spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಹೂಗಾರ ಮಾದಣ್ಣ

ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ ನಡುವೆ ಕಾಯಕ, ದಾಸೋಹ ತತ್ವಗಳ ಮೇಲೆ ಸೌಹಾರ್ದಯುತ ವಾತಾವರಣ ತರಲು ಪ್ರಯತ್ನ ನಡೆಯಿತು. ಸಾಮಾನ್ಯರಲ್ಲಿಯೇ ಅತಿಸಾಮಾನ್ಯರಾದಂತಹ ಜನಸಾಮಾನ್ಯರು ಬಸವಣ್ಣನವರ ಪ್ರಾಯೋಗಿಕವಾದ ಆದರ್ಶ ಸಿದ್ಧಾಂತದ ಪ್ರಭಾವಕ್ಕೆ ಒಳಗಾದರು. ಅರಿವು, ಆಚಾರ, ಕ್ರಿಯೆ, ಕಾಯಕ, ಜ್ಞಾನ, ದಾಸೋಹ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶ್ರೇಷ್ಠ ಶರಣರಾದರು.

ಇಂತಹ ಅಪರೂಪದ ಶರಣರಲ್ಲಿ ಹೂಗಾರ ಮಾದಣ್ಣನವರೂ ಕೂಡ ಒಬ್ಬರು, ಇವರು ಬಸವಣ್ಣನವರ ಸಮಕಾಲೀನರು, ವಚನ ಸಾಹಿತ್ಯದಲ್ಲಿ ಹೇಳಿರುವ 770 ಅಮರ ಗಣಂಗಳ ಪೈಕಿ ಇವರೂ ಒಬ್ಬರು. ಇವರ ಜನ್ಮ ಇಂದಿನ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಪಕ್ಕದಲ್ಲಿರುವ ಒಂದು ಹಳ್ಳಿಯಲ್ಲಿ ಆಗಿರಬಹುದು ಎನ್ನಲಾಗಿದೆ. ಇವರು ಹೂ ಮಾರುವ ವೃತ್ತಿಯವರಾಗಿದ್ದು ಜನರಿಗೆ ಪತ್ರಿ, ಹೂಗಳನ್ನು ನೀಡಿ, ಬಂದ ದವಸ, ಧಾನ್ಯ ಪಡೆದು ಅದರಿಂದಲೇ ಜಂಗಮಸೇವೆ, ದಾಸೋಹ ಸೇವೆ ಮಾಡಿಕೊಂಡು ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದರು.
ಆದರೆ ದುರದೃಷ್ಟವಶಾತ್ ಹೂಗಾರ ಮಾದಣ್ಣನವರ ಬಗ್ಗೆ ವಚನ ಸಾಹಿತ್ಯದಲ್ಲಿ ಯಾವುದೇ ವಿವರಣೆ ಲಭ್ಯವಿಲ್ಲ. ಇವರ ವಚನಗಳಾಗಲಿ ಅಥವಾ ವಚನಾಂಕಿತವಾಗಲಿ ಇದುವರೆಗೂ ಎಲ್ಲೂ ಸಿಕ್ಕಿಲ್ಲ. ಇವರು ಹೂ ಮಾರುವ ಕಾಯಕದ ಶರಣರು, ವಚನಕಾರರು ಎಂಬು ಬಹಳಷ್ಟು ವಿಚಾರಗಳನ್ನು ನಾವು ಜನಪದ ಸಾಹಿತ್ಯದಿಂದಲೇ ತಿಳಿಯಬಹುದಾಗಿದೆ. ಜೊತೆಗೆ

- Advertisement -

ಭೀಮಕವಿಯ – ಬಸವ ಪುರಾಣ
ಸಿದ್ದಯ್ಯ ಪುರಾಣಿಕ್ ಅವರ – ಶರಣ ಚರಿತಾಮೃತ ಸೋಮನಾಥ ಯಾಳವಾರ ರವರ – ವಚನಾಮೃತ.           ಅಕ್ಕ ಅನ್ನಪೂರ್ಣ ಅವರ – ಜಾನಪದ ಸಾಹಿತ್ಯದಲ್ಲಿ ಶರಣರು.  ಎಲ್ಲ ಕೃತಿಗಳಲ್ಲಿ ಹೂಗಾರ ಮಾದಣ್ಣನವರ ಉಲ್ಲೇಖವಿದೆ.

