ಸಿಂದಗಿ: ಶಿಕ್ಷಣ ಸಂಸ್ಥೆಗಳು ಜ್ಞಾನವನ್ನು ನೀಡಿದರೆ ಮಠ-ಮಂದಿರಗಳಲ್ಲಿ ನಡೆಯುತ್ತಿರುವ ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಮಕ್ಕಳಲ್ಲಿ ಸಂಸ್ಕಾರ ಸಿಗುತ್ತದೆ ಕಾರಣ ತಾಯಂದಿರು ಮಕ್ಕಳನ್ನು ಪುರಾಣ ಪುಣ್ಯಕತೆಗಳಲ್ಲಿ ತೊಡಗಿಸಬೇಕು ಇದರಿಂದ ಆಧ್ಯಾತ್ಮಿಕ ಚಿಂತನೆ ಬೆಳೆಯುತ್ತದೆ ಎಂದು ಎಚ್.ಜಿ.ಕಾಲೇಜಿನ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಬಸ್‍ಡಿಪೋ ಹತ್ತಿರದಲ್ಲಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ಆವರಣದಲ್ಲಿ ಹಮ್ಮಿಕೊಂಡ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ 28ನೆಯ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಸಮಾರಂಭದಲ್ಲಿ ಮಾತನಾಡಿ, 86 ಸಾವಿರ ಜೀವ ರಾಶಿಗಳಿಗೆ ಮಿಗಿಲಾದ ಈ ಮಾನವ ಜನ್ಮ ಬಲು ದೊಡ್ಡದು ಮತ್ತು ಅಪೂರ್ವವಾಗಿದೆ. ಮಾನವ ಆಧ್ಯಾತ್ಮಿಕ ಜ್ಞಾನವನ್ನು ರೂಢಿಸಿಕೊಳ್ಳಬೇಕು. ತಿಳಿವಳಿಕೆಗಾಗಿ ಇಂತಹ ಪುರಾಣ ಪ್ರವಚನ ಸಂತ್ಸಂಗಗಳನ್ನು ಆಲಿಸಬೇಕು. ಶರಣರ, ಸಂತರ, ಮಹಾಂತರ ಜೀವನ ಚರಿತ್ರೆಗಳನ್ನು ಅರಿತುಕೊಂಡು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.
ಶಿಕ್ಷಕಿ ಶೋಭಾ ಚಿಗರಿ ಮಾತನಾಡಿ, ಜೀವನ ಜಂಜಾಟದಲ್ಲಿ ನಿತ್ಯ ಅನೇಕ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದೇವೆ ಕಷ್ಟ ಬಂದಾಗ ಕುಗ್ಗದೇ ಸುಖ ಬಂದಾಗ ಹಿಗ್ಗದೆ ಕಷ್ಟ ಮತ್ತು ಸುಖ ಸಮನಾಗಿ ಸ್ವೀಕಾರ ಮಾಡಬೇಕು ಇದ್ದದರಲ್ಲೇ ಸುಖ ಜೀವನ ಕಾಣಲು ಇಂತಹ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡಾಗ ಮಾತ್ರ ಜೀವನದಲ್ಲಿ ಶಾಂತಿ ಸ್ಥಪಿಸಲು ಸಾಧ್ಯವಾಗುತ್ತದೆ. ನಮ್ಮ ಈ ಬದುಕು ನೀರಿನ ಮೇಲಿನ ಗುಳ್ಳೆ ಇದ್ದಹಾಗೆ. ಆಧ್ಯಾತ್ಮಿಕ ಜೀವನ ಕೌಶಲ್ಯಗಳ ಬಗ್ಗೆ ಇಂದಿನ ಪೀಳಿಗೆಯಲ್ಲಿ ಅರಿವು ಮೂಡಿಸುವುದು ಅವಶ್ಯಕ. ಮಾನವ ಸಂಸಾರದ ಸಂಪತ್ತಿಗೆ ಅತೀ ಆಸೆ ಪಡದೆ, ಧರ್ಮ, ಸಂಸ್ಕಾರ ಉಣಬಡಿಸುವ ಮಠ-ಮಂದಿರಗಳಲ್ಲಿ ನಡೆಯುವ ಪುರಾಣ-ಪ್ರವಚನಗಳಲ್ಲಿ ಭಾಗವಹಿಸುವ ಮುಖಾಂತರ ಬದುಕು ಸಾರ್ಥಕಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದ ಪ್ರಭುಲಿಂಗ ಶರಣರು ಆಶೀರ್ವದಿಸಿದರು. ದಿವ್ಯ ಸಾನ್ನಿಧ್ಯವನ್ನು ನಾಲವಾರ ಶ್ರೀಮಠದ ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಸಿಂದಗಿ ಆದಿಶೇಷ ಶ್ರೀಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮಿಗಳು ವಹಿಸಿಕೊಂಡಿದ್ದರು. ಕಾಂಗ್ರೆಸ್ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಮಹಾನಂದಾ ಬಮ್ಮಣ್ಣಿ, ಭಾಜಪ ಅಧ್ಯಕ್ಷೆ ನೀಲಮ್ಮ ಯಡ್ರಾಮಿ, ಶಶಿಕಲಾ ಚಂ ಅಂಗಡಿ, ಜ್ಞಾನ ಭಾರತಿ ವಿದ್ಯಾಮಂದಿರದ ಕಾರ್ಯದರ್ಶಿ ಸತೀಶ ಹಿರೇಮಠ, ಪುರಸಭೆ ಸದಸ್ಯ ರಾಜಣ್ಣಿ ನಾರಾಯಣಕರ, ಡಾ. ಪ್ರಕಾಶ ಮೂಡಲಗಿ ಅರೀಫ್ ಅಂತರಗಂಗಿ, ಬಸವರಾಜ ಹಜ್ಜನವರ ವೇದಿಕೆ ಮೇಲಿದ್ದರು.
ಪೂಜಾ ಹಿರೇಮಠ ನಿರೂಪಿಸಿದರು. ಪಂಡಿತ ಯಂಪೂರೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಮಾಹಾಂತೇಶ ನೂಲಾನವರ ಗೊಲ್ಲಾಳಪ್ಪ ಬಗಲಿ, ಪ್ರವಚನಕಾರ ವೆ.ಮೂ.ಸಿದ್ದಯ್ಯ ಶಾಸ್ತ್ರಿಗಳು, ಸಂಗೀತಗಾರ ಶಾಂತಲಿಂಗ ಹೊನ್ನಕಿರಣಗಿ, ತಬಲಾ ಆಕಾಶ ಹೈದ್ರಾ, ಚಂದ್ರಶೇಖರ ನಾಗರಬೆಟ್ಟ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ನಿಹಾನ ದೇಸಾಯಿ, ಸಂಗನಗೌಡ ಪಾಟೀಲ ಅಗಸಬಾಳ, ಸಿದ್ದಣ್ಣ ಕುಡೊಕ್ಕಲಗಿ, ಶಾಂತವೀರ ಹಿರೇಮಠ, ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.