spot_img
spot_img

ಕರ್ನಾಟಕ ಹರಿದಾಸ ಸಾಹಿತ್ಯದ ಪ್ರಚಾರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಆದರ್ಶ ಮಹಿಳೆ ಡಾ. ಶಾಂತಾಬಾಯಿ ಜಿ ವಿ. ಅವರ ಪರಿಚಯ ಮತ್ತು ಕೃತಿಗಳ ಒಳನೋಟ

Must Read

- Advertisement -

ಡಾ. ಶ್ರೀಮತಿ ಶಾಂತಾಬಾಯಿ ಜಿ ವಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತ್ತಕೋತ್ತರ ತತ್ಸಮ ಹಿಂದಿ ಭಾಷೆಯಲ್ಲಿ ಪ್ರವೀಣ ಪದವಿಯನ್ನು ಪಡೆದು ಹತ್ತು ವರ್ಷಗಳ ಕಾಲ ಹಿಂದೀ ಭಾಷಾ ಪ್ರಚಾರಕರಾಗಿ ಸೇವೆಯನ್ನು ಸಲ್ಲಿಸಿ, ವಿದ್ಯಾರ್ಥಿಗಳಿಗೆ ಅವರು ಬಹಳ ಅಚ್ಚುಮೆಚ್ಚಾದರು.

1969 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದ ಸಮಯದಲ್ಲಿ ನಡೆದ ಲೇಖನ ಸ್ಪರ್ಧೆಯಲ್ಲಿ ಸಾಹಿತ್ಯ ಜೀವನದ ಸಂಜೀವಿನಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

- Advertisement -

ಉತ್ತರ ಭಾರತದ ಆಗ್ರಾ ವಿಶ್ವವಿದ್ಯಾಲಯದವರು ಆಯೋಜಿಸಿದ ‘ತುಲನಾತ್ಮಕ ಅಧ್ಯಯನಗಳು’ ಲಿಖಿತ ಸುದೀರ್ಘ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಂಸೆಗೆ ಪಾತ್ರರಾಗಿರುತ್ತಾರೆ. ಅವರು ಆರಿಸಿಕೊಂಡ ವಿಷಯ ‘ಸರ್ ವಿಲಿಯಂ ವರ್ಡ್ಸ್ ವರ್ತ್, ಶ್ರೀ ಸುಮಿತ್ರಾನಂದನ ಪಂತ್ ಮತ್ತು ಕೆ ವಿ ಪುಟ್ಟಪ್ಪನವರ ಕೃತಿಗಳ ತುಲನಾತ್ಮಕ ಅಧ್ಯಯನ’,  ಕ್ರಮವಾಗಿ ಇಂಗ್ಲೀಷ್, ಹಿಂದಿ ಮತ್ತು ಕನ್ನಡ ಭಾಷೆಗಳ ಪ್ರಖ್ಯಾತ ಸಾಹಿತಿಗಳ ಕೃತಿಗಳನ್ನೇ ಆರಿಸಿಕೊಂಡು ಹತ್ತು ಸಾವಿರ ಪದಗಳ ಸುದೀರ್ಘ ಲೇಖನವನ್ನು ಪ್ರಸ್ತುತಪಡಿಸಿರುತ್ತಾರೆ. ಪದವಿಯ ವ್ಯಾಸಂಗದಲ್ಲಿ ಕ್ರೀಡೆ, ಆಟ, ರಂಗೋಲಿ ಸ್ಪರ್ಧೆ, ಚಿತ್ರ ಕಲೆ, ಮತ್ತು ಸಾಹಿತ್ಯ ಹೀಗೆ  ವಿವಿಧ ಸ್ಪರ್ಧೆಗಳಲ್ಲಿ ಸುಮಾರು ಐವತ್ತು ಪಾರಿತೋಷಕಗಳನ್ನು ಪಡೆದಿದ್ದಾರೆ. 

ಅವರು ವಿಶೇಷವಾಗಿ ಬಹುಮುಖ ಪ್ರತಿಭೆಯುಳ್ಳ ಲೇಖಕರೂ ಹೌದು. ಪ್ರಕೃತಿಯ ಸೊಬಗನ್ನು ಬಣ್ಣಿಸುವಲ್ಲಿ ಬಹಳ ನಿಷ್ಣಾತರು. ಅವರ ಕೃತಿಗಳು ವೈವಿಧ್ಯತೆಯುಳ್ಳದ್ದಾಗಿವೆ. ಅವರು ಅನೇಕ ಹರಿದಾಸ ಸಾಹಿತ್ಯ ಸಂಘಟನೆಗಳೊಡನೆ ನಿರಂತರ ಸಂಪರ್ಕದಲ್ಲಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದಲೂ ತಮ್ಮ ಸಂಘದ ಸದಸ್ಯರ ಸಹಯೋಗದಿಂದ ಬೆಂಗಳೂರು ನಗರದಲ್ಲಿ ಶ್ರೀಪುರಂದರದಾಸರ ಸಂಸ್ಮರಣೋತ್ಸವವನ್ನು ಬಹು ವಿಶೇಷವಾಗಿ ಮಾಡಿಕೊಂಡು ಬರುತ್ತಲಿದ್ದಾರೆ. ಬೆಂಗಳೂರು ಜಿಲ್ಲೆಯ ನೂರಾರು ಭಜನಾತಂಡಗಳು ಭಾಗವಹಿಸುತ್ತವೆಯೆಂದರೆ ಅದರ ಜನಪ್ರಿಯತೆಯೆನ್ನು ಊಹಿಸಿಕೊಳ್ಳಬಹುದು.

- Advertisement -

ಉತ್ಸವದ ಅಂಗವಾಗಿ ನಡೆಯುವ ಪುರಂದರದಾಸರ ಪದಗಳ ಅಂತ್ಯಾಕ್ಷರಿ ಸ್ಪರ್ಧೆ ಒಂದು ಕಳಸ ಪ್ರಾಯವಾಗಿರುತ್ತದೆ. ಅನೇಕ ಲಿಖಿತ ಸ್ಪರ್ಧೆಗಳು, ರೂಪಕಗಳು, ಭಜನಾ ಮಂಡಲಿಗಳಿಂದ ಸಾಮೂಹಿಕ ಭಜನೆ, ಕಿರು ನಾಟಕಗಳು ಇತ್ಯಾದಿಗಳ ಸಂಗಮವಾಗಿರುವ  ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಜಾತ್ರೆಯೇ ಇದಾಗಿರುತ್ತದೆ. ಹೀಗೆ ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹವನ್ನು ಕೊಡುತ್ತ ಬಂದಿರುವ ಶ್ರೀಮತಿ ಶಾಂತಾಬಾಯಿಯವರೂ ಹಾಗೂ ಅವರ ಲಕ್ಷ್ಮೀಕಾಂತ ಭಜನಾ ಮಂಡಲಿಯ ಸದಸ್ಯರೂ ಅಭಿನಂದನಾರ್ಹರೇ. 

