ನನ್ನ ಆತ್ಮೀಯ ಕವಿಮಿತ್ರರೊಬ್ಬರ ಕವನ ಸಂಕಲನ ಒಂದಕ್ಕೆ ನಾನು ವಿಮರ್ಶೆ ಬರೆದದ್ದು, ಅದೂ ಪತ್ರಿಕೆಯಲ್ಲಿ ಪ್ರಕಟಣೆಯಾಗಿದ್ದನ್ನು ಓದಿ ಮಹಿಳೆಯೊಬ್ಬರು ಕರೆ ಮಾಡುತ್ತಾರೆ. “ಬಾಳ ಚಲೋ ವಿಮರ್ಶೆ ಬರೆದಿದ್ದೀರಿ ಗಣಪತಿ ಗೋ ಚಲವಾದಿ ಸರ್..” ಎಂದು ಮಾತು ಸುರು ಮಾಡಿ, ತಮ್ಮ ಸಾಹಿತ್ಯ ಪ್ರತಿಭೆಯನ್ನು ಹೊರ ಹಾಕಿದವರು ಬೇರೆ ಯಾರು ಅಲ್ಲ. ಇವತ್ತು ನಾನು ಕೃತಿಯ ಕುರಿತಾಗಿ ವಿಮರ್ಶೆ ಬರೆಯುತ್ತಿರುವ ಈ ಮಹತ್ವದ ಕಾದಂಬರಿಕಾರರೇ ಶ್ರೀಮತಿ ವಿದ್ಯಾ ರೆಡ್ಡಿಯವರು.
ಹೌದು! ನಿಜಕ್ಕೂ ಅವರ ಸಾಹಿತ್ಯ ಸ್ನೇಹಕ್ಕೆ ಕಟ್ಟು ಬಿದ್ದು “ಆಯಿತು ಕಳಿಸಿ ಸಾಧ್ಯವಾದ್ರೆ ವಿಮರ್ಶೆ ಬರೆಯುತ್ತೇನೆ”. ಎಂದು ಹೇಳಿದ್ದೇ ತಡ. ಕೇವಲ ನಾಲ್ಕಾರು ದಿನಗಳಲ್ಲಿ ಅವರ ಕಾದಂಬರಿ ಅಂಚೆ ಮೂಲಕ ನನ್ನ ಕೈಗೆ ತಲುಪಿತ್ತು. ಹಾಗೆ ಕಾದಂಬರಿಯ ಪುಟಗಳನ್ನೂ ತಿರುವುತ್ತ ಕಣ್ಣಾಡಿಸಿದಾಗ, ಬಿಟ್ಟು ಬಿಡದೇ ಕಾದಂಬರಿ ಓದಿಸಿಕೊಂಡು ಹೋಯಿತು. ಕಾದಂಬರಿಕಾರರ ಬಗ್ಗೆ ಗೌರವ ಹೆಚ್ಚುತ್ತಾ ಹೋಯಿತು. ವಿಮರ್ಶೆ ಬರೆಯುವ ಆಸಕ್ತಿ ಕೂಡ ಹೆಚ್ಚಿತು. ಮುಂದಿನ ಬರವಣಿಗೆ ನಿಮ್ಮ ಮುಂದೆ ಇಟ್ಟಿದ್ದೇನೆ ನೀವೇ ಓದಿ ಮತ್ತೂ ಅವರಿಗೂ ನನಗೂ ಕೂಡ ಶುಭ ಹಾರೈಸೋದನ್ನು ಮರೆಯದಿರಿ.
ನಿಜ ಮಂಜು ಮುಸುಕಿದೆ! ಕೋಟಿ ಕೋಟಿ ಜನತೆಯ ಬಾಳಿನಲ್ಲಿ ಮಂಜು ಮುಸುಕಿದೆ. ಬರೀ ಕಾರ್ಮೋಡ ಕವಿದಿದೆ. ಇದು ಭೂತ, ವರ್ತಮಾನದಲ್ಲೂ ನೈಜವಾಗಿದೆ. ಏಕೆಂದರೆ ಮಾನವರಲ್ಲಿನ ಅಜ್ಞಾನ ಅಂಧಕಾರ,ಮೌಢ್ಯತೆ,ವರ್ಣ,ವರ್ಗ, ಜಾತಿ, ಲಿಂಗ ತಾರತಮ್ಯದ ಧೋರಣೆಯಿಂದಾಗಿ ಮಾನವಂತರು ಸತ್ಯವಂತರು, ಬಡವರೂ, ದೀನದಲಿತರು, ಮಹಿಳೆಯರು ಮಕ್ಕಳು ಪ್ರತಿ ದಿನ, ಪ್ರತಿಕ್ಷಣ ನೋವು, ಯಾತನೆಗಳಿಂದ ನರಳುವಂತಾಗಿದೆ. ಅರಿಷಡ್ವರ್ಗಗಳ ಬೆನ್ನತ್ತಿರುವ ಮಾನವ ತನ್ನ ದುರ್ನಡತೆಯ, ದಬ್ಬಾಳಿಕೆಯ ಕಾರಣವಾಗಿ ಮನುಕುಲದ ನಾಶಕ್ಕೆ ಪ್ರತಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣನಾಗಿದ್ದಾನೆ. ಈ ಸತ್ಯವನ್ನು ಎಷ್ಟೋ ಸಾಹಿತಿಗಳು, ಚಿಂತಕರು, ಬುದ್ದಿ ಜೀವಿಗಳು ಹಲವಾರು ಸಾಹಿತ್ಯ ಪ್ರಕಾರಗಳ ಮುಖೇನ ಓದುಗ ಪ್ರಪಂಚಕ್ಕೆ ತಮ್ಮ ಬರವಣಿಗೆಯ ಮೂಲಕ ಇದನ್ನು ಪ್ರಸ್ತುತ ಪಡಿಸಿದ್ದಾರೆ ಮತ್ತು ಪಡಿಸುತ್ತಿದ್ದಾರೆ ಕೂಡ. ಈಗ ಈ ಸಾಲಿಗೆ ಕುಂದಾನಗರಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಶ್ರೀಮತಿ ವಿದ್ಯಾ ರೆಡ್ಡಿಯವರು ಹೊಸ ಸೇರ್ಪಡೆ ಎಂದು ಹೇಳಬಹುದಾಗಿದೆ.
