ವಿಶೇಷತೆಗಳಿಂದ ಗಮನ ಸೆಳೆದ ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

0
311

ಬೈಲಹೊಂಗಲ: ತಾಲೂಕಿನ ದೇವಲಾಪೂರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬೈಲಹೊಂಗಲ ತಾಲೂಕು ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿದ್ದು ಹಲವು ವಿಶೇಷತೆಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಬೆಳಿಗ್ಗೆಯಿಂದ ತಡರಾತ್ರಿಯವರೆಗೂ‌ ಕರಗದ ಜನಸ್ತೋಮ ಇಡೀ ದಿನ ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದು ಒಂದು ಐತಿಹಾಸಿಕ ದಾಖಲೆ.

ಆಕರ್ಷಕ ಮೆರವಣಿಗೆ: ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಸರ್ವಾಧ್ಯಕ್ಷರ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಸಹಸ್ರಾರು ಜನ ಹುರುಪಿನಿಂದ ಪಾಲ್ಗೊಂಡು ಸಂಭ್ರಮಿಸಿದರು. ರಥದ ಮುಂದೆ ಜಗ್ಗಲಗಿ ಮೇಳ, ಶಾಲಾ ವಿದ್ಯಾರ್ಥಿಗಳ ಲೇಜಿಂ‌ ಮತ್ತು ಕೋಲಾಟ, ಕರಡಿ ಮಜಲು, ಹಲಗೆ, ಕಹಳೆ, ಮಹಿಳಾ ಡೊಳ್ಳು ವಾದ್ಯಗಳ ಭರಾಟೆ ಜೋರಾಗಿತ್ತು. ಸಿಂಗರಿಸಿದ ಟ್ರಾಕ್ಟರ್, ಚಕ್ಕಡಿಗಳಲ್ಲಿ ಹಲವಾರು ರೂಪಕಗಳು ಜನಮನ ಸೆಳೆದವು. ಗ್ರಂಥಗಳ ಮೆರವಣಿಗೆ ವಿಶೇಷವಾಗಿತ್ತು. ಮಾರ್ಗದ ತುಂಬ ಬಣ್ಣಬಣ್ಣದ ರಂಗೋಲಿ, ಕನ್ನಡ ಧ್ವಜ, ಬ್ಯಾನರ್ ರಾರಾಜಿಸಿದರೆ  ಹಳದಿ ಕೆಂಪು ಪೇಟಾಗಳು ಮೆರವಣಿಗೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿದವು.

ಸಾಂಸ್ಕೃತಿಕ ಕಾರ್ಯಕ್ರಮಗಳು: ವಿವಿಧ ಬಗೆಯ ಸುಮಾರು 25 ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು. ತಡರಾತ್ರಿಯಾದರೂ ವೇದಿಕೆ ಕಿಕ್ಕಿರಿದು ತುಂಬಿದ್ದು ವಿಶೇಷವಾಗಿತ್ತು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಕಲಾವಿದರ ಜಾನಪದ ನೃತ್ಯ, ಭರತನಾಟ್ಯ, ಸಾಂಪ್ರದಾಯಿಕ ನೃತ್ಯ, ಕನ್ನಡಾಭಿಮಾನ ಬಿಂಬಿಸುವ  ಹಾಡುಗಳು ಎಲ್ಲರ ಮೆಚ್ಚಿಗೆಗೆ ಪಾತ್ರವಾದವು.

ಸಮುದಾಯ ಆಧಾರಿತ ತಪಾಸಣೆ ಶಿಬಿರ ಹಾಗೂ ರಕ್ತದಾನ‌ ಶಿಬಿರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಬೆಳಗಾವಿ, ತಾಲೂಕಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಸಾರ್ವಜನಿಕ ಆಸ್ಪತ್ರೆ ಬೈಲಹೊಂಗಲ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಆಧಾರಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಹೆಚ್.ಐ.ವಿ ಹರಡುವ ವಿಧಾನ, ತಪ್ಪು ಕಲ್ಪನೆಗಳು, ತಡೆಗಟ್ಟುವ ವಿಧಾನ, ಚಿಕಿತ್ಸಾ ವಿಧಾನಗಳು, ಮಧುಮೇಹ, ರಕ್ತದ ಒತ್ತಡ ಕುರಿತು ಎನ್.ಸಿ.ಡಿ ಸಿಬ್ಬಂದಿ ಜನರಿಗೆ ಮಾಹಿತಿ ನೀಡಿದರು. ಹೆಚ್.ಐ.ವಿ, ಶುಗರ್, ರಕ್ತದೊತ್ತಡ ಪರೀಕ್ಷಿಸಲಾಯಿತು. ಐ.ಇ.ಸಿ.  ವಸ್ತುಗಳನ್ನು ವಿತರಿಸಿ ಆರೋಗ್ಯ ಶಿಕ್ಷಣವನ್ನು ಸಾರ್ವಜನಿಕರಿಗೆ ನೀಡಲಾಯಿತು.

ಭೂರಿ ಭೋಜನ ವ್ಯವಸ್ಥೆ: ಗೋದಿ ಹುಗ್ಗಿ, ಹೋಳಿಗೆ, ರೊಟ್ಟಿ, ಮಜ್ಜಿಗೆ ಒಳಗೊಂಡಂತೆ ವಿವಿಧ ಭಕ್ಷ್ಯಗಳು ಜನರ ಹಸಿವು ತಣಿಸಿದವು. ಅಡುಗೆ ತಯಾರಿಕೆ ಹಾಗೂ ವಿತರಣೆ ವ್ಯವಸ್ಥಿತವಾಗಿತ್ತು. ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. 

ಇವುಗಳಲ್ಲದೆ ಸೆಲ್ಫಿ ಕಾರ್ನರ್, ಪ್ರದರ್ಶನ ಮಳಿಗೆಗಳಲ್ಲಿ ಜನಜಂಗುಳಿ ಮನೆಮಾಡಿತ್ತು. ಕವಿಗೋಷ್ಠಿ ಹಾಗೂ ವಿಚಾರ ಗೋಷ್ಠಿಗಳಲ್ಲಿ ಜನರ ಆಸಕ್ತಿಯನ್ನು ಕೇಂದ್ರೀಕರಿಸಿದ್ದವು. ಹಲವು ಸಾಧಕರಿಗೆ ಸನ್ಮಾನ ಮಾಡಲಾಯಿತು. ಸುಸಜ್ಜಿತ ಪ್ರಧಾನ ವೇದಿಕೆ, ಪಾರ್ಕಿಂಗ್ ವ್ಯವಸ್ಥೆ ಉತ್ತಮವಾಗಿದ್ದು ಸ್ವಚ್ಚತೆಯ ನಿರ್ವಹಣೆಗೆ ಸ್ವಯಂ ಸೇವಕರ ನಿಯೋಜನೆ ಮಾಡಲಾಗಿತ್ತು. ಸ್ಕೌಟ್ ಮತ್ತು ಗೈಡ್ಸ್ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು ಭಾಗಿಯಾಗಿದ್ದವು. ಸಾಂಪ್ರದಾಯಿಕ ಉಡುಗೆ ಹಾಗೂ ವಿಶಿಷ್ಟ ಸಮವಸ್ತ್ರಗಳಲ್ಲಿ ಆಪ್ತ ವಲಯ ಮಿಂಚುತ್ತಿತ್ತು. ಗ್ರಾಮ ಸಂಪೂರ್ಣ ಕನ್ನಡಮಯವಾಗಿದ್ದು ಎಲ್ಲೆಡೆ ಸಂಭ್ರಮ ಎದ್ದು ಕಾಣುತ್ತಿತ್ತು.