ಲಕ್ಷ್ಮೀಕಾಂತ ಭಜನಾ ಮಂಡಲಿಯ ಅಧ್ಯಕ್ಷರಾಗಿ ಅವರು ಮೊದಲಿನಿಂದಲೂ ದಾಸ ಸಾಹಿತ್ಯ ಪ್ರೊಜೆಕ್ಟ್ ತಿರುಮಲಾ ಹಾಗೂ ಶ್ರೀಗುರುಸಾರ್ವಭೌಮ ಪ್ರೊಜೆಕ್ಟ್ ಮಂತ್ರಾಲಯದೊಂದಿಗೆ ಗುರುತಿಸಿಕೊಂಡಿದ್ದಾರೆ. ತಿರುಪತಿಯ ಮೆಟ್ಟಿಲೋತ್ಸವದ ಸಂದರ್ಭದಲ್ಲಿ ಈ ಮೊದಲು ನಡೆಯುತ್ತಿರುವ ರಸಪ್ರಶ್ನೆ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದು ತಮ್ಮ ಸಂಘಕ್ಕೆ ಅನೇಕ ಬಾರೆ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಬೆಂಗಳೂರು ನಗರಿಯಲ್ಲಿ ಒಂದು ಮಾದರಿಯ ಭಜನಾ ಮಂಡಳಿ ಎಂಬ ಹೆಮ್ಮೆ ಇದಕ್ಕಿದೆ. ತಮ್ಮ ಸಾಧನೆಗೆ ಕಾರಣವು ಎಲ್ಲ ರೀತಿಯಲ್ಲಿ ಸಹಕಾರವನ್ನು ನೀಡಿದ ತಮ್ಮ ಪತಿಯವರು  ಮತ್ತು ತಮ್ಮ ಕುಟುಂಬದ ಎಲ್ಲ ಸದಸ್ಯರು ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಅವರ ನಿಸ್ವಾರ್ಥ ಸೇವೆಯನ್ನು ಸಮಾಜವೂ ಗುರುತಿಸಿ ಅವರನ್ನು ಅಭಿನಂದಿಸಿದೆ.

  • ಶ್ರೀಹರಿದಾಸ ಸಂಘವು ಹರಿದಾಸ ಸಾಹಿತ್ಯ ಪ್ರಚಾರ ಕ್ಕಾಗಿ ತಮ್ಮ 2010 ರ ಪ್ರಶಸ್ತಿಯನ್ನು ನೀಡಿರುತ್ತದೆ.
  • ಶ್ರೀ ಪುತ್ತಿಗೆ ಮಠದ ‘ನಾದಾನುಗ್ರಹ ಪ್ರಶಸ್ತಿ’ 2011 ರಲ್ಲಿ
  • ಪರ್ಯಾಯ ಸೋದೆ ಮಠದಿಂದ ಪ್ರಶಂಸಾ ಪತ್ರ – 2012 ರಲ್ಲಿ
  • ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯದ ‘ದಾಸಾನುದಾಸ ಪ್ರಶಸ್ತಿ’ 2014 ರಲ್ಲಿ
  • ಶ್ರೀನಿವಾಸ ಉತ್ಸವ ಬಳಗದ ‘ಶ್ರೀನಿವಾಸಾನುಗ್ರಹ ಪ್ರಶಸ್ತಿ’  2016 ರಲ್ಲಿ
  • ಹರಿದಾಸ ಸಾಹಿತ್ಯದಲ್ಲಿನ ಸೇವೆಗೆ ಗೌ. ಡಾಕ್ಟರೇಟ್ – 2018  ರಲ್ಲಿ.

 ಡಾ. ಶಾಂತಾಬಾಯಿಯವರ ಕೃತಿಗಳು.

ಮೊದಲ ಕೃತಿ ‘ಹರಿದಾಸರ ಸಾಲುದೀಪಗಳು’. ನೂರಕ್ಕೂ ಹೆಚ್ಚು ಪ್ರಸಿದ್ಧ ಹರಿದಾಸರ ವಿಷಯವನ್ನು ತಿಳಿಸುವ ಕೈಪಿಡಿ ಇದು ಎಂದು ಹೇಳಬಹುದು. ಹರಿದಾಸರುಗಳಿಗೆ ಸೇರಿದ ಅನೇಕ ವಿಷಯಗಳನ್ನು ಚೊಕ್ಕದಾಗಿ ಸಂಗ್ರಹದಲ್ಲಿ  ವಿವರಿಸುತ್ತಾ ಸಾಗಿರುವುದನ್ನು ಕಾಣಬಹುದು. ಹರಿದಾಸ ಸಾಹಿತ್ಯದ ಅಧ್ಯಯನವನ್ನು ಮಾಡುವವರಿಗೆ ಇದು ಬಹಳ ಸೂಕ್ತವಾದ ಹೊತ್ತಿಗೆಯು. ಅವಶ್ಯವಾಗಿ ಪ್ರತಿಯೊಬ್ಬರು ಸಂಗ್ರಹಿಸಲು ಯೋಗ್ಯವಾದ ಪುಸ್ತಕವಿದು.

ಎರಡನೆಯ ಕೃತಿಯು ‘ದೇವಗಿರಿಯಿಂದ ಹಿಮಗಿರಿಗೆ’ .   ಡಾ. ಶಾಂತಾಬಾಯಿಯವರು ತಮ್ಮ ಸಂಘದ ಬಂಧುಗಳೊಡನೆ ಸಮಯ ಸಿಕ್ಕಾಗಲೆಲ್ಲಾ ಪುಣ್ಯಕ್ಷೇತ್ರಗಳ ಯಾತ್ರೆಯನ್ನು ಮಾಡುವ ಪರಿಪಾಠವನ್ನಿಟ್ಟುಕೊಂಡಿರುತ್ತಾರೆ.

ಅವರು ಮಾಡಿದ ಉತ್ತರ ಭಾರತದ ಯಾತ್ರೆಯನ್ನು ಬಹು ವಿಶೇಷವಾಗಿ ಆ ಹೊತ್ತಿಗೆಯಲ್ಲಿ ವರ್ಣಿಸಿದ್ದಾರೆ. ಅದನ್ನು ಓದುತ್ತಾ ಸಾಗಿದರೆ ನಾವೂ ಅವರೊಡನೆ ಯಾತ್ರೆಯಲ್ಲಿಯೇ ಇದ್ದೇವೆ ಎನ್ನುವ ಭಾವ ಬಂದು ಬಿಡುತ್ತದೆ. ಓದುಗರನ್ನು ಮೋಡಿ ಮಾಡುವ ಶಕ್ತಿ ಅವರ ಲೇಖನದಲ್ಲಿದೆ. 

ಮೂರನೆಯ ಕೃತಿ ‘ಜೀವ ಕರ್ತೃತ್ವ’ – ಇದು ಒಂದು  ಹರಿದಾಸ ಸಾಹಿತ್ಯದಲ್ಲಿನ ಪ್ರಮೇಯ ವಿಷಯಗಳನ್ನು ಸಂಗ್ರಹಿಸಿರುವ ಗ್ರಂಥವು. ಎಲ್ಲ    ಜೀವಿಗಳು ಈಶನ ದಾಸರು ಎಂಬುದು ದಾಸ ಸಾಹಿತ್ಯದ ಮುಖ್ಯವಾದ ನುಡಿಗಳಲ್ಲಿ ಒಂದಾಗಿದೆ.