ಶ್ರೀಮತಿ ವಿದ್ಯಾರೆಡ್ಡಿಯವರನ್ನು ಪ್ರತಿಭಾನ್ವಿತ ಯುವ ಕವಯತ್ರಿ, ಲೇಖಕಿ, ಕಾದಂಬರಿಕಾರ್ತಿಯರೆಂದು ಹೇಳಬಹುದಾಗಿದೆ. ಏಕೆಂದರೆ ಈಗಾಗಲೇ ಅವರು ಪತ್ರಿಕೆ, ಅಂತರ್ ಜಾಲದಲ್ಲಿ ಹಲವಾರು ವೈಚಾರಿಕ ಬರಹಗಳನ್ನು ಬರೆಯುತ್ತ ಓದುಗ ಪ್ರಪಂಚದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಅದೇ ರೀತಿಯಾಗಿ ಕವನ ಸಂಕಲನ ಪ್ರಕಟಿಸುವ ಮೂಲಕ ಭರವಸೆಯ ಕವಯತ್ರಿಯಾಗಿ ಒಡನಾಡಿಗಳಲ್ಲಿ ಸಂತಸ ಮೂಡಿಸಿದ್ದಾರೆ. ಮುಂದುವರೆದು ಹಗಲಿರುಳು ಓದಿ, ಅಧ್ಯಯನಗೈದುದರ ಪ್ರತಿಫಲವಾಗಿ ಅವರೀಗ ನವ ಕಾದಂಬರಿಯ ಕರ್ತೃವಾಗಿ ಸಾಹಿತ್ಯ ಲೋಕದ ಜವಾಬ್ದಾರಿ ಅರಿತಿದ್ದಾರೆ ಎಂದೇ ಹೇಳಬಹುದಾಗಿದೆ. ಹೌದು! ಇತ್ತೀಚೆಗೆಷ್ಟೇ ದ್ವಿತೀಯ ಮುದ್ರಣ ಕಂಡು ಲೋಕಾರ್ಪಣೆಗೊಂಡ ಕಾದಂಬರಿಯೇ “ಮಂಜು ಮುಸುಕಿದ ಹಾದಿ ” ಎಂಬ ಸುಂದರ ಶೀರ್ಷಿಕೆಯುಳ್ಳದ್ದು, ವೃತ್ತಿಯಿಂದ ಕನ್ನಡ ಪ್ರಾಧ್ಯಾಪಕರಾಗಿರುವ ಶ್ರೀಮತಿ ವಿದ್ಯಾ ರೆಡ್ಡಿಯವರು ಈ ಕಾದಂಬರಿಯನ್ನು ಹೆತ್ತವರ ಸಮಾನರಾಗಿರುವ ತಮ್ಮ ಪ್ರೀತಿಯ ಅತ್ತೆ-ಮಾವನಿಗೆ ಅರ್ಪಿಸಿದ್ದು ವಿಶೇಷವಾಗಿದೆ. ಈ ಮೂಲಕ ತಾನೂ ಆದರ್ಶ ಸೊಸೆ ಎಂಬುದನ್ನು ಸಾಬೀತು ಪಡಿಸಿದ್ದಾರವರು. ಈ ಕಾದಂಬರಿಗೆ ಮುನ್ನುಡಿಯನ್ನು ಹಿರಿಯರೂ,ಬುದ್ದಿಜೀವಿಗಳೂ ಆಗಿರುವ ಮಹಾಲಿಂಗ ಮಂಗಿಯವರು ಆಶೀರ್ವಾದ ಪೂರಕವಾಗಿ ಮುನ್ನುಡಿ ಬರೆದು ಶುಭ ಹಾರೈಸಿದ್ದಾರೆ. ಅಷ್ಟೇ ಅಕ್ಕರೆಯ ಪೂರ್ವಕವಾಗಿ ಪ್ರೋ. ಸಂಗಮೇಶ ಗುಜಗೊಂಡ ರವರು ಬೆನ್ನುಡಿ ಬರೆದು ಬೆನ್ನು ತಟ್ಟಿ ಶುಭ ಹಾರೈಸಿದ್ದಾರೆ. ಅದೇ ರೀತಿಯಾಗಿ ಶ್ರೀಮತಿ ವಿದ್ಯಾರೆಡ್ಡಿಯವರ ಬಳಗ ತುಂಬಾ ದೊಡ್ಡದೇ ಇರುವುದಾಗಿ ಅವರ ಈ ಕಾದಂಬರಿ ಮೆಚ್ಚಿ ವಿವಿಧ ಶೀರ್ಷಿಕೆಯಡಿ ಶುಭಾಶಯಗಳನ್ನು ಬರೆದವರ ಸಾಕಷ್ಟು ಮಹನೀಯರ ಪಟ್ಟಿ ಓದಿದವರಿಗೇನೇ ತಿಳಿಯುವಂತದ್ದು ಮತ್ತು ಒಬ್ಬ ಬರಹಗಾರರಿಗೆ ಇಷ್ಟೊಂದು ಹಿತೈಷಿಗಳು ಇರುವುದು ಸೂಕ್ತವೇ ಆಗಿದೆ. ಇನ್ನು ಈ ಕಾದಂಬರಿ ಬಿಂದು ಲಲಿತ ಕಲೆ ಹಾಗೂ ಜಾನಪದ ಅಧ್ಯಯನ ಕೇಂದ್ರ ಗೋಕಾಕ ಇವರ ಪ್ರಕಾಶನದಲ್ಲಿ ಅಚ್ಚುಕಟ್ಟಾಗಿ ಮೂಡಿ ಬಂದಿದೆ.
