ಮೂಡಲಗಿ: ಮಾಜಿ ಸೈನಿಕರ ಕನಸಿನ ಸೈನಿಕ ಭವನವನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು.
ತಾಲೂಕಿನ ನಾಗನೂರ ಪಟ್ಟಣದಲ್ಲಿ ಮಾಜಿ ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಮೂಡಲಗಿಯಲ್ಲಿ ಸೈನಿಕ ಭವನ ನಿರ್ಮಾಣ ಕುರಿತಂತೆ ನಿವೇಶನವನ್ನು ಗುರುತಿಸುವಂತೆ ಈಗಾಗಲೇ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಕಳೆದ ಮೇ ತಿಂಗಳಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ನನ್ನ ಗೆಲುವಿನಲ್ಲಿ ಮಾಜಿ ಸೈನಿಕರು ಸಹ ಸಾಕಷ್ಟು ಶ್ರಮಿಸಿದ್ದಾರೆ. ದೇಶದ ಗಡಿ ಕಾಯುವ ಸೈನಿಕರ ಬಗ್ಗೆ ನಾವೆಲ್ಲ ಹೆಮ್ಮೆ ಪಡಬೇಕಿದೆ. ಚುನಾವಣೆಗೂ ಮುನ್ನ ನೀಡಿರುವ ಭರವಸೆಯಂತೆ ಮೂಡಲಗಿಯಲ್ಲಿ ಸುಸಜ್ಜಿತ ಸೈನಿಕ ಭವನವನ್ನು ಮೂಡಲಗಿ ಪಟ್ಟಣದಲ್ಲಿ ನಿರ್ಮಿಸಲು ಯೋಚಿಸಲಾಗಿದೆ. ನಿವೇಶನವನ್ನು ಮಾಜಿ ಸೈನಿಕರಿಗೆ ಅನುಕೂಲವಾಗುವ ಪ್ರದೇಶದಲ್ಲಿ ಗುರುತಿಸಲು ಈಗಾಗಲೇ ಸೂಚಿಸಲಾಗಿದೆ ಎಂದು ತಿಳಿಸಿದರು.
ಸೈನಿಕ ಭವನ ನಿರ್ಮಾಣಕ್ಕೆ ಪುರಸಭೆಯಿಂದ ನಿವೇಶನವನ್ನು ನೀಡುವುದರ ಜೊತೆಗೆ ಕಟ್ಟಡದ ನಿರ್ಮಾಣಕ್ಕೂ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಮಾಜಿ ಸೈನಿಕರು ತಮ್ಮ ಧಾರ್ಮಿಕ, ಸಾಮಾಜಿಕ, ಸಭೆ-ಸಮಾರಂಭಗಳಿಗೆ ಈ ಭವನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಲ್ಲೋಳಿ ಪಟ್ಟಣದ ಪಟ್ಟಣ ಪಂಚಾಯತ ಹತ್ತಿರ ನಿರ್ಮಿಸಿರುವ ಮಾಜಿ ಸೈನಿಕ ಜ್ಯೋತೆಪ್ಪ ಗುಂಡಪ್ಪಗೋಳ ಪುತ್ಥಳಿಯನ್ನು ಇನ್ನಷ್ಟು ಎತ್ತರ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದಾಗಿಯೂ ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ ಭರವಸೆ ನೀಡಿದರು.
ಪ್ರಭಾಶುಗರ ನಿರ್ದೇಶಕ ಕೆಂಚನಗೌಡ ಪಾಟೀಲ, ಚಂದ್ರು ಬೆಳಗಲಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶಿವಪ್ಪ ಮಾಲಗಾರ, ಅಧ್ಯಕ್ಷ ಚರಂತಯ್ಯ ಮಳ್ಳಿಮಠ, ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಮಿರ್ಜಿ, ಪದಾಧಿಕಾರಿಗಳಾದ ಅರ್ಜುನ ಕೋಳಾರ, ಮಹಾನಿಂಗ ಮಡಿವಾಳರ, ಭೀಮಪ್ಪ ಪಾಟೀಲ, ರಾಜು ದಬಾಡಿ, ಬಿ.ಸಿ. ಪೂಜೇರಿ, ರೂಪಾ ನಾಯಿಕ, ಲಕ್ಷ್ಮೀ ಪೂಜೇರಿ, ಪುಂಡಲೀಕ ಉಪ್ಪಾರ, ಮಲ್ಲಪ್ಪ ಜೋರಲಿ, ಬಸು ಹುಲಗನ್ನವರ, ರಾಜಶೇಖರ ಹಿರೇಮಠ, ಕೃಷ್ಣಾ ಕರಿಗಾರ, ಅರ್ಜುನ ಲೋಕೋಗೋಳ, ಲಲಿತಾ ನಾಗನೂರ, ರಾಜಶೇಖರ ಮೇತ್ರಿ, ಪುಂಡಲೀಕ ಕೋಟಿನತೋಟ, ಮಲ್ಲಪ್ಪ ಸಾಯನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಮಾಜಿ ಸೈನಿಕರು ಸತ್ಕರಿಸಿದರು.