ಈ ವಿಷಯವು ಗಹನವಾದ ಪ್ರಮೇಯಗಳನ್ನು ಒಳಗೊಂಡಿರುವುದರಿಂದ ಸಾಮಾನ್ಯರಿಗೆ ಸ್ವಲ್ಪ ಕ್ಲಿಷ್ಟವಾದ ವಿಷಯವಾಗಿರುತ್ತದೆ. ತಮ್ಮ ಲೇಖನದ ಕೌಶಲ್ಯದಿಂದ ಸಾಧ್ಯವಾದಷ್ಟು ಪ್ರಮೇಯಗಳನ್ನು ಸರಳೀಕರಿಸಿ ಎಲ್ಲರೂ ತಿಳಿದುಕೊಳ್ಳುವಂತೆ ಮಾಡಲು ಬಹಳ ಪ್ರಯತ್ನ ಮಾಡಿದ್ದಾರೆ.

ನಾಲ್ಕನೆಯ ಕೃತಿ ‘ಅಮೇರಿಕಾದಲ್ಲಿ ಒಂದು ಆಯನ’ ಇದು ತಮ್ಮ ಅಮೇರಿಕಾ ಪ್ರವಾಸವನ್ನು ತಿಳಿಸುವ ಕೃತಿಯಾಗಿರುತ್ತದೆ. ಇದನ್ನು ಓದುತ್ತಾ ಸಾಗಿದರೆ ನಾವೂ ಅವರೊಡನೆ ಸಂಪೂರ್ಣವಾಗಿ ಅಮೇರಿಕಾದ ಪ್ರವಾಸವನ್ನು ಮಾಡಿದಂತೆಯೇ ಭಾಸವಾಗುತ್ತದೆ. ಅಲ್ಲಿನ ಪ್ರಕೃತಿಯ ವಿವರಣೆಯು ನಮ್ಮ ಮನಸ್ಸೂರೆಗೊಳ್ಳುತ್ತದೆ. ಅಮೇರಿಕೆಯ ಪ್ರವಾಸಕ್ಕೆ ಹೋಗುವವರು ಅದನ್ನು ಒಮ್ಮೆಯಾದರೂ ಓದಲೇಬೇಕು.  ಈ ಪುಸ್ತಕದ ಶೀರ್ಷಿಕೆಯನ್ನೂ ಕೂಡ  ಸೂಚಿಸುವ ಭಾಗ್ಯವೂ ನನ್ನ ಪಾಲಿಗೇ ಬಂದಿದ್ದು ನನ್ನ ಸೌಭಾಗ್ಯವೇ ಸರಿ. ಅಂತಹ ಹಿರಿಯ ಲೇಖಕರು ನಾನು ಸೂಚಿಸಿದ ಶೀರ್ಷಿಕೆಯನ್ನು ಒಪ್ಪಿಕೊಂಡು ನನ್ನನ್ನು ಮನಸಾರೆ ಹೊಗಳಿದ್ದನ್ನು ನಾನು ಇನ್ನೂ ಮರೆತಿಲ್ಲ.  

ಐದನೆಯ ಕೃತಿ ‘ಹರಿದಾಸರ ದೃಷ್ಟಿಯಲ್ಲಿ ಸೃಷ್ಟಿ’ ಇದೂ ಕೂಡ ಬಹಳ ಕ್ಲಿಷ್ಟಕರವಾದ ವಿಷಯಗಳನ್ನು, ಪ್ರಮೇಯಗಳನ್ನು ಚರ್ಚಿಸುತ್ತಾ ಸಾಗುವ ಹೊತ್ತಿಗೆಯಾಗಿರುತ್ತದೆ. ಶ್ರೀ ವಿಜಯದಾಸರ ಸೃಷ್ಟಿ ಪ್ರಕರಣ ಸುಳಾದಿಗಳು, ಶ್ರೀ ವಾದಿರಾಜರ ಭೂಗೋಲ ವರ್ಣನೆ , ಭಾಗವತ, ಅನೇಕ ಹರಿದಾಸರುಗಳ ವಾಣಿಗಳು, ಇತ್ಯಾದಿಗಳ ಆಧಾರದಲ್ಲಿ ಸುಂದರವಾಗಿ ಸಾಗುತ್ತಿರುವ ಈ ಪುಸ್ತಕವನ್ನು ಆಸಕ್ತರೆಲ್ಲರೂ ಓದಲೇಬೇಕು. 

ಆರನೆಯ ಕೃತಿ ‘ಶ್ರೀಮದ್ ಭಾಗವತ’ – ಭಾಗವತವು ಒಂದು ಬೃಹತ್ ಗ್ರಂಥವು. ಅದನ್ನು ಸಂಗ್ರಹದಲ್ಲಿ ಹಿಡಿದಿಟ್ಟಿರುವ ಈ ಕೃತಿಯು ನಿಜವಾಗಿಯೂ ಜನಸಾಮಾನ್ಯರಿಗೆ ಉಪಯುಕ್ತವಾದ ಕೃತಿಯೆನಿಸಿದೆ. ಭಾಗವತದ ತಿರುಳನ್ನು ನಾವು ಸ್ವಲ್ಪ ಸಮಯದಲ್ಲಿಯೇ ತಿಳಿದುಕೊಳ್ಳಲು ಸಹಾಯಕವೆನಿಸುತ್ತದೆ. 

ಏಳನೆಯ ಕೃತಿ ‘ಲಕ್ಷ್ಮೀಶೋಭಾನ ಪದ’-  ಹರಿದಾಸ ಸಾಹಿತ್ಯದಲ್ಲಿ ಪ್ರಸಿದ್ಧವಾದ ಅಗ್ರ ಸ್ಥಾನದ ಕೃತಿಗಳಲ್ಲಿ ಇದೂ ಒಂದಾಗಿದೆ. ಶ್ರೀವಾದಿರಾಜರಿಂದ ರಚಿತವಾದ  ಸಾಂಗತ್ಯದ ಈ ಕೃತಿಯನ್ನು ಹೇಳದವರಿಲ್ಲ. ಒಂದುನೂರಾ ಎಂಟು ನುಡಿಗಳನ್ನು ಹೊಂದಿರುವ ಈ ಪದವು ಅನೇಕರಿಂದ ಈಗಲೂ ಕಂಠಸ್ಥವಾಗಿರುತ್ತದೆ. ಮದುವೆಯ ಮನೆಯಲ್ಲಿ ಲಕ್ಷ್ಮೀಶೋಭಾನ ಪದವನ್ನು ಸುಶ್ರಾವ್ಯವಾಗಿ ಹೇಳುವ ಪರಿಪಾಠವು ಈಗಲೂ ಇದೆ. ಇದು ಒಂದು ಪದವಾಗಿದ್ದರೂ ಅನೇಕ ಪ್ರಮೇಯಗಳನ್ನು ಒಳಗೊಂಡಿರುವ ಗ್ರಂಥವೂ ಹೌದು. ಅವೆಲ್ಲವನ್ನೂ ಈ ಹೊತ್ತಿಗೆಯಲ್ಲಿ ವಿವರಿಸಲಾಗಿದೆ. 

