ಪುಟ್ಟಣ ಕಣಗಾಲ್ ನಿರ್ದೇಶನದ 1971ರಲ್ಲಿ ಬಿಡುಗಡೆಯಾದ ಶರಪಂಜರ ಚಿತ್ರದ ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯ..ಹಾಡು ಇಂದಿಗೂ ಅಮರವಾಗಿದೆ. ಈ ಹಾಡಿನ ಗುಂಗಿನಲ್ಲೇ ನಾವು ಬಿಳಿಗಿರಿ ರಂಗನ ಬೆಟ್ಟ ಹತ್ತುವಷ್ಟರಲ್ಲಿ ಹತ್ತೂವರೆ ಆಗಿತ್ತು. ಬಸ್ಸು ಬೆಟ್ಟ ಹತ್ತಿ ಬುಸ್ ಎಂದು ಹೊಗೆಯಾಡಿತು. ಬಸ್ಸಿನ ಟ್ಯಾಂಕ್‍ನಲ್ಲಿ ನೀರು ಕಡಿಮೆಯಾಗಿ ಹೊಗೆಯಾಡಿದ್ದು ಖರೆ. ಯಾರೋ ಪುಣ್ಯಾತ್ಮರು ಈ ಕಡೆ ದೇವಸ್ಥಾನಕ್ಕೆ ಮೆಟ್ಟಿಲು ಜಾಸ್ತಿ. ನೀವು ಆ ಕಡೆ ರಸ್ತೆಯಲ್ಲಿ ಬಸ್ಸಿನಲ್ಲೇ ದೇವಸ್ಥಾನದ ಬಳಿಗೆ ಹೋಗಬಹುದು.. ಎಂದು ಅತ್ತ ಕೈ ತೋರಿದರು. ಅದು ಕಡಿದಾದ ತಿರುವುಗಳ ರಸ್ತೆ. ಬ್ರೇಕ್ ಹಿಡಿದು ಡ್ರೈವರ್ ಬಸ್ಸನ್ನು ಮೇಲಕ್ಕೆ ನಿಧಾನವಾಗಿ ಹತ್ತಿಸುತ್ತಿರಲು ನಾವು ಉಸಿರು ಬಿಗಿ ಹಿಡಿದು ತಗ್ಗಿನ ವನಸಿರಿ ನೋಡಿದೆವು. ಇಲ್ಲಿ ಬಸ್ಸಿನಿಂದ ಇಳಿದ ಕೂಡಲೇ ಬೋಳುಮರ ಕಾಣಿಸಿ ಬೆಳ್ಳಿಮೋಡ ಚಿತ್ರ ನೆನೆಯಿತು. ಮಡದಿ ಶಕುಂತಲೆ ಮತ್ತು ಅವರಕ್ಕರನ್ನು ಅಕ್ಕಪಕ್ಕ ನಿಲ್ಲಿಸಿ ಬಿಳಿಗಿರಿ ಬೆಟ್ಟದ ತಪ್ಪಲಿನ ದೃಶ್ಯ ಸೆರೆ ಹಿಡಿದೆ. ಬಿಳಿಯ ಮಂಜು ಬೆಳ್ಳಿಯ ಮೋಡಗಳಿಂದ ವರ್ಷದ ಹೆಚ್ಚಿನ ಭಾಗವು ಈ ಬೆಟ್ಟವನ್ನು ಆವರಿಸುವುದು ವಿಶೇಷವಾಗಿದೆ.
