ಬೀದರ: ಹಣದ ಆಮಿಷ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಸವಕಲ್ಯಾಣದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯ ಮುಖ್ಯೋಪಾಧ್ಯಾಯನನ್ನು ಬಂಧಿಸಲಾಗಿದೆ.
ಹಣದ ಆಮಿಷಕ್ಕೆ ಒಳಗಾಗದ ಮಹಿಳಾ ವಾರ್ಡನ್ ಗೆ ಬಂಗಾರದ ಆಮಿಷ ತೋರಿಸುತ್ತಿದ್ದ ಹೆಡ್ ಮಾಸ್ಟರ್. ಕೆಲಸದ ನಿಮಿತ್ತ ರೂಮ್ ಗೆ ಕರೆಸಿ ಬೆತ್ತಲಾಗುತ್ತಿದ್ದನೆಂಬುದಾಗಿ ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಹೆಡ್ ಮಾಸ್ಟರ್ ಅಶೋಕ ರೆಡ್ಡಿ ಹಾಗೂ ವಾರ್ಡನ್ ಸುನಿತಾ ಫೋನ್ ನಲ್ಲಿ ಮಾತನಾಡಿದ್ದ ಆಡಿಯೋ ವೈರಲ್ ಆಗಿದೆ. ಈ ಮಹಿಳೆ ಗುತ್ತಿಗೆ ಆಧಾರದ ಮೇಲೆ ಬಾಲಕಿಯರ ವಸತಿ ಶಾಲೆಯಲ್ಲಿ ವಾರ್ಡನ್ ಕೆಲಸ ಮಾಡುತ್ತಿದ್ದರೆನ್ನಲಾಗಿದೆ.
ಪ್ರತಿ ದಿನ ಫೋನ್ ಮಾಡಿ ಹಣದ ಆಮಿಷ ತೋರಿಸುತ್ತಿದ್ದ ಹೆಡ್ ಮಾಸ್ಟರ್ ಕಳೆದ ಒಂದು ವರ್ಷದಿಂದ ಮಾನಸಿಕ ಕಿರುಕುಳ ನಿಡುತ್ತಿದ್ದ, ಹಣ ಬೇಡ ಅಂದ್ರೆ ಬಂಗಾರ ಕೊಡಿಸುವುದಾಗಿ ಪೀಡಿಸುತ್ತಿದ್ದನೆಂದು ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಮಹಿಳೆಯಿಂದ ದೂರು ದಾಖಲಾಗಿದೆ.
ಕಲಂ 354,509 ಅಡಿಯಲ್ಲಿ ದೂರು ದಾಖಲಿಸಿಕೊಂಡ ಪೋಲಿಸರು ಮುಂದಿನ ವಿಚಾರಣೆ ನಡೆಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