ಎಂಟನೆಯ ಕೃತಿಯು ‘ಶ್ರೀವಾಯು ಜೀವೋತ್ತಮರು’ – ಹರಿ ಸರ್ವೋತ್ತಮ , ವಾಯು ಜೀವೋತ್ತಮ ಎಂಬ ಈ ಎರಡು ವಾಕ್ಯಗಳು ಹರಿದಾಸ ಸಾಹಿತ್ಯದ ಅಡಿಪಾಯವೆಂದೇ ಹೇಳಬಹುದು. ಪರಮಾತ್ಮ ಮತ್ತು ಪ್ರಕೃತಿಗೆ ಅಭಿಮಾನಿನಿಯಾದ ಲಕ್ಷ್ಮೀದೇವಿಯವರನ್ನು ಬಿಟ್ಟರೆ ನಂತರದಲ್ಲಿ ಅನಂತ ಜೀವರಾಶಿಗಳನ್ನು ಹರಿದಾಸ ಸಾಹಿತ್ಯವು ಒಪ್ಪುತ್ತದೆ.

ಹರಿದಾಸ ಸಾಹಿತ್ಯವು ಆಚಾರ್ಯ ಶ್ರೀ ಮಧ್ವರ ತತ್ವವಾದದ ಕನ್ನಡದ ಅನುವಾದವೆನಿಸುತ್ತದೆ. ಅನಂತ ಜೀವಿಗಳನ್ನು ಅವುಗಳ ಬಲದ ಅನುಸಾರವಾಗಿ ಕಕ್ಷಗಳಲ್ಲಿ ವಿಂಗಡನೆ ಮಾದಲಾಗಿದೆ. ಮೊದಲನೆಯ ಕಕ್ಷವು ಶ್ರೀಹರಿಗೆ ಮೀಸಲಾದರೆ ಎರಡನೆಯ ಕಕ್ಷವು ಪ್ರಕೃತಿಗೆ ಅಭಿಮಾನಿನಿಯಾದ ಲಕ್ಷ್ಮೀದೇವಿಯವರದಾಗಿದೆ. ಇನ್ನು ಮೂರನೆಯದರಿಂದ ಮೂವತ್ತೆರಡನೆಯ ಕಕ್ಷಗಳಲ್ಲಿ ಇನ್ನುಳಿದ ಅನಂತ ಜೀವರಾಶಿಗಳನ್ನು ವಿಂಗಡಿಸಲಾಗಿದೆ.

ಅದರಲ್ಲಿ ಬರುವ ಮೊದಲನೆಯ ಸ್ಥಾನವೇ ಋಜುಗಣಗಳದ್ದು. ಈ ಋಜುಗಣವು ಮೂರನೆಯ ಸ್ಥಾನವನ್ನು ಅಲಂಕರಿಸಿವೆ. ಹೀಗಾಗಿ ಅವು ಇನ್ನುಳಿದ ನಾಲ್ಕರಿಂದ ಮೂವತ್ತೆರಡನೆಯ ಕಕ್ಷದ ವರೆಗಿನ ಎಲ್ಲ ಜೀವಿಗಳಿಗಿಂತಲೂ ಉತ್ತಮರು. ನೂರು ಸಂಖ್ಯೆಯಲ್ಲಿ ಋಜುಗಳು ಬ್ರಹ್ಮಾಂಡದಲ್ಲಿ ಇರುತ್ತಾರೆ ಅವರಲ್ಲಿ ಒಬ್ಬರಾದ  ವಾಯುದೇವರು ತೊಂಬತ್ತರೊಂಭತ್ತನೆಯವರು ಮತ್ತು ಬ್ರಹ್ಮದೇವರು ನೂರನೆಯವರು ಎಂದು ಹೇಳಲಾಗುತ್ತದೆ. ವಾಯುದೇವರೇ ಈಗ ಸೃಷ್ಟಿಯಲ್ಲಿರುವ  ಅನಂತ ಜೀವಿಗಳಲ್ಲಿದ್ದು ಶ್ವಾಸ ಜಪವನ್ನು ಮಾಡುತ್ತಾರೆ. ಈ ರೀತಿಯಲ್ಲಿ ಆ ಜೀವಿಗಳೆಲ್ಲರೂ ಬದುಕಲು ಆಧಾರರಾಗಿದ್ದಾರೆ. ಹೀಗೆ ಅನೇಕ ಪ್ರಮೇಯಗಳನ್ನು ಈ ಹೊತ್ತಿಗೆಯಲ್ಲಿ ಚರ್ಚಿಸಲಾಗಿದೆ. 

ಅವರ ಒಂಭತ್ತನೆಯ ಸಾಹಸವು ಒಂದು ಬೃಹತ್ ಕೃತಿಗಳ ಸಂಪುಟವೇ ಆಗಿರುತ್ತದೆ. ಅದೇ ಜಗತ್ ಪ್ರಸಿದ್ಧವಾದ ಹರಿದಾಸ ಸಾಹಿತ್ಯದ ಮೇರುಕೃತಿಯೆನಿಸಿದ  ‘ಶ್ರೀ ಹರಿಕಥಾಮೃತಸಾರ’ ಗ್ರಂಥದ ಸಾರವನ್ನು ಸಾಮಾನ್ಯರಿಗೂ ತಿಳಿಸುವ ಅನೇಕ ಸಂಪುಟಗಳ ಲೋಕಾರ್ಪಣೆಯು.   ಶ್ರೀಜಗನ್ನಾಥದಾಸರ ಕೃತಿಯಾದ ಹರಿಕಥಾಮೃತಸಾರವನ್ನು ಕೇಳದವರೇ ಇಲ್ಲವೆನ್ನಬಹುದು.

ದಾಸಸಾಹಿತ್ಯವನ್ನೂ ಕನ್ನಡ ಸಾಹಿತ್ಯವನ್ನೂ ಶ್ರೀಮಂತಗೊಳಿಸಿರುವ ಕೃತಿಯಿದು. ಮೂವತ್ತೆರಡು ಸಂಧಿಗಳನ್ನು ಒಳಗೊಂಡಿರುವ ಈ ಕೃತಿಗೆ ಡಾ. ಶಾಂತಾಬಾಯಿಯವರು ಸಂಧಿಗೆ ಒಂದೊಂದು ಪುಸ್ತಕವನ್ನು ಸಂಪಾದಿಸಿದ್ದಾರೆ. ಇದುವರೆಗೆ 23 ಸಂಧಿಗಳಿಗೆ ವಿವರಣಾತ್ಮಕವಾದ ಪುಸ್ತಕಗಳು ಲೋಕಾರ್ಪಣೆಗೊಂಡಿವೆ. ಶೀಘ್ರದಲ್ಲಿ ಉಳಿದ ಎಲ್ಲವನ್ನೂ ಸಂಪಾದಿಸುವವರಿದ್ದಾರೆ  ಒಬ್ಬ ಗೃಹಿಣಿಯು ಮನಸ್ಸು ಮಾಡಿದರೆ ಏನೆಲ್ಲವನ್ನೂ ಸಾಧಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

