ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ.
ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು. ದನ ಕರುಗಳಿಗೆ ಮೇವು. ದನ ಕರುಗಳ ಕಾಲಿಗೆ ಹಾಸಿದರೆ ಗೊಬ್ಬರ. ಬೆಳೆದ ಕಾಯಿ ಆಟವಾಡಲು ಚೆನ್ನೈ ಮನೆ.(ಅಡುಗುಳಿ). ಚಕ್ಕೆ ಕೆತ್ತಿತಂದರೆ ದೇವರ ಮೂರ್ತಿ. ತೋಟದ ಬದುವಿನಂಚಿನಲ್ಲಿ ನೆರಳು… ಇಷ್ಟೆಲ್ಲದರ ಜೊತೆಯಲ್ಲಿ ಔಷಧೀಯ ಗುಣವನ್ನು ಹೊಂದಿರುವ ಸಸ್ಯ
ಹಸಿಯ ಕಾಯಿಗಳನ್ನು ಬಿಡಿಸಿ ಒಳಬಾಗದಲ್ಲಿ ಕೊರೆದು ಉಂಗುರ ಮಾಡಿ ಹಾಕಿಕೊಳ್ಳುವುದೇ ಒಂದು ಚೆಂದ ಸಣ್ಣವರಿದ್ದಾಗ. ನೆಲದಲ್ಲಿ ಚೆನ್ನಾಗಿ ತೈದು ಬೇರೆಯವರಿಗೆ ಬಿಸಿ ಮುಟ್ಟಿಸುವುದು ಇದು ಸಣ್ಣ ವಯಸ್ಸಿನಲ್ಲಿ ಮಾಡುತ್ತಿದ್ದ ಕಿತಾಪತಿಗಳಲ್ಲಿ ಒಂದು.
ಹಾಲವಾಣದಲ್ಲಿ ಅನೇಕ ವಿಧ ಆದರೆ ಅದರಲ್ಲಿ ಪ್ರಮುಖವಾಗಿ ಮೂರು ವಿಧ ಬಿಳಿಹಾಲವಾಣ ಕೆಂಪು ಹಾಲವಾಣ ಮುಳ್ಳು ಹಾಲವಾಣ.
ಔಷಧಿಯಾಗಿ ಹೆಚ್ಚು ಉಪಯೋಗಿಸುವುದು ಬಿಳಿ ಹಾಲವಣವನ್ನು. ಇದರ ಬೇರು ಕಾಂಡ ಎಲೆ ಕಾಯಿ ಹೂವು ಇವುಗಳು ಹೆಚ್ಚಿನ ಔಷಧೀಯ ಉಪಯೋಗಕ್ಕಾಗಿ ಬಳಸುತ್ತಾರೆ.
- ನಾಲ್ಕೈದು ಸೊಪ್ಪನ್ನು ಚೆನ್ನಾಗಿ ಅರೆದು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುವುದರಿಂದ ಹೊಟ್ಟೆಯ ಹುಳುಗಳು ಹೊರ ಬಿದ್ದು ನಾಶವಾಗುತ್ತವೆ.
- ಸೊಪ್ಪನ್ನು ಚೆನ್ನಾಗಿ ಅರೆದು ಅರಿಶಿನ ಪುಡಿ ಸೇರಿಸಿ ಮೈಗೆ ಹಚ್ಚಿ ಒಣಗಿದ ನಂತರ ಸ್ನಾನ ಮಾಡುವುದರಿಂದ ಬೇಸಿಗೆಯಲ್ಲಿ ಆಗುವ ಬೆವರು ಸಾಲೆ ಗುಣವಾಗುತ್ತದೆ.
- ಎಲೆಯೊಂದಿಗೆ ಈರುಳ್ಳಿಯನ್ನು ಸೇರಿಸಿ ಪಲ್ಯ ಮಾಡಿ ಸೇವಿಸುವುದರಿಂದ ಬಾಣಂತಿಯ ಎದೆ ಹಾಲು ಹೆಚ್ಚುತ್ತದೆ.
- ಬಿಳಿ ಹಾಲವಣದ ಬೇರನ್ನು ದೇಸಿಯ ಹಸುವಿನ ಹಾಲಿನಲ್ಲಿ ತೇಯಿದು ಉಪಯೋಗಿಸುವುದರಿಂದ ಬಿಳಿ ಮುಟ್ಟು ಗುಣವಾಗುತ್ತದೆ.
- ತೊಗಟೆಯನ್ನು ಸುಟ್ಟು ಕರುಕು ಮಾಡಿ ತುಪ್ಪದೊಂದಿಗೆ ಬೆರೆಸಿ ಕಣ್ಣಿಗೆ ಅಂಜನ ಹಚ್ಚುವುದರಿಂದ ಕಣ್ಣಿನಲ್ಲಿ ನೀರು ಬಂದು ಕಣ್ಣಿನ ಸಮಸ್ಯೆ ಗುಣವಾಗುತ್ತದೆ.
