ಬಿಜಾಪುರ ಜಿಲ್ಲೆಯ ಬಬಲೇಶ್ವರದಲ್ಲಿ ಕಳೆದ ಡಿಸೆಂಬರ್ 29, 2025ರಂದು ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗಳು ಮಾಡಿದ ಭಾಷಣವು ಲಿಂಗಾಯತ ಸಮಾಜದಲ್ಲಿ ಕೇವಲ ಅಸಮಾಧಾನವನ್ನಷ್ಟೇ ಅಲ್ಲ, ಒಂದು ಗಂಭೀರ ಆತಂಕವನ್ನೂ ಹುಟ್ಟುಹಾಕಿದೆ. ಹಣೆಗೆ ಕುಂಕುಮ ಹಚ್ಚಿಕೊಂಡು“ವೀರಶೈವ– ಲಿಂಗಾಯತ ಎಲ್ಲವೂ ಹಿಂದೂ ಧರ್ಮದೊಳಗೇ ಬರುತ್ತವೆ; ಬಸವತತ್ವ ಬಿಟ್ಟು ಕೆಲವರು ಹೊಸ ಧರ್ಮ ಕಟ್ಟಲು ಹೊರಟಿದ್ದಾರೆ; ಅವರ ಮಾತು ಕೇಳಬೇಡಿ” ಎಂದು ಕನ್ನೇರಿ ಸ್ವಾಮಿಗಳು ಘೋಷಿಸುವುದು ಯಾವುದೇ ಸಾಂಸ್ಕೃತಿಕ ಚರ್ಚೆಯಲ್ಲ — ಅದು ಲಿಂಗಾಯತ ಇತಿಹಾಸದ ಮೇಲೆ ನಡೆಸುತ್ತಿರುವ ಸಂಘಟಿತ ರಾಜಕೀಯ ದಾಳಿ.!
ಇಲ್ಲಿ ಪ್ರಶ್ನೆ ವ್ಯಕ್ತಿಯದ್ದಲ್ಲ. ಪ್ರಶ್ನೆ ಒಂದು ನಿಲುವಿನದ್ದು. ಪ್ರಶ್ನೆ — ಬಸವತತ್ವವನ್ನು ಹಿಂದುತ್ವದೊಳಗೆ ಮುಳುಗಿಸಿ ಬಿಡುವ ಪ್ರಯತ್ನದ್ದು.!
“ಎಲ್ಲವೂ ಹಿಂದೂ” ಎನ್ನುವ ಮಾತು ಯಾರ ಅನುಕೂಲಕ್ಕೆ?
“ವೀರಶೈವ–ಲಿಂಗಾಯತ ಎಲ್ಲವೂ ಹಿಂದೂ” ಎನ್ನುವುದು ಹೊಸ ವಾದವೇನೂ ಅಲ್ಲ…
2017ರಲ್ಲಿ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ಕುರಿತ ಚರ್ಚೆ ಆರಂಭವಾದ ದಿನದಿಂದಲೇ ಈ ವಾಕ್ಯ ರಾಜಕೀಯ ಘೋಷಣೆಯಾಗಿ ಬಳಕೆಯಾಗುತ್ತಿದೆ.
ಆದರೆ ಗಮನಿಸಬೇಕಾದ ಸಂಗತಿ ಏನೆಂದರೆ — ಈ ಮಾತು ವಚನಕಾರರ ಕಾಲದಲ್ಲಿ ಕೇಳಿ ಬಂದದ್ದಲ್ಲ…. ಈ ಮಾತು ಬಸವಣ್ಣನ ಕಾಲದಲ್ಲಿ ಇರಲಿಲ್ಲ.. -ಈ ಮಾತು ಇಂದು ಕೇಳಿಬರುತ್ತಿರುವುದು RSS–BJP–VHP–ಬಜರಂಗದಳದ ರಾಜಕೀಯ ವೇದಿಕೆಗಳಲ್ಲಿ ಮಾತ್ರ.!
