ಮಾರ್ಚ್ ಏಳನೆಯ ತಾರೀಖಿನಂದು ಶುಕ್ರವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಿ. ಸಿ. ಹೇಮಲತಾ -ಅಧ್ಯಕ್ಷರು -ಅಕ್ಕನ ಮನೆ ಪ್ರತಿಷ್ಠಾನ ಇವರಿಂದ ಅಕ್ಕನ ಮನೆ ಪ್ರತಿಷ್ಠಾನ ಸಂಸ್ಕೃತಿ ಸಂಗಮ – ವಿವೇಕದಿಂದ ವಿಕಾಸದೆಡೆಗೆ ಎನ್ನುವ ವೈಚಾರಿಕ ನೆಲೆ ಗಟ್ಟಿನಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮೋಟಗಿ ಮಠದ ಅಥಣಿಯ ಶ್ರೀಗಳು, ಟಿ.ಎ.ನಾರಾಯಣ ಗೌಡ – ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ, ಬರಗೂರು ರಾಮಚಂದ್ರಪ್ಪ- ಹಿರಿಯ ಸಾಹಿತಿಗಳು ಚಿಂತಕರು, ಡಾ. ಶಶಿಕಾಂತ ಪಟ್ಟಣ – ಅಧ್ಯಕ್ಷರು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ, ಮುದ್ದಪ್ಪ -ಸಾಮಾಜಿಕ ಹೋರಾಟಗಾರರು ಮತ್ತು ಉದ್ಯಮಿಗಳು, ಶ್ರೀಮತಿ ಪೂಜಾ ಗಾಂಧಿ ಖ್ಯಾತ ಚಲನಚಿತ್ರ ನಟಿ, ಡಾ. ಅಶೋಕ್ ಸಂಗಪ್ಪ ಆಲೂರು ಗೌರವಾನ್ವಿತ ಉಪಕುಲಪತಿಗಳು ಕೊಡಗು ವಿಶ್ವವಿದ್ಯಾಲಯ,ಡಾ. ಹೇಮಲತಾ ಮಹಿಷಿ – ಖ್ಯಾತ ವಕೀಲರು ಲೇಖಕಿ, ಶ್ರೀಮತಿ ಸವಿತಕ್ಕ -ಅಂತರಾಷ್ಟ್ರೀಯ ಜಾನಪದ ಗಾಯಕಿ ಇವರೆಲ್ಲರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿ. ಸಿ. ಹೇಮಲತಾ ಅವರು ಬರೆದ “ವಚನಕಾರ್ತಿಯರ ಕ್ರಾಂತಿಯ ಹೆಗ್ಗುರುತು “ಕೃತಿ ಲೋಕಾರ್ಪಣೆ ಮತ್ತು “ಅಕ್ಕ ರಾಜ್ಯ ಪ್ರಶಸ್ತಿ ” ಪ್ರಧಾನ ಸಮಾರಂಭವು ಈ ಸಮಯದಲ್ಲಿ ನಡೆಯಿತು.
ವೇದಿಕೆ ಮೇಲಿರುವ ಗಣ್ಯರು ಸಮಾರಂಭ ಉದ್ಘಾಟಿಸಿ ಕೃತಿಯನ್ನು ಲೋಕಾರ್ಪಣೆ ಮಾಡಿದ ನಂತರ ಕೃತಿಯ ಕುರಿತು ಡಾ. ಶಶಿಕಾಂತ ಪಟ್ಟಣ ಅವರು ಸಭೆಯನ್ನು ಉದ್ದೇಶಿಸಿ ಅತ್ಯಂತ ಅಭೂತಪೂರ್ವವಾಗಿ ಮಾತನಾಡಿದರು. ಹೇಮಲತಾ ಅವರ ಕೃತಿಯ ಬಗೆಗೆ ಮಾತನಾಡಿ, ಒಂದು ಅದ್ಭುತ ವಾದ ಅವಿರಳ ಮಹಿಳಾ ವಚನಕಾರ್ತಿಯರ ಕೃತಿಯನ್ನು ಸಮಾಜಕ್ಕೆ ಅರ್ಪಿಸಿದ್ದಾರೆ ಎಂದು ಪ್ರಶoಸೆ ಮಾಡಿದರು. ಬಸವಣ್ಣನವರಿಗೆ ಅಕ್ಕನಾಗಮ್ಮ ನಿಜವಾದ ಕ್ರಾಂತಿಯ ನೆಲೆ – ಸೆಲೆಯನ್ನು ಕೊಟ್ಟವಳು ಎಂದು ಹೇಳುತ್ತಾ, ಶರಣರು ದೇವರಿಗೆ ವಚನ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನು ಕಲಿಸಿದರು ಎಂದು ಹೆಮ್ಮೆಯಿಂದ ಹೇಳಿದರು.
