ಮೂಡಲಗಿ: ‘ಮಕ್ಕಳಿಗೆ ಪೊಲಿಯೋ ಹನಿ ಹಾಕಿಸಿಕೊಳ್ಳುವುದರ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಮುಂದಾಗಬೇಕು’ ಎಂದು ತಹಶೀಲ್ದಾರ್ ಡಿ.ಜಿ. ಮಹಾತ ಅವರು ಹೇಳಿದರು.
ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಲಕರು ಪೊಲಿಯೋ ಹಾಕಿಸುವುದಕ್ಕೆ ಹಿಂಜರಿಯಬಾರದು ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ಪೊಲಿಯೋ ಲಸಿಕಾ ಅಭಿಯಾನವನ್ನು ಉದ್ಘಾಟಿಸಿದರು.
ಚಿಕ್ಕ ಮಕ್ಕಳ ತಜ್ಞ ಡಾ. ಜಗದೀಶ ಜಂಗೆ ಅವರು ಮಾತನಾಡಿ, ಭಾರತವು ಪೊಲಿಯೋ ಮುಕ್ತವಾಗಿದ್ದು, ಪುನ: ಮಕ್ಕಳನ್ನು ಬಾಧಿಸಬಾರದು ಎಂದು ಸರ್ಕಾರವು ಪೊಲಿಯೋ ಲಸಿಕೆಯನ್ನು ನೀಡುವ ಅಭಿಯಾನ ಜಾರಿಯಲ್ಲಿ ಇಟ್ಟಿದೆ. 5 ವರ್ಷಗಳ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೊಲಿಯೋ ಹನಿ ಹಾಕಿಸಬೇಕು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಮಾತನಾಡಿ ಮೂಡಲಗಿ ವ್ಯಾಪ್ತಿಯಲ್ಲಿ ಅಂದಾಜು 6 ಸಾವಿರ ಮಕ್ಕಳಿಗೆ ಪೊಲಿಯೋ ಹನಿ ಹಾಕುವ ಗುರಿ ಇದ್ದು, ಅದಕ್ಕಾಗಿ ಮೂಡಲಗಿ ಸೇರಿದಂತೆ ಗುರ್ಲಾಪುರದಲ್ಲಿ ಒಟ್ಟು 19 ಬೂತ್‍ಗಳನ್ನು ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಪೊಲಿಯೋ ಅಭಿಯಾನ ಯಶಸ್ಸಿಗೆ ಸಹಕರಿಸಬೇಕು ಎಂದರು.
ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಪುರಸಭೆ ಸದಸ್ಯರಾದ ಜಯಾನಂದ ಪಾಟೀಲ ಅನ್ವರ ನದಾಫ, ಶಿವಾನಂದ ಚಂಡಕಿ, ಬಿಇಒ ಅಜಿತ ಮನ್ನಿಕೇರಿ, ಡಾ. ಎಸ್.ಎಸ್. ಪಾಟೀಲ, ಯಾದವಾಡ, ಡಾ. ಬಿಲಕಿಸ್ ಖಾಜಿ, ಡಾ. ದೀಪಾ ಮಾಚಪ್ಪನವರ, ಡಾ. ಸಂಯಜ ಶಿಂಧಿಹಟ್ಟಿ ಇದ್ದರು.
ಶಿವಲಿಂಗ ಪಾಟೀಲ ನಿರೂಪಿಸಿದರು.