ಈ ಹಿನ್ನೆಲೆಯಲ್ಲಿ ಲಿಂಗಾಯತರು ಕೇಳುತ್ತಿರುವ ಪ್ರಶ್ನೆ “ಎಲ್ಲವೂ ಹಿಂದೂ” ಎಂಬ ತತ್ವ ಬಸವಣ್ಣನದ್ದೇ ಅಥವಾ ಹಿಂದುತ್ವ ರಾಜಕಾರಣಿಗಳದ್ದೇ? ಬಸವಣ್ಣ ಹೊಸ ಧರ್ಮ ಕಟ್ಟಲಿಲ್ಲವೇ?
ಕನ್ನೇರಿ ಸ್ವಾಮೀಜಿಗಳ ಭಾಷಣದಲ್ಲಿ ಅತ್ಯಂತ ಅಪಾಯಕಾರಿ ಆರೋಪವೇ — “ವೀರಶೈವ ಲಿಂಗಾಯತ ಎಲ್ಲವೂ ಹಿಂದೂ ಧರ್ಮದ ವ್ಯಾಪ್ತಿಯೊಳಗೇ ಇವೆ .. ಸುಖಾಸುಮ್ಮನೆ ಈ ಪ್ರತ್ಯೇಕತಾ ವಾದಿಗಳು ಹೊಸ ಧರ್ಮ ಕಟ್ಟುತ್ತಿದ್ದಾರೆ” ಎಂಬುದು.!
ಇದು ಅಜ್ಞಾನವೋ? ಅಥವಾ ಉದ್ದೇಶಪೂರ್ವಕ ಸುಳ್ಳೋ?
12ನೇ ಶತಮಾನದಲ್ಲೇ ಬಸವಾದಿ ಶರಣರು ವೇದಾಧಾರಿತ ಧರ್ಮವನ್ನು ಪ್ರಶ್ನಿಸಿದರು.! ಆಗಮಾಧಾರಿತ ಶೈವಾಚಾರಗಳನ್ನು ತಿರಸ್ಕರಿಸಿದರು ! ಬಸವಣ್ಣ ಆಸಮಾನತೆಯಿಂದ ಕೂಡಿದ ವೈದಿಕರ ಯಜ್ಞೋಪವೀತವನ್ನು ಕಿತ್ತೆಸೆದು ಇದಕ್ಕೆ ಪರ್ಯಾಯವಾಗಿ ಮೇಲು ಕೀಳೆನ್ನದೆ ಎಲ್ಲರಿಗೂ ಇಷ್ಟಲಿಂಗ ಧಾರಣೆ ಮಾಡಿ ನಿಮ್ಮ ದೇಹವೇ ದೇವಾಲಯ ಎಂದರು ! ಆ ಮೂಲಕ ದೇವಾಲಯ ಕೇಂದ್ರಿತ ಧರ್ಮವನ್ನು ಒಡೆದುಹಾಕಿದರು!
ಬ್ರಾಹ್ಮಣ ಪೌರೋಹಿತ್ಯಕ್ಕೆ ಸವಾಲು ಹಾಕಿದರು. ಜನ್ಮಾಧಾರಿತ ವರ್ಣಾಶ್ರಮವನ್ನು ತಳ್ಳಿಹಾಕಿದರು. ಇಷ್ಟೆಲ್ಲಾ ಆದರೂ ಕನ್ನೇರಿ ಶ್ರೀಗಳು “ಇದು ಹಿಂದೂ ಧರ್ಮದ ಒಳಗಿನ ಸುಧಾರಣೆ” ಎಂದು ಹೇಳುವುದು ಇತಿಹಾಸದ ಮೇಲಿನ ಅತ್ಯಾಚಾರ ಅಲ್ಲವೇ? ಒಂದು ಧರ್ಮ ತನ್ನ ಮೂಲ ಆಚರಣೆಗಳನ್ನೇ ತಿರಸ್ಕರಿಸಿದರೆ ಅದು ಸುಧಾರಣೆಯೇ? ಅಥವಾ ಹೊಸ ಧಾರ್ಮಿಕ ಪರಿಕಲ್ಪನೆಯೇ?