ತಮಿಳುನಾಡಿನ ಈರೋಡು ಜಿಲ್ಲೆಯ ಗಡಿಯಲ್ಲಿ ನೈಋತ್ಯ ಕರ್ನಾಟಕದಲ್ಲಿ ನೆಲೆಗೊಂಡಿರುವ ಬೆಟ್ಟ ಶ್ರೇಣಿಯ ಭೂ ವಲಯವನ್ನು ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ವನ್ಯ ಜೀವಿ ಅಭಯಾರಣ್ಯ ಎಂದು ಕರೆಯಲಾಗಿದೆ. 322.4 ಚದರ ಕಿ.ಮೀ. ವನ್ಯಜೀವಿ ಅಭಯಾರಣ್ಯವನ್ನು ದೇವಾಲಯ ಸುತ್ತಲೂ 1974ರಲ್ಲಿ ರಚಿಸಿ, 1987ರಲ್ಲಿ 539.52 ಚದರ ಕಿ.ಮೀ.ಗೆ ವಿಸ್ತರಿಸಿದ ಅಭಯಾರಣ್ಯಕ್ಕೆ ಬಿಳಿಗಿರಿ ಎಂಬ ಹೆಸರು ಚಾಲ್ತಿಯಲ್ಲಿದೆ. ಇದು 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿ ಸಂರಕ್ಷಿತ ಮೀಸಲು ಪ್ರದೇಶ. 2011ರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲ್ಪಟ್ಟಿದೆ. ಬೆಟ್ಟಗಳ ಸಾಲು ಯಳಂದೂರು ಕೊಳ್ಳೆಗಾಲ ಚಾಮರಾಜನಗರ ತಾಲ್ಲೂಕುಗಳಲ್ಲಿ ವ್ಯಾಪಿಸಿದೆ.
ಅವು ದಕ್ಷಿಣಕ್ಕೆ ಈರೋಡ್ ಜಿಲ್ಲೆಯ ಸತ್ಯಮಂಗಲ ವನ್ಯಜೀವಿ ಅಭಯಾರಣ್ಯದ ಬೆಟ್ಟಗಳೊಂದಿಗೆ ಹೊಂದಿಕೊಂಡಿವೆ. ಬೆಟ್ಟ ಶ್ರೇಣಿ 800 ಜಾತಿಯ ಸಸ್ಯಗಳನ್ನು ಹೊಂದಿದೆ. ಕಾಡಿನ ಪ್ರಯಾಣದುದ್ದಕ್ಕೂ ಮರಗಿಡಗಳು ಒಣಗಿ ನಿಂತಿದ್ದವು. ಅಲ್ಲಲ್ಲಿ ಸ್ವಲ್ಪ ಹಸಿರು ಚಿಗುರುತ್ತಿರುವ ಮರಗಿಡಗಳು ಕಂಡವು. ಎರಡ್ಮೂರು ಕೆರೆಗಳು ಕಂಡೆವಾದರೂ ಅವು ಬತ್ತುತ್ತಾ ಬಂದು ಸ್ವಲ್ಪವೇ ನೀರಿರುವ ಕೆರೆಗಳಿಗೆ ಜಿಂಕೆಗಳೇನಾದರೂ ಬರುತ್ತವೆಯೇ? ಎಂಬ ನಮ್ಮ ನಿರೀಕ್ಷೆ ಫಲಿಸಿತು. ನಾವು ವಾಪಸ್ಸು ಬರುವಾಗ ಮೂರು ಜಿಂಕೆಗಳು ನೀರು ಕುಡಿಯಲು ಬರುತ್ತಿದ್ದವು. ಈ ವನ್ಯಜೀವಿ ಪ್ರದೇಶದಲ್ಲಿ 26 ಜಾತಿಯ ಸಸ್ತನಿಗಳು ದಾಖಲಾಗಿವೆ. ಸಸ್ತನಿಗಳಲ್ಲಿ ಸಾಂಬರ್, ಚಿತಾಲ್, ಬೊಗಳುವ ಜಿಂಕೆಗಳು, ನಾಲ್ಕು ಕೊಂಬಿನ ಹುಲ್ಲೆ, ಹುಲಿ, ಚಿರತೆ, ಕಾಡುನಾಯಿ, ಬೆಕ್ಕು, ಕರಡಿಗಳು ಸೇರಿವೆ. ವೃಕ್ಷದ ಸಸ್ತನಿಗಳು ದೈತ್ಯ ಹಾರುವ ಅಳಿಲು ಸೇರಿದಂತೆ 3 ಜಾತಿಯ ಅಳಿಲುಗಳನ್ನು ದಾಖಲಿಸಲಾಗಿದೆ. 254 ಜಾತ್ರಿಯ ಪಕ್ಷಿಗಳಿವೆಯಂತೆ.
