ಬಡತನ ಮುಕ್ತ ಭಾರತಕ್ಕೆ ನಾಂದಿ ಹಾಡುವ ಬಜೆಟ್ – ಈರಣ್ಣ ಕಡಾಡಿ

Must Read

ಮೂಡಲಗಿ: ರೈತರು, ಮಹಿಳೆಯರು, ಯುವಜನತೆ ಹಾಗೂ ಬಡ ವರ್ಗದ ಜನರ ಜೀವನಮಟ್ಟ ಸುಧಾರಿಸುವುದು ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ, ಬಡತನ ಮುಕ್ತ ಭಾರತ ನಿರ್ಮಾಣಕ್ಕೆ ನಾಂದಿ ಹಾಡುವ ವಿಕಸಿತ ಭಾರತ ನಿರ್ಮಾಣದ ದೃಢ ಹೆಜ್ಜೆಗೆ ಈ ಬಜೆಟ್ ಪೂರಕವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 2025-26 ನೇ ಸಾಲಿನ ಬಜೆಟ್ ನಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಕೃಷಿ ಎನ್ನುವುದು ಭಾರತದ ಅಭಿವೃದ್ಧಿಯ ಮೊದಲ ಇಂಜಿನ್ ಆಗಿದೆ. ಪ್ರಧಾನ ಮಂತ್ರಿ ಧನಧಾನ್ಯ ಕೃಷಿ ಯೋಜನೆಯಿಂದ 1.7 ಕೋಟಿ ರೈತರಿಗೆ ಅನುಕೂಲವಾಗುತ್ತಿದೆ. ಈ ಯೋಜನೆಯಿಂದ ಕಡಿಮೆ ಉತ್ಪಾದಕತೆ ಹೊಂದಿರುವ 100 ಜಿಲ್ಲೆಗಳನ್ನು ಒಳಗೊಂಡ ಕೃಷಿ ಯೋಜನೆ ರೂಪಿಸಲಾಗುತ್ತಿದೆ. ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ನ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ರೈತರ ಅನುಕೂಲಕ್ಕಾಗಿ ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ 3 ಯೂರಿಯಾ ಪ್ಲಾಂಟ್ ನಿರ್ಮಾಣ. ಗುಣಮಟ್ಟದ ಹತ್ತಿಗಾಗಿ ಹೆಚ್ಚುವರಿ ಉದ್ದವಾದ ಪ್ರಧಾನ ಹತ್ತಿ ಪ್ರಭೇದಗಳಿಗೆ ಸಹಾಯ ಮಾಡಲು ಐದು ವರ್ಷಗಳ ಕಾಲ ಹತ್ತಿ ಉತ್ಪಾದಕತೆಗಾಗಿ ಮಿಷನ್ ಘೋಷಣೆ. ಯುವಕರನ್ನು ಕೃಷಿ ಕ್ಷೇತ್ರಕ್ಕೆ ಆರ್ಕಷಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

12 ಲಕ್ಷ ಆದಾಯದವರೆಗೂ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಮಾಡಲಾಗಿದೆ. ಇದರಿಂದ ತಿಂಗಳಿಗೆ 1 ಲಕ್ಷ ರುಪಾಯಿ ದುಡಿಯುವವರಿಗೂ ತೆರಗೆ ಪಾವತಿ ಮಾಡಬೇಕಾಗಿಲ್ಲ. ಜೊತೆಗೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಸಮಯದ ಮಿತಿಯನ್ನು 2 ವರ್ಷದಿಂದ 4 ವರ್ಷಗಳಿಗೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ ತೆರಿಗೆ ವಿನಾಯತಿಯನ್ನು 50 ಸಾವಿರದಿಂದ 1 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದರು.
ಪ್ರಥಮ ಬಾರಿಗೆ 5 ಲಕ್ಷ ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂ ವರೆಗಿನ ಅವಧಿ ಸಾಲವನ್ನು ನೀಡಲು ಸರ್ಕಾರವು ಯೋಜಿಸಿದ್ದು, ಇದು ಮಹಿಳಾ ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ಮುಂದಿನ 5 ವರ್ಷಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು, 2028 ರವರೆಗೆ ಜಲ ಜೀವನ್ ಮಿಷನ್‌ನ ವಿಸ್ತರಣೆ, 68 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಾಲದ ಮಿತಿ ಹೆಚ್ಚಳ, ಗ್ರಾಮೀಣ ಭಾಗದಲ್ಲಿ 1.5 ಲಕ್ಷ ಪೋಸ್ಟ್ ಆಫೀಸ್‌ಗಳನ್ನು ಹೆಚ್ಚಳ ಮಾಡುವ ಗುರಿ ಹೊಂದಿದೆ ಎಂದರು.

ಸರ್ಕಾರಿ ಮಾಧ್ಯಮಿಕ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸಲಾಗುವುದು, ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇಕೇರ್ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು, 1 ಕೋಟಿ ಹಾಲುಣಿಸುವ ತಾಯಂದಿರಿಗೆ ನ್ಯೂಟ್ರೀಷನ್ ಭರಿತ ಆಹಾರ ನೀಡುವ ಯೋಜನೆ ಘೋಷಣೆ, ಮೊಬೈಲ್, ಟಿವಿ, ಎಲೆಕ್ಟ್ರಿಕ್ ವಾಹನ, 36 ಕ್ಯಾನ್ಸರ್ ಔಷಧಿಗಳು, ಸ್ವದೇಶಿ ಬಟ್ಟೆಗಳು, ಚರ್ಮದ ವಸ್ತುಗಳು ಸಹ ಅಗ್ಗವಾಗುತ್ತವೆ ಎಂದರಲ್ಲದೇ ನವಭಾರತ ನಿರ್ಮಾಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಅತ್ಯಂತ ಆಶಾದಾಯಕವಾಗಿದೆ ಎಂದು ಬಜೆಟ್ ನಲ್ಲಿರುವ ಅಂಶಗಳನ್ನು ಕೊಂಡಾಡಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group