spot_img
spot_img

ಉಪಮುಖ್ಯಮಂತ್ರಿ ಸ್ಥಾನ ರದ್ದು ; ಬಿಜೆಪಿಯ ರಾಜ್ಯಹಿತದ ಸಂಪ್ರದಾಯ

Must Read

spot_img
- Advertisement -

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದಂತಾಗಿದೆ. ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಚಿವ ಸಂಪುಟದ ವಿಶೇಷವೆಂದರೆ ಉಪ ಮುಖ್ಯಮಂತ್ರಿ ಸ್ಥಾನ ಎಂಬ ಉತ್ಸವ ಮೂರ್ತಿ ಇಲ್ಲದಿರುವುದು !

ಹಿಂದಿನ ಎಸ್ ಎಮ್ ಕೃಷ್ಣ ಅವರ ಕಾಲದಲ್ಲಿ ಅತೃಪ್ತರನ್ನು ಸಮಾಧಾನಪಡಿಸಲೆಂದು ಹುಟ್ಟಿಸಲಾದ ಉಪಮುಖ್ಯಮಂತ್ರಿ ಸ್ಥಾನವೆಂಬುದು ರಾಜ್ಯದ ಬೊಕ್ಕಸಕ್ಕೆ ಹೊರೆಯೇ ಆಗಿತ್ತಷ್ಟೇ. ಉಪ ಮುಖ್ಯಮಂತ್ರಿ ಎಂಬ ನಾಮಧೇಯ ಹೊಂದಿದ್ದ ಈ ಸ್ಥಾನ ಹೊಂದಿದವರೇನಾದರೂ ವಿಶೇಷ ಕೆಲಸ ಮಾಡುತ್ತಿದ್ದರೆ ? ಸಚಿವರು ಮಾಡುವ ಕೆಲಸವನ್ನೇ ಇವರೂ ಮಾಡುತ್ತಿದ್ದರಷ್ಟೆ. ಆದರೆ ಸ್ವಲ್ಪ ಸಂಬಳ, ಡಿಗ್ನಿಟಿ ಹೆಚ್ಚು ಪಡೆಯುತ್ತಿದ್ದರು. ಆದರೆ ಹೆಚ್ಚಿನ ವಿಷಯಗಳಲ್ಲಿ ಇವರು ಕೇವಲ ಉತ್ಸವ ಮೂರ್ತಿಯಾಗಿದ್ದರಷ್ಟೇ.

ಸಂಪುಟ ರಚನೆಯಾದಾಗ ಸಚಿವ ಸ್ಥಾನ ಸಿಗದವರು ಒಂದು ರೀತಿಯ ಅಸಮಾಧಾನ ಹೊರಹಾಕಿದರೆ, ಮುಖ್ಯಮಂತ್ರಿ ಸ್ಥಾನದ ಮೇಲೆಯೇ ಕಣ್ಣಿಟ್ಟವರಿಗೆ ಕೊಡುವ ಲಾಲಿಪಾಪ್ ಈ ಉಪ ಮುಖ್ಯಮಂತ್ರಿ ಸ್ಥಾನ ! ಹಾಗೆಂದು ಸ್ಥಾನವೊಂದನ್ನು ಸೃಷ್ಟಿ ಮಾಡಿ ನೀಡಿದರೆ ಸಾಕು ಬಂಡಾಯಗಾರರು ಥಂಡಾ ಹೊಡೆದು ಸುಮ್ಮನಾಗುತ್ತಿದ್ದರು. ಆದರೆ ಇತ್ತೀಚಿನ ಕೌತುಕ ನೋಡಿ. ಒಂದು ರಾಜ್ಯಕ್ಕೆ ಎರಡು, ಮೂರು ಮುಖ್ಯಮಂತ್ರಿಗಳು ! ಅಧಿಕಾರ ದಾಹವೆಂಬುದು ಎಂಥ ಪರಿಸ್ಥಿತಿ ಸೃಷ್ಟಿಸುತ್ತದೆ.

- Advertisement -

ಹಾಗೆ ನೋಡಿದರೆ, ಇತ್ತೀಚಿನ ರಾಜಕಾರಣದಲ್ಲಿ ಜನ ಸೇವೆಯ ಹೆಸರಿನಲ್ಲಿ ಅಧಿಕಾರ ಹಿಡಿಯುವ ಹಪಾಹಪಿಯೇ ಹೆಚ್ಚಾಗಿದೆ. ಯಾವುದೇ ಮುಲಾಜಿಲ್ಲದೆ ಅದನ್ನು ಪ್ರಕಟಪಡಿಸುವುದೂ ನಡೆದೇ ಇದೆ.

ನಾನೂ ಸಚಿವ ಸ್ಥಾನ ಆಕಾಂಕ್ಷಿ ಅಂತ ಒಮ್ಮೆ ಹೇಳಿದರೆ, ನನಗೆ ಯಾವುದೇ ಜವಾಬ್ದಾರಿ ವಹಿಸಿದರೂ ನಿಭಾಯಿಸಲು ಸಿದ್ದ ! ಇನ್ನೊಮ್ಮೆ ಯಾವನಾದರೂ ಬಾಲಬಡುಕನ ಕೈಲಿ ಹೇಳಿಸುವುದು, ಅಭಿಮಾನಿ (?)ಗಳಿಂದ ಪೂಜೆ, ಹೋಮ, ಹವನ ಮಾಡಿಸುವುದು….ಹೀಗೆ ಏನಕೇನ ಪ್ರಕಾರೇನ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ನೂರಾರು ನಾಟಕಗಳು. ಇದರಲ್ಲೇ ಕಾಲಹರಣ. ಜನರ ಸಮಸ್ಯೆಗಳು ಹರೋಹರ !