ಈಗಾಗಲೇ ಹೇಳಿರುವಂತೆ ಇವರ ಬಗ್ಗೆ ನಿಖರವಾದ ಮಾಹಿತಿಗಳು ಇಲ್ಲವಾದರೂ, ಜನಪದ ವಿಚಾರದಂತೆ- ಇವರ ಜನ್ಮಹೂಗಾರ ಮನೆತನ ದಲ್ಲಿ ಆಯಿತು. ತಂದೆ ಮಹಾದೇವ. ಶೈವ ಮಂದಿರದಲ್ಲಿ ಪೂಜಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಮಗನೇ ಮಾದಣ್ಣ. ಮಾದಣ್ಣನಿಗೆ ಚಿಕ್ಕ ಮಾದಣ್ಣ, ಮಾದಣ್ಣ, ಮಾದೇವ ಇತ್ಯಾದಿ ಹೆಸರುಗಳಿವೆ. ಇವರ ಪತ್ನಿ ಮಹಾದೇವಿ

ಶಿವಯೋಗಿ ಮಲ್ಲರಸ ಆಗ ಕಲಕುರ್ಕಿಯ ಅರಸನಾಗಿರುತ್ತಾನೆ. ಶೈವ ಸಾಮ್ರಾಜ್ಯದ ರಕ್ಷಣೆ ಮಾಡುತ್ತಿರುತ್ತಾನೆ. ಶಿವಯೋಗಿ ಮಲ್ಲರಸನ ಮಗ ಸಕಲೇಶ ಮಾದರಸರು.ಶಿವಯೋಗಿ ಮಲ್ಲರಸರು ವೈರಾಗ್ಯಹೊಂದಿ ರಾಜ್ಯಭಾರವನ್ನು ಮಗ ಸಕಲೇಶ ಮಾದರಸರಿಗೆ ನೀಡಿ, ಶ್ರೀಶೈಲಕ್ಕೆ ತೆರಳುತ್ತಾರೆ. ಸಕಲೇಶ ಮಾದರಸರು ರಾಜ್ಯಭಾರ ನಡೆಸುತ್ತಿರುವಾಗ ಒಂದು ದಿನ ಶೈವ ಮಂದಿರಕ್ಕೆ ಹೋದಾಗ, ಅಲ್ಲಿಯ ಪೂಜಾರಿ ಮಹಾದೇವರ ಮಗ ಮಾದಣ್ಣನವರ ಪರಿಚಯವಾಗುತ್ತದೆ. ಇವರೀರ್ವರೂ ಕಲ್ಯಾಣದ ಬಸವಣ್ಣನವರ ಬಗ್ಗೆ ಚರ್ಚಿಸುತ್ತಾರೆ. ಅವರ ಪ್ರಭಾವಕ್ಕೆ ಒಳಗಾಗುತ್ತಾರೆ. ಮಾದರಸರು ಕಲ್ಯಾಣಕ್ಕೆ ಹೊರಟು ನಿಂತಾಗ, ತಮ್ಮ ಜೊತೆ ಹೂಗಾರ ಮಾದಣ್ಣನವರನ್ನು ಕರೆದುಕೊಂಡು ಹೋಗುತ್ತಾರೆ.

- Advertisement -

ಬಸವಣ್ಣನವರ ಮಹಿಮೆಯನ್ನು ಅರಿತ ಮಾದಣ್ಣನವರಿಗೆ ಅವರನ್ನು ಭೇಟಿಯಾಗುವ ತವಕ. ಮಾದಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾದ ಹಡಪದ ಅಪ್ಪಣ್ಣನವರ ಮೂಲಕ ಬಸವಣ್ಣನವರನ್ನು ಭೇಟಿಯಾಗಿ ಅವರ ಸಂಪರ್ಕಕ್ಕೆ ಬರುತ್ತಾರಂತೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂಬ ಶರಣರ ಮಾತಿನಂತೆ ಮಾದಣ್ಣ ಹಾಗೂ ಮಹಾದೇವಿ ದಂಪತಿಗಳೀರ್ವರೂ ಕಾಯಕದೊಂದಿಗೆ ಜಂಗಮ ಸೇವೆ ಮಾಡುತ್ತಾ ಜೀವನವನ್ನು ನಿರ್ವಹಿಸುತ್ತಾರೆ.

