ದೇವ ಭೂಮಿಗೆ ದಿವ್ಯ ನಮನ : ಗೊರೂರು ಜಮುನರ ಭಾವ ತರಂಗ

Must Read

ಕಾವ್ಯಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಬರುತ್ತಿರುವ ಹೆಸರು ಗೊರೂರು ಜಮುನ. ಮೂಲತಃ ಹಾಸನ ತಾಲ್ಲೂಕು ಶಾಂತಿಗ್ರಾಮದವರು. ಇವರ ಪತಿ ಜಯರಾಮ ಗೊರೂರಿನವರು. ಬಹಳ ವರ್ಷ ಗೊರೂರಿನಲ್ಲಿ ವಾಸವಿದ್ದರೂ ಆಗ ಇವರು ಯಾವುದೇ ಕವಿತೆಯನ್ನು ಪ್ರಕಟಿಸಿರಲಿಲ್ಲ. ಈಗ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಿದ್ದಾರೆ. ಕಳೆದ ಮೂರ‍್ನಾಲ್ಕು ವರ್ಷಗಳಿಂದ ಇವರ ಕಾವ್ಯಕೃಷಿ ಸಾಗಿದೆ. ಇವರ ಚೊಚ್ಚಲ ಕವನ ಸಂಕಲನ ಭಾವ ತರಂಗ ಕಳೆದ ವರ್ಷ ಪ್ರಕಟವಾಗಿದೆ. ಇದರಲ್ಲಿ ತಾವು ಕಾವ್ಯಕ್ಷೇತ್ರದಲ್ಲಿ ಬೆಳೆದುಬಂದ ಬಗೆಯನ್ನು ಸ್ವಾರಸ್ಯಕರವಾಗಿ ನಿರೂಪಿಸಿದ್ದಾರೆ. ಶಾಂತಿಗ್ರಾಮ ಎಂಬ ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿದ ನಾನು ಕಾಲೇಜಿಗೆ ಹಾಸನಕ್ಕೆ ಹೋಗುವ ಸಂದರ್ಭ ಮನೆಯಲ್ಲಿ ಇದ್ದು ಕವಿತೆ ಕಾದಂಬರಿಗಳನ್ನು ಓದುತ್ತಿದ್ದ ನನಗೆ ನನಗರಿವಿಲ್ಲದಂತೆ ಮನದಲ್ಲಿ ಹುಟ್ಟಿದ ಭಾವಗಳು ಕಾವ್ಯ ರೂಪದಲ್ಲಿ ಹೊರಹೊಮ್ಮ ತೊಡಗಿದವು ಎನ್ನುತ್ತಾರೆ

ಕಣ್ಣಿನಲೆ ಹೆಣೆಯುತಲಿ ಕಾವ್ಯಗಳ ಸರಮಾಲೆ
ತೋರಣವ ಕಟ್ಟಿರುವೆ ಬಾನು ಬುವಿಗೆ
ಒಂದೊಂದು ಭಾವಗಳ ಎಲೆಯನ್ನು
ಹೆಕ್ಕುತಲಿ ಮುದ್ದಿಸುತ ತೀರಿಸುವೆ ನಿನ್ನ ಬಯಕೆ (ಬಯಕೆ)

ಸಣ್ಣದಾಗಿ ಪ್ರಾರಂಭವಾದ ನನ್ನ ಸಾಹಿತ್ಯ ಕೃಷಿ ಆಗಿನ ದಿನಗಳಲ್ಲಿ ಬರೀ ಹಾಳೆಯಲ್ಲಿ ಪದಗಳಾಗಿ ಕುಳಿತವು ಅಷ್ಟೇ. ನಂತರ ಮದುವೆ ಮಕ್ಕಳು ಎನ್ನುತ್ತಾ ಗೃಹಿಣಿಯಾಗಿ ಅತ್ತೆ ಮಾವ ಮಕ್ಕಳ ಸೇವೆಯಲ್ಲಿ ದಶಕಗಳು ಕಳೆದುಹೋಗಿ ಸಾಹಿತ್ಯದ ಆಸೆ ಕಪ್ಪೆ ಚಿಪ್ಪಿನಲ್ಲಿ ಅಡಗಿದ ಮುತ್ತಿನಂತಾಯಿತು.

