ಬೈಲಹೊಂಗಲ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಮ್ಮ ಬದುಕು ರೂಪಿಸಿಕೊಂಡು ನಾಡಿಗೆ ಕೀರ್ತಿ ತರಬೇಕು ಎಂದು ಸಿ.ಬಿ ಯಲಿಗಾರ ಸೇವಾ ಸಂಸ್ಥೆಯ ನಿರ್ದೇಶಕರಾದ ಬಸವರಾಜ ಗೌಡಪ್ಪ ಬಿಲ್ಲಶಿವಣ್ಣವರ ಹೇಳಿದರು. ಅವರು ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗಂಗೆಭಾವಿಯ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಮಾತನಾಡಿದರು. 75ನೆಯ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಶಿಧರ ಯಲಿಗಾರ ಅವರ ನೇತೃತ್ವದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಮುಖ್ಯ ಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂಬ ಸದುದ್ದೇಶದಿಂದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ನೀಡಿದ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ದಾನಿಗಳ ಶೈಕ್ಷಣಿಕ ಕಾಳಜಿಯನ್ನು ಅರಿತುಕೊಂಡು ಎಲ್ಲ ವಿದ್ಯಾರ್ಥಿಗಳು ನೋಟ್ ಬುಕ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ವಿನಾಯಕ ಬಡಿಗೇರ, ಸದಸ್ಯರಾದ ರಮೇಶ ಸೂರ್ಯವಂಶಿ, ಯಲ್ಲಪ್ಪ ಕುರಿ, ಗ್ರಾಮದ ಹಿರಿಯರಾದ ಜನಕರಾಜ ಪಾಟೀಲ, ಸುರೇಶ ಸೂರ್ಯವಂಶಿ, ಬಾಳಪ್ಪ ನಾಗಣ್ಣವರ, ರಾಜಶೇಖರ ಮಠದ, ಕಲ್ಲಪ್ಪ ಕುರಿ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ ಹುಣಶೀಕಟ್ಟಿ, ರಾಜಶೇಖರ ದೊಡವಾಡ, ಶಿಕ್ಷಕರಾದ ಜೆ.ಆರ್.ನರಿ, ಎಸ್.ವಿ.ಬಳಿಗಾರ, ಎಸ್.ಟಿ.ಚೌಗಲಾ, ಆರ್.ಸಿ.ಸೊರಟೂರ, ಎಚ್.ವಿ.ಪುರಾಣಿಕ, ವೀರೇಂದ್ರ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕರಾದ ಸುನೀಲ ಭಜಂತ್ರಿ ಕಾರ್ಯಕ್ರಮ ನಿರ್ವಹಿಸಿದರು.