ಧಾರವಾಡ : ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿರುವ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಜ ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಸರ್ಕಾರಿ ಪಾಠಶಾಲೆಗೆ ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಶುಕ್ರವಾರ ಆಕಸ್ಮಿಕ ಭೇಟಿ ನೀಡಿ ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲಿಸಿದರು.
ಉಮರಜ ಗ್ರಾಮದ ಸಾರ್ವಜನಿಕರ ದೂರು ಹಾಗೂ ಶಾಲೆಯ ಶಿಥಿಲಗೊಂಡ ಕಟ್ಟಡ ಕುರಿತು ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಈ ಸರಕಾರಿ ಶಾಲೆಗೆ ಆಯುಕ್ತರು ತುರ್ತು ಸಂದರ್ಶನ ನೀಡಿ ಶಾಲೆಯ ಕೆಲವು ಕೊಠಡಿಗಳು ದುರಸ್ತಿ ಅಂಚಿನಲ್ಲಿದ್ದು ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕೊಠಡಿಗಳಲ್ಲಿ ಪಾಠ ಬೋಧನೆ ಮಾಡದಂತೆ ಆದೇಶಿಸಿದರು.
ಸುರಕ್ಷಿತವಾಗಿರುವ ಕೊಠಡಿಗಳಲ್ಲಿ ೧ ರಿಂದ ೪ನೆಯ ತರಗತಿಯ ಪಾಠ ಬೋಧನೆ ಮಾಡುವಂತೆ ಹಾಗೂ ೫ ರಿಂದ ೭ನೆಯ ತರಗತಿಯ ವಿದ್ಯಾರ್ಥಿಗಳ ಪಾಠ ಬೋಧನೆಯನ್ನು ಉಮರಜ ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳಲ್ಲಿ ನಡೆಸುವಂತೆ ಶಿಕ್ಷಕರಿಗೆ ನಿರ್ದೇಶನ ನೀಡಲು ಸ್ಥಳದಲ್ಲಿ ಹಾಜರಿದ್ದ ಚಡಚಣ ಬಿಇಓ ಚಿದಾನಂದ ಕಟ್ಟಿಮನಿ ಅವರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಕಟ್ಟಡ ದುರಸ್ತಿ ಹಾಗೂ ಪಾಠ ಬೋಧನೆ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ವಿಜಯಪುರ ಡಿಡಿಪಿಐ ಅವರಿಗೂ ತಿಳಿಸಿದರು.
ಬಿಇಓ ಕಚೇರಿಗೆ ಭೇಟಿ : ಇದೇ ಸಂದರ್ಭದಲ್ಲಿ ಇಂಡಿ ತಾಲೂಕು ಬಿಇಓ ಕಚೇರಿಗೆ ಭೇಟಿ ನೀಡಿ ಶಾಲಾ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ, ಸರಕಾರಿ ಶಾಲೆಗಳಲ್ಲಿ ಪರಿಣಾಮಕಾರಿ ಬೋಧನೆ, ಆಡಳಿತಕ್ಕೆ ಸಂಬಂಧಿಸಿದ ಕಡತಗಳ ವಿಲೇವಾರಿಯ ಸಂಗತಿಗಳನ್ನು ವಿವರವಾಗಿ ಪರಿಶೀಲಿಸಿ ಸಾರ್ವಜನಿಕರು ಹಾಗೂ ಶಿಕ್ಷಕರಿಗೆ ನೀಡಬೇಕಾದ ಸೇವಾ ಸೌಲಭ್ಯಗಳನ್ನು ನಿಗದಿಪಡಿಸಲಾದ ಸಮಯದೊಳಗೆ ನಿಯಮಾನುಸಾರ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಹೆಚ್ಚುವರಿ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಮಾರ್ಗದರ್ಶನ ನೀಡಿ, ಪೂರಕ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಕಛೇರಿಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಸೂಚಿಸಿದರು. ಇಂಡಿ ಬಿಇಓ ಸಯೀದಾ ಅನಿಸ್ ಮುಜಾವರ, ಇಂಡಿ ಬಿಆರ್‌ಸಿ ಸಮನ್ವಯಾಧಿಕಾರಿ ಶ್ರೀಧರಮೂರ್ತಿ ನಾಡುಗೇರಿ ಸೇರಿ ಇತರರು ಇದ್ದರು.