ನಾಲ್ಕುಗೋಡೆಯೇ ನಿನ್ನ ಶಾಲೆಯಾಯಿತೆ
ಮಾಯಾ ಪೆಟ್ಟಿಗೆಯೊಳ ಚಿತ್ರವೇ ಗುರುವಾಯಿತೆ..
ಮುಕ್ತಮನದ ಆಟಗಳೆಲ್ಲ ಮರೆತುಹೋಯಿತೆ
ನಿರ್ಲಿಪ್ತ ನಿರ್ವಿಕಾರ ಸ್ಥಿತಿ ನಿನ್ನದಾಯಿತೆ (ಮೂಕ ವೇದನೆ)

ಕರೋನ ಕೆಲವರ ಪಾಲಿಗೆ ಮಹಾಮಾರಿಯಾದರೂ ಇನ್ನೂ ಕೆಲವರ ಪಾಲಿಗೆ ವರದಾನವಾಯಿತು. ಆನ್ಲೈನ್ ಬಳಗಗಳು ಪ್ರಾರಂಭವಾಗಿ ನನಗೆ ಮಹತ್ವದ ಬದಲಾವಣೆಯನ್ನು ತಂದುಕೊಟ್ಟಿತು. ನನ್ನ ಅಂತರಂಗದಲ್ಲಿ ಸುಪ್ತವಾಗಿದ್ದ ಸಾಹಿತ್ಯ ಬೀಜ ಮೊಳಕೆಯೊಡೆಯುವಂತೆ ಮಾಡಿದವರು ಹಿರಿಯ ಸಾಹಿತಿ ಗೊರೂರು ಅನಂತರಾಜು ಅವರು ನನ್ನನ್ನು ಸಿರಿಗನ್ನಡ ಮಹಿಳಾ ಬಳಗಕ್ಕೆ ಪರಿಚಯಿಸಿ ಪತ್ರಿಕಾ ಪ್ರಕಟಣೆಗೆ ನೆರವಾದರು.

ಚೈತ್ರಮಾಸ ಬಂದಿದೆ ಚಿಗುರು ಕೊನರಿ ನಲಿದಿದೆ
ಇಳೆಗೆ ಕಳೆಯ ಹರಿಸುತಾ ನವ ಉಲ್ಲಾಸ ತರಿಸಿದೆ (ನವ ಉಲ್ಲಾಸ)
ದಿನದಿನಕ್ಕೂ ಬಳಗಗಳು ಬೆಳೆಯುತ್ತಾ ಹೋಗಿ ಒಂದು ಕಲಿಕೆಯ ಸಂಸ್ಥೆಯಾಗಿ ಮಾರ್ಪಟ್ಟು ಹೊಸ ಹೊಸ ಸಾಹಿತ್ಯ ಪ್ರಕಾರಗಳಾದ ಛಂದಸ್ಸು ಷಟ್ಪದಿ ಗಝಲ್, ಟಂಕಾ ಕಲಿಸಿಕೊಡುತ್ತಾ ನನ್ನೊಳಗಿದ್ದ ಕಾವ್ಯ ಚೇತನವನ್ನು ಹೊರಹಾಕಿದವು.