ಕಾದಂಬರಿ ಅನ್ನೋದು ಸಾಹಿತ್ಯ ಪ್ರಕಾರದ ಒಂದು ವಿಶಿಷ್ಟ ಪ್ರಕಾರವಾಗಿದೆ. ನಾಲ್ಕಾರು ಸಾಲುಗಳಲ್ಲಿ ಹಲವಾರು ಕವನಗಳನ್ನು ಬರೆದು ಒಂದು ಕವನ ಸಂಕಲನ, ಅದೇ ರೀತಿಯಾಗಿ ನಾಲ್ಕಾರು ಭಿನ್ನ ವಿಭಿನ್ನ ಕಥೆಗಳನ್ನು ಬರೆದು ಕಥಾ ಸಂಕಲನವೊಂದನ್ನು ಪ್ರಕಟಿಸಬಹುದೇನೋ. ಆದರೆ ಒಂದು ನಿರ್ದಿಷ್ಟ ವಿಷಯ ವಸ್ತುವನ್ನು ಇಟ್ಟುಕೊಂಡು ವಿವರಣಾತ್ಮಕವಾಗಿ, ಸುಂದರ ಭಾಷೆಯೊಂದಿಗೆ, ಭಾವಪೂರ್ಣವಾಗಿ ಓದುಗರಿಗೆ ಮನ ಮುಟ್ಟುವಂತೆ ಕಾದಂಬರಿ ರಚಿಸುವುದು ಒಂದು ಸಾಹಸವೇ ಸರಿ ಎಂದು ಹೇಳಬಹುದಾಗಿದೆ. ಆಳವಾಗಿ ಸಾಹಿತ್ಯದಲ್ಲಿ ಪಳಗಿರಬೇಕಾಗುತ್ತದೆ. ಹೀಗಾಗಿ ಕಾದಂಬರಿ ರಚನೆಯು ಸಾಹಿತಿಗಳಿಗೆ ಕಷ್ಟ ಸಾಧ್ಯ. ಅದರಲ್ಲೂ ಉತ್ತಮ ಕಾದಂಬರಿ ರಚನೆಯು ಇನ್ನೂ ಕಷ್ಟ ಸಾಧ್ಯವೆನ್ನಬಹುದು.
ಶ್ರೀಮತಿ ವಿದ್ಯಾ ರೆಡ್ಡಿಯವರು “ಮಂಜು ಮುಸುಕಿದ ಹಾದಿ” ಎಂಬ ಉತ್ತಮ ಶೀರ್ಷಿಕೆಯುಳ್ಳ ಕಾದಂಬರಿಯನ್ನು ಸಾಮಾನ್ಯ ಸ್ಥರದಲ್ಲಿ ರಚಿಸುವ ಮೂಲಕ ಕಷ್ಟ ಸಾಧ್ಯ ಸಾಹಿತ್ಯ ಪ್ರಕಾರವನ್ನು ಸರಳ ಸಾಧ್ಯವನ್ನಾಗಿಸಿಕೊಂಡಿದ್ದಾರೆ. ಆದುದರಿಂದ ಅವರು ಅಭಿನಂದನೆಗೆ ಅರ್ಹರು.
ಕಾಲಕ್ಕೆ ತಕ್ಕಂತೆ ಎಲ್ಲರೂ ಬದಲಾಗಬೇಕು ಎಂಬ ಮಾತೊಂದಿದೆ. ಅದೇ ರೀತಿಯಾಗಿ ಬುದ್ಧ ಬಸವ, ಡಾ.ಬಿ. ಆರ್ ಅಂಬೇಡ್ಕರ್ ವರ ಆಸೆಯ ಧೋರಣೆಯಂತೆ ಹೆಣ್ಣುಮಕ್ಕಳು ಅಬಲೆಯರಾಗದೇ ಸಬಲೆಯರಾಗಬೇಕಿದೆ. ಈ ಕಾರಣಕ್ಕಾಗಿಯೇ ಸಂವಿಧಾನ ಪಿತರು 70 ವರ್ಷಗಳ ಹಿಂದೆಯೇ ಮಹಿಳೆಗೆ ಮನೆ, ಉದ್ಯೋಗ, ಆಸ್ತಿ ಎಲ್ಲದರಲ್ಲೂ ಪಾಲು ಸಿಗುವಂತೆ ಮಾಡಿದ್ದಾರೆ. ಇದರ ಪ್ರತಿಫಲವಾಗಿ ಇವತ್ತು ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಮಹಿಳೆಯರು ಅಲ್ಪ ಪ್ರಮಾಣದಲ್ಲಿ ಸಾಧಕರಾಗಿದ್ದರೂ ಕೂಡ.
