ಪ್ರೊ. ಮಾಳವಾಡ ಅವರು ಕನ್ನಡ ನಾಡಿನ ಶೈಕ್ಷಣಿಕ ಮತ್ತು ಸಾಹಿತ್ಯಕ ಪ್ರಪಂಚದಲ್ಲಿ ಪ್ರಸಿದ್ಧ ಹೆಸರಾಗಿದ್ದಾರೆ. ಆಡಳಿತ ಶಿಕ್ಷಣ ಅಧ್ಯಾತ್ಮ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ನಾಮಾಂಕಿತರೆನಿಸಿದ ಪ್ರೊ ಎಸ್ ಎಸ್ ಮಾಳವಾಡ ಅವರು ದೇಶ ಕಂಡ ಶ್ರೇಷ್ಠ ಆಡಳಿತಗಾರರು ಮತ್ತು ಅಧ್ಯಾತ್ಮ ಜೀವಿಗಳು.
ಪ್ರೊ.ಮಾಳವಾಡ ಅವರ ಪತ್ನಿ ಶಾಂತಾದೇವಿ ಮಾಳವಾಡ ಅವರು ಸಹಾ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದವರಾಗಿದ್ದು ಈ ದಂಪತಿಗಳು ತಮ್ಮ ಮಹತ್ವದ ಕೊಡುಗೆಗಳಿಗಾಗಿ ಕನ್ನಡ ನಾಡಿನ ಪ್ರಾತಃಸ್ಮರಣೀಯರೆನಿಸಿದ್ದಾರೆ.
ಅಧ್ಯಾಪನ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಮಹಾನ್ ಹೆಸರಾದ ಸ. ಸ ಮಾಳವಾಡರು ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ ನವೆಂಬರ್ 14, 1910ರ ವರ್ಷದಲ್ಲಿ ಜನಿಸಿದರು. ತಂದೆ ಸಂಗನ ಬಸಪ್ಪನವರು ಮತ್ತು ತಾಯಿ ಕಾಳಮ್ಮನವರು.
ಮಾಳವಾಡರ ಪ್ರಾರಂಭಿಕ ಶಿಕ್ಷಣವು ಗೋವನ ಕೊಪ್ಪ, ಗುಳೇದಗುಡ್ಡ, ಬಾಗಲಕೋಟೆ, ವಿಜಾಪುರಗಳಲ್ಲಿ ನೆರವೇರಿತು. ಉನ್ನತ ವ್ಯಾಸಂಗವನ್ನು ಧಾರವಾಡದಲ್ಲಿ ನಡೆಸಿದ ಅವರು ಎಂ. ಎ ಪದವೀಧರರಾದ ಮೇಲೆ ಕೆಲಕಾಲ ಮಾಧ್ಯಮಿಕ ಕಾಲೇಜು ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಂತರದಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅದೇ ಕಾಲೇಜಿನ ಪ್ರಾಚಾರ್ಯರಾಗಿ, ನಿವೃತ್ತರಾಗುವವರೆವಿಗೂ ಸೇವೆ ಸಲ್ಲಿಸಿದ ಅವರು ನಿವೃತ್ತಿಯ ನಂತರದಲ್ಲಿ ಯು.ಜಿ.ಸಿ. ಪ್ರಾಧ್ಯಾಪಕರಾಗಿ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾಲಯದ ಸಂಸ್ಥಾಪಕ ಗೌರವ ನಿರ್ದೇಶಕರಾಗಿ, ರಾಜ್ಯದ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಗಣನೀಯ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಆಕಾಶವಾಣಿ ನಿಲಯಗಳ ಸ್ಥಾಪನೆಯಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದರು
ಸಾಹಿತ್ಯ ಕೃತಿಗಳು ಮತ್ತು ಸೇವೆ
‘ಕರ್ನಾಟಕ ಸಾಹಿತ್ಯ-ಸಂಸ್ಕೃತಿ ದರ್ಶನ’ ಮಾಳವಾಡರ ಮೊಟ್ಟ ಮೊದಲ ಕೃತಿ. ನಂತರದಲ್ಲಿ ಸಾಹಿತ್ಯ ಸಮಾಲೋಚನೆ, ಪುಸ್ತಕ ಪ್ರಪಂಚ, ಹರಿಹರನ ರಗಳೆಗಳಲ್ಲಿ ಜೀವನ ದರ್ಶನ, ಕಾವ್ಯ ಮತ್ತು ಜೀವನ ಚಿತ್ರಣ, ಕವೀಂದ್ರ ರವೀಂದ್ರರು, ಸಾಹಿತ್ಯ ಸಂಗಮ, ಷಡಕ್ಷರಿ, ಸಾಹಿತ್ಯ ದೃಷ್ಟಿ, ಹರಿಹರ-ರಾಘವಾಂಕರು ಮುಂತಾದ ಹಲವಾರು ವಿಮರ್ಶಾ ಗ್ರಂಥಗಳನ್ನು ಪ್ರಕಟಿಸಿದರು.