ದೇವಸ್ಥಾನವು ಸಾಕಷ್ಟು ವಿಸ್ತಾರದ ಕಲ್ಲುಹಾಸಿನ ನಡುವೆ ನೆಲೆಗೊಂಡಿದೆ. ಗರ್ಭಗುಡಿಯಲ್ಲಿ 5 ಅಡಿ ಎತ್ತರದ ಭಗವಾನ್ ರಂಗನಾಥಸ್ವಾಮಿಯ ವಿಗ್ರಹವು ನಿಂತಭಂಗಿಯಲ್ಲಿದೆ. ಶರಪಂಜರ ಚಿತ್ರದ ಹಾಡಿಗೆ ತಕ್ಕಂತೆ ‘ಶ್ರೀರಂಗನ ಬೆಟ್ಟದ ಚಂದುಳ್ಳಿ ಚೆಲುವಯ್ಯ.. ಸುಂದರವಾಗಿದೆ. ಬಲಭಾಗ ರಂಗನಾಯಕಿ ಅಮ್ಮನ ಗುಡಿ ಪ್ರತ್ಯೇಕವಾಗಿದೆ. ದಂತ ಕಥೆಯಂತೆ ವಶಿಷ್ಟರು ಇಲ್ಲಿ ತಪಸ್ಸು ಮಾಡಿ ಭಗವಂತ ಅವರಿಗೆ ಕಾಣಿಸಿಕೊಂಡು ಆಶೀರ್ವದಿಸಿ ರಂಗನಾಥಸ್ವಾಮಿ ಮೂಲ ಪ್ರತಿಮೆಯನ್ನು ವಶಿಷ್ಠರು ಪ್ರತಿಷ್ಠಾಪಿಸಿದರೆಂದು ಹೇಳಲಾಗಿದೆ. ದೇವಾಲಯದಲ್ಲಿ ಒಂದು ದೊಡ್ಡ ಜೋಡಿ ಚಪ್ಪಲಿಯನ್ನು ಇಡಲಾಗಿದೆ. ಭಗವಂತನು ಇವುಗಳನ್ನು ಧರಿಸಿ ರಾತ್ರಿ ಕಾಡಿನಲ್ಲಿ ತಿರುಗಾಡುತ್ತಾನೆ ಎಂಬ ನಂಬಿಕೆ ಇದೆ. 2 ವರ್ಷಗಳಿಗೊಮ್ಮೆ ಸೋಲಿಗ ಆದಿವಾಸಿಗಳು ದೇವರಿಗೆ ಚರ್ಮದಿಂದ ಮಾಡಿದ 1 ಅಡಿ 9 ಇಂಚು ಅಳತೆಯ ದೊಡ್ಡ ಚಪ್ಪಲಿಗಳನ್ನು ಅರ್ಪಿಸುತ್ತಾರೆ. ಜನಪದ ಕಥೆಯೊಂದು ರಂಗನಾಥನು ಕಾಡಿನಲ್ಲಿ ಅಲೆದಾಡುವಾಗ ಸೋಲಿಗ ಬುಡಕಟ್ಟು ಹುಡುಗಿ ಕುಸುಮಾಲೆಯನ್ನು ನೋಡಿ ಅವಳನ್ನು ಪ್ರೀತಿಸಿ ಮದುವೆಯಾದನೆಂದು ಹೇಳಿದೆ. ಹೀಗಾಗಿ ಕುಸುಮಾಲೆಯನ್ನು ಸಹೋದರಿಯೆಂದು ರಂಗನಾಥನನ್ನು ಸೋದರ ಮಾವನೆಂದು ನಂಬಿದ್ದಾರೆ. ದೇವಸ್ಥಾನ ಪಕ್ಕ ಬರುವ ಭಕ್ತಾದಿಗಳಿಗೆ ಊಟಕ್ಕೆ ಅಡಿಗೆ ಮಾಡಲು ಪ್ರತ್ಯೇಕ ಸ್ಥಳಾವಕಾಶವಿದೆ.
