ಗೋಕಾಕದಲ್ಲಿ ಕಾಂಗ್ರೆಸ್ ಬಾವುಟ ಹಾರಿಸೋಣ : ಡಿ.ಕೆ.ಶಿವಕುಮಾರ್
ಬೆಳಗಾವಿ: ಗೋಕಾಕ ವಿಧಾನಸಭಾ ಮತಕ್ಷೇತ್ರ ಕಾಂಗ್ರೆಸ್ ಪಕ್ಷದ ತವರು ಮನೆಯಾಗಿದೆ. ಅಶೋಕ ಪೂಜಾರಿ ಕಾಂಗ್ರೆಸ್ ಸೇರ್ಪಡೆ ಐತಿಹಾಸಿಕ ದಿನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಅಶೋಕ ಪೂಜಾರಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.
ಅಶೋಕ ಪೂಜಾರಿ ಹೋರಾಟದ ಹಿನ್ನೆಲೆ ಉಳ್ಳವರಾಗಿದ್ದಾರೆ. ವಿಧಾನ ಸಭೆ ಪ್ರವೇಶಿಸಲು ಮೂರು ಬಾರಿ ಜೆಡಿಎಸ್, ಒಂದು ಬಿಜೆಪಿ ಪಕ್ಷದಿಂದ ಗೋಕಾಕದಿಂದ ಸ್ಪರ್ಧೆ ಮಾಡಿ, ಸೋತಿದ್ದರು. ಆದರೂ ಸಹ ಅವರ ಕಾರ್ಯವನ್ನು ಬಿಡದೆ ಜನರ ಕಷ್ಟಕ್ಕೆ ಸ್ಪಂದಿಸುತ್ತಾ ಬಂದಿದ್ದಾರೆ ಎಂದರು.
ಅಶೋಕ ಪೂಜಾರಿ ನೇತೃತ್ವದಲ್ಲಿ ಗೋಕಾಕ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸೋಣ. ನಿಮ್ಮ ಬೆಂಬಲ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಬಲಪಡಿಸಲು ಶೀಘ್ರದಲ್ಲಿಯೇ ಗೋಕಾಕ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಬೃಹತ್ ಸಭೆ ನಡೆಸೋಣ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಯವರು ದಿನಾಂಕ ನಿಗದಿ ಮಾಡಿದ ದಿನವೇ ಸಭೆ ನಡೆಸೋಣ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಅಶೋಕ ಪೂಜಾರಿ ಅವರನ್ನು ನಾನು ಜೆಡಿಎಸ್ ನಲ್ಲಿ ಇದ್ದಾಗ ಬೆಳಗಾವಿ ಜಿಲ್ಲಾ ಅಧ್ಯಕ್ಷನಾಗಿ ಮಾಡಿದ್ದೆ. ಅವರ ನಮ್ಮ ಒಡನಾಟ ಸುದೀರ್ಘವಾದದ್ದು ಎಂದು ಸ್ಮರಿಸಿದರು.
ಅಶೋಕ ಪೂಜಾರಿ ಅವರು ಹೋರಾಟದ ಹಾದಿಯಲ್ಲಿ ನಡೆದು ಬಂದವರು. ಯಾವಾಗಲೂ ಹೋರಾಟದಲ್ಲಿ ಎತ್ತಿದ ಕೈ, ಅವರ ಹೋರಾಟ ಕಾಂಗ್ರೆಸ್ ಪಕ್ಷದದಲ್ಲಿ ಮುಂದುವರೆಯಲಿ ಎಂದು ಶುಭಹಾರೈಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಶೋಕ ಪೂಜಾರಿಯನ್ನು ನಾವು ಅಧಿಕೃತ ವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕಾಗಿತ್ತು. ಆದರೆ ಸ್ಪಲ್ಪ ವಿಳಂಬವಾಗಿದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಶಾಸಕ ಅಶೋಕ ಪಟ್ಟಣ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಮುಖಂಡರು ಸೇರಿದಂತೆ ಕಾರ್ಯಕರ್ತರು ಇದ್ದರು.