ಮೂಡಲಗಿ: ಜಾನುವಾರುಗಳು ರೈತರ ಜೀವಾಳವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕಾಲುಬಾಯಿ ರೋಗ ನಿಯಂತ್ರಣಕ್ಕೆ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಕೊಡಿಸುವ ಮೂಲಕ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ಅ-೨೦ ರಂದು ಕಲ್ಲೋಳಿ ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ೬ನೇ ಸುತ್ತಿನ ಜಾನುವಾರುಗಳ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕಿಸುವುದೊಂದೇ ಮಾರ್ಗವಾಗಿದ್ದು, ರೋಗದಿಂದ ಪೂರ್ಣ ಸುರಕ್ಷತೆಗಾಗಿ ವರ್ಷದಲ್ಲಿ ಕನಿಷ್ಠ ಎರಡು ಬಾರಿ ಲಸಿಕೆ ಹಾಕುವುದು ಅವಶ್ಯಕವಾಗಿರುತ್ತದೆ. ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಕೂಡ ಪ್ರತಿ ಆರು ತಿಂಗಳಿಗೊಮ್ಮೆ ನಡೆಸಲಾಗುವ ಸಾಮೂಹಿಕ ಲಸಿಕಾಕರಣ ಕಾರ್ಯಕ್ರಮದಲ್ಲಿ ತಪ್ಪದೇ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದರಲ್ಲದೇ ಲಸಿಕಾ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಒಟ್ಟು ೧,೦೬,೧೧೭ ಜಾನುವಾರುಗಳಿಗೆ ಮತು ಕಲ್ಲೋಳಿ ಪಶು ಚಿಕಿತ್ಸಾಲಯ ವ್ಯಾಪ್ತಿಯಲ್ಲಿ ೮೬೯೬ ಜಾನುವಾರುಗಳಿಗೆ ಉಚಿತವಾಗಿ ಲಸಿಕೆಯನ್ನುನೀಡಲಾಗುತ್ತದೆ ಎಂದರು.
ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ರೈತರ ಮನೆಗೆ ಬಂದು ಲಸಿಕೆ ನೀಡುತ್ತಾರೆ. ಅವರಿಗೆ ಅಗತ್ಯ ಸಹಕಾರ ನೀಡಿ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಜಾನುವಾರು ಸಾಕುತ್ತಿರುವ ಎಲ್ಲ ರೈತರು ಅಭಿಯಾನದ ಸದುಪಯೋಗ ಪಡೆಯಬೇಕು ಎಂದು ಸಂಸದ ಈರಣ್ಣ ಕಡಾಡಿ ರೈತರಲ್ಲಿ ಮನವಿ ಮಾಡಿದರು.
ತಾಲೂಕಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೆಶಕ ಡಾ ಮೋಹನ ಕಮತ, ಪ್ರಮುಖರಾದ ಪ್ರಭು ಕಡಾಡಿ, ಬಸವರಾಜ ಕಡಾಡಿ, ಹಣಮಂತ ಸಂಗಟಿ, ಶಂಕರ ಗೋರೋಶಿ, ಈರಣ್ಣ ಮುನ್ನೋಳಿಮಠ, ಶಿವಪ್ಪ ಬಿ.ಪಾಟೀಲ, ಶಿವಾನಂದ ಹೆಬ್ಬಾಳ, ಅಜೀತ ಚಿಕ್ಕೋಡಿ, ದಶಗೀರ ಕಮತನೂರ, ಸೋಮನಿಂಗ ಹಡಗಿನಾಳ, ರಾಮಣ್ಣ ಉಳ್ಳಾಗಡ್ಡಿ, ಮಲ್ಲಪ್ಪ ಖಾನಗೌಡ್ರ, ತುಕಾರಾಮ ಪಾಲಕಿ, ಡಾ. ಸುರೇಶ ತಪಶೆಟ್ಟಿ, ಡಾ. ನೀಲಕಂಠ ಕಪ್ಪಲಗುದ್ದಿ, ಡಾ. ಶಿವಾನಂದ ಸಂಸುದ್ದಿ ಸೇರಿದಂತೆ ಇಲಾಖೆ ಸಿಬ್ಬಂದಿಗಳು, ರೈತರು ಉಪಸ್ಥಿತರಿದ್ದರು.