ಹರಿಕಥಾಮೃತಸಾರವು ಹರಿದಾಸ ಸಾಹಿತ್ಯದ ವಿಶ್ವಕೋಶವೇ ಸರಿ. ಈ ಗ್ರಂಥಕ್ಕೆ ಅನೇಕ ವ್ಯಾಖ್ಯಾನಗಳೂ ಉಂಟು. ಇದರ ವಿಶೇಷವೇನೆಂದರೆ ಸಂಸ್ಕೃತ ಭಾಷೆಯಲ್ಲಿಯೂ ವ್ಯಾಖ್ಯಾನಗಳು ಬಂದಿರುವುದು. ಯಾವುದೇ ಕನ್ನಡ ಹರಿದಾಸಸಾಹಿತ್ಯದ ಗ್ರಂಥಕ್ಕೆ ಹೀಗೆ ಸಂಸ್ಕೃತ ಭಾಷೆಯಲ್ಲಿ ವ್ಯಾಖ್ಯಾನವು ಬಂದಿರುವುದರ ಉಲ್ಲೇಖವಿಲ್ಲ. ಸಮಗ್ರ ಪ್ರಸ್ಥಾನತ್ರಯಗಳ ತಿರುಳನ್ನು ಇದರಲ್ಲಿ ನಾವು ಕಾಣಬಹುದು.

ಪ್ರತಿಯೊಂದು ಸಂಧಿಯನ್ನು ನಾವು ಸರಳವಾಗಿ ಶ್ರೀಮತಿ ಶಾಂತಾಬಾಯಿಯವರ ಅನುವಾದದೊಡನೆ ಓದಿಕೊಂಡು ಅರ್ಥಮಾಡಿಕೊಳ್ಳಬಹುದಾಗಿದೆ. ಇದರ ಹೆಚ್ಚಿನ ಪ್ರತಿಗಳು ಅಮೇರಿಕಾದಲ್ಲಿ ವಾಸಿಸಿರುವ ಹರಿದಾಸ ಸಾಹಿತ್ಯದ ಅಭಿಮಾನಿಗಳಿಗಾಗಿ ಕಳಿಸಲ್ಪಡುತ್ತದೆ ಎಂದರೆ ಅದರ ಜನಪ್ರಿಯತೆಯು ವಿಶ್ವವ್ಯಾಪಿ ಎನ್ನಬಹುದು. ಇಂತಹ ಮಹಾನ್ ಕಾರ್ಯವನ್ನು ಮಾಡುತ್ತಿರುವ ಡಾ. ಶಾಂತಾಬಾಯಿಯವರು ಅಭಿನಂದನಾರ್ಹರೇ. 

ಪರಿಚಯ: ಡಾ. ಪರಶುರಾಂ ಬೆಟಗೇರಿ , ನಿರ್ದೇಶಕರು , ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯ ಬೆಂಗಳೂರು.


ಡಾ. ಶಾಂತಾಬಾಯಿ ಜಿ ವಿ ಯವರೊಂದಿಗೆ ಮಾತುಕತೆ

ಸಂದರ್ಶನ: ಡಾ. ಪರಿಮಳಾ ಪರಶುರಾಂ , ಪ್ರಧಾನ ಸಂಚಾಲಕರು, ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯ , ಬೆಂಗಳೂರು.

1. ತಾವು ಕಳೆದ ಮೂವತ್ತು ವರ್ಷಗಳಿಂದ ಪ್ರತಿ ವರ್ಷವೂ ಶ್ರೀ ಪುರಂದರದಾಸರ ಸಂಸ್ಮರಣೋತ್ಸವವನ್ನು ಇಷ್ಟೊಂದು  ವಿಶೇಷವಾಗಿ ಮಾಡುತ್ತಿದ್ದೀರಾ. ಪ್ರಾಯಶಃ ಅಷ್ಟೊಂದು ಭಜನಾ ಮಂಡಲಿಗಳನ್ನು ಸೇರಿಸಿ ಬೆಂಗಳೂರು ಮಹಾನಗರದಲ್ಲಿ  ಮಾಡುವ ಬೃಹತ್ ಕಾರ್ಯವನ್ನು ಬೇರೆಯವರು ಮಾಡಿರುವ ಉಲ್ಲೇಖಗಳು ಇಲ್ಲವೆನಿಸುತ್ತದೆ. ತಮಗೆ ಈ ಉತ್ಸವವನ್ನು  ಮಾಡುವ ಉತ್ಸಾಹವು ಹೇಗೆ ಬಂದಿತು? 

-> ನಾನು ಮೊದಲಿನಿಂದಲೂ ತಿರುಪತಿಯ ದಾಸ ಸಾಹಿತ್ಯ ಪ್ರೋಜೆಕ್ಟ್ ನೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಯಾಗಿದ್ದೇನೆ. ಅಲ್ಲಿ ನೆಡ್ಯುವ ಮೆಟ್ತಿಲೋತ್ಸವವನ್ನು ನೋಡಿ ಆಕರ್ಷಿತಳಾದೆನು. ಬೆಂಗಳೂರಿನಲ್ಲಿಯೂ ನಾವು ಏಕೆ ಅಂತಹ ಸಂಭ್ರಮದ ಹರಿದಾಸ ಉತ್ಸವವನ್ನು ಏಕೆ ನಾವು ಮಾಡಬಾರದು ಎಂದು ನಮ್ಮ ಭಜನಾಮಂಡಲಿಯ ಸದಸ್ಯರೊಡನೆ ಚರ್ಚಿಸಿದೆನು. ಕೊನೆಗೆ ನನ್ನ ಭಜನಾ ಮಂಡಲಿಯ ಸ್ನೇಹಿತರೊಡನೆ ಸೇರಿ ಬೆಂಗಳೂರು ನಗರದಲ್ಲಿ ಶ್ರೀಪುರಂದರದಾಸರ ಸಂಸ್ಮರಣೋತ್ಸವವನ್ನು ಮಾಡಲು ನಿರ್ಧರಿಸಿ ಅದನ್ನು ಕಾರ್ಯಗತ ಮಾಡಿದೆವು. ಬೆಂಗಳೂರಿನ ಎಲ್ಲ ಭಜನಾ ಮಂಡಲಿಯ ಸದಸ್ಯರು ಬಹಳ ಸಂತೋಷದಿಂದ ಆಗಿನಿಂದ ಈಗಿನವರೆಗೂ ಪಾಲ್ಗೊಳ್ಳುತ್ತಾ ಬಂದಿರುತ್ತಾರೆ. ಅವರೆಲ್ಲರ ಸಂತೋಷವೇ ನಮ್ಮ ಮಂಡಲಿಯ ಸಂತೋಷವು.

2. ತಾವು ಉತ್ಸವದಲ್ಲಿ ವಿಧವಿಧವಾದ ಸಾಮಾಜಿಕ , ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳುತ್ತಿದ್ದೀರಾ , ಅದರ ಸಾರ್ಥಕತೆಯನ್ನು ಹೇಳುವಿರಾ ?