ಇನ್ನೂ ಸಾದಿಸುವುದು ತುಂಬಾನೇ ಇದೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ತುಂಬಾ ಪ್ರಗತಿ ಕಾಣಬೇಕಿದೆ. ಆಗಾಗ, ಅಲ್ಲಲ್ಲಿ ಕೇಳಿ ಬರುವ ಮಾತುಗಳು ‘ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬಂದಿದ್ದಾರೆ’ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಕೂಡ ಹೆಣ್ಣು ಬಾಲ್ಯದಲ್ಲಿ ಹೆತ್ತವರ ಆಸರೆಯಲ್ಲಿ, ಯೌವನದಲ್ಲಿ ಗಂಡಸಿನ ಆಸರೆಯಲ್ಲಿ ಮುಪ್ಪಿನಲ್ಲಿ ಮಕ್ಕಳ ಆಸರೆಯಲ್ಲಿ ಹೇಗಾದರೂ ಸರಿ ಬದುಕು ನಡೆಸಬೇಕು ಎಂಬುದಾಗಿ ಅಂದು ಮನುವಾದಿ ಹೇಳಿದಂತೆ ಇಂದಿಗೂ ಬಹುತೇಕ ಹೆಣ್ಣುಮಕ್ಕಳ ಸ್ಥಿತಿ ಹೀಗೆಯೇ ಇದೆ. ಇದನ್ನು ನಾವು ನೀವುಗಳು ನಂಬಲೇಬೇಕಿದೆ. ಶ್ರೀಮತಿ ವಿದ್ಯಾ ರೆಡ್ಡಿಯವರು ಬರೆದಿರುವ ಈ ಕಾದಂಬರಿಯನ್ನು ಓದಿದರೆ ಇದು ಇನ್ನೂ ನಿಜವಾಗಿದೆ ಅನ್ನಿಸುತ್ತದೆ. ಈ ಕಾದಂಬರಿಯಲ್ಲಿ ಬರುವ ಶೀಲಾ ಎಂಬ ಅವಿದ್ಯಾವಂತ, ಮುಗ್ದೆ, ಪ್ರಾಮಾಣಿಕ, ಸ್ವಾಭಿಮಾನದ ಹೆಣ್ಣುಮಗಳ ಸ್ಥಿತಿ ತೀವ್ರ ಅಪಘಾತಕ್ಕೊಳಗಾದ ಗಂಭೀರ, ಚಿಂತಾಜನಕ ಸ್ಥಿತಿಯಲ್ಲಿರುವ ಜೀವಿಯಂತಾಗಿದೆ. ಕೊರೋನಾದಂತಹ ಈ ಸಂದರ್ಭದಲ್ಲಿ ಹಣವಿಲ್ಲದೆ, ದೊಡ್ಡವರ ಬೆಂಬಲವಿಲ್ಲದೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಡ ರೋಗಿ ಹೇಗೆ ಕೆಲವು ವೈದ್ಯರಿಂದ ಕೋಮಾ ಸ್ಥಿತಿಯಲ್ಲಿದ್ದರೂ ಕೂಡ ನಿಷ್ಕಾಳಜಿ ತೋರಿ ಸತ್ತರೆ ಸಾಯಲಿ ಎಂಬ ಮನೋಧೋರಣೆ ಹೊಂದುತ್ತಾರೋ, ಅದೇ ರೀತಿಯಾಗಿ ಶೀಲಾಳ ಜೀವನದಲ್ಲಿ ಬರುವ ಆಘಾತದಲ್ಲಿ ಆಕೆಯ ಸಂಬಂಧಿಕರು, ನಾಗರಿಕರು, ಸಮಾಜ ನಿಷ್ಕಾಳಜಿ ತೋರುವ ಕೆಲವು ವೈದ್ಯರಂತೆ ಅಭಿನಯಿಸಿದ್ದಾರೆ.
ಶೀಲಾಳ ತಂದೆ ನಿಂಗಪ್ಪ, ತಾಯಿ ಭೀಮವ್ವ, ಸಹೋದರ ಸುಖದೇವ ಇವರು ಮೂವರು ಸ್ವಾರ್ಥಿಗಳೇ ಆಗಿದ್ದಾರೆ. ಏಕೆಂದರೆ ಇವರುಗಳು ಯಾವತ್ತೂ ಶೀಲಾಳಿಂದ ಸೇವೆ, ಲಾಭ ಪಡೆಯುತ್ತಾರೆಯೇ ಹೊರತು ಆಕೆಗೆ ಏನೂ ಸಹಾಯ ಮಾಡದೇ ಇರುವುದು ದುರಂತ!. ರಕ್ತ ಸಂಬಂಧ ಅಂದರೆ ಇಷ್ಟೇನಾ..?! ಇದೇನಾ?! ಎಂಬ ಪ್ರಶ್ನೆಗಳು ಓದುಗರಲ್ಲಿ ಮೂಡಿದರೆ ಸಂದೇಹ ಪಡಬೇಕಾಗಿಲ್ಲ. ಹೀಗಿದೆ ಆಕೆಯ ಜೀವನದ ಪಾಡು!! “ಅದೂ ಅಲ್ಲದೇ ಒಳ್ಳೆಯ ಅಪ್ಪ ಅಮ್ಮಂದಿರು ಸಿಗಬೇಕಾದರೆ ಮಕ್ಕಳು ಅದೃಷ್ಟ ಮಾಡಿರಬೇಕು ಅನ್ನಿಸುತ್ತದೆ. ಶೀಲಾಳ ತಂದೆ ನಿಂಗಪ್ಪ ಮಾಟ, ಮಂತ್ರ, ಜ್ಯೋತಿಷ್ಯ ಹೇಳುವ ಮೋಸಗಾರನಾಗಿದ್ದೂ, ಶೀಲಾಳ ತಾಯಿ ಭೀಮವ್ವ ಕೂಡ ಮೋಸದಿಂದ ಹಣ ಪಡೆಯಲು ಪತಿಯ ಮೋಸದ ದಂಧೆಗೆ ಬೆಂಬಲ ಕೊಡುವುದು, ಕೊನೆಯಲ್ಲಿ ಪತಿಯ ಪಾಪದ ಹೊಳೆಯಲ್ಲಿ ತಾನೂ ಕೊಚ್ಚಿಕೊಂಡು ಹೋಗುವುದನ್ನು ಕಾದಂಬರಿಕಾರ್ತಿಯವರು ಶೀಲಾಳ ಅಪ್ಪ ಅಮ್ಮನ ಪಾತ್ರಗಳನ್ನು ಮನೋಜ್ಞವಾಗಿ ರಚಿಸಿದ್ದಾರೆ. ಅದೇ ರೀತಿಯಾಗಿ ಗಂಡು ಮಕ್ಕಳೆಂದು, ವಂಶಕ್ಕೆ ಗಂಡೇ ದಿಕ್ಕೆಂದು ಮೌಢ್ಯತನದಲ್ಲಿ ಹೆತ್ತವರು ಗಂಡು ಮಗನಿಗೆ ಸಲಿಗೆ ಕೊಟ್ಟು, ಮನ ಬಂದಂತೆ ಗೂಳಿಯಂತೆ ಅವನನ್ನು ಬೆಳೆಯಲು ಬಿಟ್ಟರೆ ಮುಂದೆ ಪರಿಣಾಮ ಏನಾಗಬಹುದು ಎಂಬುದನ್ನು ಕೂಡ ಈ ಕಾದಂಬರಿಯಲ್ಲಿ ಶೀಲಾಳ. ಸಹೋದರ ಸುಖದೇವನ ಪಾತ್ರ ಓದಿಯೇ ತಿಳಿಯಹುದಾಗಿದೆ. ಇನ್ನೂ ಅನೇಕ ಕಾದಂಬರಿ ಕತೆಗಳಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದಾಗಿ ಕಂಡು ಬರುವುದನ್ನು ನಾವು ಓದುತ್ತೇವೆ. ಆದರೆ ಇಲ್ಲಿ ಆ ಅಂಶ ಸ್ವಲ್ಪ ವಿರಳ ಪ್ರಮಾಣದಲ್ಲಿ ಇದೆ ಅಂತಾ ಅನ್ನಿಸಿದರೂ ಕೂಡ ಮಾಲಾಳ ಪತಿಯ ಮೊದಲ ಹೆಂಡತಿ ಸಂಕ್ರಿ ಮಾಲಾ, ಇಬ್ಬರೂ ಹೀಗೆ ಇರುವುದನ್ನು ಪ್ರತೇಕ್ಷವಾಗಿ ಕಾಣುತ್ತೇವೆ. ಆದರೆ ಶೀಲಾಳ ದುರಂತ ಬದುಕಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ತಂಪಾದ ಗಾಳಿಯಂತೆ ಬೀಸಿ ಬಂದವಳು ಆಕೆಯ ಅಕ್ಕ ಮಾಲಾ.
ಇನ್ನೂ ಶೀಲಾಳ ಯೌವ್ವನದ ದಿನಗಳ ಬಗ್ಗೆ ಹೇಳಬೇಕೆಂದರೆ ಬೇರೆ ಯಾವ ಹೆಣ್ಣುಮಕ್ಕಳಿಗೂ ಈಕೆಯ ಪರಿಸ್ಥಿತಿ ಬರಬಾರದೆಂದು ಓದುಗ ಪ್ರಭುಗಳು ಪ್ರಾರ್ಥಿಸಿಕೊಳ್ಳುವಷ್ಟು ಕೆಟ್ಟ ಪರಿಸ್ಥಿತಿ ಆಕೆಗೆ. ಅಕ್ಕಳ ಗಂಡ ಭಾಸ್ಕರ್ ಈಕೆಯ ಭಾವ ಒಬ್ಬ ಕಪಟಿಯಾಗಿರುತ್ತಾನೆ. ಅವಕಾಶ ಸಿಕ್ಕಿತೆಂದು, ಶೀಲಾಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ಆಕೆಗೆ ಸಂವಿಧಾನಾತ್ಮಕ ವಾಗಿ ಸಿಗಬೇಕಾಗಿದ್ದ ಮನೆಯನ್ನು ಮೋಸದಿಂದ ತನ್ನ ಹೆಸರಿಗೆ ಬರೆಯಿಸಿಕೊಳ್ಳುವುದು ಹಾಗೂ ಇದಕ್ಕಿಂತ ಕೆಟ್ಟದಾದುದು ಏನೆಂದರೆ ಹೆಂಡತಿಯ ತಂಗಿ ಮಗಳ ಸಮಾನ ಎಂದು ಹೇಳುತ್ತಾರೆ. ಆದ್ರೆ ಈತ ಆಕೆಯ ಮೇಲೆ ಕಣ್ಣು ಹಾಕಿ, ಕಾಮದ ಕಣ್ಣಿನಿಂದ ನೋಡುವುದು. ಇದು ಅತ್ಯಂತ ಶೋಚನೀಯವಾದುದು. ಈ ಯಾತನೆ ಅನುಭವಿಸಲಾಗದೆ ಶೀಲಾ ಮನೆ ಬಿಟ್ಟು ಹೋಗುತ್ತಾಳ.
