ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದಲ್ಲಿ ಜೈನ ಲೇಖಕರು, ಸಂಗೀತಗಾರರ ಪುರೋಹಿತರ ಸಮಾವೇಶ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಿತು.
ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸೇವೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಮಾರ್ಗದರ್ಶನದ ಸೇವೆ ಪರಿಗಣಿಸಿ ಹಲಗಾ ಗ್ರಾಮದವರಾದ ಅಶೋಕ ಚಿಕ್ಕಪರಪ್ಪಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನಸಲಾಪುರ ಗ್ರಾಮದಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಡಾ. ಶ್ರೀ ಸಿದ್ಧಸೇನ ಮಹಾರಾಜರು ಈ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಮರಾಠಿಯ ಹೆಸರಾಂತ ನಾಟಕಕಾರ ದತ್ತಾ ಪಾಟೀಲ ಅವರ ‘ತೋ ಏಕ್ ರಾಜಹಂಸ’ ನಾಟಕವನ್ನು ಕನ್ನಡಕ್ಕೆ ಅನುವಾದಿಸಲು ಅಶೋಕ ಅವರಿಗೆ ಬೆಂಗಳೂರಿನ ಬಹುವಚನ ಪ್ರಕಾಶನದಿಂದ ಫೆಲೋಶಿಪ್ ದೊರಕಿತ್ತು. ಆ ನಾಟಕ ಇನ್ನು ಕೆಲವೇ ತಿಂಗಳುಗಳಲ್ಲಿ ಪುಸ್ತಕ ರೂಪ ಪಡೆಯಲಿದ್ದು, ಬಳಿಕ ಅದು ಕನ್ನಡ ರಂಗಭೂಮಿಯಲ್ಲಿ ಅಭಿನಯಿಸಲ್ಪಡಲಿದೆ.
ಅಶೋಕ ಅವರ ಮತ್ತೊಂದು ಹೆಗ್ಗಳಿಕೆ ಎಂದರೆ, ದೃಷ್ಟಿ ವಿಕಲಚೇತನರಿಗಾಗಿ ಪುಣೆಯ ‘ನಿವಾಂತ್ ಅಂಧಮುಕ್ತ ವಿಕಾಸಾಲಯ’ ಸಂಸ್ಥೆ ರೂಪಿಸಿರುವ ಮರಾಠಿ – ಹಿಂದಿ ಮುಖಾಂತರ ಕಂಪ್ಯೂಟರ್’ನಲ್ಲಿ ಇಂಗ್ಲಿಷ್ ಕಲಿಸುವ ಸಾಫ್ಟವೇರ್’ನ್ನು ಅವರು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ದೃಷ್ಟಿ ವಿಕಲಚೇತನರಿಗಾಗಿ ಕಂಪ್ಯೂಟರ್ ತರಬೇತಿ ನೀಡುವ ಕರ್ನಾಟಕದ ಎಲ್ಲ ಸಂಸ್ಥೆಗಳು ಈ ಸಾಫ್ಟವೇರ್ ನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.