>ನಾವು ಸಮಾಜದೊಡನೆ ಬೆರೆತು ಅದರ ಒಳಿತಿಗಾಗಿ ಕಾರ್ಯವನ್ನು ಮಾಡಬೇಕು. ನಮ್ಮ ಹರಿದಾಸರು ಸಮಾಜದಲ್ಲಿ ಬೆರೆತು ಸಮಾಜವನ್ನು ಸುಧಾರಿಸಿದರು. ಸಮಾಜಕ್ಕೆ ದಾರಿದೀಪವಾದರು. ಈ ನಿಟ್ಟಿನಲ್ಲಿ ನಮ್ಮ ಸಂಘವು ಕಾರ್ಯನಿರತವಾಗಿದೆ. ನಮ್ಮ ಸಂಘದಿಂದ ಈ ಉತ್ಸವದ ಸಮಯದಲ್ಲಿ ಸಮಾಜದಲ್ಲಿರುವ ಅನೇಕ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತಮ್ಮ ಕುಶಲತೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತಿದ್ದೇವೆ. 

ಅದು ವಿಧವಿಧವಾದುದ್ದಾಗಿದೆ. ಸಾಮೂಹಿಕ ಭಜನೆ, ರೂಪಕ, ಕಿರುನಾಟಕ, ಏಕಾಂಗ ಪಾತ್ರಾಭಿನಯನ, ಕೋಲಾಟ, ರಂಗೋಲಿ ಸ್ಪರ್ಧೆ ಇತ್ಯಾದಿ. ನಮ್ಮ ಸಮಾಜದಲ್ಲಿರುವ ಅನೇಕ ಪ್ರತಿಭೆಗಳಿಗೆ ಪೆÇ್ರೀತ್ಸಾಹ ಕೊಡುವುದೆಂದರೆ ನಮ್ಮ ಸಂಸ್ಕೃತಿಯನ್ನು ರಕ್ಷಿಸಿದಂತೆಯೇ  ಎಂದು ನಮ್ಮ ಸಂಘದವರು ತಿಳಿದುಕೊಂಡಿದ್ದೇವೆ.

3. ತಾವು ಉತ್ತಮ ಲೇಖಕಿಯೂ ಹೌದು. ತಾವು ಕೆಲವು ಪುಸ್ತಕಗಳನ್ನು ಸಂಪಾದಿಸಿರುವಿರಿ. ಲೇಖನದತ್ತ ತಮ್ಮ ಒಲುವು  ಬಂದದ್ದು ಹೇಗೆ ತಿಳಿಸುವಿರಾ? 

-> ನನಗೆ ಮೊದಲಿನಿಂದಲೂ ಪುಸ್ತಕಗಳನ್ನು ಓದುವ ಹವ್ಯಾಸವಿದೆ. ಅದರಲ್ಲೂ ಹರಿದಾಸ ಸಾಹಿತ್ಯದ ಪುಸ್ತಕಗಳನ್ನು ಓದುವತ್ತ ಒಲವು ಇನ್ನೂ ಹೆಚ್ಚು. ಅವಲೋಕಿಸಿದ್ದನ್ನು ಸಂಗ್ರಹಿಸಿ ಬರೆದಿಡುವ ಪ್ರವೃತ್ತಿ ಇತ್ತು. ಅದನ್ನೇ ಏಕೆ ಪುಸ್ತಕರೂಪದಲ್ಲಿ ತರಬಾರದು ಎಂಬ ನನ್ನ ಉತ್ಸಾಹಕ್ಕೆ ನನ್ನ ಪತಿಯವರು ಪ್ರೋತ್ಸಾಹವನ್ನು ಕೊಟ್ಟರು. ನಂತರ ನನ್ನ ಮಕ್ಕಳ ಪ್ರೋತ್ಸಾಹವೂ ಇದಕ್ಕೆ ವಿಶೇಷವಾಯಿತು. ನನ್ನ ಮೊದಲ ಪ್ರಯತ್ನವನ್ನು ಶ್ಲಾಘಿಸಿರುವ ತಮ್ಮಂತಹವರೂ ಇದಕ್ಕೆ ಕಾರಣವೇ ಹೌದು.  ನನ್ನ ಲೇಖನವು ಹಾಗೆಯೇ ಮುಂದುವರೆಯುತ್ತಲೇ ಇದೆ. 

4. ತಮ್ಮ ಎಲ್ಲ ಕೃತಿಗಳು ಶ್ಲಾಘನೀಯವೇ ಆದರೂ ತಮ್ಮ ಕೃತಿಗಳಲ್ಲಿ ತಮಗೆ ವಿಶೇಷವಾದ ಸಂತೋಷವನ್ನು ಕೊಟ್ಟ ಕೃತಿಯು ಯಾವುದು ?

->ನನಗೆ ಹರಿಕಥಾಮೃತಸಾರದಲ್ಲಿ ಮೊದಲಿನಿಂದಲೂ ಒಲವು. ತಿರುಪತಿ ದಾಸಸಾಹಿತ್ಯ ಪ್ರೊಜೆಕ್ಟ ವಿಶೇಷಾಧಿಕಾರಿಗಳಾಗಿದ್ದ ಶ್ರೀ ಅಪ್ಪಣಾಚಾರ್ಯರು ಅದಕ್ಕೆ ವಿಶೇಷವಾದ ಸ್ಥಾನವನ್ನು ಕೊಟ್ಟಿದ್ದರು. ಹರಿಕಥಾಮೃತಸಾರದಲ್ಲಿ ರಸಪ್ರಶ್ನೆ ಕಾರ್ಯಕ್ರಮವು ಆಗ ಕಡ್ದಾಯವೇ ಆಗಿತ್ತು. ಎಲ್ಲರ ಬಾಯಲ್ಲಿ ಹರಿಕಥಾಮೃತಸಾರವು ಕುಣಿದಾಡುತ್ತಿತ್ತು. ನನಗೂ ಅದರತ್ತ ಒಲವು ಬರಲು ಆಗಿನ ಸಂದರ್ಭವು ಕಾರಣವೇ. ಹರಿದಾಸ ಸಾಹಿತ್ಯದ ಮೇರುಕೃತಿಯಾದ ಅದರಲ್ಲಿ  ನಮ್ಮಂತಹವರಿಗೆ ಒಲುವು ಬರುವುದು ಸಹಜವೇ.

5. ಡಾ. ಶಾಂತಾಬಾಯಿಯವರೇ ತಾವು ಒಬ್ಬ ಲೇಖಕರಷ್ಟೇ ಅಲ್ಲ, ಪಾಠವನ್ನೂ ಮಾಡುವುದರಲ್ಲಿ ನಿಸ್ಸೀಮರು. ಅದರ ಬಗ್ಗೆ  ಸ್ವಲ್ಪ ಮಾಹಿತಿಯನ್ನು ಕೊಡುತ್ತೀರಾ ?