ದೇವ ಭೂಮಿಗೆ ದಿವ್ಯ ನಮನ
ನಾಡ ಮಣ್ಣಿದು ಉಸಿರು ಚೇತನ
ಬಾಗಿ ನಮಿಸುವೆ ಭಕ್ತಿಯಲ್ಲಿ ಅನುದಿನ
ಸಲಹುವಳೆಮ್ಮನು ತಾಯಿ ಭುವನ (ದಿವ್ಯ ನಮನ)

ಸಿರಿಗನ್ನಡ ಮಹಿಳಾ ಘಟಕ ಹಾಸನ ಅಧ್ಯಕ್ಷರಾದ ಮಾಲಾ ಚಲುವನಹಳ್ಳಿಯವರು ಪ್ರತಿ ಭಾನುವಾರ ವ್ಯಾಟ್ಸಾಪ್ ಗ್ರೂಪ್‌ನಲ್ಲಿ ವಿವಿಧ ವಸ್ತು ವಿಷಯ ಪ್ರಕಾರದಲ್ಲಿ ಕವನ ಸ್ಫರ್ಧೆ ನಡೆಸಿ ಅಲ್ಲಿ ಇವರು ಬರೆಯತ್ತಾ ಬಂದಿದ್ದಾರೆ. ಕೃತಿಯ ಶೀರ್ಷಿಕೆಯ ಸೂಚ್ಯವಾಗಿ ಹೇಳುವಂತೆ ಕವಯಿತ್ರಿಯ ಮನದ ಭಾವನೆಗಳ ಅಭಿವ್ಯಕ್ತಿಯಲ್ಲಿ ಭಾವಗೀತೆಗಳು ಇಲ್ಲಿ ರೂಪು ತಳೆದಿವೆ.

ದಿಗಂತದಾ ತಡಿಯಲಿ ಗಿರಿ ಶಿಖರ ಶೃಂಗ
ಅಪ್ಪಿಹುದು ಹಲಬಗೆಯ ಸಸ್ಯ ಶ್ಯಾಮಲೆಯ ಸಂಗ
ಗರಿಬಿಚ್ಚಿ ಹಾರಿಹವು ಬೆಳ್ಳಕ್ಕಿ ಸಾಲಂತೆ
ಚಿತ್ತಾರ ಮೂಡಿಸುವುದು ಭೂಮಿ ಬಾನು ಬೆಸೆದಂತೆ (ಅರುಣೋದಯ)

ಡಾ. ಕೊಳ್ಚಲಪ್ಪೆ ಗೋವಿಂದ ಭಟ್‌ರವರು ಬರೆದಂತೆ ಕವಿತೆ ಎಂದರೆ ಮನಸ್ಸಿನ ಭಾವನೆಗಳನ್ನು ಕಲಾತ್ಮಕವಾಗಿ ಬರೆಯುವ ಒಂದು ಸಾಹಿತ್ಯ ಪ್ರಕಾರ. ಕೆಲವು ಕಾವ್ಯ ನಿಯಮಗಳನ್ನು ಬಳಸಿ ಬರೆದರೆ ಕವನಕ್ಕೆ ಗೇಯತೆ ಬರುತ್ತದೆ. ಆದಿ ಅಂತ್ಯ ಪ್ರಾಸಗಳು ಸುಲಭಸಾಧ್ಯವಾದ ಮುದ ಕೊಡುವ ಚಮತ್ಕಾರಗಳು.

ಕೆಸರಿನೊಳ ಕಮಲವು ರವಿ ಕಂಡು ಹಿಗ್ಗಿತು
ಸುಮಬಾಲೆ ಮನಸಿನೊಳು ಭಾವಗಳು ಉಕ್ಕಿತು
ಚಿಲಿಪಿಲಿಗುಡುತ ಹಾರಿದವು ಹಕ್ಕಿ ಆಗಸದಾಗ
ಓಡಿದವು ಕರುಗಳು ಹಾಲುಡಲು ಅಮ್ಮನೆಡೆಗೆ (ಅವನಿ ನಕ್ಕಳು)

ಗ್ರಾಮೀಣ ಹಿನ್ನೆಲೆಯಿಂದ ಬಂದ ಜಮುನ ಅವರಿಗೆ ವ್ಯಾಪಕವಾದ ಜೀವನ ಅನುಭವವಿದೆ. ಕೃತಿಯಲ್ಲಿ ಪ್ರಕೃತಿ ಗೀತೆ, ಪ್ರೇಮ ಗೀತೆ, ಭಾವಗೀತೆ, ರೈತ ಗೀತೆ, ಮಕ್ಕಳ ಕವನ, ಭಕ್ತಿಗೀತೆಗಳ ಸಂಗಮವಿದೆ.

