ಮೂಡಲಗಿ: ಭಾರತದ ಸಂವಿಧಾನವು ಜಗತ್ತಿನಲ್ಲೇ ಶ್ರೇಷ್ಠವಾದ ಲಿಖಿತ ಸಂವಿಧಾನವಾಗಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಂವಿಧಾನದ ಮೂಲ ಆಶಯಗಳು, ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತು, ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ, ಎಂದು ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಅವರು ತಿಳಿಸಿದರು.
ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರದಂದು ಐಕ್ಯೂಎಸಿ ಅಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರಾಜ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿದಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೂಡಲಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕ ಬಿ.ಸಿ. ಹೆಬ್ಬಾಳ ಅವರು ಮಾತನಾಡಿ, “ಸಂವಿಧಾನವು ಭಾರತೀಯ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ. ಪ್ರತಿಯೊಬ್ಬ ನಾಗರಿಕರು ಸಂವಿಧಾನ ನೀಡಿದ ಹಕ್ಕುಗಳನ್ನು ಅನುಭವಿಸುವ ಜೊತೆಗೆ, ಅದು ವಿಧಿಸಿದ ಮೂಲಭೂತ ಕರ್ತವ್ಯಗಳನ್ನು ಚಾಚೂತಪ್ಪದೇ ಪಾಲಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ,” ಎಂದು ಅಭಿಪ್ರಾಯಪಟ್ಟರು.
ಸಂವಿಧಾನ ದಿನದ ಅಂಗವಾಗಿ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಮಲ್ಲಪ್ಪ ಮುರಗೋಡ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಎಂ.ಬಿ. ಕುಲಮೂರ, ಡಾ. ಕೆ.ಎಸ್. ಪರವ್ವಗೋಳ, ಕಾರ್ಯಕ್ರಮ ಅಧಿಕಾರಿ ಶಂಕರ ನಿಂಗನೂರ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎನ್‌ಎಸ್‌ಎಸ್ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಧಿಕಾ ಕರೆಪ್ಪಗೋಳ ಪ್ರಾರ್ಥನೆ ಹಾಡಿದರು. ಡಿ.ಎಸ್. ಹುಗ್ಗಿ ಸ್ವಾಗತಿಸಿದರು. ಬಿ.ಸಿ. ಮಾಳಿ ನಿರೂಪಿಸಿದರು. ವಿಲಾಸ ಕೆಳಗಡೆ ವಂದಿಸಿದರು.
ವರದಿ : ಶಂಕರ ನಿಂಗನೂರ ಉಪನ್ಯಾಸಕರು, ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು, ಕಲ್ಲೋಳಿ ,9742054268

