ಬೀದರ – ಸರಿಯಾಗಿ ಮಳೆ ಇಲ್ಲದೇ ರೈತ ಬಸವಳಿಯುತ್ತಿರುವ ಸಮಯದಲ್ಲಿ ರೈತರಿಗೆ ಮತೊಂದು ಬರೆ ಹಾಕುವಂತೆ ನಕಲ ರಸಗೊಬ್ಬರ ತಯಾರಿಕೆ ಮತ್ತು ಮಾರಾಟ ಮಾಡುವ ಖದಿಮರ ಗ್ಯಾಂಗ್ಒಂದರ ಮೇಲೆ ಬೀದರ್ ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡಲಾಗಿದೆ.
ಕೇಂದ್ರ ರಸಗೊಬ್ಬರ ಸಚಿವರ ತವರೂರು ಬೀದರ್ ನಲ್ಲಿಯೇ ಡಿಎಪಿ ರಸಗೊಬ್ಬರ ನಕಲು ಮಾಡುವ ದಂಧೆ ನಡೆದಿತ್ತೆನ್ನಲಾಗಿದ್ದು, ರಸಗೊಬ್ಬರ ತಯಾರಿಸಲು ಸ್ಥಳೀಯರ ಬೆಂಬಲವೂ ಇತ್ತೆನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಆಡಳಿತ ಗೋದಾಮಿನ ಮೇಲೆ ದಾಳಿ ಮಾಡಿ ೧.೮೮ ಲಕ್ಷ ರೂ. ಮೌಲ್ಯದ ರಸಗೊಬ್ಬರ ಜಪ್ತಿ ಮಾಡಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಹುಮನಾಬಾದ ಪಟ್ಟಣದ ಗೋದಾಮಿನಲ್ಲಿ ಸರಕಾರದಿಂದ ಪರವಾನಿಗೆ ಇಲ್ಲದೇ ಮತ್ತು ಯಾವುದೇ ದಾಖಲಾತಿಗಳು ಇಲ್ಲದೇ ಅನಧಿಕೃತ/ನಕಲಿ ಗೊಬ್ಬರವನ್ನು ತಯಾರಿಸಿ ಸಂಗ್ರಹಿಸಿಟ್ಟಿರುವ ಜಾಲದ ಪತ್ತೆ ಮಾಡಿ, ಕೃಷಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ಮಾಡಿ ವಶಪಡಿಸಿಕೊಂಡು ಮುಂದಿನ ತನಿಖೆ ಕೈಕೊಳ್ಳಲಾಗಿದೆ.
ಜಪ್ತಿ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬ ಇಲ್ಲಿನ ಸ್ಥಳೀಯರ ಜೊತೆಗೂಡಿ ಕೈಗಾರಿಕಾ ಪ್ರದೇಶದಲ್ಲಿನ ಗೋದಾಮು ಒಂದರಲ್ಲಿ ಅಕ್ರಮವಾಗಿ ನಕಲಿ ರಸಗೊಬ್ಬರ ಸಂಗ್ರಹಿಸಿದ ಖಚಿತ ಮಾಹಿತಿ ಮೇಲೆ ಪೊಲೀಸ ಅಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿದ್ದರು. ಮಹಾರಾಷ್ಟ್ರದ ಸಾಂಗಲಿ ಹಾಗೂ ಕಲಬುರಗಿಯಿಂದ ಕಚ್ಚಾ ವಸ್ತು ತಂದು ಗೋದಾಮಿನಲ್ಲಿ ಕಲಬರಕೆ ಗೊಬ್ಬರ ತಯಾರಿಕೆ ಮಾಡಲಾಗುತ್ತಿತ್ತು.
ರಾಯಚೂರಿನಿಂದ ಎಂಸಿಎಫ್ ಕಂಪನಿಯ ಹೆಸರಿನಲ್ಲಿನ ಮುದ್ರಿಸಿದ ನಕಲಿ ಬ್ಯಾಗ್ ಗಳಲ್ಲಿ ನಕಲಿ ರಸಗೊಬ್ಬರ ಭರ್ತಿಮಾಡಿ ಸಾಗಾಟ ಮಾಡಲಾಗುತ್ತಿತ್ತು. ಬಿಳಿಬಣ್ಣದ ರಸಗೊಬ್ಬರ 236 ಬ್ಯಾಗ್ ಅಂದಾಜು ಮೊತ್ತ ರೂ. 87,500 ಹಾಗೂ 126 ಕಪ್ಪು ಬಣ್ಣದ ರಸಗೊಬ್ಬರ ಬ್ಯಾಗ್ ಪತ್ತೆಯಾಗಿದ್ದು, ಅಂದಾಜು ರೂ. 1,00,800 ಆಗಿದ್ದು ಒಟ್ಟಾರೆ 1.88 ಲಕ್ಷ ಮೌಲ್ಯದ ನಕಲಿ ಬ್ರಾಂಡ್ ಡಿಎಪಿ ರಸಗೊಬ್ಬರ ಪತ್ತೆಯಾಗಿದೆ. ಹುಮನಾಬಾದ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