ಇಷ್ಟಲಿಂಗ : ಹಿಂದೂ ಧರ್ಮದೊಳಗೆ ಸಿಗದ ತತ್ವ..! ಲಿಂಗಾಯತ ಧರ್ಮವನ್ನು ಅರ್ಥ ಮಾಡಿಕೊಳ್ಳಲು ಇದೊಂದೇ ಸಾಕು ಅದುವೇ ಇಷ್ಟಲಿಂಗ…!
ಇಷ್ಟಲಿಂಗ ಎಂದರೆ:
ಇಲ್ಲಿ ದೇವಾಲಯವಿಲ್ಲ … ಅರ್ಚಕರೆಂಬ ಮಧ್ಯವರ್ತಿಗಳಿಲ್ಲ! ಜಾತಿ ಇಲ್ಲ. ಮೇಲಿನವ–ಕೆಳಗಿನವ ಎಂಬ ಹೇರಿಕೆ ಇಲ್ಲ ! ಲಿಂಗಧಾರಣೆ ಮಾಡಿದ ಕ್ಷಣದಿಂದಲೇ ಇಲ್ಲಿ ಎಲ್ಲರೂ ಸಮಾನರು. ಈ ತತ್ವ ವೇದಗಳಲ್ಲಿ ಇಲ್ಲ. ಈ ತತ್ವ ಆಗಮಗಳಲ್ಲಿ ಇಲ್ಲ. ಈ ತತ್ವ ಪುರಾಣಗಳಲ್ಲಿಯೂ ಇಲ್ಲ. !
ಹೀಗಿರುವಾಗ,
ಇಷ್ಟಲಿಂಗವನ್ನು ಅನುಸರಿಸುವ ಧರ್ಮವನ್ನು “ಎಲ್ಲವೂ ಹಿಂದೂ” ಎನ್ನುವುದು ಯಾವ ಶಾಸ್ತ್ರದ ಆಧಾರದಲ್ಲಿ?ಜಾಗತಿಕ ಲಿಂಗಾಯತ ಮಹಾಸಭೆಯೂ ಸೇರಿದಂತೆ ಎಲ್ಲ ಬಸವಪರ ಸಂಘಟನೆಗಳ ನ ನಿಲುವು ಬೇಕೆಂತಲೇ ವಕ್ರವಾಗಿ ಪ್ರದರ್ಶಿಸಲಾಗುತ್ತಿದೆ! ಇನ್ನೊಂದು ಉದ್ದೇಶಪೂರ್ವಕ ಗೊಂದಲವೆಂದರೆ:
“ಲಿಂಗಾಯತ ಮುಖಂಡರು ಈ ಮೊದಲಿನಿಂದಲೂ ಅಸ್ತಿತ್ವದಲ್ಲಿ ಇರುವ ವೀರಶೈವ ಲಿಂಗಾಯತವನ್ನು ಒಡೆಯುವ ಮೂಲಕ ಹೊಸ ಧರ್ಮ ಕಟ್ಟುತ್ತಿದ್ದಾರೆ” ಎಂಬ ನಿರಂತರ ಅಪಪ್ರಚಾರ !
ಸತ್ಯ ಇದಕ್ಕೆ ಸಂಪೂರ್ಣ ವಿರುದ್ಧ.
ಎಲ್ಲಾ ಬಸವಪರ ಸಂಘಟನೆಗಳು ಪ್ರತಿಪಾದಿಸುತ್ತಿರುವುದು ಒಂದೇ ನಿಲುವನ್ನು. ಲಿಂಗಾಯತ ಧರ್ಮ ಈಗ ಹುಟ್ಟಿದ್ದಲ್ಲ.. ಇದು 12ನೇ ಶತಮಾನದಲ್ಲೇ ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬಂದಿದೆ. ನಾವು ಹೊಸ ಧರ್ಮ ಕಟ್ಟುತ್ತಿಲ್ಲ. ಇರುವ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕೇಳುತ್ತಿದ್ದೇವೆ…!
