ಗುರು ಚಂಪಾರಿಗೆ ಅಶ್ರುತರ್ಪಣ; ಶಿವಾನಂದ ಬೆಳಕೂಡ

Must Read

ಸಾಹಿತ್ಯವಲಯದ ಎರಡನೇ ತಲೆಮಾರಿನ ಕೊಂಡಿಯೊಂದು ಕಳಚಿ ಬಿದ್ದಾಗ ಒಮ್ಮೆಲೇ ಆಕಾಶದಲ್ಲಿನ ನಕ್ಷತ್ರಗಳು ಕಳಚಿಕೊಂಡು ಭೂಮಿಗೆ ಬಿದ್ದಂತೆ ; ಮತ್ತೊಮ್ಮೆ , ಸೂರ್ಯನೇ ಒಂದು ಗಳಿಗೆ ಅಸ್ತಂಗತನಾಗಿ ಜಗವೆಲ್ಲ ಕತ್ತಲಾಗಿ ದಿಕ್ಕು ಕಾಣದಂತಹ ಅನುಭವ ನನಗೆ.

ಗುರುವೆಂಬ ಅರಿವನ್ನೇ ಮರೆತು ವಿದ್ಯಾರ್ಥಿಗಳ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಕಲಿಸುತ್ತಿದ್ದ ಸ್ನೇಹಜೀವಿ ನಮ್ಮೆಲ್ಲರ ಪ್ರೀತಿಯ ಗುರು ಚಂಪಾ.

ಸಂಕ್ರಮಣ ಪತ್ರಿಕೆಯ ಸಾರಥ್ಯ ವಹಿಸಿ 50 ವರ್ಷಗಳಿಂದ ತಮ್ಮ ಬರಹ, ಕಾವ್ಯ, ನಾಟಕಗಳ ಮೂಲಕ ಅಂದು ನಮ್ಮಂಥ ಯುವ ಬರಹಗಾರರಿಗೆ ವೈಚಾರಿಕತೆಯ ಹುಚ್ಚು ಹಿಡಿಸಿದ ಚಂಪಾ.

ಬಂಡಾಯದ ಬಾವುಟ ಹಿಡಿದು ಸಾವಿರಾರು ಯುವಪ್ರತಿಭೆಗಳ ಎದೆಗೆ ಕಿಚ್ಚು ಹಚ್ಚಿ ಅವರ ಕಾವ್ಯಕ್ಕೆ ಕಣ್ಣಾದ ಚಂಪಾ.

ಸ್ವಹಿತಕ್ಕಾಗಿ ಲಾಬಿ ನಡೆಸುತ್ತಾ ಅನ್ಯಾಯ , ಅಕ್ರಮಗಳ ದಾಸರಾಗುತ್ತಿದ್ದ ಸಾಮಾಜಿಕ, ಸಾಹಿತ್ಯಿಕ , ಧಾರ್ಮಿಕ ವಲಯದ ಸೋಗಲಾಡಿಗಳಿಗೆ ಸುಂಟರಗಾಳಿಯಾಗಿದ್ದ ಚಂಪಾ.

ತುರ್ತುಪರಿಸ್ಥಿತಿ ಅಂತಹ ಕರಾಳ ಪರ್ವದ ದಿನಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಚಡಪಡಿಸುತ್ತಾ ಹೋರಾಟದ ಹಾದಿಯಲ್ಲಿ ಪೊಲೀಸರ ಬಂದೂಕಿಗೆ ಎದೆ ಒಡ್ಡುತ್ತಾ ಜೈಲು ಸೇರಿದ ಗಂಡೆದೆಯ ಚಂಪಾ.

ಬಡವರಿಗೆ ಬೂದಿ ಕೊಡುತ್ತಾ , ಮುಗ್ಧ ಭಕ್ತರಿಗೆ ಮಂಕುಬೂದಿ ಎರಚುತ್ತಾ ತಾನೇ ಭಗವಾನ ಎಂದು ಮೆರೆಯುತ್ತಿದ್ದ ಮಾಂತ್ರಿಕ ಬಾಬಾಗಳಿಗೆ ಸಿಂಹ ಸ್ವಪ್ನವಾಗಿದ್ದ ಚಂಪಾ.

ಬುದ್ಧ , ಬಸವ , ಅಂಬೇಡ್ಕರ್ ಮತ್ತು ಲೋಹಿಯಾರಂಥ ಬಂಡಾಯದ ಬೇರುಗಳಿಗೆ ನೀರುಣಿಸುತ್ತಾ ತಾನೇ ಗಿಡವಾಗಿ ಬೆಳೆದು ; ಹೂವಾಗಿ ಹಣ್ಣಾಗಿ ದೀನ ದಲಿತರ ಪಾಲಿಗೆ ನೆರಳಾಗಿ , ಕೊರಳಾಗಿ ಬೆಳಕು ಬೀರಿದ ಚಂಪಾ.

ನಮ್ಮ ನಾಡಿನ ಭಾಷೆ , ನೆಲ-ಜಲಕ್ಕೆ ಆಪತ್ತು ಬಂದಾಗ ಗಂಡುಗಚ್ಚೆ ಹಾಕಿ “ಕನ್ನಡ , ಕನ್ನಡ , ಬರ್ರಿ ನಮ್ಮ ಸಂಗಡ” ಎಂದು ಕೂಗುತ್ತಾ ಎದುರಾಳಿಗಳ ಕಚ್ಚೆ ಸಡಿಲು ಮಾಡುತ್ತಿದ್ದ ಕೆಚ್ಚೆದೆಯ ಕಲಿ ಚಂಪಾ.

ನಿಮ್ಮ ಹೋರಾಟದ ಹಾದಿಯಲ್ಲಿ ಅಂದು ನಾವೆಲ್ಲಾ ನಿಮ್ಮ ಬಾಲಂಗೋಚಿಗಳಾದಾಗ ನಮ್ಮ ಬೆನ್ನು ಚಪ್ಪರಿಸಿ ನಮ್ಮ ಬದುಕಿನ ಹೋರಾಟದ ಹಾದಿಗೆ ಅಡಿಗಲ್ಲು ಹಾಕಿದ ಚಂಪಾ ಗುರುಗಳೇ ನಿಮಗೆ ನಮೋ ನಮೋ.

ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕಣ್ಣೀರ ಕೋಡಿಯೊಂದಿಗೆ ಪ್ರೀತಿಯ ಧಾರೆ ಹರಿಸುತ್ತಾ ಹೂಮಳೆ ಗರೆಯುತ್ತಿದ್ದೇವೆ, ಸ್ವೀಕರಿಸುವಿರಾ?


ಶಿವಾನಂದ ಬೆಳಕೂಡ
ಸಂಘರ್ಷ ಸಾಹಿತ್ಯಕೂಟ ರಾಯಬಾಗ ಜಿಲ್ಲೆ : ಬೆಳಗಾವಿ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group