ಆದರೆ ಹೆಣ್ಣುಮಕ್ಕಳಿಗೆ ಎಲ್ಲಿದೆ ರಕ್ಷಣೆ ಎಂಬಂತೆ, ಆಕೆಯ ಅಸಹಾಯಕತೆಯನ್ನು ಮಹೇಶ್ ಎಂಬ ತಲೆ ಹಿಡುಕ, ದುಷ್ಟ ಕಾಮುಕ, ದುರುಪಯೋಗ ಪಡಿಸಿಕೊಳ್ಳುತ್ತಾನೆ. ಆಕೆಯನ್ನು ಬಣ್ಣ ಬಣ್ಣದ ಮಾತುಗಳಿಂದ, ನಯವಾದ ಮಾತುಗಳಿಂದ, ಪುಸಲಾಯಿಸಿ ಊರಾಚೆ ಒಂಟಿ ಮನೆಗೆ ಕರೆದುಕೊಂಡು ಮುಗ್ದ ಹುಡುಗಿ ಶೀಲಾಳನ್ನು ತಾನೊಬ್ಬನೇ ಅಲ್ಲದೇ ತನ್ನ ಹಲವಾರು ಸ್ನೇಹಿತರೊಂದಿಗೆ ಕೂಡಿಕೊಂಡು ಆಕೆಯ ದೇಹದ ಮೇಲೆ ದಾಳಿ ಮಾಡುವುದನ್ನು ಓದುತ್ತಿದ್ದರೆ. ಈ ನಾಲ್ಕು ವರ್ಷಗಳ ಹಿಂದೆ ವಿಜಯಪುರದ ಬಾಲಕಿ ದಲಿತ, ಬಡ ಹುಡುಗಿ ದಾನಮ್ಮ ನೆನಪಿಗೆ ಬರುತ್ತಾಳೆ. ಆಕೆ ಶಾಲೆಯಿಂದ ಮನೆಗೆ ಬರುವಾಗ ಈ ಮೊದಲೇ ಹೊಂಚು ಹಾಕಿ ಕುಳಿತಿದ್ದ ಹಲವಾರು ಕೆಟ್ಟ, ಕಾಮುಕ ದುಷ್ಟ ಯುವಕರು ಆಕೆಯನ್ನು ಹಾಗಲಿನಲ್ಲಿಯೇ ನಿರ್ಜನ ಪ್ರದೇಶಕ್ಕೆ ಎತ್ತಿಕೊಂಡು ಹೋಗಿ ಕ್ರೂರವಾಗಿ ಅತ್ಯಾಚಾರ ಮಾಡಿದಂತೆ ಈ ಕಾದಂಬರಿಯಲ್ಲಿಯೂ ಕೂಡ ಶೀಲಾಳಿಗೆ ಮಹೇಶ್ ಹಾಗೂ ಇತರರು ಹರಿದು ತಿನ್ನುವದನ್ನು ಅಂದ್ರೆ ಅತ್ಯಾಚಾರ ಮಾಡುವುದನ್ನು ವಿದ್ಯಾ ರೆಡ್ಡಿಯವರು ಮಾರ್ಮಿಕವಾಗಿ ವಿವರಿಸುತ್ತಾ ಹೋಗುತ್ತಾರೆ. ಕಾದಂಬರಿಯಲ್ಲಿಯೂ ಕಾಮುಕರಿಗೆ ಶಿಕ್ಷೆಯಾಗುವುದಿಲ್ಲ. ಅದರಂತೆ ಅತ್ಯಾಚಾರ ಮಾಡಿ ವಿಜಯಪುರದ ದಾನಮ್ಮಳನ್ನು ಸಾಯಿಸಿರುವ ಕಾಮುಕ, ಕ್ರೂರಿಗಳಿಗೂ ಶಿಕ್ಷೆಯಾಗದೆ ಇರುವುದು ಮತ್ತೊಂದು ಹೋಲಿಕೆ. ಹೀಗೆ ಭವ್ಯ ಸಂಪ್ರದಾಯ, ಸಂಸ್ಕೃತ ನಾಡಿನಲ್ಲಿ ಹೆಣ್ಣುಮಕ್ಕಳನ್ನು ಹೀಗೇಕೆ ಹುರಿದು ಮುಕ್ಕುತ್ತಾರೆ ದುಷ್ಟ, ಕಾಮುಕರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಶೀಲಾ ಈಗ ಮಹೇಶನ ಕಪಿಮುಷ್ಟಿಯಲ್ಲಿ ಸಿಕ್ಕೂ ವೇಶ್ಯೆಯಾಗುವ ದೌರ್ಭಾಗ್ಯ ಅವಳದು. ಹೇಗೋ ಈ ನರಕದಿಂದ ಬಿಡುಗಡೆ ಹೊಂದಿ ಶಿವರಾಜ ಎಂಬ ವ್ಯಕ್ತಿ ಬಹುಶಃ ಈತ ಆಕೆಯ ಪಾಲಿಗೆ ಒಳ್ಳೆಯ ವ್ಯಕ್ತಿ ಎಂಬಂತೆ ಆಕೆಗೆ ಗೋಚರಿಸುತ್ತಾನೆ. ಏಕೆಂದರೆ ವೈಶ್ಯಾವಾಟಿಕೆ ಮಾಡುವವಳನ್ನು ಹೆಂಡತಿಯಾಗಿ ಸ್ವೀಕರಿಸುವ ಗುಣವುಳ್ಳ ಪುರುಷರೂ ಸಿಗುವುದೇ ಇಲ್ಲ ಎಂದೇ ಹೇಳಬೇಕು. ಆದಾಗ್ಯೂ ಶೀಲಾಳ ಬಾಳಿನಲ್ಲಿ ಶಿವರಾಜನ ಪ್ರವೇಶ. ಆತ ಅವಳನ್ನು ಸ್ವಲ್ಪ ದಿವಸ ಮಾತ್ರ ಹೆಂಡತಿಯಾಗಿ ಸ್ವೀಕರಿಸಿ, ಆಕೆಗೆ ಒಂದು ಗಂಡು ಮಗುವನ್ನು ಕೊಟ್ಟು ಪಲಾಯನ ಮಾಡುತ್ತಾನೆ.