ಇದು ಸಿಖ್ಖರು, ಜೈನರು ನಡೆದು ಬಂದ ಹಾದಿಯಂತೆಯೇ… ಇದರಲ್ಲಿ ತಪ್ಪು ಎಲ್ಲಿದೆ ಕುಂಕುಮ ಶೋಭಿತ ಕನ್ನೇರಿ ಶ್ರೀಗಳೇ ?! ಈ ನ್ಯಾಯಸಮ್ಮತ ಬೇಡಿಕೆಯನ್ನು“ಸಮಾಜ ಒಡೆಯುವ ಪ್ರಯತ್ನ” ಎಂದು ನೀವು ಬಿಂಬಿಸುವುದು ಯಾವ ಧರ್ಮದ ನೈತಿಕತೆ? ಇಲ್ಲಿ ರಾಜಕೀಯ ಇನ್ನೂ ಸೂಕ್ಷ್ಮವಾಗಿದೆ. ಹಿಂದುತ್ವ ಶಕ್ತಿಗಳು ನೇರವಾಗಿ ಬಸವಣ್ಣನ ವಿರುದ್ಧ ಮಾತನಾಡಲು ಸಾಧ್ಯವಿಲ್ಲ. ಆದ್ದರಿಂದ —ಪಂಚಾಚಾರ್ಯ ಪರಂಪರೆಯ ಶೈವ ಮಠಾಧಿಪತಿಗಳನ್ನು ವೇದಿಕೆಗೆ ತರುತ್ತಿವೆ !ಲಿಂಗಾಯತರನ್ನೇ ಲಿಂಗಾಯತರ ವಿರುದ್ಧ ನಿಲ್ಲಿಸುತ್ತಿವೆ!! ಇದು ಧರ್ಮ ರಕ್ಷಣೆ ಅಲ್ಲ. ಇದು ಇಷ್ಟಲಿಂಗಧಾರಿಗಳ ಧರ್ಮದೊಳಗಿನ ರಾಜಕೀಯ ವಿಭಜನೆ. !
ಬಸವಣ್ಣ ಎಂದಿಗೂ ಪಂಚಾಚಾರ್ಯ ವ್ಯವಸ್ಥೆಯನ್ನು ಅಂಗೀಕರಿಸಲಿಲ್ಲ. ಅವರು ವ್ಯಕ್ತಿಕೇಂದ್ರಿತ ಧರ್ಮವನ್ನು ಪ್ರತಿಪಾದಿಸಿದರು. ಇದನ್ನು ಮರೆಸಿ, ಪಂಚಾಚಾರ್ಯ ಪರಂಪರೆಯ ಹೆಸರಿನಲ್ಲಿ ಲಿಂಗಾಯತ ಧರ್ಮವನ್ನು ಹಿಂದೂ ಚೌಕಟ್ಟಿಗೆ ತಳ್ಳುವುದು ಬಸವ ದ್ರೋಹವಲ್ಲದೆ ಮತ್ತೇನು?
“ ಪ್ರತ್ಯೇಕತಾವಾದಿಗಳ ಮಾತ ಕೇಳಬೇಡಿ” ಇದು ಕನ್ನೇರಿ ಸ್ವಾಮೀಜಿಗಳು ಆಡುವ ಭಾಷೆಯೇ? ಸ್ವಾಮೀಜಿಯೊಬ್ಬರು
“ಅವರ ಮಾತ ಕೇಳಬೇಡಿ” ಎಂದು ಸಾರ್ವಜನಿಕವಾಗಿ ಕರೆ ಕೊಡುವುದು ಯಾವ ಸಂಪ್ರದಾಯ?
