ಬುದ್ಧನ ನೆನಪಲ್ಲಿ ಸ್ವಯಂ ವಿವೇಕ ಪಡೆಯಲು ಸಾಧ್ಯ ನೀನು ಯಾರ ಅನುಯಾಯಿ ಆಗಬೇಕಿಲ್ಲ, ನಿನ್ನನ್ನು ನೀನು ಅರಿತರೆ ಸಾಕು
ಶಿವಮೊಗ್ಗ: ನಮ್ಮೆಲ್ಲರ ಎದೆಗಳಲ್ಲಿ ಶೂಲಗಳು ಜಳಪಿಸುತ್ತಿವೆ. ಇನ್ನೊಬ್ಬರನ್ನು ಅಸಹನೆಯಿಂದ, ಆತಂಕದಿಂದ ನೋಡುವ ಸಂದರ್ಭದಲ್ಲಿದ್ದೇವೆ. ಇಂತಹ ಕಾಲಘಟ್ಟದಲ್ಲಿ ಬುದ್ಧನನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವ ಅಗತ್ಯವಿದೆ. ಬುದ್ಧನ ಪ್ರತಿಮೆಯ ಮುಂದೆ ನಿಂತು ಆ ಮುಖದಲ್ಲಿನ ಪ್ರಶಾಂತತೆ ಎಲ್ಲರೊಳಗೂ ಬೆಳಕಾಗುವ ಶಕ್ತಿ ಹೊಂದಿದೆ. ಜನರು ನಿತ್ಯ ಬಯಸುವುದು ಅದನ್ನೇ ಎಂದು ವಿವರಿಸಿದವರು ಪ್ರಾಧ್ಯಾಪಕರಾದ ಡಾ. ಸಿರಾಜ್ ಅಹಮದ್ ಅವರು.
ಅವರು ನಗರಕ್ಕೆ ಸಮೀಪವಿರುವ ಶಕ್ತಿಧಾಮ ಬಡಾವಣೆಯ ಎರಡನೇ ಹಂತದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಮತ್ತು ಶಕ್ತಿ ಧಾಮ ಬಡಾವಣೆಯ ಎರಡನೇ ಹಂತದ ನಿವಾಸಿಗಳ ಸಂಘದ ಸಹಯೋಗದಲ್ಲಿ ೨೧೨ ನೆಯ ತಿಂಗಳ ಸಾಹಿತ್ಯ ಹುಣ್ಣಿಮೆ ಮತ್ತು ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬುದ್ಧನ ತತ್ವಗಳನ್ನು ಅರ್ಥಮಾಡಿಕೊಳ್ಳುತ್ತಾ ಹೋದಂತೆ ಸ್ವಯಂ ವಿವೇಕ ಪಡೆಯಲು ಸಾಧ್ಯ. ಅವರೇ ಹೇಳುವಂತೆ ನೀನು ಯಾರ ಅನುಯಾಯಿ ಆಗಬೇಕಿಲ್ಲ. ನಿನ್ನನ್ನು ನೀನು ಅರಿಯುವಂತಾದರೆ ಅದೇ ಮೋಕ್ಷಪ್ರಾಪ್ತಿಯ ದಾರಿ ಆಗಲಿದೆ. ಸ್ವಯಂ ಅರಿವು ಪಡೆಯಬೇಕು. ಮೂಢನಂಬಿಕೆ ತೊರೆ ಎನ್ನುವ ಅವರ ಮಾತುಗಳನ್ನು ವಿವರಿಸಿ ಹೇಳಿದರು.
ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿದರು.
ಕಡ್ಡಾಯ ಮತದಾನ ಮಾಡಿ ಎಂದು ಜಾಗೃತಿ ಗೊಳಿಸಿದವಳು ಬಾಲಪ್ರತಿಭೆ ಅನುಷಾ ಹಿರೇಮಠ ಅವರು. ಮನೆಯಲ್ಲಿ ಮಕ್ಕಳಿಗೆ ಮದುವೆ ಮಾಡುವಾಗ ಸಂಬಂಧ ಹುಡುಕುವಂತೆ ನಮ್ಮ ದೇಶದ ಭವಿಷ್ಯ ಯಾರ ಕೈಗೆ ಕೊಡಬಹುದು ಎಂಬುದನ್ನು ಯೋಚನೆ ಮಾಡಬೇಕು. ಉತ್ತಮ ವ್ಯಕ್ತಿ, ಸಮರ್ಥ ಅಭ್ಯರ್ಥಿಗೆ ಮತನೀಡಿ ಎಂದು ವಿನಂತಿಸಿದಳು.
ಸಾಕೇತ್ ಶಾಸ್ತ್ರಿ, ಕೀರ್ತಿಕಾ ಕನ್ನಡ ಗೀತೆಗಳನ್ನು ಹಾಡಿದರು. ಅನ್ನಪೂರ್ಣ ಸತ್ಯನಾರಾಯಣ, ಅಮೃತ ಶಿಶಿರಾ, ಜಯಲಕ್ಷ್ಮಿ ಜಿ. ಅಣ್ಣಿಗೇರಿ ತಂಡದವರು ಭಜನೆ ಹಾಡಿದರು.
ಕವಿಗಳಾದ ಡಾ. ಕೆ.ಎಸ್. ಗಂಗಾಧರ, ಬಿ.ಟಿ. ಅಂಬಿಕಾ, ಶಾಹಿರಾ ಭಾನು, ಶ್ರೀನಿವಾಸ ನಗಲಾಪುರ, ಪಿ.ಕೆ. ಸತೀಶ್, ರಚಿತಾ ಚೇತನ ಕವನ ವಾಚಿಸಿದರು. ಪಂಕಜಾ ಗೋಪಾಳ ಹನಿಗವನ ಹೇಳಿದರು. ಮಹಾದೇವಿ ಕಥೆ ಹೇಳಿದರು
ಶಕ್ತಿಧಾಮ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎಂ. ಹಾಲಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಡಾ. ಗುಡದಪ್ಪ ಕಸಬಿ ಸ್ವಾಗತಿಸಿದರು. ಖಜಾಂಚಿ ಎ.ಎಲ್. ಪರಮೇಶ್ವರ, ಭಾರತಿ ರಾಮಕೃಷ್ಣ ನಿರೂಪಿಸಿದರು. ಕರ್ನಾಟಕ ಜಾನಪದ ಪರಿಷತ್ತು ನೀಡಿದ ಜಾನಪದ ಕಲೆಗಳ ಕಲಿಕಾ ಶಿಬಿರದ ಶಿಬಿರಾರ್ಥಿಗಳಿಂದ ಲಂಬಾಣಿ ನೃತ್ಯ ನಡೆಯಿತು. ಪುಷ್ಕಳ ಭೋಜನ ಮೆರಗು ಹೆಚ್ಚಿಸಿತ್ತು. ನಿವಾಸಿಗಳ ಸಂಘದ ಪದಾಧಿಕಾರಿಗಳು ಪಂಚೆ, ಅಂಗಿ, ಶಲ್ಯ ಧರಿಸಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.