ಚಿತ್ರಕಲಾ ಪ್ರದರ್ಶನಗಳು ಕಲೆಯ ಸುಂದರತೆಯನ್ನು ಮಾತ್ರವಲ್ಲ, ಅದರ ಅಂತರಾಳದಲ್ಲಿರುವ ತತ್ವ, ಭಾವನೆ, ಮತ್ತು ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಪ್ರಬಲ ಮಾಧ್ಯಮವಾಗಿದೆ. ಎಂದು ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ದಿನಾಂಕ ೨೪ ರವಿವಾರದಂದು ನಗರದ ಸತೀಶ್ ಶುಗರ್ಸ್ ಕಾಲೇಜಿನಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು, ನಾಯಕ್ ಸ್ಟೂಡೆಂಟ ಫೆಡರೇಶನ್ ಗೋಕಾಕ ಹಾಗೂ ಸಿದ್ದಾರ್ಥ್ ಲಲಿತ ಕಲಾ ಮಹಾವಿದ್ಯಾಲಯ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ “ನಿಮ್ಮೊಂದಿಗೆ ನಾವು” ಕಲಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಕಾಡೆಮಿ ಇಂಥ ಕಾರ್ಯಕ್ರಮ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತಿರುವುದು ಶ್ಲಾಘನೀಯವಾಗಿದ್ದು, ದೃಶ್ಯ ಕಲೆಯು ಎಲ್ಲ ವಿಷಯಗಳಿಗಿಂತ ಸರಳವಾಗಿ ತಿಳಿದುಕೊಳ್ಳುವ ವಿಷಯವಾಗಿದೆ. ಸಮಾಜದಲ್ಲಿ ಪ್ರತಿಯೊಂದು ರಂಗದಲ್ಲಿಯೂ ಸಹ ಚಿತ್ರಕಲೆ ಅವಶ್ಯಕ, ಆದ್ದರಿಂದ ವಿದ್ಯಾರ್ಥಿಗಳು ಇಂತಹ ಕಲಾ ಶಿಬಿರಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಬೇಕು. ಚಿತ್ರಕಲಾ ಪ್ರದರ್ಶನಗಳು ಕೇವಲ ಕಲೆ ಮಾತ್ರವಲ್ಲ, ಕಲಾವಿದ ಮತ್ತು ಪ್ರೇಕ್ಷಕರ ನಡುವಿನ ಸಂವಾದ, ಸಾಂಸ್ಕೃತಿಕ ವಿನಿಮಯ, ಮತ್ತು ಮಾನವೀಯತೆಯ ವಿಭಿನ್ನ ಆಯಾಮಗಳನ್ನು ಸೃಷ್ಟಿಸುವ ಮಹತ್ವದ ಆಧಾರವಾಗಿದೆ ಎಂದು ಹೇಳಿದರು.
ಕಲಾಕೃತಿಯ ವಿಷಯ ಕುರಿತು ಮಾತನಾಡಿದ ಸಿದ್ದಾರ್ಥ್ ಲಲಿತ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯಾನಂದ ಮಾದರ ಬದುಕನ್ನು ಕಟ್ಟಿಕೊಡುವ ಶಕ್ತಿ ಕಲೆಗೆ ಇದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಬಹುದೊಡ್ಡ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಹಿರಿಯ ಕಲಾವಿದ ಬಾಬುರಾವ್ ನಡೋಣಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಶ್ರೀಮತಿ ಆಶಾರಾಣಿ ನಡೋಣಿ, ಮಕ್ಕಳ ಸಾಹಿತಿ ಲಕ್ಷ್ಮಣ್ ಚೌರಿ, ಪ್ರಾ. ಪ್ರಕಾಶ ಲಕ್ಷೆಟ್ಟಿ, ಸಾಹಿತಿಗಳಾದ ಶ್ರೀಮತಿ ವಿದ್ಯಾ ರೆಡ್ಡಿ, ಹಿರಿಯ ಕಲಾವಿದರಾದ ಹೀರಾಚಂದ ಪೂಜಾರಿ, ಈಶ್ವರ್ ಚಂದ್ರ ಭೇಟಗೇರಿ ಉಪಸ್ಥಿತರಿದ್ದರು.