ಶೂನ್ಯ ಸಂಪಾದನೆಯ ಸಮಯದಲ್ಲಿ ಮತ್ತು ಎರಡನೆಯ ಪ್ರೌಢದೇವ ರಾಯನ ಕಾಲಘಟ್ಟದಲ್ಲಿ ವಚನಗಳಲ್ಲಿ ಪವಾಡಗಳನ್ನು ಮತ್ತು ರಂಜನೀಯ ಕಥೆಗಳನ್ನು ಸೇರಿಸಿದ್ದನ್ನು ನೆನಪು ಮಾಡಿಕೊಳ್ಳುತ್ತಾ ವಿಷಾದಿಸಿದರು. ಆ ಕಾಲಘಟ್ಟದಲ್ಲಿ ವರ್ಣ- ವರ್ಗ ಲಿಂಗ -ಬೇಧ,ಆಶ್ರಮರಹಿತ ಸಾಂಸ್ಥಿಕರಣವಲ್ಲದ ಆಂದೋಲನವನ್ನು ವಿರೂಪ ಗೊಳಿಸುವ ಉದ್ದೇಶಪೂರ್ವಕವಾದ ಕೆಲಸವನ್ನು ಆಗಿನ ಕಾಲದ ವಿದ್ವಾoಸರು ಮಾಡಿದರು ಎನ್ನುವುದನ್ನು ನೋವಿನಿಂದ ಹಂಚಿಕೊಂಡರು. 13 ಮತ್ತು 14ನೇ ಶತಮಾನದಲ್ಲಿ ನಾಂದೇಡದ ಗುರುಲಿಂಗಪೆದ್ದಿಯ ಐವತ್ತು ವಚನಗಳಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸಿದ್ದರ ಅರಿವು ಮೂಡಿಸಿದರು. ಮಹಾದೇವಿ ಅಕ್ಕ ಮತ್ತು ಬೊಂತಾದೇವಿಯವರು ದಿಗಂಬರರಾಗಿ ನಡೆದರು ಎನ್ನುವ ಸನ್ನಿವೇಶವನ್ನು ಖಡಾ ಖಂಡಿತವಾಗಿ ಅಲ್ಲಗಳೆದು, ಇಲ್ಲಿಯವರೆಗೂ ನಾವು ಅವರನ್ನು ಬೆತ್ತಲೆಯಾಗಿ ನಡೆದು ಹೋದರು ಎನ್ನುವುದನ್ನು ಮುಂದುವರಿಸಿದ್ದೇವೆ. ವಿಚಾರವಂತರು ಸಂಶೋಧಕರು ಅದನ್ನು ಅನುಸರಿಸುವದು ಶುದ್ಧ ತಪ್ಪು ಎನ್ನುವುದನ್ನು ತಿಳಿಹೇಳಿದರು. ತಪ್ಪುಗಳನ್ನು ತಿದ್ದಿ ಮುಂದುವರಿಯುವ ಕೆಲಸ ಎಲ್ಲರೂ ಸೇರಿ ಮಾಡಬೇಕಾಗಿದೆ ಎಂಬ ಜವಾಬ್ದಾರಿಯನ್ನು ಅತ್ಯಂತ ಕಳಕಳಿಯಿಂದ, ವಚನಗಳ ಉದಾಹರಣೆ ಸಮೇತ ಮನದಟ್ಟು ಮಾಡಿದರು. ಹೆಂಡದ ಮಾರಯ್ಯ ಮತ್ತು ಸೂಳೆ ಸಂಕವ್ವೆ ಬಗೆಗೆ ಸಹ ಉದಾಹರಣೆ ನೀಡುತ್ತಾ ಅವರವರ ವೃತ್ತಿಯನ್ನು ಅವರು ಬಿಟ್ಟರೂ ಸಹಿತ ಈ ಸಂಭೋಧನೆ ಸರಿಯಲ್ಲ ಎನ್ನುವ ವೈಚಾರಿಕ ಪ್ರಜ್ಞೆಯ ನುಡಿಗಳನ್ನಾಡಿದರು ಮತ್ತು ನಿಜ ವಚನಗಳನ್ನು ತಿದ್ದಿ ತಿರುಚಿದ ಎಷ್ಟೋ ವಚನಗಳನ್ನು