ನೇಗಿಲ ಯೋಗಿಯ ಕಾಯಕದ ಗಳಿಗೆ
ರಾಸನು ತೊಳೆಯುವ ರೈತಾಪಿ ಮಹಿಳೆಗೆ
ಕ್ಷೀರದ ಸುಧೆ ಹರಿಸೊ ಕಾಮಧೇನುವಿಗೆ
ಚೈತನ್ಯ ತುಂಬುವ ಅಮೃತದ ಗಳಿಗೆ (ಮೂಡಣ ಕೆಂಪೇರಿದಾಗ)
ಎಫ್.ವಿ.ಹೊಳಲ ಬರೆದಂತೆ ಒಂದೊಳ್ಳೆ ಕವಿತೆಯೆಂದರೆ ಅದು ಬರೀ ಕವನವಲ್ಲ ಬದುಕನ್ನು ನೋಡುವ ಕ್ರಮ ಮತ್ತು ಮನದ ಮಲಿನತೆ ಕಳೆವ ದಿವ್ಯ ಗಂಗೆ. ಕಲ್ಪನೆಯ ಕದ ತಟ್ಟಿ ಅಂತರಾಳದಲ್ಲಿ ಬೇರೂರಿ ನಡೆ ನುಡಿಯನ್ನು ತಿದ್ದಿ ಸರಿದಾರಿಗೆ ತರುವ ಮಾರ್ಗದರ್ಶಕ. ಸಮಾಜಕ್ಕೆ ಹಿಡಿದ ಕನ್ನಡಿ.

ವನರಾಶಿ ಅಳಿಸುತಲಿ ಕೋಟಿ ಜೀವಗಳ ಕೊಂದೆ
ಹಣದಿಂದ ಜಗವನ್ನೆ ಗೆಲ್ಲಬಹುದೆಂದೆ
ಹಸಿರಿದ್ದರೆ ಉಸಿರೆಂಬ ನೀತಿಯನು ಮರೆತವನು
ಪ್ರಕೃತಿಯ ಒಡಲನ್ನು ಬಗೆಬಗೆದು ಭವಿಸುತಿಹನು (ಕಾಡು ಮಾತನಾಡುತ್ತಿವೆ)

ಪತ್ರಿಕೆಯಲ್ಲಿ ಕವಿತೆ ಪ್ರಕಟಿಸುವ ಮೂಲಕ ಮತ್ತು ಕವಿಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಹಂಬಲದಿಂದ ಕಾವ್ಯ ಪದಗಳ ಒಗ್ಗೂಡಿಸುವಿಕೆಯಲ್ಲಿ ಸದಾ ಚಿಂತಿತರಾಗಿ ಬರೆಯುತ್ತಾ ಬೆಳೆಯುತ್ತಿರುವ ಇವರು ಇನ್ನೂ ತಮ್ಮ ಸ್ವಪ್ರಯತ್ನದಿಂದ ಉತ್ತಮ ಕವಿತೆಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಲೆಂದು ಶುಭ ಹಾರೈಸುತ್ತೇನೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

LEAVE A REPLY

Please enter your comment!
Please enter your name here

Latest News

ಡಾ.ಮಹಾಂತೇಶ ಬೀಳಗಿ ಯುವಕರಿಗೆ ಸ್ಫೂರ್ತಿ – ಮೌಲಾಲಿ ಆಲಗೂರ

ಸಿಂದಗಿ: ಸ್ಪೂರ್ತಿದಾಯಕ ಮಾತುಗಳಿಂದ ಲಕ್ಷಾಂತರ ಸ್ಪರ್ಧಾತ್ಮಕ ಓದುಗರ ಕೀರ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ...

More Articles Like This

error: Content is protected !!
Join WhatsApp Group