ಶಿವಪೂಜೆ ಮಾಡುದಕ ಮುಂಗಡ ಹೂ ಪತ್ರಿ ಬೇಕ ನಿತ್ಯದಲಿ.
ಎಂಬ ಜನಪದರ ಮಾತಿನಂತೆ ಪ್ರತಿದಿನ ಹೂ ಕಟ್ಟಿ, ಪತ್ರಿಗಳನ್ನ ಶರಣರಿಗೆ ಒದಗಿಸುವ ಕಾರ್ಯವನ್ನು ಮಾಡುತ್ತಿದ್ದರೆಂದು, ಜನಪದರು ತಮ್ಮ ಮಾತಿನಲ್ಲಿ ಹೇಳಿದ್ದಾರೆ.
ಈ ದಂಪತಿಗಳ ಮಗನೇ ಲಿಂಗಣ್ಣ. ಈತನೂ ಕೂಡ ತಂದೆಯಂತೆ ಹೂ, ಪತ್ರಿ ಸಲ್ಲಿಸುವ ಕಾಯಕವನ್ನು ಮಾಡುತ್ತಿದ್ದನಂತೆ. ಲಿಂಗಣ್ಣ ನ ಬಗ್ಗೆ ಜನಪದರು ಕೆಲವು ವಿಚಾರವನ್ನು ಕಟ್ಟಿಕೊಡುತ್ತಾರೆ.

ಕಲ್ಯಾಣ ಮನೆ ಆಯ್ತು ಎಲ್ಲ ಶಿವಶರಣರಿಗೆ
ಮಲ್ಲೆ ಮಾದೇವಿ। ಲಿಂಗಣ್ಣ ಮಗನೊಡನೆ ಉಲ್ಲಾಸದಿಂದಿದ್ದ ಮಾದಣ್ಣ.।।

ಮಾದಣ್ಣನವರು ಸಕಲೇಶ ಮಾದರಸ ರಿಂದ ಲಿಂಗ ದೀಕ್ಷೆ ಯನ್ನು ಪಡೆದು ಅನುಭವ ಮಂಟಪದಲ್ಲಿ ಭಾಗಿ ಯಾಗುತ್ತಾರೆ. ಸಕಲೇಶ ಮಾದರಿಸರನ್ನೇ ತಮ್ಮ ಗುರು ವೆಂದು ಒಪ್ಪಿಕೊಳ್ಳುತ್ತಾರೆ.
ಇವರ ಬಗ್ಗೆ ಚರಿತ್ರೆಯಲ್ಲಿ ಎರಡು ಘಟನೆ ಗಳು ವ್ಯಕ್ತವಾಗಿವೆ.
ಒಂದು ಸಲ ಮಾದಣ್ಣನವರು ನಸುಕಿನ ಜಾವದಲ್ಲಿ ಚಳಿಯಲ್ಲಿ ಹೂ ತರಲು ಹೋದಾಗ ಹೂ ಕೀಳುವಾಗ ಸಾಕ್ಷಾತ್ ಶಿವನೇ ಜಂಗಮವೇಶದಲ್ಲಿ ಅವರನ್ನು ಪರೀಕ್ಷಿಸಲು ಬಂದು, ಇಷ್ಟೊಂದು ಚಳಿಯಲ್ಲಿ ನೀನೇಕೆ ಕಾಯಕವ ಮಾಡುವೆ? ನಿನಗೆ ಘನಪದವಿಯ ನೀಡುವೆ. ನನ್ನೊಂದಿಗೆ ಬಾ ಎಂದರಂತೆ.
ಅದಕ್ಕೆ ಮಾದಣ್ಣನವರು -ಬೇಡ ನನಗೆ ಗಣಪದವಿ
ನಾನು ಕಲ್ಯಾಣದಲ್ಲಿಯೇ ಕಾಯಕ ಮಾಡುತ್ತಾ ಕೈಲಾಸ ಕಾಣುವೆನು,ನಿನ್ನ ಕೈಲಾಸ ಹಾಳುಬೆಟ್ಟ, ಕಲ್ಯಾಣವೇ ಭೂ ಕೈಲಾಸ. ಎಂದರಂತೆ.

