ದೇಶವನ್ನು ರಕ್ಷಿಸಿ ಮುನ್ನಡೆಸುವುದೇ ಸಂವಿಧಾನ – ನ್ಯಾ.ಮೂ. ಜ್ಯೋತಿ ಪಾಟೀಲ

0
213

ಮೂಡಲಗಿ: ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ್ಯಗಳಿಸಿದ್ದು ಒಂದು ಭಾಗವಾದರೆ, ಆ ಸ್ವಾತಂತ್ರ್ಯವನ್ನು ಆಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ರಕ್ಷಿಸಿ ದೇಶವನ್ನು ಮುನ್ನಡೆಸಿಕೊಂಡು ಹೋಗುವ ಒಂದು ವ್ಯವಸ್ಥೆಯೇ ಸಂವಿಧಾನ ಎಂದು ಮೂಡಲಗಿ ದಿವಾಣಿ ಮತ್ತು ಜೆಎಮ್‍ಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಜ್ಯೋತಿ ಪಾಟೀಲ ಹೇಳಿದರು. 

ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ.ರಾಷ್ಟ್ರೀಯ ಸೇವಾ ಯೋಜನೆ, ಯುಥ ರೆಡ್ ಕ್ರಾಸ್ ಮತ್ತು ನೇತಾಜಿ ರೋವರ್ಸ್ ಘಟಕಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತ ಸಂವಿಧಾನ 75ನೇ ವರ್ಷಾಚರಣೆ ಅಂಗವಾಗಿ “ಸಂವಿಧಾನ ಜಾಗೃತಿ ಸಮಾವೇಶ”ವನ್ನು ಉದ್ಘಾಟಿಸಿ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಭೋಧಿಸಿ ಮಾತನಾಡಿ, ಪ್ರಬಲ ಜಾತ್ಯತೀತತೆಯನ್ನು ಪ್ರತಿಬಿಂಬಿಸುವ ನಮ್ಮ ಸಂವಿಧಾನವನ್ನು ಪ್ರತಿಯೊಬ್ಬರು ಅರಿತು ಅದು ನೀಡುವ ಹಕ್ಕು ಮತ್ತು ಕರ್ತವ್ಯ ಗಳಿಗೆ ಬಾದ್ಯಸ್ಥರಾಗಬೇಕು ಎಂದರು.   

ಮೂಡಲಗಿ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಆರ್.ಡಿ.ಹಂಜಿ ಮಾತನಾಡಿ, ಭಾರತೀಯ ಸಂವಿಧಾನದಲ್ಲಿ ನಮ್ಮ ದಿನ ನಿತ್ಯದ ಜೀವನದಿಂದ ಹಿಡಿದು ದೇಶದ ಆಗು ಹೋಗುಗಳವರೆಗೆ ಪ್ರತಿಯೊಂದಕ್ಕೆ ಸಂವಿಧಾನ ವಿಧಿ, ಭಾಗ ಅನುಚ್ಚೇದದ ಮೂಲಕ ಸ್ಪಷ್ಟನೆ ದೊರಕುವದು ಅದನ್ನು ಪ್ರತಿಯೊಬ್ಬ ನಾಗರಿಕನು ಅರಿಯುವದೆ ಈ ಸಂವಿಧಾನ ಜಾಗೃತಿಯ ಉದ್ಧೇಶವಾಗಿದೆ ಎಂದರು.

ನ್ಯಾಯವಾದಿ ಎಲ್.ವಾಯ್ ಅಡಿಹುಡಿ ಮಾತನಾಡಿ, ಬಡವ ಬಲ್ಲಿದನಿಗೂ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಹಾಯಕವಾಗುವಂತೆ ಕಾನೂನು ಪ್ರಾಧಿಕಾರವಿದೆ ಅದರ ಸದುಪಯೋಗ ಪಡೆಯಬೇಕು ಎಂದ ಅವರು ಯುವಕರು ದ್ವಿಚಕ್ರ ವಾಹನದ ಡಿ.ಎಲ್ ವಿಮೇ ವಾಹನದ ನೊಂದಣಿಯನ್ನು ಕಡ್ಡಾಯವಾಗಿ ಪಡೆದಿರಬೇಕು ಎಂದರು. 

ನ್ಯಾಯವಾದಿ ಎಸ್.ಬಿ.ತುಪ್ಪದ ಮಾತನಾಡಿ, ಮೂಡಲಗಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುತ್ತಿದೆ. ನಾನು ಆ ವ್ಯವಸ್ಥೆಯ ಫಲಾನುಭವಿಯಾಗಿ ಇಂದು ನಿಮ್ಮ ಮುಂದೆ ಬಂದು ನಿಂತಿದ್ದು ವಿದ್ಯಾರ್ಥಿಗಳು ಅರಿತುಕೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ,  ಇಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳ ಭವಿಷ್ಯದ ಜೀವನಕ್ಕೆ ಸಹಾಯಕಾರಿಯಾಗುತ್ತವೆ ಎಂದರು.

ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಆರ್.ಪಿ.ಸೊನವಾಲಕರ, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಎಮ್.ಗುಜಗೊಂಡ, ನ್ಯಾಯವಾದಿಗಳಾದ ವಾಯ್.ಎಸ್.ಖಾನಟ್ಟಿ, ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ. ರಾಷ್ಟ್ರೀಯ ಸೇವಾ ಯೋಜನೆಯ ಕ್ರಾರ್ಯಕ್ರಮಾಧಿಕಾರಿ ಡಾ.ಎಸ್.ಎಲ್.ಚಿತ್ರಗಾರ್, ವಿದ್ಯಾರ್ಥಿ ಒಕ್ಕೂಟ ಮತ್ತು ರೋವರ್ಸ್ ಸ್ಕೌಟ್ ಅಧ್ಯಕ್ಷ ಪ್ರೊ.ಜಿ.ವ್ಹಿ.ನಾಗರಾಜ, ವಿದ್ಯಾರ್ಥಿ ಒಕ್ಕೂಟ ಉಪಾಧ್ಯಕ್ಷ ಮತ್ತು ಚುನಾವಣಾ  ಸುಕ್ಷರತಾ ಅಧಿಕಾರಿ ಪ್ರೊ.ಎಸ್.ಸಿ.ಮಂಟೂರ, ಗ್ರಂಥಪಾಲಕ ಬಸವಂತ ಬರಗಾಲಿ ಮತ್ತಿತರರು ಇದ್ದರು.