ಈಗ ಮತ್ತೆ ಆಕೆ ನಿರ್ಗತಿಕಳಾಗುತ್ತಾಳೆ. ಆಕೆಯ ಬಾಳು ಮತ್ತೆ ಬೀದಿ ಪಾಲಾಗುತ್ತದೆ. ಅಲ್ಲಿ ಇಲ್ಲಿ ಕೂಲಿನಾಲಿ ಮಾಡುತ್ತ ಸ್ವಾಭಿಮಾನದಿಂದ ಮಗನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡುತ್ತಾಳೆ. ಈ ಮಧ್ಯೆ ಭಾವುಕ ಜೀವಿಯಾಗಿದ್ದ ಶೀಲಾಳಿಗೆ ಅಕ್ಕಳನ್ನು ಹಾಗೂ ಆಕೆಯ ಸಂಸಾರವನ್ನು ನೋಡುವ ಕುತೂಹಲ, ಆಸೆ ಉಂಟಾಗಿ ಆದದ್ದಾಗಲಿ ಎಂದು ಧೈರ್ಯವಾಗಿ ಅಕ್ಕಳ ಮನೆಗೆ ಬರುತ್ತಾಳೆ. ಸಂಕ್ರಿ ಸತ್ತು ಹೋಗಿದ್ದೂ, ಭಾವ ಕೆಟ್ಟ ಬೇನೆಯಿಂದ ನರಳುತ್ತಿರುವುದನ್ನು ಶೀಲಾ ಕಾಣುತ್ತಾಳೆ. ಅಕ್ಕ ಮಾಲಾ ” ನೋಡಿದೆಯಾ ಶೀಲಾ ನಿನಗೆ ಮೋಸ ಮಾಡಿದ್ದಕ್ಕಾಗಿ ನನ್ನ ಪತಿಗೆ ಇವತ್ತು ಈ ಗತಿ ಬಂದಿದೆ”. ಎಂದು ಪತಿಯ ಮೇಲಿನ ಕೋಪ ತೋಡಿಕೊಳ್ಳುತ್ತಾಳೆ. ಆದ್ರೆ ಯಾರಿಗೂ ಯಾವತ್ತಿಗೂ ಕೆಟ್ಟದ್ದನ್ನು ಬಯಸದ ಶೀಲಾ ಈಗಲೂ ಅಕ್ಕಳ ಗಂಡನ ಬಗ್ಗೆ ಮೃದು ಧೋರಣೆ ತೋರುತ್ತಾಳೆ. ಹೀಗಾಗಬಾರದಿತ್ತು ಎಂದು ದುಃಖಿಸುತ್ತಾಳೆ. ಅದೇ ರೀತಿಯಾಗಿ ಅಕ್ಕಳಿಂದ ತನ್ನ ಸ್ವಂತ ಸಹೋದರನ. ಸಾವಿನ ಬಗ್ಗೆ ತಿಳಿದು ದುಃಖಿಸುವುದನ್ನು ಓದಿದರೆ ಶೀಲಾಳ ಹೃದಯ ಶ್ರೀಮಂತಿಕೆ ತಿಳಿದು ಬರುತ್ತದೆ. ಈಗ ಶೀಲಾ ತನ್ನ ಅಕ್ಕಳ ಕಷ್ಟ ಸುಖ ತಿಳಿದುಕೊಂಡು, ತನ್ನ ಕಷ್ಟದ ಜೀವನ ಹೇಳದಿದ್ದರೂ ಅಕ್ಕ ಮಾಲಳಿಗೆ ಗೊತ್ತಾಗಿ ಹೋಗುತ್ತದೆ. ಮುಗ್ಧೆ, ಸಂಭಾವಿತೆ ತಂಗಿ ಶೀಲಾಳ ನರಕದ, ಯಾತನೆಯ ಬದುಕನ್ನು ಕೇಳಿ ಅಕ್ಕ ತುಂಬಾ ದುಃಖ ಪಡುತ್ತಾಳೆ. ಇನ್ನೂ ಮುಂದಾದರೂ ಶೀಲಾ ಸುಖವಾಗಿ ಬಾಳುವಂತಾಗಲಿ ಎಂದು ಬಯಸುತ್ತಾಳೆ. ಆದ್ರೆ ನಾವು ಅಂದುಕೊಂಡಂತೆ ಯಾವುದೂ ಆಗೋದಿಲ್ಲ ಎಂಬ ಮಾತಿನಂತೆ, ಈಗ ಶೀಲಾಳ ಬದುಕಿಗೆ ಸ್ವಂತ ಮಗನೇ ಖಳ ನಾಯಕನಾಗುತ್ತಾನೆ! ಏಕೆಂದರೆ ಆತನಿಗೆ ಸಮಾಜದ ಜನರು. “ನಿಮ್ಮಪ್ಪ ಎಲ್ಲಿದ್ದಾನೆ..?, ಯಾರು ನಿಮ್ಮಪ್ಪ..?, ನಿಮ್ಮಮ್ಮ ಸೂಳೆ. ಹಾಗೆ ಹೀಗೆ ಮಾತಾಡುವುದನ್ನು ಕೇಳಿಸಿಕೊಂಡ ಮಗ ತಾಯಿಯನ್ನು ಜರಿಯತೊಡಗುತ್ತಾನೆ. ಹೆತ್ತ ತಾಯಿಯ ಮೇಲೆ, ಹೆತ್ತು, ಹೊತ್ತು ಬೆಳೆಸಿ ದೊಡ್ಡವನನ್ನಾಗಿ ಮಾಡಿದ ತಾಯಿಯ ಮೇಲೆ ದ್ವೇಷ ಕಾರುತ್ತಾನೆ. ಹೆತ್ತ ತಾಯಿಯ ಮನಸ್ಸಿಗೆ ಘಾಸಿ ಮಾಡುತ್ತಾನೆ. ಈಗಾಗಲೇ ಜೀವನದಲ್ಲಿ ಸಾಕಷ್ಟು ನೊಂದು ಬೆಂದು ಹೋಗಿದ್ದ ಶೀಲಾ ಈಗ ಇಲ್ಲಿಯವರೆಗೂ ಎಂಥಾ ತೊಂದ್ರೆ ತಾಪತ್ರಯವನ್ನು ತಾಳಿಕೊಂಡು ಬದುಕುವ ಆಸೆ ಹೊಂದಿದ್ದರೂ ಕೂಡ, ಇಳಿ ವಯಸ್ಸಿನಲ್ಲಿ ಮಗನ, ಚುಚ್ಚು ಮಾತುಗಳನ್ನು, ಗಾಯದ ಮೇಲೆ ಗಾಯ ಸಹಿಸಿಕೊಳ್ಳೋಕೆ ಆಗಲಿಲ್ಲ. ‘ನನ್ನಂತ ಜೀವನ ಅದ್ಯಾವ ಹೆಣ್ಣುಮಗಳಿಗೂ ಬಾರದಿರಲಿ’ ಎಂಬುದಾಗಿ ಹೇಳಿಕೊಳ್ಳುತ್ತಾ, ಮಗ ಜೀವನದಲ್ಲಿ ಸುಖವಾಗಿ ಇರಲಿ. ನನ್ನಿಂದಾಗಿ ಅವನಿಗೆ ಕಷ್ಟವಾಗದಿರಲಿ. ನಾನು ಬದುಕಿರುವತನಕ ಮಗನಿಗೆ ನೆಮ್ಮದಿ, ಸಿಗಲಿಕ್ಕಿಲ್ಲ ಎಂದೆಲ್ಲ ಯೋಚಿಸುತ್ತ ನಿದ್ರೆ ಮಾತ್ರೆಗಳನ್ನು ಸೇವಿಸಿ ಚಿರನಿದ್ರೆಗೆ ಜಾರುತ್ತಾಳೆ. ಅಲ್ಲಿಗೆ ಮಂಜು ಮುಸುಕಿದ ಕಾದಂಬರಿ ದುಃಖದಲ್ಲಿಯೇ ತೆರೆ ಬೀಳುತ್ತದೆ.
