ಶಿಕ್ಷಣ ಕ್ಷೇತ್ರದ ವ್ಯಾಪಕ ಅಧ್ಯಯನದಿಂದಾಗಿ ಮೂಡಲಗಿ ವಲಯಕ್ಕೆ ಪ್ರಶಸ್ತಿ – ಬಿಇಓ ಮನ್ನಿಕೇರಿ

0
388

ಮೂಡಲಗಿ: ಒಂದು ಕ್ಷೇತ್ರದಲ್ಲಿ ನಿರಂತರ ಹಾಗೂ ವ್ಯಾಪಕವಾಗಿ ಅಧ್ಯಯನಕ್ಕಿಳಿದಾಗ ಮಾತ್ರ ಆ ಕ್ಷೇತ್ರದ ರೂಪುರೇಷೆಗಳು ಕಾಣಸಿಗುತ್ತವೆ. ಇಲಾಖೆಯ ಅಧಿಕಾರಿ ವರ್ಗ ಸಹೋದ್ಯೋಗಿಗಳು ಶಿಕ್ಷಕರು ಪಾಲಕರು ಹಾಗೂ ಚುನಾಯಿತ ಪ್ರತಿನಿಧಿಗಳು ಹಾಗೂ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಸಹಕಾರದಿಂದ ಎರಡನೆಯ ಸಲ ರಾಷ್ಟ್ರ ಮಟ್ಟದ ಶಿಕ್ಷಣ ಪ್ರಶಸ್ತಿ ದೊರಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.

ಅವರು ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಮೂಡಲಗಿ ತಾಲೂಕಿನ ವಿವಿಧ ಶಿಕ್ಷಕರ ಸಂಘಟನೆಯವರು ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮೂಡಲಗಿ ಶೈಕ್ಷಣಿಕ ತಾಲೂಕಿನಲ್ಲಿ ನಿರಂತರವಾಗಿ ಹತ್ತು ಹಲವಾರು ಯಶಸ್ವಿ ಶೈಕ್ಷಣಿಕ ಯೋಜನೆಗಳನ್ನು ಜಾರಿ ಮಾಡಿ ಅನುಪಾಲನೆ ಮಾಡಿರುವ ಫಲ ಈಗ ದೊರೆಯುತ್ತಿದೆ. ಪ್ರಮುಖವಾಗಿ ಸರಕಾರಿ ಶಾಲೆಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಮತ್ತು ಉನ್ನತ ವ್ಯಾಸಂಗದಲ್ಲಿ ಉತ್ಕೃಷ್ಟ ಸಾಧನೆಯ ವಿದ್ಯಾರ್ಥಿಗಳ ಪುರಸ್ಕಾರ, ಶತಮಾನಕಂಡ ಶಾಲೆಗಳ ಪೋಷಣೆ, ತೀವ್ರ ಶಿಕ್ಷಕರ ಕೊರತೆ ನೀಗಿಸುವಲ್ಲಿ ಅತಿಥಿ ಶಿಕ್ಷಕರ ನಿಯೋಜನೆ, ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಯ ಶ್ರೇಷ್ಠ ಫಲಿತಾಂಶ ಪಡೆದವರನ್ನು ಅಭಿನಂದಿಸುವಿಕೆ, ಬಿ.ಆರ್.ಸಿ. ಮತ್ತು ಸಿ.ಆರ್.ಸಿ. ಗಳಂತಹ ಶೈಕ್ಷಣಿಕ ಮೇಲುಸ್ತುವಾರಿ ಸಂಸ್ಥೆಗಳನ್ನು ಸಂಪನ್ಮೂಲ ಕೇಂದ್ರಗಳನ್ನಾಗಿ ಪರಿವರ್ತನೆಗೊಳಿಸಿ ಮಹೋನ್ನತ ಕಾರ್ಯಗಳನ್ನು ಮಾಡಿರುವುದಾಗಿ ಹೇಳಿದರು.

