುತ್ತಲೇ ಇರುತ್ತಾರೆ. ಗೆಲುವಿನತ್ತ ಚಿತ್ತ ನೆಟ್ಟಿದ್ದೇ ಆದರೆ ಟೀಕೆಗಳಿಗೆ ಉತ್ತರಿಸದಿರಿ ಕಾಯಕ ಮಾತ್ರ ಮಾತನಾಡಲಿ. ಉದಾ :ಬಾಬಾ ಸಾಹೇಬ ಅಂಬೇಡ್ಕರ್ ರಂತಹ ಮಹನೀಯರು, ಜ್ಯೋತಿ ಭಾಪುಲೆ, ಸಾವಿತ್ರಿಬಾಯಿ ಫುಲೆಯಂತಹ ಸಾಕಷ್ಟು ಯಶಸ್ವಿ ಸಾಧಕರು ಸಹ ನಿಂದನೆಗೆ ಒಳಗದವರೇ ಎಂಬುದನ್ನು ನಾವು ಮರೆಯುವಂತಿಲ್ಲ. ನಿಂದಿಸುತ್ತಲೇ ಯಶಸ್ಸಿನ ರತ್ನಗಂಬಳಿಯನ್ನು ಅವರಿಗೆ ಗೊತ್ತಿಲ್ಲದಂತೆ ಗಟ್ಟಿತನ ತುಂಬಿ ನಡೆಸುವ ಅವರಿಗೆ ನಾವು ಋಣಿಯಾಗಿರಬೇಕು. ಏಕೆಂದರೆ ಸ್ಥಪತಿಯಿಂದ ಪೆಟ್ಟು ತಿಂದ ಕಲ್ಲೊಂದು ಸುಂದರ ಮೂರ್ತಿಯಾಗಿ ಹುಟ್ಟುಪಡೆದು ಪೂಜೆಗೊಳ್ಳುವುದು ಉಳಿಪೆಟ್ಟು ಬಿದ್ದಮೇಲೆಯೇ ಹೊರತು ಏಕ್ದಂ ಅಲ್ಲ ಅದು ಸಾಧಿಸುವ ಛಲವಿರುವವನಲ್ಲಿ ಬಲವಾಗಿ ಬೇರೂರಿದೆ.

- Advertisement -

ಅರೆರೆ ನನ್ನ ಯಶಸ್ಸಿನತ್ತ ಕೊಂಡೊಯುವವರು ಯಾರು ಇಲ್ಲವೆಂದು ಕೊರಗಬೇಡಿ ನಿಮ್ಮೊಳಗೊಬ್ಬ ಛಲಗಾರನಿದ್ದಾನೆ ಅವನೊಟ್ಟಿಗೆ ಮಾತನಾಡಬೇಕಷ್ಟೆ. ನಾವು ಸತ್ತಾಗ ನಮ್ಮನ್ನು ಹೊರಲು ನಾಲ್ಕು ಜನ ಬರುತ್ತಾರೆ ಎಂದಾಗ ಕನಿಷ್ಠಪಕ್ಷ ನಾವು ಬದುಕಿದ್ದಾಗ ಇಬ್ಬರು ನಮ್ಮವರೆಂದವರು ಬರುವುದಿಲ್ಲವೇ? Of course ಬಂದೇ ಬರುತ್ತಾರೆ ಅವರೇ ನಿಜವಾದ ನಮ್ಮವರು. ನಾವು ಯಾರಿಗು ನಮನ್ನು ಅರ್ಥಮಾಡಿಸಬಾರದು ಏಕೆಂದರೆ ಅರ್ಥಮಾಡಿಸುವ ಗೋಜಿಗೆ ಹೋದದ್ದಾದರೆ ಅದು ನಾವಲ್ಲವೇ ಅಲ್ಲ. ನಮ್ಮೊಂದಿಗೆ ಬೆರೆತವರು ನಮ್ಮವರೇ ಆದರೆ ನಿಜವಾಗಿಯೂ ನಮ್ಮನ್ನು ಅರ್ಥೈಸಿಕೊಳ್ಳುತ್ತಾರೆ. ಕೇವಲ ಕಣ್ಣಂಚಿನಲ್ಲಿ ನಮ್ಮನ್ನು ಅಳೆದು ತೂಗಲು ಬರುತ್ತಾರೆ ಎಂದರೆ ನಮ್ಮ ಚೌಕಟ್ಟಿನ ಒಳಗೆ ಅವರ ಯೋಗ್ಯತೆಗೂ ಮೀರಿ ಸ್ಥಾನ ನೀಡಿದ್ದೇವೆ ಎಂದರ್ಥ. ನಾವು ಮಾಡುವ ಕೆಲಸ ಯಾರಿಗೂ ತೊಂದರೆ ಕೊಡದೆ, ತೊಂದರೆ ಆಗದೆ ಇರುವಂತದ್ದಾದರೆ ಯಾರಿಗು ಜವಾಬ್ ಕೊಡುವ ಅವಶ್ಯಕತೆ ಇಲ್ಲ. ನಿಂದನೆಯೇ ಉಸಿರಾಳವಾಗಿರುವ ಮಾನಸಿಕ ಕಾಯಿಲೆ ಇರುವವರನ್ನು ತಿದ್ದಲು ಹೋಗಬಾರದು ಅವರು ಅದರಲ್ಲೇ ಆದರೂ ಸಂತೋಷಪಡಲಿ ಬಿಡಿ ಪಾಪ.