ವಚನಕಾರರು ವಾದಕ್ಕೆ ಆಹ್ವಾನ ನೀಡಿದರು. ಪ್ರಶ್ನೆಗೆ ಅವಕಾಶ ಕೊಟ್ಟರು. ಅನುಭವ- ಅನುಸಂಧಾನಕ್ಕೆ ಮೌಲ್ಯವಿತ್ತರು !
ಆದರೆ ಇಲ್ಲಿ ನಡೆಯುತ್ತಿರುವುದು… —ಭಿನ್ನ ಧ್ವನಿಯನ್ನು ಮೌನಗೊಳಿಸುವ ಪ್ರಯತ್ನ!
-ಪ್ರಶ್ನೆಯನ್ನು ದೇಶದ್ರೋಹವಾಗಿ ಬಿಂಬಿಸುವ ತಂತ್ರ!
-ಧಾರ್ಮಿಕ ಚರ್ಚೆಯನ್ನು ರಾಜಕೀಯ ಪ್ರಚೋದನೆಯಾಗಿಸುವ ಕೆಲಸ!
ಇದು ಸ್ವಾಮೀಜಿಯ ಧರ್ಮವೋ?
ಅಥವಾ ಸಂಘಪರಿವಾರದ ಭಾಷೆಯೋ?
ಲಿಂಗಾಯತವನ್ನು ಏಕತೆಯ ಹೆಸರಿನಲ್ಲಿ ಮುಚ್ಚಲು ಪ್ರಯತ್ನ ಮಾತ್ರ ನಡೆಯುತ್ತಿದೆ!
2017ರಿಂದ 2025ರವರೆಗಿನ ಎಲ್ಲಾ ವಾದ–ವಿವಾದಗಳು ಒಂದು ಸತ್ಯವನ್ನು ತೋರಿಸಿವೆ: ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆ ಪ್ರಶ್ನೆ ಮುಗಿದಿಲ್ಲ. ಅದನ್ನು ಅದುಮಿಡಲು ಯತ್ನಿಸಿದಷ್ಟೂ ಉಕ್ಕಿಕ್ಕಿ ಮೇಲೇರುತ್ತಲೇ ಇದೆ ! ಅದನ್ನು ರಾಜಕೀಯವಾಗಿ ಮುಚ್ಚಲು ಹಿಂದೂ ಮೂಲಭೂತವಾದಿಗಳು ವೀರಶೈವ ಮತ್ತು ವಚನಗಳನ್ನು ಪಚನ ಮಾಡಿಕೊಳ್ಳಲಾಗದೇ ರಾಯರ ವಿಗ್ರಹವನ್ನು ತಲೆ ಮೇಲೆ ಹೊತ್ತು ಮೆರೆದಾಡುವ ವಚನಾನಂದ ಹಾಗೂ ಕುಂಕುಮ ಬೊಟ್ಟಿನ ಶೃಂಗಾರ ಮಾಡಿಕೊಳ್ಳುವ ಕನ್ನೇರಿ ಸ್ವಾಮಿಗಳಂತಹವರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಅಷ್ಟೆ!
ಕುಂಕುಮ ಹಚ್ಚುವುದರಿಂದ
ಇಷ್ಟಲಿಂಗ ಮಾಯವಾಗುವುದಿಲ್ಲ.!
ಹಿಂದುತ್ವ ಘೋಷಣೆಯಿಂದ
ವಚನಗಳ ಧ್ವನಿ ಮೌನವಾಗುವುದಿಲ್ಲ!
ಲಿಂಗಾಯತ ಧರ್ಮವನ್ನು ಉಳಿಸಿದವರು ಹಾಗೂ ಉಳಿಸಿಕೊಂಡು ಬಂದವರು ಯಡಿಯೂರಪ್ಪ ಕುಟುಂಬ, ಶೆಟ್ರು, ಬೊಮ್ಮಾಯಿ, ಜೊಲ್ಲೆ ಯತ್ನಾಳ ಖಂಡ್ರೆ ಇತ್ಯಾದಿತ್ಯಾದಿ ರಾಜಕೀಯ ಪಕ್ಷಗಳ ಮುಖಂಡರಲ್ಲ… ಮಠಾಧಿಪತಿಗಳಲ್ಲ,..!
