ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ೬೮ ನೆಯ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಕರ್ನಾಟಕ ಸುವರ್ಣ ಸಂಭ್ರಮ – ೫೦ ರ ಸವಿನೆನಪಿಗಾಗಿ ಗೀತಗಾಯನ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಎನ್.ಆರ್. ಠಕ್ಕಾಯಿ ಮಾತನಾಡಿ, ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡದ ಬಗ್ಗೆ ನಮಗೆಲ್ಲ ಹೆಮ್ಮೆ ಇರಬೇಕು ಎಂದು ಹೇಳಿದರು.ವಿದ್ಯಾರ್ಥಿಗಳು ಏಕೀಕರಣದ ಇತಿಹಾಸವನ್ನು ಅರಿತಾಗ ಭಾಷಾಭಿಮಾನ ಇನ್ನಷ್ಟು ಹೆಚ್ಚುತ್ತದೆ. ಸಾಹಿತ್ಯ, ಸಂಗೀತ, ಕಲೆ ಮತ್ತು ಸಂಸ್ಕೃತಿಯಲ್ಲಿ ಕನ್ನಡ ಹಾಸುಹೊಕ್ಕಾಗಿದ್ದು ಅದರ ಸಂವರ್ಧನೆಗಾಗಿ ಎಲ್ಲರೂ ಸದಾ ಒಂದಾಗಿರಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕನ್ನಡ ಅಂಕಿಗಳನ್ನು ಬಳಕೆ ಮಾಡುವಂತೆ ಅವರು ಕರೆ ನೀಡಿದರು.
ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಕರ್ನಾಟಕ ಮಾತೆ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವನ ವೇಷ ಧರಿಸಿ ಭಾಗಿಯಾದರು. ಕನ್ನಡ ನಾಡು ನುಡಿಯ ಬಗ್ಗೆ ಕವನ ವಾಚನ, ಭಾಷಣ, ಗೀತಗಾಯನ, ರಂಗೋಲಿ, ನೃತ್ಯ ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರಾದ ವಿನಾಯಕ ಬಡಿಗೇರ, ಸದಸ್ಯರಾದ ಮಹಾಂತೇಶ ಸೊಗಲದ, ರಮೇಶ ಸೂರ್ಯವಂಶಿ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ ಹುಣಶೀಕಟ್ಟಿ, ರಾಜಶೇಖರ ದೊಡವಾಡ, ಶಿಕ್ಷಕರಾದ ಜೆ.ಆರ್.ನರಿ, ಪಿ.ಎಸ್ ಗುರುನಗೌಡರ, ಎಸ್.ವಿ.ಬಳಿಗಾರ, ಆರ್.ಸಿ.ಸೊರಟೂರ, ಎಚ್.ವಿ.ಪುರಾಣಿಕ, ವಿ.ಬಿ.ಪಾಟೀಲ, ಎಸ್.ಬಿ.ಹತ್ತರಕಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಲಕ್ಷ್ಮೀ ನಾಗಣ್ಣವರ ಸ್ವಾಗತಿಸಿದರು. ಪೃಥ್ವಿ ಗರಗದ ನಿರೂಪಿಸಿದರು. ಸುನಿತಾ ಚಿಲಮೂರ ವಂದಿಸಿದರು. ಸುಶ್ಮಿತಾ ಸೊಗಲದ ನಿರ್ವಹಿಸಿದರು.