ಸಿಂದಗಿ: ಪಂಚಮಸಾಲಿ ಸಮಾಜವನ್ನು 2ಎ ಮಿಸಲಾತಿಗೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರ ವರೆಗೆ ಪಾದಯಾತ್ರೆ ನಡೆಸಿ ಅರಮನೆ ಮೈದಾನದಲ್ಲಿ 23 ದಿನಗಳ ಕಾಲದ ವರೆಗೆ ಧರಣಿ ಸತ್ಯಾಗ್ರಹ ನಡೆಸಿದ್ದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸೆ. 15 ಗಡುವು ನೀಡಿದ್ದ ಹಿನ್ನಲೆ ಧರಣಿ ಹಿಂಪಡೆಯಲಾಗಿತ್ತು ಆದರೆ ಆ ಗಡುವು ದಾಟಿದೆ. ಅ.1 ರಿಂದ ನಿರಂತರ ಪ್ರತಿಜ್ಞಾ ಪಂಚಾಯತ್ ಹೆಸರಿನಲ್ಲಿ ಅಭಿಯಾನ ನಡೆಯಲಿದೆ. ಎಂದು ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಪಟ್ಟಣದ ಮಾಂಗಲ್ಯ ಭವನದಲ್ಲಿ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದಿಂದ ಸಮಾಜಕ್ಕೆ 2ಎ ಮಿಸಲಾತಿಯ ಹಕ್ಕೊತ್ತಾಯದ ಚಳುವಳಿ ನಿಮಿತ್ತ ಜಿಲ್ಲಾಮಟ್ಟದ ಪಂಚಮಸಾಲಿ ಪತಿಜ್ಞಾ ಪಂಚಾಯತ್ ರಾಜ್ಯ ಅಭಿಯಾನ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿದ್ಯ ವಹಿಸಿ ಮಾತನಾಡಿ, ರಾಜ್ಯದಲ್ಲಿ ಪಂಚಮಸಾಲಿ ಸಮಾಜದ ಜನಸಂಖ್ಯೆ 80 ಲಕ್ಷ ಇದೆ ಎನ್ನುವುದು ಗೊತ್ತಿತ್ತು ಆದರೆ ಲಿಂಗಾಯತ ಪಂಚಮಸಾಲಿ, ಗೌಡಲಿಂಗಾಯತ, ಮಲೆಗೌಡ, ದಿಕ್ಷಾ ಲಿಂಗಾಯತ, ಹೀಗೆ ಪಂಚಮಸಾಲಿ ಜನಾಂಗ ರಾಜ್ಯದಲ್ಲಿ 1.2 ಕೋಟಿರಷ್ಠಿದೆ. ಅ.1 ರೊಳಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಇಲ್ಲದಿದ್ದರೆ ಅ.1 ರಿಂದ ಬೆಂಗಳೂರಿನಲ್ಲಿ ಸತ್ಯಾಗ್ರಹ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ಕೇವಲ ಒಬ್ಬರಿಂದ ಮಿಸಲಾತಿಗಾಗಿ ಹೋರಾಡಿದರೆ ಸಾಲದು ಕೂಡಲ ಸಂಗಮ ಮಹಾಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮಿಗಳು, ಮನಗೂಳಿ ಹಿರೇಮಠ ಅಭಿನವ ಸಂಗನಬಸವ ಸ್ವಾಮಿಗಳು, ಹರಿಹರಪೀಠದ ವಚನಾನಂದ ಮಹಾಸ್ವಾಮಿಗಳು ಮೊದಲು ಒಂದಾಗಿ ಹೋರಾಟ ಮಾಡಿದರೆ ಮಾತ್ರ ಹೋರಾಟಕ್ಕೆ ಬಲ ಬರುತ್ತದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ, ಬಿಜೆಪಿ ಅಸಂಘಟಿತ ಕಾರ್ಮಿಕರ ಮೋರ್ಚಾ ಜಿಲ್ಲಾಧ್ಯಕ್ಷ ಮುತ್ತು ಶಾಬಾದಿ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಜಯಮೃತ್ಯುಂಜಯ ಶ್ರೀಗಳು ಪ್ರತಿಜ್ಞಾ ಬೋಧನೆ ಬೋಧಿಸಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಡಾ. ಅಂಬೇಡ್ಕರ ವೃತ್ತದಿಂದ ಬೈಕ್ ರ್ಯಾಲಿ ಮೂಲಕ ಜಗದ್ಗುರುಗಳ, ಶ್ರೀಗಳ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಗೋಲಗೇರಿ ಭಂಡಾರಿ ಪೀಠದ ಶ್ರೀ ಮುನೇಂದ್ರದೇವ ಶಿವಾಚಾರ್ಯರು, ವಿಜಯಾನಂದ ಕಾಶಪ್ಪನವರ, ಶಿವಪ್ಪಗೌಡ ಬಿರಾದಾರ, ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಸೋಮನಗೌಡ ಬಿರಾದಾರ, ಸಿದ್ದುಗೌಡ ಪಾಟೀಲ, ಗೋಲ್ಲಾಳಪ್ಪಗೌಡ ಪಾಟೀಲ, ಗುರುರಾಜ ಪಾಟೀಲ, ಚಂದ್ರಶೇಖರ ನಾಗರಬೆಟ್ಟ, ಸಂತೋಷ ಪಾಟೀಲ ಡಂಬಳ, ಯುವ ಸಂಘಟನೆಯ ತಾಲೂಕಾಧ್ಯಕ್ಷ ಯುವರಾಜ ಪಾಟೀಲ, ಆನಂದ ಶಾಬಾದಿ, ಶ್ರೀಶೈಲ ಯಳಮೇಲಿ, ರವಿ ಬಿರಾದಾರ, ಎಂ.ಬಿ.ಯಡ್ರಾಮಿ ಸೇರಿದಂತೆ ಅನೇಕರಿದ್ದರು.
ವರದಿ : ಪಂಡಿತ್ ಯಂಪೂರೆ, ಸಿಂದಗಿ