ವಿಶೇಷ ವರದಿ: ಪಂಡಿತ ಯಂಪೂರೆ ಸಿಂದಗಿ.
ಸಿಂದಗಿ: ಮಾಜಿ ಸಚಿವ ದಿ. ಎಂ.ಸಿ.ಮನಗೂಳಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸಿಂದಗಿ ವಿಧಾನಸಭೆ ಉಪಚುನಾವಣೆಯು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳಲ್ಲಿ ತ್ರಿಕೋನ ಸ್ಪರ್ಧೆಯಾದರು ಕೂಡಾ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಸ್ಪರ್ಧೆ ನಡೆಯುವ ಸಾಧ್ಯತೆ ಹೆಚ್ಚಿವೆ. ಆದಾಗ್ಯೂ ಮೂರೂ ಪಕ್ಷದ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಅವರವರ ಪಕ್ಷಗಳ ಕೇಂದ್ರ ಹಾಗೂ ರಾಜ್ಯದ ಸಾಧನೆಗಳನ್ನು ಜನರಲ್ಲಿ ಬಿತ್ತರಿಸುತ್ತ ಪಕ್ಷಗಳ ನಾಯಕರು ಚುನಾವಣಾ ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ. ವಿನಃ ಯಾವ ಪಕ್ಷಗಳು ಕ್ಷೇತ್ರದ ಸಮಸ್ಯೆಗಳ ಅಥವಾ ಅಭಿವೃದ್ಧಿಯ ಬಗ್ಗೆ ತುಟಿ ಬಿಚ್ಚುತ್ತಿಲ್ಲ.
ಹೌದು, ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯಾಗಿದ್ದು. 6 ಜನ ಆಕಾಂಕ್ಷಿಗಳಲ್ಲಿ ಗಾಣಿಗ ಸಮುದಾಯದ ರಮೇಶ ಭೂಸನೂರ ಅವರನ್ನು ಕಣಕ್ಕಿಳಿಸಿ ಎಲ್ಲ ಸಚಿವರು ಈ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಕ್ಕೆ ಮಿಸಲಾಗಿದ್ದ ಕ್ಷೇತ್ರ 4-5 ಚುನಾವಣೆಗಳಲ್ಲಿ ಮೂರನೇ ಸ್ಥಾನದಲ್ಲಿ ಉಳಿದಿರುವುದರಿಂದ ಲಿಂಗಾಯತ ಸಮುದಾಯದ ಅಶೋಕ ಮನಗೂಳಿ ಅವರನ್ನು ಪಕ್ಷಕ್ಕೆ ಸೆಳೆದುಕೊಂಡು ಅಭ್ಯರ್ಥಿಯನ್ನಾಗಿಸಿದೆ ಆದರೆ ಜೆಡಿಎಸ್ ಪಕ್ಷ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ನಾಜೀಯಾ ಶಕೀಲ ಅಂಗಡಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಬಿಜೆಪಿ ಗೆಲುವಿನ ಲೆಕ್ಕಾಚಾರ:
ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಪಕ್ಷವೇ ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ರಾಜ್ಯದ ಸಚಿವರಾದ ವಿ,ಸೋಮಣ್ಣ, ಬೈರತಿ ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ಗೋವಿಂದ ಕಾರಜೋಳ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ವರಿಷ್ಠರು ಕ್ಷೇತ್ರದ ಪ್ರಮುಖ ಹಳ್ಳಿಗಳಲ್ಲಿ ಸುತ್ತಾಡಿ ಗ್ರಾಮಸ್ಥರಿಂದ ಸಮಸ್ಯೆಗಳನ್ನು ಆಲಿಸಿ ಚುನಾವಣೆ ನೀತಿ ಸಂಹಿತೆ ಇದ್ದಾಗ್ಯೂ ಅವುಗಳನ್ನು ಬಗೆಹರಿಸುವ ಭರವಸೆ ಕೂಡಾ ನೀಡಿ ಗೆಲುವಿನ ಹಾದಿ ಸುಲಭ ಮಾಡಿಕೊಂಡಿದ್ದಾರೆ.
ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರು ಚಾಲನೆ :
ಈ ಉಪಚುನಾವಣೆ ನೆಪದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾರ್ಯುಗಳಿಗೆ ಮರುಚಾಲನೆ ದೊರೆತಿದೆ. ಅಲ್ಲದೆ ಆಲಮೇಲ ಪಟ್ಟಣಕ್ಕೆ ತೋಟಗಾರಿಕಾ ಮಹಾವಿದ್ಯಾಲಯವನ್ನು ಪುನಃ ಅಲ್ಲೇ ಮರು ಮಂಜೂರಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ. ಇದು ಚುನಾವಣೆಗೆ ಸಿಮೀತವಾಗುತ್ತದೆಯೋ ಅಥವಾ ಕಾರ್ಯಗತವಾಗುತ್ತದೆ ಎಂಬುದು ಇಲ್ಲಿನ ಸಾರ್ವಜನಿಕರು ಮಾತು. ಕ್ಷೇತ್ರದ ತುಂಬಾ ಓಡಾಡಿ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಚುನಾವಣೆಗೆ ಸ್ವಲ್ಪ ದಿನಗಳ ಮುಂಚೆಯೇ ವಸತಿ ಇಲಾಖೆಯಿಂದ ದಾಖಲೆಯಲ್ಲಿ 5 ಸಾವಿರ ಆಶ್ರಯ ಮನೆಗಳನ್ನು ಮಂಜೂರು ಮಾಡಿದೆ. ಜತೆಗೆ ಈಗಾಗಲೇ ಮತಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಸಚಿವರುಗಳು ತಮ್ಮ ತಮ್ಮ ಇಲಾಖೆಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಮಂಜೂರು ಮಾಡುವುದಾಗಿ ಭರವಸೆಗಳ ಸುರಿಮಳೆ ಸುರಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರದ ಬೆಲೆ ಏರಿಕೆ ನೀತಿಯ ತಂತ್ರ:
ಆಡಳಿತಾರೂಢ ಸರಕಾರದ ವೈಫಲ್ಯ ಹಾಗೂ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯನ್ನು ಮತದಾರರ ಮುಂದೆ ಇಡುತ್ತಿದೆ. ಜೊತೆಗೆ ಈ ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಕ್ಷೇತ್ರಕ್ಕೆ ನೀಡಿರುವ ಜನಪರ ಯೋಜನೆಗಳ ಮನವರಿಕೆ ಮಾಡುತ್ತಿದೆ ಅಲ್ಲದೆ ದಿ.ಎಂ.ಸಿ.ಮನಗೂಳಿಯವರ ಕೊನೆಯ ಆಸೆ ಕಾಂಗ್ರೆಸ್ ಸೇರುವುದಾಗಿತ್ತು ಎನ್ನುವ ಕಾರ್ಡ್ ಬಳಸುತ್ತಿದೆ. ಇನ್ನುಳಿದಂತೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ, ಮಾಜಿ ಶಾಸಕರಿಗೆ, ಪಕ್ಷದ ಜಿಲ್ಲಾ ಮುಖಂಡರುಗಳಿಗೆ ಈ ಚುನಾವಣೆ ಗೆಲ್ಲಲೇಬೇಕು ಎನ್ನುವ ಟಾರ್ಗೆಟ್ ನೀಡಿದೆ,
ಜಾತಿ ಲೆಕ್ಕಾಚಾರದಲ್ಲಿ ತೊಡಗಿದ ಅಭ್ಯರ್ಥಿಗಳು:
ಕ್ಷೇತ್ರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕುರುಬರು ಹಾಗೂ ಲಿಂಗಾಯತ ಮತದಾರ ಪ್ರಭುಗಳು ಯಾವ ಕಡೆಗೆ ವಾಲುತ್ತಾರೋ ಅವರು ಗೆದ್ದಂತೆ ಎನ್ನುವುದು ಶಿವಾನಂದ ಪಾಟೀಲ್, ಎಂ.ಬಿ.ಪಾಟೀಲ್, ಯಶವಂತರಾಯಗೌಡ ಪಾಟೀಲ ಲೆಕ್ಕಾಚಾರವಿದೆ. ಹೀಗಾಗಿಯೇ ಕಾಂಗ್ರೆಸ್ ಹಾಗೂ ಬಿಜೆಪಿ ದಲಿತ ಸಮುದಾಯದ ಮತ ಸೆಳೆಯಲು ನೂರೆಂಟು ಯೋಜನೆಗಳ ಭರವಸೆ ನೀಡುತ್ತಿದೆ. ಕಾಂಗ್ರೆಸ್ ಪಕ್ಷ ದಲಿತ ಮತಗಳನ್ನು ಸೆಳೆಯಲು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಪ್ರಿಯಾಂಕ ಖರ್ಗೆ, ಶಿವರಾಜ ತಂಗಡಗಿ, ಸತೀಶ ಬಂಡಿವಡ್ಡರ ಅವರನ್ನು ಮುಂದೆ ಮಾಡಿದೆ. ಕುರುಬ ಸಮುದಾಯದ ಮತದಾರರ ಸೆಳೆತಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಎಂ.ರೇವಣ್ಣ, ಡಾ. ಮಂಜುಳಾ ಗೋವರ್ಧನಮೂರ್ತಿ, ಮಲ್ಲಣ್ಣ ಸಾಲಿ ಅವರಿಗೆ ಹೊಣೆ ಹೊರೆಸಿದೆ. ತಳವಾರ ಹಾಗೂ ಎಸ್ಟಿ ಸಮುದಾಯಗಳ ಮತಗಳಿಗಾಗಿ ಮಾಜಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ ಮತದಾರರನ್ನು ಒಲಿಸಿಕೊಳ್ಳಲು ಅದೇ ಸಮುದಾಯದ ನಾಯಕರನ್ನೇ ಪ್ರಚಾರಕ್ಕೆ ಅವರನ್ನು ನೇಮಿಸಲಾಗಿದೆ. ಬಿಜೆಪಿಯು ಕೂಡಾ ಇದಕ್ಕೆ ಹೊರತಾಗಿಲ್ಲ. ಗಾಣಿಗ ಸಮುದಾಯದ ಮತ ಸೆಳೆಯಲು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಪಂಚಮಸಾಲಿ ಸಮುದಾಯದ ಸಿ.ಸಿ.ಪಾಟೀಲ, ಬಸನಗೌಡ ಪಾಟೀಲ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಬಣಜಿಗ ಸಮುದಾಯದ ನಾಯಕರು ಸಾಮೂಹಿಕವಾಗಿ ಪ್ರಚಾರ ಮಾಡುತ್ತಿದ್ದಾರೆ. ದಲಿತ ಮತಗಳಿಗಾಗಿ ಸಂಸದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಪಿ.ರಾಜು ಅವರನ್ನು ಕರೆತಂದಿದ್ದಾರೆ. ಕುರುಬ ಸಮಾಜದ ಕೆ.ಎಸ್. ಈಶ್ವರಪ್ಪ, ಬೈರತಿ ಬಸವರಾಜ ಅವರನ್ನು ನೇಮಿಸಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಅವರು ಎಲ್ಲ ಸಮುದಾಯಗಳಿಗೆ ಕ್ಷೇತ್ರಕ್ಕೆ ನೀಡಿರುವ ಕ್ಷೇತ್ರದ ಉಸ್ತುವಾರಿಗಳನ್ನಾಗಿ ನೇಮಿಸಿದೆ. ಹೀಗೆ ಆಯಾ ಸಮೂದಾಯದ ಮೇಲೆ ಹಿಡಿತವನ್ನಿಟ್ಟುಕೊಂಡು ಅಷ್ಟಿಷ್ಟು ಅನ್ನುವ ಲೆಕ್ಕಾಚಾರದಲ್ಲಿ ತೊಡಗಿವೆ.