ಪ್ರಮುಖವಾಗಿ ಮೂಲಭೂತ ಸೌಲಭ್ಯಗಳ ಅಭಿವೃದ್ದಿ, ದಾಖಲಾತಿ ಹೆಚ್ಚಳಕ್ಕಾಗಿನ ಮುತುವರ್ಜಿ, ಎನ್.ಎಂ.ಎಂ.ಎಸ್. ಪರೀಕ್ಷೆಗಳ ಆಯೋಜನೆ, ಅಭಿವೃದ್ದಿಯಲ್ಲಿ ಸಮುದಾಯದ ಸಹಭಾಗಿತ್ವ ಹಾಗೂ ಸಮುದಾಯದ ನೆರವಿನಿಂದ ತಂತ್ರಜ್ಞಾನ ಆಧಾರಿತ ಕಲಿಕೆ, ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣದಲ್ಲಿ ಸಮನ್ವಯತೆಯನ್ನು ಸಾಧಿಸಲು ಸಾಧ್ಯವಾಗಿದೆ. ಶೈಕ್ಷಣಿಕ ಕಾರ್ಯಕ್ರಮಗಳ ಆಯೋಜನೆ ಮತ್ತು ಅನುಷ್ಠಾನದಲ್ಲಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಇವರ ಶಿಕ್ಷಣಕ್ಕಾಗಿನ ನಿರಂತರ ಪ್ರೋತ್ಸಾಹ ಸ್ಮರಣಾರ್ಹವಾಗಿದೆ. ಈ ವಲಯವು ಎರಡು ಬಾರಿ ರಾಷ್ಟ್ರಮಟ್ಟದ ಪುರಸ್ಕಾರಕ್ಕೆ ಭಾಜನವಾಗುವಲ್ಲಿ ಶಾಸಕರ ಹಾಗೂ ವಲಯದ ಶಿಕ್ಷಕರ ಶ್ರಮವು ಅವಿರತವಾಗಿದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಗ್ರೇಡ್ 2 ತಹಶೀಲ್ದಾರ ಶಿವಾನಂದ ಬಬಲಿ ಮಾತನಾಡಿ, ಮೂಡಲಗಿ ಶೈಕ್ಷಣಿಕ ವಲಯವು ರಾಷ್ಟ್ರವ್ಯಾಪ್ತಿಯಲ್ಲಿ ಮಿಂಚಲು ಕಾರಣಿಕರ್ತರಾದ ಅಜಿತ ಮನ್ನಿಕೇರಿ ಹಾಗೂ ಅವರ ತಂಡ ಯಶಸ್ವಿಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಎಡ್ವಿನ್ ಪರಸನ್ನವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಸಂಘಟನೆಯ ಜಿಲ್ಲಾಧ್ಯಕ್ಷ ಸಿದ್ರಾಮ ಲೋಕನ್ನವರ, ಮಾಲತೇಶ ಸಣ್ಣಕ್ಕಿ, ಮಲ್ಲಪ್ಪ ಮಾವಿನಗಿಡದ, ಕಲ್ಲಪ್ಪ ಅಜ್ಜಪ್ಪನವರ, ಬಸವರಾಜ ಕಿವಟಿ, ಪರುಶರಾಮ ಕುಲಕರ್ಣಿ ಮಾತನಾಡಿ ಶೈಕ್ಷಣಿಕವಾಗಿ ಮೂಡಲಗಿ ವಲಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳು ಮಹತ್ವದ ಹೆಜ್ಜೆಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಅನಿಲ ಮುತ್ನಾಳ, ಪಿಡಿಒ ರಂಗಪ್ಪ ಗುಜನಟ್ಟಿ, ಇಸಿಒಗಳಾದ ಟಿ ಕರಿಬಸವರಾಜು, ಸತೀಶ ಬಿ.ಎಸ್, ರೇವಪ್ಪ ಯರಗಟ್ಟಿ ಶಿಕ್ಷಕರ ಸಂಘಟನೆಯ ಲಕ್ಷ್ಮಣ ಬಡಕಲ, ಆನಂದ ಹಂಜ್ಯಾಗೋಳ, ಶ್ರೀಕಾಂತ ಹಂಚಿನಾಳ, ರವೀಂದ್ರ ಹೊಸಟ್ಟಿ, ಸುಭಾಸ ಬಾಗೋಜಿ, ಚೇತನ ಕುರಿಹುಲಿ, ಸುರೇಶ ತಳವಾರ, ಗೋವಿಂದ ಸಣ್ಣಕ್ಕಿ, ಅಲ್ಲಪ್ಪ ನಾಯಕ,  ಬುಡನಸಾಬ ಡಾಂಗೆ,  ಯಲ್ಲಪ್ಪ ಝಲ್ಲಿ, ನಿರ್ವಾಣಿ ಹೆಬ್ಬಳ್ಳಿ, ರಾಮಪ್ಪ ಕಟಗಾವಲಿ, ಸದಾಶಿವ ಸವದತ್ತಿ, ಕಲ್ಲಪ್ಪ ಮೀಶಿ, ಶಿವಾನಂದ ಕುರಣಗಿ, ಶಿವನಗೌಡ ಪಾಟೀಲ, ಸುರೇಶ ಸವದತ್ತಿ, ಬಸವರಾಜ ಮುಗಳಿ ಹಾಗೂ ತಾಲೂಕಿನ ವಿವಿಧ ಸಂಘಟನೆಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.