ಮತ್ತೊಮ್ಮೆ  ಕಲ್ಯಾಣದಲ್ಲಿ ಮಾದಣ್ಣ ದಂಪತಿಗಳು ಕಾಯಕ, ಜಂಗಮಸೇವೆ ಮಾಡುತ್ತಾ ಬದುಕುತ್ತಿರುವಾಗ, ಮಾದಣ್ಣನವರು ರಾತ್ರಿಯಲ್ಲಿ ನಿಧನರಾಗುತ್ತಾರಂತೆ. ಆಗ ಪತ್ನಿ ಮಹಾದೇವಿ ಈಗ ಶರಣರಿಗೆ ಸುದ್ದಿ ಹೇಳಿದರೆ ತೊಂದರೆ ಆಗುವುದು, ಎಂದು ತಿಳಿದು

ಶರಣ ನಿದ್ರೆ ಗೈದರೆ ಜಪ ಕಾಣಿರೋ,
ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ.
ಎಂಬ ಬಸವಣ್ಣನವರ ವಾಣಿಯಂತೆ,
ಮಾದಣ್ಣನವರನ್ನು ಲಿಂಗ ಪೂಜೆಯಲ್ಲಿ ನಿರತರಾಗಿರುವಂತೆ ಕಂಬಕ್ಕೆ ಕೂರಿಸಿ, ಭಸ್ಮಲೇಪಿಸಿ, ಪಾದೋದಕ ಪೋಕ್ಷಿಸಿ, ಕ್ರಿಯಾ ಸಮಾಧಿಗಾಗಿ, ಹಿತ್ತಲಲ್ಲಿ ನೆಲ ಅಗೆಯ ತೊಡಗಿದರಂತೆ. ಮಗ ಲಿಂಗಣ್ಣ ಆಕಸ್ಮಿಕವಾಗಿ ಎದ್ದು ಬಂದು, ತಾಯಿಯು ಈ ರೀತಿ ಮಾಡುತ್ತಿರುವುದನ್ನು ಕಂಡು ಹಾಗೂ ತಂದೆಯು ಏನು ಮಾತನಾಡದೇ ಇರುವುದನ್ನ ಕಂಡು, ಕಳವಳಗೊಂಡು, ಘಟನೆಯನ್ನು ಅರಿತು, ತಂದೆಯ ಗುರುಗಳಾದ ಸಕಲೇಶ ಮಾದರಸರನ್ನು ಕರೆತರುತ್ತಾರೆ. ಆಗ ಸಕಲೇಶ ಮಾದರಸರು ಮಾದಣ್ಣ ಲಿಂಗೈಕ್ಯರಾಗಿರುವುದನ್ನು ಕಂಡು, ಅವರ ಶರೀರವನ್ನು ಸ್ಪರ್ಶಿಸಿ-
“ಎದ್ದೇಳು ಮಾದಣ್ಣ ಶಿವಶರಣರ ಪೂಜೆಗೆ ಪತ್ರಿಯನ್ನು ತರಲು ತಡವಾಗುವುದು”,ಎಂದು ಜೋರಾಗಿ ಉಸಿರಲು, ಮಾದಣ್ಣ ಎದ್ದು ಕುಳಿತು ಗುರುವಿಗೆ ವಂದಿಸಿದರಂತೆ.

ಈ ಘಟನೆಗಳು ಪೌರಾಣಿಕವಾಗಿದ್ದರೂ ಕೂಡ ಒಟ್ಟಾರೆಯಾಗಿ ಮಾದಣ್ಣ ಒಬ್ಬ ಶ್ರೇಷ್ಠ ಕಾಯಕನಿಷ್ಠ, ಜಂಗಮ ಸೇವೆ ಮಾಡುವವ ಎಂದು ಬಿಂಬಿಸುತ್ತವೆ.
ಮಾದಣ್ಣನವರು ಐಕ್ಯರಾಗಿರುವುದರ ಬಗ್ಗೆಯೂ ಕೂಡ ಜನಪದರು ಈ ರೀತಿಯಾಗಿ ಹೇಳುತ್ತಾರೆ.
ಕಾಯಕ ಭಕ್ತ ಶಿವಶರಣ ಕ್ರಿಯೆಯಲ್ಲಿ ಬಯಲಾದ,
ಕಾಯಕ ಅಧಿಕವೆಂದ ಮಾದಯ್ಯ ಸಾರಿದನು.     ಕಾಯಕ್ಕಂಜಿ ಶಿವ ಹರಿಸಿದನು.”।।