ಬಿಜೆಪಿಯಲ್ಲಿ ಅಸಮಾಧಾನಿತರ ಮನವಲಿಕೆ ವಿಫಲ:
ಇನ್ನು ಈ ಬಾರಿಯ ಬಿಜೆಪಿ ಟಿಕೆಟ್ ಗೆ ಭಾರಿ ಪೈಪೋಟಿಯಲ್ಲಿ ಒಟ್ಟು ಆರು ಜನ ಆಕಾಂಕ್ಷಿಗಳಾಗಿದ್ದರು. ಭೂಸನೂರು ಅವರನ್ನು ಹೊರತು ಪಡಿಸಿ ಯಾರಿಗಾದರೂ ಟಿಕೇಟ್ ನೀಡಿ ಎನ್ನುವ ವಾದವನ್ನು ಹೈಕಮಾಂಡ್ ಮುಂದೆ ಇಟ್ಟಿದ್ದರು. ಆದರೆ ಹೈಕಮಾಂಡ್ ಇವ್ಯಾವುದಕ್ಕೂ ಜಗ್ಗದೆ ಭೂಸನೂರ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಸಹಜವಾಗಿಯೇ ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿಸಿದೆ. ಯಾರು ಬಹಿರಂಗವಾಗಿ ಅಸಮಾಧಾನ ಹೊರಹಾಕದಿದ್ದರೂ, ತಮ್ಮ ಆಪ್ತರ ಮುಂದೆ ತಮ್ಮ ನೋವು ಹೇಳಿಕೊಂಡಿದ್ದಾರೆ. ಹೀಗಾಗಿ ಸ್ಥಳೀಯ ನಾಯಕರೇ ಬಿಜೆಪಿ ಪಕ್ಷಕ್ಕೆ ತಲೆನೋವಾಗಿದ್ದಾರೆ. ಅವರನ್ನು ಸಂಧಾನ ಮಾಡಿಸಿ, ಪ್ರಚಾರಕ್ಕೆ ಕರೆದುಕೊಂಡು ಬರುವ ಹೊಣೆ ಸಚಿವರಾದ ವಿ.ಸೋಮಣ್ಣ, ಸಿ.ಸಿ.ಪಾಟೀಲ್ ಅವರಿಗೆ ವಹಿಸಲಾಗಿತ್ತು 6 ಜನ ಆಕಾಂಕ್ಷಿಗಳಲ್ಲಿ ಇನ್ನೂ ಮೂರು ಜನರು ಪ್ರಚಾರದಲ್ಲಿ ತೊಡಗದೆ ಇರುವುದರಿಂದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಹೊಣೆ ಹೊತ್ತಿರುವ ಸಚಿವರು ಅಸಮಾಧಾನ ತಣಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ದಿ.ಎಂ.ಸಿ.ಮನಗೂಳಿ ಕಾರ್ಯಗಳು ಜೆಡಿಎಸ್ ಸಾಧನೆ:
ಮಾಜಿ ಸಚಿವ ದಿ. ಎಂ.ಸಿ.ಮನಗೂಳಿ ಅವರ ರಾಜಕೀಯ ಏರಿಳಿತಗಳು ಜೆಡಿಎಸ್ ಪಕ್ಷದಿಂದಲೇ ಆಗಿವೆ ಆದರೆ ಅವರ ಕುಟುಂಬ ಪಕ್ಷದ ಸಾಧನೆಗಳನ್ನು ಮುಂದಿಟ್ಟುಕೊಂಡು ಹೆಸರನ್ನು ಬಳಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠರು ವಿರೋಧಿಸುತ್ತ ದೇವೇಗೌಡರು ಸಚಿವರಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿ ಅನೇಕ ಯೋಜನೆ ಮಂಜೂರು ಮಾಡಿದ್ದರು. ಜೆಡಿಎಸ್ ಅವಕಾಶ ನೀಡಿದ್ದರಿಂದಲೇ ಅವರು ಸಚಿವರಾಗಿ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಹಾಗೂ ಕೈ ಪಾಳೆಯಕ್ಕೆ ಅವರು ಹೆಸರು ಹೇಳಲು ಅರ್ಹತೆಯಿಲ್ಲ ಎಂದು ಜೆಡಿಎಸ್ ಮುಖಂಡರ ವಾಗ್ದಾಳಿಯಾದರೆ ಅವರ ಪುತ್ರರು ಮಾತ್ರ ನಮ್ಮ ತಂದೆಗೆ ಜೆಡಿಎಸ್ ಇಷ್ಟವಿರಲಿಲ್ಲ, ಹೀಗಾಗಿ ಅವರ ಕೊನೆಯ ಆಸೆಯೂ ಜೆಡಿಎಸ್ ಪಕ್ಷ ತೊರೆಯುವುದಾಗಿತ್ತು. ಹೀಗಾಗಿ ನಾವು ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿದ್ದೇವೆ. ನಮ್ಮ ತಂದೆ ಜೆಡಿಎಸ್‍ನಲ್ಲಿದ್ದರೂ ಕಾಂಗ್ರೆಸ್ ಅವರನ್ನು ಗೌರವದಿಂದ ನೋಡಿದೆ. ಕ್ಷೇತ್ರಕ್ಕೆ ಅನೇಕ ಯೋಜನೆ ನೀಡಿದೆ ಎನ್ನುವುದು ಕುಟುಂಬದ ಸದಸ್ಯರ ಅಭಿಮತವಾಗಿದೆ.