ಹೀಗೆ ಶ್ರೀಮತಿ ವಿದ್ಯಾರೆಡ್ಡಿ ಯವರು ಬರೆದ ಚೊಚ್ಚಲ ಕಾದಂಬರಿಯಲ್ಲಿ ಒಬ್ಬ ಸುಶೀಲೆ, ಮುಗ್ಧ, ಪ್ರಾಮಾಣಿಕ, ಕಪಟತನವಿಲ್ಲದ ಶೀಲಾ ಎಂಬ ಹೆಣ್ಣುಮಗಳೊಬ್ಬಳು, ಬಾಲ್ಯಾವಸ್ಥೆಯಲ್ಲಿ ಹೆತ್ತವರ ಆಸರೆ ಸಿಗದೇ, ಮಧ್ಯಮ, ಯೌವ್ವನದ ವಯಸ್ಸಿನಲ್ಲಿ ಪತಿಯ ಆಸರೆ ಸಿಗದೇ, ಮುಪ್ಪಿನಾವಸ್ಥೆಯಲ್ಲಿ ಮಗನ ಆಸರೆ ಸಮಾಧಾನ, ನೆಮ್ಮದಿ ಸಿಗುವುದೇ ಇಲ್ಲ. ಹೆತ್ತವರು, ಪತಿ, ಮಗ ಇವರು ಆಕೆಯನ್ನು ನೆಮ್ಮದಿಯಾಗಿ ಬದುಕಲು ಬಿಡದೇ ಕೊನೆಗೂ ಸಾವಿನ ದಡಕ್ಕೆ ತಂದು ನಿಲ್ಲಿಸುವ ಪರಿಯನ್ನು ತುಂಬಾ ಭಾವನಾತ್ಮಕವಾಗಿ ಕಾದಂಬರಿ ರಚಿಸಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಉತ್ತಮ ಕಾದಂಬರಿಕಾರ್ತಿಗಳ ಸಾಲಿಗೆ ಸೇರುವ ಭರವಸೆ ಮೂಡಿಸಿದ್ದಾರೆ.
ಯಶಸ್ಸಿನ ಉತ್ತುಂಗ ಶಿಖರಕ್ಕೇರಲಿ ಶ್ರೀಮತಿ ವಿದ್ಯಾ ರೆಡ್ಡಿಯವರು ಮುಂದಿನ ದಿನಗಳಲ್ಲಿ ಈ ಭವ್ಯ ಭಾರತದ ದೇಶದೊಳಗಿನ ದೀನದಲಿತರು,ರೈತರು,ಮಹಿಳೆಯರು, ಅನಾಥ ಮಕ್ಕಳ, ಬಡ ಕಾರ್ಮಿಕರ ಮೇಲಾಗುತ್ತಿರುವ ತಾರತಮ್ಯ, ದೌರ್ಜನ್ಯ, ಇವುಗಳ ಮೇಲೆ ಬೆಳಕು ಚೆಲ್ಲುವಂಥ ಕಾದಂಬರಿಗಳನ್ನು ಬರೆಯುವಂತಾಗಲಿ, ಸಂಘ, ಸಂಸ್ಥೆ, ಸರಕಾರಗಳು. ಇಂತಹ ಉದಯೋನ್ಮುಖ ಬರಹಗಾರ್ತಿಯನ್ನು ಗುರುತಿಸುವಂತಾಗಲಿ. ಇದು ಎಲ್ಲರೂ ಓದಬೇಕಾದಂತಹ ಕಾದಂಬರಿ. ನಾವೆಲ್ಲರೂ ಕೊಂಡು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳೋಣ. ಕೃತಿ ಬೇಕಾದವರು ಶ್ರೀಮತಿ ವಿದ್ಯಾರೆಡ್ಡಿಯವರನ್ನು ಸಂಪರ್ಕಿಸಿರಿ ಮೊಬೈಲ್ ಸಂಖ್ಯೆ-9242252521. ಕೃತಿಕಾರ್ತಿಯವರಿಗೆ ಮತ್ತೊಮ್ಮೆ ಶುಭ ಕೋರುತ್ತೇನೆ.
ಗಣಪತಿ ಗೋ ಚಲವಾದಿ(ಗಗೋಚ)
ಬಿಎಂಟಿಸಿ ನಿರ್ವಾಹಕರು
ಕಸಾಪ ಮಯೂರವರ್ಮ ಸಾಹಿತ್ಯ
ಪ್ರಶಸ್ತಿ ಪುರಸ್ಕೃತರು