ಉಫ್ ಇಷ್ಟೆಲ್ಲಾ ಇದೆಯಾ ವಿಷಯ ಅಂತ ಒಂದೊಮ್ಮೆ ಯೋಚಿಸಿದ್ರೆ ಗೊತ್ತಾಗತ್ತೆ. ಅದಕ್ಕಾಗಿ ನಮ್ಮೊಳಗೇ ನಾವೇ ಆಗಾಗ ಮಾತನಾಡಬೇಕು. ನಾಟಕೀಯ ನಗೆ ಬೀರುವವರಿಗಿಂತ, ಸುಳ್ಳು ಭರವಸೆಯ ಮಾತುಗಳನ್ನಾಡುವವರಿಗಿಂತ ನಮ್ಮೊಳಗಿನ ನಾನು ಮಾತ್ರ ಅವೆರಡನ್ನೂ ಮಾಡುವುದಿಲ್ಲ ಬದಲಿಗೆ ಭರವಸೆಯ ನಾಳೆಗಳನ್ನು ನಮ್ಮೊಳಗೇ ನಿಧಾನವಾಗಿ ಮೆಲುಕು ಹಾಕುತ್ತದೆ. ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ ಎಂಬ ಪುಣ್ಯಕೋಟಿಯ ಕಥೆಗಳೇ ಗೊತ್ತಿಲ್ಲದವರು ಈ ನಾಲ್ಕು ಜನರು. ನಮ್ಮವರಾಗಿಯೇ ಇದ್ದು ನಮ್ಮನ್ನು ಹಿರಿಯುವವರೇ ಟೀಕಾಕಾರರು. ಇನ್ನಾದರೂ ಆ ನಿಂದಕ ನಾಲ್ಕು ಜನರನ್ನು ಅವರ ಮಾತುಗಳನ್ನು ಕಿವಿಗೂ, ತಲೆಗೂ ಹಾಕಿಕೊಳ್ಳದೆ ನಿಮ್ಮ ಕೆಲಸದಲ್ಲಿ ಅವರ ನಿಂದನೆಗಳನ್ನು ಅವರದೇ ನ್ಯೂನ್ಯತೆಗಳನ್ನಾಗಿಸಿ ಮುಂದೆ ಸಾಗುತ್ತಿರಬೇಕು. ಯಶಸ್ಸಿನ ಹೆಜ್ಜೆಗುರುತುಗಳನ್ನು ಬಲವಾಗಿ ಊರಲು ಪ್ರಯತ್ನಿಸಬೇಕು. ಸ್ವಾರ್ಥವೇ ತುಂಬಿರುವ ನಮ್ಮ ಸುತ್ತಮುತ್ತಲು ತಲೆಹಾಕದೆ ಇರುವುದರಲ್ಲೇ ಖುಷಿಕಾಣಬೇಕು. ಅವರಿಗೆ ಉತ್ತರ ನೀಡಬೇಕು, ಇವರಿಗೆ ನಾನೆಂದು ತೋರಿಸಬೇಕೆಂಬ ಒಣಸಾಹಸ ಬಿಟ್ಟು ಮನಸಿಗೊಪ್ಪುವಂತೆ ನಮಗಾಗಿ ನಮ್ಮ ನಾಳೆಗಳಿಗಾಗಿ, ನಾವು ಕಂಡ ಕನಸುಗಳನ್ನು ನೂರಕ್ಕೆ ನೂರಷ್ಟಲ್ಲದಿದ್ದರೂ ಸಾಧ್ಯವಾದಷ್ಟು ಸಾಧಿಸಲು ಪ್ರಯತ್ನಿಸಬೇಕು. ಅದಕ್ಕಾಗಿಯೇ ನಮ್ಮ ಹಿರಿಯರು ಸಾಧನೆ ಯಾರಪ್ಪನ ಸ್ವತ್ತು ಅಲ್ಲ ಎನ್ನುತ್ತಿರುತ್ತಾರೆ. ಗೆದ್ದರೆ ಗೆದ್ದಲು ಹುಳಗಳಂತೆ ಎಲ್ಲ ನಾಶ ಮಾಡಲು ಒಂದಷ್ಟು ಪಡೆಗಳಿದ್ದರು ಸಹ ಯಶಸ್ಸನ್ನು ಸಂಭ್ರಮಿಸಲೆಂದೇ ಜೇನುಗೂಡಿನಂತೆ ನಮ್ಮವರೆನಿಸಿಕೊಂಡವರು ಬಹುತೇಕ ಅಲ್ಲದಿದ್ದರೂ ಕೊಂಚವಾದರೂ ಇದ್ದೆ ಇರುತ್ತಾರೆ.