ಯಥಾವತ್ತಾಗಿ ಬಳಸುವುದನ್ನು ತಡೆಯಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎನ್ನುವ ಅವರ ಕಾಳಜಿ, ಚಿಂತನೆ, ಕಳಕಳಿ,ವಚನಗಳ ಸಾರದ ಸಂಪೂರ್ಣ ಅರಿವು ಮೂಡಿಸುವ ಅವರ ಮಾತುಗಳು ಸಭಾಂಗಣದಲ್ಲಿ ಸಂಚಲನ ಮೂಡಿಸಿದವು. ಶರಣರು ದೇಶಿಯ ಪ್ರಜ್ಞೆಯುಳ್ಳವರು, ಬಂಡಾಯ ಸಾಹಿತ್ಯದ ರೂವಾರಿಗಳು, ವೈಚಾರಿಕರು ಮತ್ತು ವೈಜ್ಞಾನಿಕ ಪರಿವೆ ಉಳ್ಳವರು ಎಂದು ಅರುಹಿದರು.
ಖ್ಯಾತ ನಟಿ ಪೂಜಾ ಗಾಂಧಿ ಅವರಿಗೆ ಶರಣೆ ಬೊಂತಾದೇವಿ ಪ್ರಶಸ್ತಿ, ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಬಂದ ಅರವತ್ತಕ್ಕಿಂತ ಹೆಚ್ಚು ಶಿಕ್ಷಕರಿಗೆ ಪ್ರಶಸ್ತಿ, ಜಾನಪದ ಕಲಾವಿದರಿಗೆ ಗೌರವ, ಗಣ್ಯ ವ್ಯಕ್ತಿಗಳಿಗೆ ವಿಶೇಷ ಸನ್ಮಾನ, ವಿಶೇಷ ಆಹ್ವಾನಿತರಾಗಿ ಬಂದ ಎಲ್ಲರ ಜೊತೆ ಅಕ್ಕನ ಅರಿವು ವೇದಿಕೆಯ ವಿಶ್ವಸ್ಥರು ಶರಣೆ ಸುಧಾ ಪಾಟೀಲ, ಹಿರಿಯ ಸದಸ್ಯರು ಗೌರಮ್ಮ ನಾಶಿ, ಕಲ್ಬುರ್ಗಿಯ ಬಸಮ್ಮ ಭರಮಶೆಟ್ಟಿ ಅವರಿಗೆ ಸನ್ಮಾನ ಸಮಾರಂಭ ನಡೆಯಿತು.
ಡೊಳ್ಳು, ವಾದ್ಯ ನಗಾರಿ ಕುಣಿತದೊಂದಿಗೆ ಸ್ವಾಗತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಾಡಿನ ಪ್ರಖ್ಯಾತ ಕಲಾವಿದರಿಂದ ಜಾನಪದ ನೃತ್ಯ ಸಂಗೀತ ನಡೆಯಿತು. ಅಂತರ್ ರಾಷ್ಟ್ರೀಯ ಜಾನಪದ ಗಾಯಕಿ ಸವಿತಕ್ಕ ಅವರಿಂದ ನಡೆದ ಅತ್ಯದ್ಭುತವಾದ ವಚನ ಗಾಯನವನ್ನು ಎಲ್ಲರೂ ಸವಿದರು ಎಂದು ಅಕ್ಕನ ಅರಿವು ಮತ್ತು ವಚನ ಅಧ್ಯಯನ ವೇದಿಕೆಯ ವಿಶ್ವಸ್ಥರು, ದತ್ತಿ ದಾಸೋಹಿಗಳು ಮತ್ತು ಆಜೀವ ಸದಸ್ಯರು ತಿಳಿಸಿದ್ದಾರೆ.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