೨೦೧೯ ರಲ್ಲಿ ಘಟಿಸಿದ ಕೋವಿಡ್-೧೯ ರ ಸಾವಿನ ಸಂಖ್ಯೆಗಿಂತಲೂ ಸುಮಾರು ಎಂಟು ಪಟ್ಟು ಹೆಚ್ಚು ಅಂದರೆ ೧೨ ಲಕ್ಷಕ್ಕಿಂತಲೂ ಹೆಚ್ಚು ಜನ ೨೦೨೦ ರಲ್ಲಿ ಕೋವಿಡ್ ಗೆ ಬಲಿಯಾಗಿದ್ದರು ಎಂದು ಆಕ್ಸಫರ್ಡ್ ವಿಶ್ವವಿದ್ಯಾಲಯ ಸೇರಿದಂತೆ ಕೆಲವು ವಿಶ್ವವಿದ್ಯಾಲಯ ಗಳ ಸಂಶೋಧಕರು ರಾಷ್ಟ್ರೀಯ ಕುಟುಂಬ ಆರೋಗ್ಯ ಮಾಪನ (NFHS) ಸಂಸ್ಥೆಯ ಸಾವಿನ ಅಂಕಿ ಸಂಖ್ಯೆಗಳನ್ನು ಉಲ್ಲೇಖಿಸಿ ವರದಿ ನೀಡಿದ್ದಾರೆ.
ಆದರೆ ಕೇಂದ್ರ ಆರೋಗ್ಯ ಸಚಿವಾಲಯ ಈ ವರದಿಯನ್ನು ತಳ್ಳಿಹಾಕಿದ್ದು ಇದು ‘ ಸುಳ್ಳು ಮತ್ತು ದಾರಿತಪ್ಪಿಸುವ’ ವರದಿ ಎಂದು ಹೇಳಿ, ಇದೊಂದು ಕಟ್ಟುಕತೆಯಂಥ ವರದಿ ಎಂದಿದೆ ಎಂಬುದಾಗಿ ಸಂಡೇ ಟೈಮ್ಸ್ ವರದಿ ಮಾಡಿದೆ.
ಜರ್ನಲ್ ಸೈನ್ಸ್ ಅಡ್ವಾನ್ಸಸ್ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ, ೨೦೧೯ ಮತ್ತು ೨೦೨೦ ರಲ್ಲಿ ಬದುಕುವ ಆಯು ೨.೬ ವರ್ಷಗಳಷ್ಟು ಕಡುಮೆಯಾಗಿತ್ತು. ಇದು ಭಾರತದ ಪರಿಸ್ಥಿತಿಯಲ್ಲಿ ಸುಮಾರು ದಶಕದ ಹಿಂದಿನ ಆಯುಷ್ಯ ಪ್ರಮಾಣದ ಸರಿಸಮಾನವಾಗಿತ್ತು ಎಂದು ತಿಳಿಸಲಾಗಿದೆ.
ಆದರೆ ಇದನ್ನು ಆರೋಗ್ಯ ಸಚಿವಾಲಯ ಟೀಕಿಸಿದೆ. ೨೦೨೧ ರ ಜನವರಿಯಿಂದ ಏಪ್ರಿಲ್ ವರೆಗಿನ ಸರ್ವೇಯಲ್ಲಿ ಕೆಲವೇ ಮನೆಗಳಿಂದ ವರದಿ ಪಡೆದುಕೊಂಡು ಅದನ್ನು ೨೦೧೯-೨೦ ರ ಇಡೀ ದೇಶದ ಸಾವಿನ ಸಂಖ್ಯೆಯ ಜೊತೆಗೆ ಹೋಲಿಸುವುದು ಸರಿಯಲ್ಲ ಎಂದಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇಯ ಸ್ಯಾಂಪಲ್ ಇಡೀ ದೇಶಕ್ಕೆ ಸಂಬಂಧಿಸಿದೆ. ದೇಶದ ೧೪ ರಾಜ್ಯಗಳ ಶೇಕಡಾ ೨೩ ರಷ್ಟು ಕುಟುಂಬಗಳ ವಿಶ್ಲೇಷಣೆ ಇಡೀ ದೇಶದ ಪ್ರಾತಿನಿಧ್ಯವಾಗಲಾರದು. ಇನ್ನೊಂದು ಸುಳ್ಳು ಏನೆಂದರೆ, ಕೋವಿಡ್ ಸಾಂಕ್ರಾಮಿಕ ಅತಿಯಾಗಿರುವಾಗ ದುರುದ್ದೇಶಪೂರ್ವಕ ಈ ಡಾಟಾ ಸಂಗ್ರಹಿಸಿರುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.