ಈಗಲಾದರೂ ಆ ಗೊತ್ತಿಲ್ಲದ ನಾಲ್ಕು ಜನರ ಚಿಂತೆ ಬಿಟ್ಟು, ನಮ್ಮನ್ನು ಅವರು ಹೀಗಂದ್ರು, ಇವರು ಹಾಗಂದ್ರು ಅನ್ನೋದನ್ನು ಹುಡುಕುವ ಹುಚ್ಚು ಬಿಸಿಲು ಕುದುರೆ ಬೆನ್ನತ್ತದೆ, ಯಶಸ್ಸಿಗಾಗಿ ಓಡುವ ಕುದುರೆಯ ಬೆನ್ನತ್ತಿ. ಅವರು, ಇವರು ಅಂದಂತಹ ನಿಂದಕ ಮಾತುಗಳನ್ನು ಅವರನ್ನು ನಮ್ಮ ಶತ್ರುಗಳಾಗಲೂ ಅರ್ಹತೆ ಇಲ್ಲದವರೆಂದು ಭಾವಿಸಿದರೆ ಶತ್ರುಗಳು, ನಿಂದಕರು ಇವರ್ಯಾರು ಇರುವುದಿಲ್ಲ. ಬಿಟ್ಟು ಹೋಗುವ ಪ್ರಪಂಚದಲ್ಲಿ ಬಿಟ್ಟುಹೋಗುವವರೆಲ್ಲ ಕೊಟ್ಟು ಹೋಗುವ ಉಚಿತ ನಿಂದನೆಗಳನ್ನು ಅವರನ್ನು ಅಲ್ಲಲ್ಲಿಯೇ ಬಿಟ್ಟು ಮುಂದೆ ಸಾಗಿ. definitely success ಅನ್ನು ಸರಮಾಲೆಯನ್ನಾಗಿ ಧರಿಸಲು ಈಗ ನೀವು ಆ ನಾಲ್ಕು ಜನರನ್ನ ಎಲ್ಲೋ ಬಿಟ್ಟು, ಅವರ ಮಾತುಗಳನ್ನು ಅಲ್ಲೆಗಳೆದು ಮುಂದೆ ಸಾಗ್ತೀರ ಅಂದುಕೊಳ್ತೀನಿ. ಸಾಧನೆಯ ಸೂತ್ರ ಹಿಡಿಯಲು ಹೊರಟವರಿಗೆ all the best. ತಡವಾದರೂ ಯಶಸ್ಸು ಪ್ರಯತ್ನಕ್ಕೆ ಫಲಿಸುತ್ತದೆ ಎಂಬ ನಂಬಿಕೆ ನಮ್ಮ ಜೊತೆಗಿರಬೇಕು.

ಡಾ ಮೇಘನ ಜಿ
ಉಪನ್ಯಾಸಕರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬಸವಣ್ಣ ನಮಗೇಕೆ ಬೇಕು ?

ಬಸವಣ್ಣ ಜಗವು ಕಂಡ ಶ್ರೇಷ್ಠ ಸಾರ್ವಕಾಲಿಕ ಸಮಕಾಲೀನ ಸಮತೆಯ ಶಿಲ್ಪಿ ಸತ್ಯ ಶಾಂತಿ ಪ್ರೀತಿ ಅನುಪಮ ಮಾನವ ಮೌಲ್ಯಗಳನ್ನು ಮರ್ತ್ಯದಲ್ಲಿ ಬಿತ್ತರಿಸಿದ. ಪ್ರಾಯಶ ಎಲ್ಲಾ ಹಂತದಲ್ಲೂ...
- Advertisement -

More Articles Like This

- Advertisement -
close
error: Content is protected !!
Join WhatsApp Group