ದಾವಣಗೆರೆ – ಪ್ರಸ್ತುತ ದಿನಗಳಲ್ಲಿ ಸೃಜನಶೀಲ ಸಾಹಿತ್ಯ ಸೃಷ್ಟಿಯಾಗಬೇಕಾಗಿದೆ. ಬಂಜಾರ ಸಮುದಾಯ ಮೂಲತಃ ಕಲಾವಿದರು ಗಾಯಕರು ಆಗಿದ್ದು ಸಮುದಾಯದ ಸಂಕಷ್ಟಗಳಿಗೆ ಸ್ಪಂದಿಸುವ ಸೃಜನಶೀಲ ಸಾಹಿತ್ಯ ಸೃಷ್ಟಿಸಲು ಬಂಜಾರ ಯುವಕ ಯುವತಿಯರಿಗೆ ಇಂತಹ ಕಾರ್ಯಗಾರಗಳು ಉತ್ತೇಜಿಸುತ್ತವೆ ಎಂದು ಡಾ. ಬಿ ಟಿ ಲಲಿತಾನಾಯಕ ಹೇಳಿದರು.
ದಿನಾಂಕ: ೧೩.೧೨.೨೦೨೫ ಹಾಗೂ ೧೪.೧೨.೨೦೨೫ ಎರಡು ದಿನಗಳ ಕಾಲ ದಾವಣಗೆರೆ ಜಿಲ್ಲೆಯ ಹರಿಹರದ ಪ್ರೊ ಕೃಷ್ಣಪ್ಪ ಭವನದಲ್ಲಿ ಬಂಜಾರ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ ಆಯೋಜನೆ ಮಾಡಿದ್ದ ಎರಡು ದಿನಗಳ ಬಂಜಾರ ಸಾಹಿತ್ಯ ರಚನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಂಜಾರ ನಂಗಾರ (ನಗಾರಿ) ಯನ್ನು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮದಲ್ಲಿ ನಿನಾಸಂ ನ ರಂಗಭೂಮಿ ಕಲಾವಿದರಾದ ಕೊಟ್ರಪ್ಪ ಜಿ ಹಿರೇಮಾಗಡಿ, ಹೈಕೋರ್ಟ್ ವಕೀಲರು ಹಾಗೂ ಬಂಜಾರ ಸಾಹಿತ್ಯ ಪರಿಷತ್ತು ರಾಜ್ಯ ಘಟಕದ ಕಾನೂನು ಸಲಹೆಗಾರರಾದ ಅನಂತನಾಯ್ಕ ಎನ್ ರವರು, ಹಿರಿಯರು ಸಾಮಾಜಿಕ ಚಿಂತಕರು ಆದ ಡಾ ಇಂದ್ರನಾಯ್ಕ ರವರು ಹಾಗೂ ಎ ಬಿ ರಾಮಚಂದ್ರಪ್ಪನವರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿಗಳಾದ ಮಧುನಾಯ್ಕ ಲಂಬಾಣಿಯವರುವಹಿಸಿದ್ದರು. ರಾಮು ಎನ್ ರಾಠೋಡ್ ಮಸ್ಕಿ ಸರ್ವರನ್ನು ಸ್ವಾಗತಿಸಿದರು. ಖ್ಯಾತ ಬಂಜಾರ ಗಾಯಕರಾದ ಗೋಪಾಲ ನಾಯ್ಕರವರು ಸುಮಧುರವಾದ ಭಕ್ತಿಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು.
ಕಾರ್ಯಕ್ರಮದ ನಿರೂಪಣೆಯನ್ನು ಕೊಟ್ರಪ್ಪ ಹಿರೇಮಾಗಡಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ ಎ ಬಿ ರಾಮಚಂದ್ರಪ್ಪನವರು ಮಾತನಾಡಿ ಬುಡಕಟ್ಟು ಜನಾಂಗದ ಅತ್ಯಮೂಲ್ಯವಾದ ಸಾಹಿತ್ಯ ತುಳಿತಕ್ಕೆ ಒಳಗಾಗಿದೆ. ಇದನ್ನು ಹೊರತರುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದರು, ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀಮತಿ ಭಾಗ್ಯನಾಗರಾಜ ನೆರವೇರಿಸಿದರು.