ಮಾಳವಾಡರ ಸಂಪಾದಿತ ಕೃತಿಗಳಲ್ಲಿ ಕನ್ನಡ ಗದ್ಯಮಾಲೆ, ರಾಘವಾಂಕ ಚರಿತ್ರೆ, ಶ್ರೀ ಬಸವಣ್ಣನವರ ವಚನ ಸಂಗ್ರಹ, ಕಾವ್ಯ ಪದ ಮಂಜರಿ ಮುಂತಾದವು ಸೇರಿವೆ.ಸಂಸ್ಕೃತಿ, ಕಾಲವಾಹಿನಿ, ದೃಷ್ಟಿಕೋನ, ನಾಲ್ಕು ಭಾಷಣಗಳು, ಸುವಿಚಾರ ಸಂಗಮ ಮುಂತಾದವು ಮಾಳವಾಡರ ವೈಚಾರಿಕ ಬರಹಗಳು. ಪಯಣದ ಕತೆ, ಸಂಚಾರ ಸಂಗಮ ಪ್ರವಾಸ ಕಥನಗಳು. ಸ್ವಾದಿ ಅರಸು ಮನೆತನ, ಉತ್ತಂಗಿ ಚನ್ನಪ್ಪ, ಮಧುರ ಚೆನ್ನ, ಬಸವಣ್ಣನವರು, ನಾಗ ಮಹಾಶಯ, ಶಿಶುನಾಳ ಶರೀಫರು ಮುಂತಾದವು ವ್ಯಕ್ತಿಚಿತ್ರಗಳು. ಹಳ್ಳಿಯ ಹುಡುಗ, ದಾರಿ ಸಾಗಿದೆ ಅವರ ಆತ್ಮಕೃತಿಗಳು. ಹೀಗೆ ಅವರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು.
ಮಾಳವಾಡರು ವಿದ್ಯಾರ್ಥಿ ದೆಸೆಯಲ್ಲಿಯೇ ಮಂಗ ಮಠ ಎಂಬ ಸಾಹಿತ್ಯ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕೀರ್ತಿಗೆ ಪಾತ್ರರಾಗಿದ್ದರು. ಮಾಳವಾಡರ ಪತ್ನಿ ಶಾಂತಾದೇವಿ ಮಾಳವಾಡ ಅವರು ಸಹಾ ಕನ್ನಡ ನಾಡು, ನುಡಿ, ಭಾಷೆ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದವರು.
ಕರ್ನಾಟಕ ವಿಶ್ವ ವಿದ್ಯಾಲಯದ ಸ್ಥಾಪನೆಯಲ್ಲಿ ಮಹತ್ತರ ಪಾತ್ರ
ಪ್ರೊ ಶಿ ಶಿ ಬಸವನಾಳರ ಜೊತೆಗೂಡಿ ಪ್ರೊ ಎಸ್ ಎಸ್ ಮಾಳವಾಡರು The case studies of Karnataka University ಎಂಬ ಕೃತಿಯನ್ನು ರಚಿಸಿದರು . ಇದು ವಿಶ್ವ ವಿದ್ಯಾಲಯದ ನಿಯಮಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ವಿಶ್ವ ವಿದ್ಯಾಲಯದ ಸ್ಥಾಪನೆ ಕುರಿತಾಗಿ ಸಂಪೂರ್ಣವಿವರ ಮಾಹಿತಿ ಬೇಡಿಕೆ ನಿಯಮಗಳ ಕುರಿತಾದ ಬೃಹತ್ ಕೃತಿಯಾಗಿದೆ. ಮುಂಬೈ ಪ್ರಾವಿಡೆನ್ಸ್ ನ ಕೆಲವರಿಗೆ ಕರ್ನಾಟಕ ವಿಶ್ವ ವಿದ್ಯಾಲಯದ ಸ್ಥಾಪನೆಯಲ್ಲಿ ಅನಾಸಕ್ತಿ ತೋರಿದಾಗ ಪ್ರೊ ಎಸ್ ಎಸ್ ಬಸವನಾಳರು ಪ್ರೊ ಎಸ್ ಎಸ್ ಮಾಳವಾಡ ಇವರಿಬ್ಬರೂ ಕನ್ನಡದ ಮೊದಲ ಎಂ ಎ ಆದ ಪ್ರೊ ಕೆ ಜಿ ಕುಂದಣಗಾರ ಇವರ ಮಾರ್ಗದರ್ಶನದಲ್ಲಿ ಮುಂಬೈ ವಿಶ್ವ ವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರ ಸಹಮತ ಪಡೆದರೂ ಸಹಿತ ಕೆಲ ಮೇಲ್ವರ್ಗದ ಜನರಿಗೆ ಇದು ನುಂಗಲಾರದ ತುತ್ತಾಗಿತ್ತು. ಇದಕ್ಕೆ ಅಡ್ಡ ಪಡಿಸಿದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮುಂಬೈ ಪ್ರಾವಿಡೆನ್ಸ್ ನ ಶಿಕ್ಷಣ ಸಚಿವ ಸರ್ ಸಿದ್ದಪ್ಪ ಕಂಬಳಿ ಕರ್ನಾಟಕ ವಿಶ್ವ ವಿದ್ಯಾಲಯದ ಜೊತೆಗೆ ಇನ್ನೆರಡು ವಿಶ್ವ ವಿದ್ಯಾಲಯಗಳ ಬೇಡಿಕೆ ಮುಂದಿದ್ದವು. ಆಗ ಏನೋ ಕಾರಣರ ಒಡ್ಡಿ ಪುಣೆ ಮತ್ತು ರಾಜಕೋಟ್ (ಇಂದಿನ ಗುಜರಾತ ರಾಜ್ಯ ) ವಿಶ್ವ ವಿದ್ಯಾಲಯದ ಸ್ಥಾಪನೆಗೆ ಸರ್ ಸಿದ್ದಪ್ಪ ಕಂಬಳಿ ಅವರು ಅಂಕಿತ ಹಾಕಲಿಲ್ಲ . ಆಗ ಅಧಿಕಾರಿಗಳು ಮಂತ್ರಿ ಮಂಡಳ ಸರ್ ಸಿದ್ದಪ್ಪ ಕಂಬಳಿ ಅವರ ನಿರ್ಣಯದಿಂದ ತಬ್ಬಿಬ್ಬಾದರು . ಕೊನೆಗೆ ಅಲ್ಲಿನ ಅಧಿಕಾರಿಗಳ ತಮ್ಮ ತಪ್ಪಿನ ಅರಿವಾಗಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಸ್ಥಾಪನೆಯ ಮಂಜೂರಿ ಪ್ರಸ್ತಾಪದ ಕಡತವನ್ನು ತಂದು
ಸರ್ ಸಿದ್ದಪ್ಪ ಕಂಬಳಿ ಅವರ ಟೇಬಲ್ ಮೇಲೆ ಇಟ್ಟರು ಆಗ ಸರ್ ಸಿದ್ದಪ್ಪ ಕಂಬಳಿ ಅವರು ಮೂರು ವಿಶ್ವ ವಿದ್ಯಾಲಯಗಳ ಸ್ಥಾಪನೆಗೆ ಅಂಕಿತ ಹಾಕಿದರು.
ಇದರ ಹಿಂದೆ ಪ್ರೊ ಎಸ್ ಎಸ್ ಬಸವನಾಳ ಪ್ರೊ ಎಸ್ ಎಸ್ ಮಾಳವಾಡ ಪ್ರೊ ಕೆ ಜಿ ಕುಂದಣಗಾರ ಇವರ ಪ್ರಯತ್ನ ಮತ್ತು ಸರ್ ಶ್ರೀ ಸಿದ್ದಪ್ಪ ಕಂಬಳಿ ಅವರ ಹಠ ಮತ್ತು ಗಟ್ಟಿ ನಿರ್ಣಯ ಕಾರಣ.
ಬಸವ ತತ್ವ ಮತ್ತು ಅರವಿಂದರ ಪ್ರಭಾವ
____________________
ಪ್ರೊ ಎಸ್ ಎಸ್ ಮಾಳವಾಡರು ಬಸವ ತಿಳಿವಳಿಕೆ ಮತ್ತು ತತ್ವಗಳಲ್ಲಿ ಅಪಾರ ನಂಬಿಕೆ ಇಟ್ಟವರು. ಶರಣರ ಹಲವಾರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಸಂಪಾದನೆಯ ಶುದ್ಧ ಹಸ್ತವಾಗಿದ್ದರು. ನವೋದಯ ಕಾಲ ಘಟ್ಟದ ಇತರ ಸಾಹಿತಿಗಳಂತೆ ಶ್ರೀ ಅರವಿಂದರ ಪ್ರಭಾವಕ್ಕೂ ಒಳಗಾಗಿದ್ದರು.
ಮಡದಿ ಶಾಂತಕ್ಕ ಕನ್ನಡ ಸಾಹಿತ್ಯದ ಹೆಸರಾಂತ ಸಾಹಿತಿ ಆಗುವುದರಲ್ಲಿ ಎಸ್ ಎಸ್ ಮಾಳವಾಡರ ಪಾತ್ರ ದೊಡ್ದದು.
ಸ. ಸ. ಮಾಳವಾಡರಿಗೆ 1972ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, 1985ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳು ಸಂದಿದ್ದವು. ಪ್ರೊ. ಮಾಳವಾಡರು ಆಗಸ್ಟ್ 30, 1987ರ ವರ್ಷದಲ್ಲಿ ಈ ಲೋಕವನ್ನಗಲಿದರರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ

