ಬೆಂಗಳೂರು – ಜೀವಪರ ಹಾಗೂ ಸಮಾಜಪರ ಸೇವೆಯಲ್ಲಿ ರಕ್ತದಾನವು ಮಹೋನ್ನತವಾದುದು. ನವಭಾರತದ ಉದಯೋನ್ಮುಖ ಪ್ರಜೆಗಳಾದ ನಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನವನ್ನು ಉತ್ತೇಜಿಸುವುದು ಮತ್ತು ರಕ್ತದ ಬೇಡಿಕೆಯನ್ನು ಪೂರೈಸುವಲ್ಲಿ ಸ್ಥಳೀಯ ರಕ್ತ ಬ್ಯಾಂಕ್‌ಗಳನ್ನು ಬೆಂಬಲಿಸುವುದು ಅತ್ಯಗತ್ಯ ಎಂದು ಕ್ರಿಸ್ತು ಜಯಂತಿ ಕಾಲೇಜಿನ ಪ್ರಾಂಶುಪಾಲರಾದ ಫಾ.ಡಾ.ಅಗಸ್ಟೀನ್ ಜಾರ್ಜ್ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನ ‘ಜಯಂತಿಯನ್ ವಿಸ್ತರಣಾ ಸೇವೆಗಳು’(ಎನ್‌ಸಿಸಿ, ಎನ್‌ಎಸ್‌ಎಸ್, ವೈಆರ್‌ಸಿ, ಕೆಸಿಡಿಸಿ, ಯುಬಿಎ, ಮತ್ತು ಸಿಎಸ್‌ಎ) ವತಿಯಿಂದ ಲಯನ್ಸ್ ಬ್ಲಡ್ ಸೆಂಟರ್, ಸೇಂಟ್ ಜಾನ್ಸ್ ಆಸ್ಪತ್ರೆ, ಟಿಟಿಕೆ ಬ್ಲಡ್ ಸೆಂಟರ್, ಸೇಂಟ್ ಫಿಲೋಮಿನಾ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ, ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್ ಮತ್ತು ನಿಮ್ಹಾನ್ಸ್ ಆಸ್ಪತ್ರೆ, ಅವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ವಾರ್ಷಿಕ ರಕ್ತದಾನ ಶಿಬಿರ’ವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಶಿಬಿರದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ಅಧ್ಯಾಪಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು, ಜೊತೆಗೆ ಅವರು ರಕ್ತದಾನ ಮಾಡಲು ಮುಂದೆ ಬಂದರು. ದಾನ ಪ್ರಕ್ರಿಯೆಯ ಮೊದಲು ವೈದ್ಯಕೀಯ ವೃತ್ತಿಪರರ ತಂಡವು ದಾನಿಗಳನ್ನು ಪರೀಕ್ಷಿಸಿ ಸಲಹೆ ನೀಡಿತು. ಶಿಬಿರವನ್ನು ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣದಲ್ಲಿ ನಡೆಸುವ ಮೂಲಕ ದಾನಿಗಳ ಯೋಗಕ್ಷೇಮವನ್ನು ಖಚಿತಪಡಿಸಲಾಗಿತ್ತು. ಈ ಮೂಲಕ ಈ ವರ್ಷದ ಶಿಬಿರದಲ್ಲಿ ಒಟ್ಟು 792 ಯೂನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ಅದ್ಭುತವಾದ ಯಶಸ್ಸನ್ನು ಕಂಡಿತು ಎಂದು ಪ್ರಶಂಸೆ ವ್ಯಕ್ತಪಡಿಸಿದರು
ಈ ರಕ್ತದಾನ ಶಿಬಿರದಲ್ಲಿ ಸಂಗ್ರಹಿಸಲಾದ ರಕ್ತ ಘಟಕಗಳನ್ನು ಸಹಯೋಗ ನೀಡಿದ ರಕ್ತನಿಧಿ ಕೇಂದ್ರಗಳಿಗೆ ಹಸ್ತಾಂತರಿಸಲಾಯಿತು. ಲಯನ್ಸ್ ಬ್ಲಡ್ ಸೆಂಟರ್ನ ವೈದ್ಯರೊಬ್ಬರು ಮಾತನಾಡುತ್ತಾ, “ನಮ್ಮ ರಕ್ತ ಕೇಂದ್ರವು ರಕ್ತದ ಘಟಕಗಳ ತೀವ್ರ ಕೊರತೆಯನ್ನು ಎದುರಿಸಿತು. ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸುವಲ್ಲಿ ಮತ್ತು ಜೀವಗಳನ್ನು ಉಳಿಸುವ ಉದಾತ್ತ ಉದ್ದೇಶವನ್ನು ಬೆಂಬಲಿಸುವಲ್ಲಿ ಇಂದು ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರವು ಸಾಕ್ಷಿಯಾದುದಕ್ಕೆ ಹೆಮ್ಮೆಪಡುತ್ತೇವೆ. ಸಮಾಜಮುಖೀ ಆಶಯವುಳ್ಳ ಕೆಜೆಸಿ ಸಂಸ್ಥೆಯ ಸಮುದಾಯ ಸೇವೆ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವವು ಅನುಕರಣೀಯ. ರಕ್ತದಾನಿಗಳ ನಿಸ್ವಾರ್ಥ ಕೊಡುಗೆ ಮತ್ತು ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ ವೈದ್ಯಕೀಯ ತಂಡ, ಸ್ವಯಂಸೇವಕರು ಮತ್ತು ಕೆಜೆಸಿ ಜೆಸ್ ಸಂಘಟಕರ ದಣಿವರಿಯದ ಪ್ರಯತ್ನಗಳನ್ನು ನಾವು ಪ್ರಶಂಸಿಸುತ್ತೇವೆ” ಎಂದು ತಿಳಿಸಿದರು.
ರಕ್ತದಾನ ಶಿಬಿರವು ‘ಜಯಂತಿಯನ್ ವಿಸ್ತರಣಾ ಸೇವೆ’(ಜೆಸ್) ಕೇಂದ್ರದ ನಿರ್ದೆಶಕರಾದ ಫಾ.ಜೈಸ್ ವಿ ಥಾಮಸ್ ಅವರ ನೇತೃತ್ವದಲ್ಲಿ ನಡೆಯಿತು. ಕೇಂದ್ರದ ಅಧ್ಯಾಪಕ ಸಂಯೋಜಕರಾದ ಪ್ರೊ.ಮಂಜುನಾಥ್ ಎಸ್., ಎನ್‌ಸಿಸಿ ಸಂಯೋಜಕರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್, ಎನ್‌ಎಸ್‌ಎಸ್ ಸಂಯೋಜಕರಾದ ಡಾ.ಶ್ರೀಧರ್ ಪಿ.ಡಿ., ವೈಆರ್‌ಸಿ ಸಂಯೋಜಕರಾದ ಪ್ರೊ.ಧನಪಾಲ್, ಕೆಸಿಡಿಸಿ ಸಂಯೋಜಕರಾದ ಡಾ.ಅಬ್ದುಲ್ ರಝಾಕ್, ಯುಬಿಎ ಸಂಯೋಜಕರಾದ ಪ್ರೊ.ಚಂದ್ರಶೇಖರ್ ಎನ್., ಮತ್ತು ಸಿಎಸ್‌ಎ ಸಂಯೋಜಕರಾದ ಪ್ರೊ.ಶಶಿಕುಮಾರ್ ಎಂ. ಅವರು ಉಪಸ್ಥಿತರಿದ್ದರು.