ವಿನೋದ ನೋಡಿ, ಈ ಉಪಮುಖ್ಯಮಂತ್ರಿ ಸ್ಥಾನ ವೆಂಬುದು ಸಂವಿಧಾನದಲ್ಲಿ ಇಲ್ಲವೇ ಇಲ್ಲವಂತೆ. ನಮ್ಮ ಭಾಗದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಇತ್ತೀಚೆಗೆ ಈ ವಿಷಯ ಹೊರಹಾಕಿ, ಉಪ ಮುಖ್ಯಮಂತ್ರಿ ಸ್ಥಾನ ರಚನೆ ಸಂವಿಧಾನ ವಿರೋಧಿಯಾಗಿದ್ದು, ಬೊಕ್ಕಸಕ್ಕೆ ಹೊರೆಯಾಗಿರುವ ಇದರ ವಿರುದ್ಧ ಕೋರ್ಟಿಗೆ ಹೋಗುವುದಾಗಿ ಗುಡುಗಿದ್ದಾರೆ.

- Advertisement -

ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡು ಕೆಲವು ಕಾರ್ಯಗಳಲ್ಲಿ ಯಶಸ್ವಿಯಾಗಿರುವ ಗಡಾದ ಅವರು ಆಧಾರವಿಲ್ಲದೆ ಹೇಳುವುದಿಲ್ಲ. ಅಂದರೆ ಇಲ್ಲಿಯವರೆಗೆ ಉಪಮುಖ್ಯಮಂತ್ರಿ ಎಂಬ ಸ್ಥಾನ ರಾಜ್ಯದ ಬೊಕ್ಕಸವನ್ನು ಬರಿದು ಮಾಡುತ್ತಿತ್ತು. ಹಾಗೆ ನೋಡಿದರೆ ನಿಜವಾದ ಜನಸೇವಕರು ಈ ಸ್ಥಾನವನ್ನು ಒಪ್ಪಬಾರದು. ಯಾಕೆಂದರೆ ಸಂವಿಧಾನದಲ್ಲಿಯೇ ಇಲ್ಲದ ಈ ಸ್ಥಾನವನ್ನು ಅಲಂಕರಿಸಿ ವಿನಾಕಾರಣ ರಾಜ್ಯದ ಬೊಕ್ಕಸ ಲೂಟಿ ಹೊಡೆದು, ಉತ್ಸವ ಮೂರ್ತಿಯಾಗಿ ತಿರುಗುವ ಜನ ಪ್ರತಿನಿಧಿಗಳು ಜನ ಸೇವಕರಾಗಲಿ, ರಾಜ್ಯದ ಹಿತೈಷಿಗಳಾಗಲಿ ಹೇಗಾಗುತ್ತಾರೆ ? ಇದಕ್ಕೆ ಯಾರು ಉತ್ತರ ನೀಡಬೇಕು ?

ನೂತನ ಸಿಎಂ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನವನ್ನು ರದ್ದು ಮಾಡಿ ಬಿಜೆಪಿ ಹೈಕಮಾಂಡ್ ಒಂದು ದಿಟ್ಟ ಹೆಜ್ಜೆಯನ್ನೇ ಇಟ್ಟಿದೆಯೆನ್ನಬಹುದು. ಇದರಿಂದ ಕೆಲವು ಆಕಾಂಕ್ಷಿಗಳಿಗೆ ದಿಗಿಲು ಹುಟ್ಟಿರಬಹುದು, ತಮ್ಮ ಕನಸುಗಳು ಚೂರಾಗಿದ್ದಕ್ಕೆ ಅವರು ಒಳಗೊಳಗೆ ಕಣ್ಣೀರು ಕೂಡ ಹಾಕಿರಬಹುದು ! ಆದರೆ ಇದೊಂದು ಒಳ್ಳೆಯ ಸಂಪ್ರದಾಯ. ಇಂಥ ಸಂಪ್ರದಾಯಗಳು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ ಎಂಬುದನ್ನು ಮೋದಿ, ಷಾ ಹಾಗೂ ನಡ್ಡಾ ನೇತೃತ್ವದ ಹೈಕಮಾಂಡ್ ತೋರಿಸಿಕೊಟ್ಟಿದೆ.

ಹಾಗೆಯೇ ಕಾರ್ಯಕರ್ತ ಗಡಾದ ಅವರ ಪ್ರಯತ್ನವೂ ಶ್ಲಾಘನೀಯವಾದುದು. ಇದು ಗಡಾದ ಅವರ ಹೋರಾಟದ ಗೆಲುವಿನ ಶ್ರೀಕಾರವೆನ್ನಬಹುದು. ರಾಜಕಾರಣವನ್ನು ಪವಿತ್ರಗೊಳಿಸುವ ಇಂಥ ಸಾಧನಗಳು ಅವರ ಹತ್ತಿರ ಅನೇಕ ಇವೆ. ಅವುಗಳನ್ನು ಗಡಾದ ಅವರು ಒಂದೊಂದಾಗಿ ಹೊರಗೆ ತೆಗೆಯಬಹುದು. ಇದರಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಜನರಿಗೂ ಒಳ್ಳೆಯದಾಗುತ್ತದೆ.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group