ಬಸದ ಧರ್ಮವನ್ನು ಉಳಿಸಿಕೊಂಡು ಕಾಪಾಡಿಕೊಂಡು ಬಂದವರು ವಚನಗಳನ್ನು ಅವುಗಳಲ್ಲಿನ ತತ್ವಗಳನ್ನು ಅಳವಡಿಸಿಕೊಂಡು ಬದುಕುತ್ತಿರುವ ಇಷ್ಟಲಿಂಗಧಾರಿ ಬಡ ಲಿಂಗಾಯತ ಧರ್ಮೀಯರು…! ಜಗತ್ತಿನೆಲ್ಲೆಡೆಯ ಬಸವಾಭಿಮಾನಿಗಳು !!
ಕನ್ನೇರಿ ಶ್ರೀಗಳೇ… ವಿವಿಧ ಪಕ್ಷಗಳ ರಾಜಕೀಯ ಮುಖಂಡರುಗಳೇ … ಇತಿಹಾಸವನ್ನು ಮರುಬರೆಯಬಹುದು ಎಂದು ಯಾರೂ ಭಾವಿಸಬೇಡಿ…! ಬಸವತತ್ವ ಎಂಬುದು ಕೇವಲ ನಿಮ್ಮ ನಿಮ್ಮ ವೈಯಕ್ತಿಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಚುನಾವಣಾ ಘೋಷಣೆಯಲ್ಲ…! ಅದು ಪ್ರಶ್ನಿಸುವ ಧೈರ್ಯ..! ಆ ಧೈರ್ಯವನ್ನು ಕಿತ್ತುಕೊಳ್ಳಲು
ಯಾವ ಕುಂಕುಮಕ್ಕೂ ಶಕ್ತಿ ಇಲ್ಲ. !
ಕನ್ನೇರಿ ಶ್ರೀಗಳು ಹಾಗೂ ಅವರಂತಹ ಹಲವು ವೀರಶೈವ ಲಿಂಗಾಯತ ಧಾರ್ಮಿಕ ಮತ್ತು ರಾಜಕೀಯ ಮುಖಂಡರುಗಳು ಇನ್ನಾದರೂ ಕುಂಕುಮದ ಬದಲಿಗೆ ಢಾಳಾಗಿ ಕಾಣುವಂತೆ ವಿಭೂತಿ ಧಾರಣೆ ಮಾಡಿಕೊಂಡು ಬಸವಾದಿ ಶರಣರ ಲಿಂಗಾಯತ ಧರ್ಮ ಛಾಮರದಡಿ ಒಂದಾಗಿ ಮಾನ್ಯತೆಯ ಗುರಿ ಸಾಧಿಸಲು ಬಸವ ಪಥದಲ್ಲಿ ನಡೆಯಲಿ ! ಲಿಂಗಾಯತರು ಒಂದಾದಲ್ಲಿ ಇಡೀ ವಿಶ್ವವನ್ನೇ ಆಳುವ ಸಾಮರ್ಥ್ಯ ಇರುವವರು ಎಂಬ ರಾಜಕೀಯ ಮುತ್ಸದ್ದಿ ಬ್ರಾಹ್ಮಣರಾದ ಹೆಗಡೆಯವರಾಡಿದ ಮಾತನ್ನು ಜ್ಞಾಪಿಸಿಕೊಳ್ಳಿ!
ನಿಜಗುಣಮೂರ್ತಿ ಕನಕಪುರ (m)8296634992
(ನಿಮ್ಮ ಅಭಿಪ್ರಾಯಗಳನ್ನು ವಾಟ್ಸಪ್ ಮಾಡಿ : 9448863309)

