ಸಿಂದಗಿ: ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರದಲ್ಲಿಯೂ ಮಹೋನ್ನತ ಸಾಧನೆ ಗೈದು, ದೇಶಕ್ಕೆ ತಮ್ಮದೆಯಾದ ಕೊಡುಗೆ ನೀಡಿ ಭಾರತದ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯುತ್ತಿರುವುದು ಶ್ಲಾಘನೀಯ ಮತ್ತು ಅಭಿನಂದನಾರ್ಹ ಎಂದು ಇನ್ನರ್ ವೀಲ್ ಕ್ಲಬ್‍ನ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿರುವ ಲೊಯೋಲ ಶಾಲೆಯಲ್ಲಿ ನಬಿರೋಷನ್ ಪ್ರಕಾಶನ, ಬೋರಗಿ ವತಿಯಿಂದ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ವೀರ ನಾರಿ ಪ್ರಶಸ್ತಿ ಪ್ರದಾನ ಹಾಗೂ ಮಹಿಳಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವಲ್ಲಿ ಮತ್ತು ಕುಟುಂಬವನ್ನು ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಅಪಾರ ಇದೆ ಎಂದರು.
ಅಧ್ಯಕ್ಷತೆ ವಹಿಸಿದ ಉಪ ತಹಶಿಲ್ದಾರ ಇಂದಿರಾಬಾಯಿ ಜೆ.ಬಳಗಾನೂರ ಮಾತನಾಡಿ ಪ್ರತಿಯೊಬ್ಬ ಯಶಸ್ವಿ ಪುರುಷರ ಹಿಂದೆ ಒಬ್ಬ ಮಹಿಳೆ ಇದ್ದಾಳೆ. ಮಹಿಳೆ ತಾಯಿಯಾಗಿ, ಸತಿಯಾಗಿ, ಮಗಳಾಗಿ, ತಂಗಿಯಾಗಿ ತನ್ನದೇಯಾದ ಜವಾಬ್ದಾರಿ ನಿರ್ವಹಿಸುತ್ತಾಳೆ. ಮಹಿಳೆ ಸೃಷ್ಟಿಕರ್ತೆ, ಅವಳು ಜೀವ ನೀಡುವ, ಜೀವ ತುಂಬುವ ಕರುಣಾಮಯಿ. ಅಲ್ಲದೆ ತ್ಯಾಗದ ಪ್ರತೀಕ. ಹೆಣ್ತನ ಎಂಬುವುದೇ ಒಂದು ದೊಡ್ಡ ಶಕ್ತಿ ಎಂದರು.
ರಾಜಶೇಖರ ಕೂಚಬಾಳ ಮಾತನಾಡಿದರು. ಆರಕ್ಷಕ ಮೌಲಾಲಿ ಅವರು, ಕಳೆದ 12 ವರ್ಷಗಳಿಂದ ನಬಿರೋಶನ್ ಪ್ರಕಾಶನ ಸಂಸ್ಥೆ ಮಾಡಿಕೊಂಡು ಬರುತ್ತಿರುವ ಸಾಹಿತ್ಯ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡ ಝೀ ವಾಹಿನಿಯ ಸರಿಗಮಪ ಖ್ಯಾತಿಯ ಗಾಯಕಿ ಸಾಕ್ಷಿ ಹಿರೇಮಠ, ನಾಗರತ್ನ ಮನಗೂಳಿ, ಇಂದಿರಾಬಾಯಿ ಜೆ.ಬಳಗಾನೂರ, ಸಭಿಯಾಬೇಗಂ ಮರ್ತೂರ, ಸುನಂದಾ ಯಂಪೂರೆ, ಇವರಿಗೆ ವೀರ ನಾರಿ ಪ್ರಶಸ್ತಿ ಪ್ರದಾನ ಹಾಗೂ ಇತ್ತೀಚೆಗೆ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯ, ಬಿ.ಎಸ್.ಡಬ್ಲ್ಯೂ ವಿಭಾಗ, ವಿದ್ಯಾರ್ಥಿನಿ ಸುರೇಖಾ ಬಿರಾದಾರ, ಅಂತರಾಷ್ಟ್ರೀಯ ವಿಕಲಚೇತನ ಪ್ರತಿಭಾನ್ವಿತ ಕ್ರೀಡಾ ಪಟು ರಿಜ್ವಾನ ಜಮಾದಾರ, ಮಹಿಳಾ ಸ್ವಾಂತಾನ ಕೇಂದ್ರದ ಸಮಾಜ ಕಾರ್ಯಕರ್ತೆ ರಶ್ಮಿ ನೂಲನವರ, ಲಯೋಲ ಶಾಲೆಯ ನೀಲಮ್ಮ ಗೌರ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಚೇತನಗೌಡ ಬಿರಾದಾರ, ನಬಿಪಟೇಲ್ ಆಲಗೂರ, ಲಯೋಲ ಶಾಲೆಯ ಸಿಸ್ಟರ್ ಸೋಫಿಯಾ ಫೆರೇರ, ಶಾರದಾ ಮಂಗಳೂರು, ಶಿಲ್ಪಾ ಪತ್ತಾರ, ಶಿಕ್ಷಕ ಸಿದ್ದಪ್ಪ, ವರದಿಗಾರ ಮಾಹಂತೇಶ ನೂಲನವರ, ಶಾಂತಾ ಮೋಸಗಿ ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು. ಮಹಿಳಾ ಕವಯತ್ರಿಯರಿಂದ ಕವನ ವಾಚನ ನಡೆಯಿತು.