-> ಪಾಠವನ್ನು ಮಾಡುವುದು ಬಂದಿದ್ದು ಆಕಸ್ಮಿಕವೇ! ನನ್ನ ಕೃತಿಗಳನ್ನು ವಿವರಿಸುವ ಸಂದರ್ಭಗಳು ಬಂದೊದಗಿದಾಗ, ಅದು ಪಾಠಕ್ಕೂ ತಿರುಗಿತು. ಈಗ ನಾನು ಅಮೇರಿಕಾದಲ್ಲಿರುವ ಹರಿಕಥಾಮೃತಸಾರದ ಪ್ರಿಯರಿಗೆ ಪಾಠವನ್ನು ದೂರಸಂಪರ್ಕದಿಂದ ಮಾಡುತ್ತಲಿದೇನೆ. ನಮ್ಮ ಸಂಘದ ಕಿರಿಯ ಸದಸ್ಯರಿಗೂ ಪಾಠವನ್ನು ಮಾಡುತ್ತಿದ್ದೇನೆ. ಅನೇಕ ಇತ್ತೀಚೆಗೆ ಸ್ಥಾಪಿತವಾದ  ಭಜನಾ ಮಂಡಲಿಗಳಿಗೆ ಪಾಠ ಮಾಡುತ್ತಿದ್ದೇನೆ. 

6. ತಮ್ಮ ಉತ್ಸವಗಳಿದ್ದಾಗ ತಾವು ಎಲ್ಲ ಭಜನಾ ಮಂಡಲಿಯ ಸದಸ್ಯರೊಡನೆ ಸೇರಿಕೊಂಡು ಗ್ರಾಮ ಪ್ರದಕ್ಷಿಣೆಯನ್ನು  ಮಾಡುತ್ತೀರಿ. ಅದರ ವಿಷಯವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತೀರಾ? 

->ಗ್ರಾಮ ಪ್ರದಕ್ಷಿಣೆಯು ಹರಿದಾಸ ತತ್ವದ ಒಂದು ಪ್ರಮುಖ ಆಚರಣೆಯು. ದಾಸರ ವೇಷವನ್ನು ಧರಿಸಿ ತಾಳ ತಂಬೂರಿಯೊಂದಿಗೆ ಶ್ರೀಹರಿಯ ನಾಮಸಂಕೀರ್ತನೆಯನ್ನು ಮಾಡುತ್ತಾ ಗ್ರಾಮದ ಓಣಿಗಳಲ್ಲಿ ಸಂಚರಿಸುವುದು ದಾಸತ್ವದ ಸಂಕೇತವು ಹೌದು. 

ನಾಮ ಸಂಕೀರ್ತನೆಯ ತರಂಗಗಳು ಸಮಾಜವನ್ನು ಶುದ್ಧೀಕರಿಸುತ್ತವೆ. ಸಮಾಜದ ಒಗ್ಗಟ್ಟಿಗೆ ಕಾರಣವಾಗುತ್ತವೆ. ಬಡವ ಬಲ್ಲಿದನೆಂಬ ಭಾವನೆಯು ದೂರವಾಗುತ್ತದೆ. ಎಲ್ಲರೂ ಪರಮಾತ್ಮನ ಮಕ್ಕಳು, ಎಲ್ಲರೂ ದೇಶದ ಪ್ರಜೆಗಳು ಎನ್ನುವ ಭಾವವು ಧೃಡವಾಗುತ್ತದೆ. ಎಲ್ಲಕ್ಕಿಂತಲೂ ಹೆಚ್ಚು ನಮ್ಮ ಸಂಸ್ಕೃತಿಯ ಅರಿವು ಸಮಾಜದ ಎಲ್ಲರಿಗೂ ಉಂಟಾಗುತ್ತದೆ.

7. ತಾವು ಮಾಡುವ ಈ ಉತ್ಸವದಲ್ಲಿ ಶ್ರೀ ಪುರಂದರದಾಸರ ಪದಗಳ ಅಂತ್ಯಾಕ್ಷರಿಗೆ ವಿಶೇಷ ಪ್ರಾಮುಖ್ಯತೆಯನ್ನು  ಕೊಡಲು ಕಾರಣವೇನು ?

—> ಶ್ರೀ ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹರೆಂಬ ಹೆಗ್ಗಳಿಕೆಗೆ ಪಾತ್ರರಾದವರು. ದಕ್ಷಿಣ ಭಾರತದ ಎಲ್ಲ ಭಾಷೆಯ ಸಮುದಾಯದವರೂ ಅವರನ್ನು ಗೌರವಿಸುತ್ತಾರೆ. ಕನ್ನಡ ಬಾರದವರೂ ಶ್ರೀಪುರಂದರದಾಸರ ಪದಗಳನ್ನು ಕಂಠಪಾಠ ಮಾಡಿಕೊಂಡಿದ್ದಾರೆ.

ಅವ್ರ ಪದಗಳಲ್ಲಿ ನಾವು ಸ್ಪರ್ಧೆಗಳನ್ನು  ಇಡುವುದರಿಂದ ಅನೇಕರು ಅವರ ಪದಗಳನ್ನು ಕಂಠಪಾಠಮಾಡಿಕೊಳ್ಳುತ್ತಿದ್ದಾರೆ. ಅವರ ಅನೇಕ ಪದಗಳನ್ನು ಕೇಳುವ ಸೌಭಾಗ್ಯ ಆ ಸ್ಪರ್ಧೆಯ ಸಮಯದಲ್ಲಿ ನಮಗೆ ಲಭಿಸುತ್ತದೆ. ದಾಸರ ಪದಗಳನ್ನು ಹಾಡುವ ಈ ಪ್ರಕ್ರಿಯೆಯು ಹೀಗೆಯೇ ಮುಂದಿನ ಪೀಳಿಗೆಗೂ ಮುಂದುವರೆಯಲಿ ಎಂಬ ಮುಖ್ಯ ಉದ್ದೇಶ ನಮ್ಮದು.

8. ಇನ್ನು ಕೊನೆಯದಾಗಿ ನಮ್ಮ  ಸಮಾಜಕ್ಕೆ ಅದರಲ್ಲೂ ವಿಶೇಷವಾಗಿ ಮುಂದಿನ ಪೀಳಿಗೆಗೆ ಏನು ಸಂದೇಶವನ್ನು ನೀಡಿ  ಬಯಸುತ್ತೀರಿ ?-

ಈಗ ನಮ್ಮ ಸಮಾಜವು ನಾಗಾಲೋಟದಿಂದ ಅನ್ಯ ಸಂಸ್ಕೃತಿಯತ್ತ ಸಾಗುತ್ತಲಿದೆ. ನಮ್ಮ ಸಂಸ್ಕೃತಿಯ ಜಗತ್ತಿನಲ್ಲಿ ಅತ್ಯಂತ ಹಳೆಯದೂ, ಬಂಗಾರದಂತಹದ್ದೂ ಆಗಿರುತ್ತದೆ. ನಮ್ಮ ಸನಾತನ ಸಂಸ್ಕೃತಿಯು ಮುಂದುವರೆಯುವಂತೆ ಮಾಡಲು ನಾವು ನಮ್ಮ ಯುವ ಪ್ರತಿಭೆಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹವನ್ನು ಕೊಡಬೇಕು. ನಾವು ಯಾವುದೇ ಕಾರ್ಯಕ್ರಮವನ್ನು ಮಾಡುತ್ತಿರುವಾಗ ನಮ್ಮ ಯುವಕರನ್ನೂ ಅಲ್ಲಿ ಭಾಗಿಗಳಾಗುವಂತೆ ಅವರನ್ನು ಪೆÇ್ರೀತ್ಸಾಹಿಸಬೇಕು. ಇದೇ ನನ್ನ ಮನದ ನುಡಿ.

