ಮೂಡಲಗಿ: ಸತೀಶ ಶುಗರ್ಸ ಕಾರ್ಖಾನೆಗೆ ಪ್ರಸಕ್ತ 2023-24 ಹಂಗಾಮಿನ ಮೊದಲ ದಿನವೇ ಉತ್ಸಾಹದಿಂದ 850 ವಾಹನಗಳಲ್ಲಿ ಸುಮಾರು 15000 ಮೆ.ಟನ್ ಕಬ್ಬನ್ನು ಪೂರೈಸುವ ಮೂಲಕ ರೈತ ಬಾಂಧವರು ಕಾರ್ಖಾನೆಯ ಮೇಲಿನ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಚೇರಮನ್ ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಹೇಳಿದರು.
ಶುಕ್ರವಾರದಂದು ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ ಕಾರ್ಖಾನೆಯ ಸನ್ 2023-24 ನೇ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಕಾರ್ಖಾನೆಯು ಕಬ್ಬು ಪೂರೈಸಿದ ರೈತರಿಗೆ ವಿಳಂಬ ಮಾಡದೆ ಕಬ್ಬಿನ ಬಿಲ್ಲನ್ನು ಪಾವತಿ ಮಾಡುತ್ತಿದ್ದು, ಪ್ರಸಕ್ತ ಹಂಗಾಮಿನಲ್ಲಿಯೂ ಸಹ ಕಬ್ಬು ಪೂರೈಸಿದ ರೈತರ ಬ್ಯಾಂಕ ಖಾತೆಗಳಿಗೆ ಸಮಯಾನುಸಾರ ಕಬ್ಬಿನ ಬಿಲ್ಲನ್ನು ಜಮೆ ಮಾಡಲಾಗುವುದು ಎಂದ ಅವರು ಕಾರ್ಖಾನೆಗೆ ಕಬ್ಬು ಪೂರೈಸುವ ಸಮಸ್ತ ರೈತ ಬಾಂಧವರು ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಗುಣಮಟ್ಟದ ಕಬ್ಬನ್ನು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಜಿಲ್ಲೆಯ ಪ್ರಗತಿಪರ ರೈತ ಬಾಂಧವರು, ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಅಂಗಘಟಕ ಪ್ರಿಯಾಶಕ್ತಿ ಸ್ಟೀಲ್ ಘಟಕದ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಗತಿಪರ ರೈತರಾದ ಭೀಮಪ್ಪಾ ರಡ್ಡಿ, ಮಲ್ಲಿಕಾರ್ಜುನ ಕಬ್ಬೂರ, ರವಿ ಸಣ್ಣಕ್ಕಿ, ಮಹಾದೇವಪ್ಪಾ ಪತ್ತಾರ, ಸಿದ್ದಪ್ಪಾ ಹಂಜಿ, ಯಲ್ಲಪ್ಪಾ ಸತ್ತಿಗೇರಿ, ಲಕ್ಕಪ್ಪಾ ಆಲೋಶಿ, ಶಿವಪ್ಪಾ ಮುನ್ನೋಳಿ, ರಫೀಕ ದೇಸಾಯಿ, ಶ್ರೀಕಾಂತ ಶಿರಗಾಂವಿ, ಯಲ್ಲಪ್ಪಾ ಮಳಲಿ, ಲಕ್ಷ್ಮಣ ಪಾಟೀಲ, ಲಕ್ಷ್ಮಣ ಸೊಗಲದ, ಭೀಮಗೌಡ ಪಾಟೀಲ ಹಾಗೂ ಇನ್ನುಳಿದ ರೈತ ಬಾಂಧವರು ಮತ್ತು ಸಂಸ್ಥೆಯ ಉಪಾಧ್ಯಕ್ಷರಾದ ಪಿ.ಡಿ. ಹಿರೇಮಠ, ವಿ.ಎಮ್.ತಳವಾರ, ಡಿ.ಆರ್.ಪವಾರ, ಹಾಗೂ ಹಿರಿಯ ಅಧಿಕಾರಿಗಳು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.