- ಎಲೆಯ ರಸವನ್ನು ಬೆಳ್ಳುಳ್ಳಿಯನ್ನು ಸೇರಿಸಿ ಅಕ್ಕಿಯೊಂದಿಗೆ ಬೇಯಿಸಿ ಅನ್ನ ಮಾಡಿ ಸೇವಿಸುವುದರಿಂದ ಸಂಧಿವಾತ ಗುಣವಾಗುತ್ತದೆ.
- ಗಸಗಸೆ ಉದ್ದು ಬಾದಾಮಿ ಹಾಲವಣದ ಹೂವು ಸೇರಿಸಿ ಹಾಲು ಹಾಕಿ ಪಾಯಸ ಮಾಡಿ ಸೇವಿಸುವುದರಿಂದ ಕಾಮ ವಾಂಛೆ ಹೆಚ್ಚಾಗುತ್ತದೆ.
- ಧನತ್ರ ಯೋದಶಿಯ ದಿನ ಮರವನ್ನು ಪೂಜಿಸಿ ತರುವ ಚಕ್ಕೆಯಿಂದ ದೀಪಾವಳಿ ಅಮಾವಾಸ್ಯೆ ಯಂದು ನಾನು ಮಾಡುವ ತಾಯಿತ ಒಂದು ವರ್ಷದವರೆಗೆ ಮನೆಯಲ್ಲಿ ಯಾವುದೇ ದುಷ್ಟ ಶಕ್ತಿಗಳು ಬರದಂತೆ ಕಾಪಾಡುತ್ತದೆ ಇದು ನಮ್ಮ ಹಿಂದಿನವರ ನಂಬಿಕೆ. ಪ್ರತಿ ವರ್ಷ ನಾನು ಇದನ್ನು ಮಾಡಿ ಕೊಟ್ಟು ಇದರ ಲಾಭವನ್ನು ಅನೇಕರು ಪಡೆದಿರುತ್ತಾರೆ.
- ಚಕ್ಕೆಯ ರಸವನ್ನು ಹಾಲು ಸೇರಿಸಿ ಸೇವಿಸುವುದರಿಂದ ಸರ್ಪ ಸುತ್ತು ಗುಣವಾಗುತ್ತದೆ ಮತ್ತು ರಸವನ್ನು ಹಚ್ಚುವುದರಿಂದ ಬೇಗನೆ ಗುಣವಾಗುತ್ತದೆ
- ಕ್ರಿಮಿಯುಕ್ತವಾದ ಋಣಕ್ಕೆ ಎಲೆಯರಸವನ್ನು ಹಚ್ಚುವುದರಿಂದ ಗುಣವಾಗುತ್ತದೆ.
- ಎಲೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಕಿವಿಗೆ ಹಾಕುವುದರಿಂದ ಕಿವಿ ನೋವು ಗುಣವಾಗುತ್ತದೆ.
- ಎಲೆ ರಸ ತೆಗೆದು ಸ್ವಲ್ಪ ಬೆಳ್ಳುಳ್ಳಿ ಸೇರಿಸಿ ಬಿಸಿ ಮಾಡಿ ತಡೆದುಕೊಳ್ಳುವಷ್ಟು ಬಿಸಿ ಇರುವಾಗ ಉಂಡೆ ಮಾಡಿ ಹಲ್ಲಿನಲ್ಲಿ ಇಡುವುದರಿಂದ ಹಲ್ಲು ನೋವು ಗುಣವಾಗುತ್ತದೆ.
- ಹಸು ಕರು ಹಾಕಿದಾಗ ಗಂಜಿಯೊಂದಿಗೆ ಸೊಪ್ಪನ್ನು ಬೇಯಿಸಿ ಕೊಡುವ ಪದ್ಧತಿ, ಈಗಲೂ ನಮ್ಮಲ್ಲಿ ಇದೆ. ಇದರಿಂದ ಹಾಲು ಹೆಚ್ಚು ಉತ್ಪತ್ತಿಯಾಗುತ್ತದೆ.
- ಬೆತ್ತದ ಮರದಲ್ಲಿ ಹಾಲವಣದ ಎಲೆಗಳನ್ನು ಜೋಡಿಸಿ ದಿನ ತುಂಬದೆ ಹುಟ್ಟಿದ ಮಗುವನ್ನು ಮಲಗಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಯಾವುದೇ ರೋಗ ಮಗುವಿಗೆ ಬರುವುದಿಲ್ಲ. ನನ್ನ ಅಜ್ಜಿ ಅನೇಕ ಮಕ್ಕಳನ್ನು ಮಲಗಿಸಿ ಬದುಕಿಸಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ.
ಸುಮನಾ ಮಳಲಗದ್ದೆ 9980182883.