ಈ ಮುಂಭಾಗ ಪಾರ್ಕಿನಂತೆ ಮರಗಿಡ ಬೆಳೆಸಿ ಕಲ್ಲು ಬೆಂಚು ಹಾಕಲಾಗಿದೆ. ಈ ಪ್ರದೇಶದ ಸುತ್ತ ತಂತಿ ಬೇಲಿ ಹಾಕಲಾಗಿದ್ದು ಇಲ್ಲಿ ನಿಂತು ಬೆಟ್ಟದ ತಪ್ಪಲಿನ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಈ ಸ್ಥಳಕ್ಕೆ ನಾವು ಹೋದಾಗ ಮೂರ್ನಾಲ್ಕು ಹುಡುಗರು ತುತ್ತ ತುದಿಯ ಬಂಡೆಗಲ್ಲು ಮೇಲೆ ನಿಂತು ಕೆಳಕ್ಕೆ ಕಲ್ಲು ಒಗೆಯುತ್ತಿದ್ದರು. ಆಗ ಯಾರೋ ಮಹನೀಯರು “ಅಲ್ರಪ್ಪ ನೀವು ಒಗೆದ ಕಲ್ಲು ಅಕಸ್ಮಾತ್ ಜೇನುಗೂಡಿಗೆ ಏನಾದ್ರು ಬಿದ್ದು ಅವು ಎದ್ದರೆ ನೀವಷ್ಟೇ ಅಲ್ಲಾ ನಾವು ಎದ್ದುಬಿದ್ದು ಇಲ್ಲಿಂದ ಓಡಿ ಹೋಗಬೇಕಾಗುತ್ತದೆ. ಏಕೀ ಹುಚ್ಚು ಸಾಹಸ? ಕೆಳಕ್ಕೆ ಬನ್ನಿ ಎಂದು ಕರೆದರು.
ಏಪ್ರಿಲ್ ತಿಂಗಳಿನಲ್ಲಿ ವೈಶಾಖ ವೇಳೆ ನಡೆಯುವ ದೇವರ ವಾರ್ಷಿಕ ಕಾರ್ ಉತ್ಸವ ಪ್ರಸಿದ್ಧವಾಗಿದೆ. ದೇವಸ್ಥಾನದಲ್ಲಿ ಪ್ರಸಾದ ಊಟ ವ್ಯವಸ್ಥೆ 1 ಗಂಟೆಗೆ ಎಂದು ತಿಳಿಯಿತು. ಆಗ 11.30. ನಾವು ಊಟಕ್ಕೆ ಕಾಯದೆ ಬೆಟ್ಟದಿಂದ ಇಳಿದು ಬರುವಾಗ ಮೊಬೈಲ್ ಆನ್ ಮಾಡಿದೆ. ಕಲ್ಪನ ಅವರ ಹಾಡಿನ ಹಿನ್ನಲೆಯಲ್ಲಿ ಬಯಲು ಬೆಟ್ಟದ ದೃಶ್ಯ ಕಾಡಿನ ಮರವೆಲ್ಲಾ ಶ್ರೀ ಗಂಧವೇ.. ನಾಡಿನ ಮಣ್ಣೆಲ್ಲಾ ಬಂಗಾರವೇ.. ನೋಡಿದೆ.
ಗೊರೂರು ಅನಂತರಾಜು, ಹಾಸನ.
ಮೊ: 9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,3ನೇ ಕ್ರಾಸ್, ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, ಹಾಸನ.