Address: Smt. SHANTABAI G V  # 1099, 17th Cross, 24 th Main Behind Raghavendra Swamy Mutt  Banashankari II Stage, Bangalore – 560070

Cell No: 9741840330  

Tel: 080 2671 4852

E Mail: shantabaigv44@gmail.com

ಫೆ.20 ರಂದು ಪುರಂದರ ದಾಸರ ಸಂಸ್ಮರಣೋತ್ಸವ

ನಗರದ ಶ್ರೀ ದೇವಗಿರಿ ಲಕ್ಷ್ಮೀಕಾಂತ ಸಂಘದ ವತಿಯಿಂದ ಫೆ.20, ಸೋಮವಾರ  ಜಯನಗರ 8ನೇ ಬ್ಲಾಕ್‍ನ ಬೆಳಗೋಡು ಕಲಾ ಮಂಟಪದಲ್ಲಿ ತಿರುಮಲ ತಿರುಪತಿ ದೇವಸ್ಥಾನದ ದಾಸಸಾಹಿತ್ಯ ಪ್ರಾಜೆಕ್ಟ್ ಹಾಗೂ ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಯೋಗದಲ್ಲಿ ವಿಶಿಷ್ಟವಾಗಿ ಪುರಂದರದಾಸರ ಸಂಸ್ಮರಣೋತ್ಸವವನ್ನು ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. 

ನಂತರ ಕೆ.ಅಪ್ಪಣ್ಣಾಚಾರ್ಯರಿಂದ ಅನುಗ್ರಹ ವಚನ . ಡಾ ಅರಳುಮಲ್ಲಿಗೆ ಪಾರ್ಥಸಾರಥಿ , ಡಾ. ಅನಂತಪದ್ಮನಾಭ ರಾವ್ , ಡಾ ಸುಭಾಷ್ ಕಾಖಂಡಕಿ , ವೆಂಕಟೇಶ ಮೂರ್ತಿ, ಡಾ.ಎನ್.ವಾದಿರಾಜಾಚಾರ್, ಕರ್ನೂಲ್ ಶ್ರೀನಿವಾಸಾಚಾರ್ , ಡಾ.ವಾದಿರಾಜ ಅಗ್ನಿಹೋತ್ರಿ, ಕಲ್ಲಾಪುರ ಪವಮಾನಚಾರ್ಯರು, ಡಾ.ಹ.ರಾ.ನಾಗರಾಜಾಚಾರ್ಯರು, ಡಾ.ಪರಶುರಾಮ ಬೆಟಗೇರಿ, ಡಾ.ವಾದಿರಾಜ ಟಿ  ಮುಖ್ಯ ಅತಿಥಿಗಳಾಗಿ ಆಗಮಿಸುವ ಸಮಾರಂಭದಲ್ಲಿ ವಿದ್ವಾನ್ ಬ್ರಹ್ಮಣ್ಯಾಚಾರ್ಯ ರವರಿಗೆ ಮತ್ತು ಪ್ರಸಿದ್ಧ ಗಾಯಕ ಪುತ್ತೂರು ನರಸಿಂಹ ನಾಯಕ ರವರಿಗೆ  ಸನ್ಮಾನ; ದೇವಗಿರಿ ಲಕ್ಷ್ಮೀಕಾಂತ ಸಂಘದ ಅಧ್ಯಕ್ಷರಾದ ಜಿ.ವಿ ಶಾಂತಾಬಾಯಿ ರವರ ಶ್ರೀ ಜಗನ್ನಾಥದಾಸರಿಂದ ವಿರಚಿತವಾದ ಶ್ರೀಹರಿಕಥಾಮೃತಸಾರ ತಾತ್ಪರ್ಯಾರ್ಥ :, ಸಿ.ಪಿ.ವೇದವತಿ ರವರ ಕಥಾಮೃತಧಾರೆ ಪುಸ್ತಕ ಬಿಡುಗಡೆಗೊಳ್ಳಲಿದೆ. ಡಾ. ರಾಜಲಕ್ಷ್ಮಿ ಪಾರ್ಥಸಾರಥಿ , ಡಾ.ವಾರುಣಿ ಜಯತೀರ್ಥ ಮುಂತಾದ ಮಹಿಳಾ ಹರಿದಾಸಿಣಿಯರಿಗೆ ಸನ್ಮಾನ, ವಿಶೇಷ ಆಹ್ವಾನಿತರಾಗಿ ಚಾಮರಾಜ ಪೇಟೆ ಮಧ್ವ ಸಂಘದ ಅಧ್ಯಕ್ಷ ನಾಗೇಶ್ , ಡಾ.ಗುರುರಾಜ ಪೋಶೆಟ್ಟಿಹಳ್ಳಿ ಭಾಗವಹಿಸುವರು. ಸಂಜೆ ದೇವಗಿರಿ ಲಕ್ಷ್ಮೀ ಕಾಂತ ಸಂಘದವರು ನಡೆಸಿದ ಸಾಹಿತ್ಯಕ- ಸಾಂಸ್ಕøತಿಕ ಆಟಗಳ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿನಿಯೋಗ , ಲಕ್ಷ್ಮಿನರಸಿಂಹ ಭಜನಾ ಮಂಡಲಿ ಮೈಸೂರು ರವರಿಂದ ಹನುಮ-ಭೀಮ-ಮಧ್ವ ನಾಟಕ ಆಯೋಜಿಸಿದೆ.


ವಿವರಗಳಿಗೆ: 9741840330

- Advertisement -
- Advertisement -

Latest News

ಕನ್ನಡದ ರಾಜಾ ಕುಳ್ಳ ಇನ್ನಿಲ್ಲ

ಕನ್ನಡ ಚಿತ್ರರಂಗದ ರಾಜಾಕುಳ್ಳ ಎಂದೇ ಪ್ರಸಿದ್ಧರಾಗಿದ್ದ ಹಾಸ್ಯಚಿತ್ರ ನಟ, ನಿರ್ಮಾಪಕ ದ್ವಾರಕೀಶ ನಿಧನರಾಗಿದ್ದಾರೆ. ಚಿತ್ರರಂಗದ ನಾಯಕ ವಿಷ್ಣುವರ್ಧನ ಅವರ ಆಪ್ತಮಿತ್ರನಾಗಿದ್ದ ದ್ವಾರಕೀಶ ನೂರಾರು ವಿಶಿಷ್ಟ ಚಿತ್ರಗಳಲ್ಲಿ ನಟಿಸಿ,...
- Advertisement -

More Articles Like This

- Advertisement -
close
error: Content is protected !!
Join WhatsApp Group