ಅದೇನೇ ಆದರೂ
12ನೇಯ ಶತಮಾನದಲ್ಲಿ ಶಿವಶರಣರ ಬಗ್ಗೆ ಅಭ್ಯಸಿಸಿದಾಗ ಎಂದೂ ಯಾವ ಶರಣರೂ ಪೂಜೆ, ಪುನಸ್ಕಾರ, ಆಚರಣೆಗಳನ್ನು ಪ್ರೋತ್ಸಾಹಿಸಿಲ್ಲ. ಹೀಗಿರುವಾಗ ಮಾದಣ್ಣ ಹೂ,ಪತ್ರಿಗಳನ್ನು ಪೂಜೆಗೆ ಸಲ್ಲಿಸುತ್ತಿದ್ದನು ಎಂಬುದು ಎಷ್ಟು ಸತ್ಯ?
ಶರಣರೇ ಹೇಳಿರುವಂತೆ-
ಪುಷ್ಪ ಸಮರ್ಪಿಸೆನೆಂಬೆನೆ ಅದು ದುಂಬಿಯ ಎಂಜಲು.
ತೀರ್ಥ ಪವಿತ್ರನೆಂಬನೆ ಅದು ಮೀನಿನ ಎಂಜಲು.
ಅಂದರೆ-
ನಮ್ಮ ನಮ್ಮ ನಡೆ, ನುಡಿ, ಆಚಾರ, ವಿಚಾರ ಶುದ್ಧವಾಗಿರಬೇಕು ಎಂಬುದು ಶರಣರ ನಿಲುವು.
ಭೌತಿಕವಾಗಿ ಪೂಜೆ ಪುನಸ್ಕಾರ ಆಚರಣೆಗಳನ್ನು ಒಪ್ಪದ ಶರಣರು ಆಧ್ಯಾತ್ಮಿಕ ಚೈತನ್ಯವನ್ನೇ ದೇವರೆಂದರು. ಆತ್ಮ, *ಪ್ರಾಣ* ಮತ್ತು *ಕಾಯ* ಇವುಗಳ *ಸಮನ್ವಯ* ವೇ ಶಿವಪ್ರಜ್ಞೆ ಎಂದರು, ಅನುಭಾವಿಗಳು. ಇಲ್ಲಿ ಶಿವನೆಂಬುದು ಪೌರಾಣಿಕವಲ್ಲ.
16ನೆಯ ಶತಮಾನದಲ್ಲಿ ಅನೇಕ ಪೌರಾಣಿಕ ಕಥೆ ಗಳು ಹೆಣೆಯಲ್ಪಟ್ಟವು .ಅಲ್ಲಿ ಕಥಾನಾಯಕನನ್ನು ವೈಭವಿಕರಿಸುವ ದೃಷ್ಟಿಯಿಂದ ಅನೇಕ ಬದಲಾವಣೆಗಳು ಅವರು ಚರಿತ್ರೆಯಲ್ಲಿ ಆಗಿರಬಹುದಾಗಿದೆ. ಅನೇಕ ಶರಣರ ಚರಿತ್ರೆಗಳು ವಿರೂಪ ಗೊಂಡಿರಬಹುದು.

ಒಟ್ಟಾರೆಯಾಗಿ ಹೂಗಾರ ಮಾದಣ್ಣ ಹೂವು ಮಾರುವ ವೃತ್ತಿಯನ್ನು ಮಾಡುತ್ತಿದ್ದನು, ಎಂದು ಒಪ್ಪಿದರೂ, ಆತ ಆ ಹೂಗಳನ್ನು ರಾಜನ ಆಸ್ಥಾನಕ್ಕೆ ಹಾಗೂ ಕಾರ್ಯಕ್ರಮಗಳಿಗೆ ಅಲಂಕಾರಕ್ಕಾಗಿ ಜೊತೆಗೆ ಜನಸಾಮಾನ್ಯರಿಗೆ ಎತ್ತುಗಳಿಗೆ, ಕೂರಿಗೆಗಳಿಗೆ, ಸುಗ್ಗಿಯ ಸಮಯದಲ್ಲಿ ಕಣಕ್ಕೆ ಅಲಂಕಾರ ಕ್ಕಾಗಿ ಹೂ ಮಾರುತ್ತಿದ್ದನು, ಎನ್ನುವುದು ಸ್ಪಷ್ಟವಾಗುತ್ತದೆ.

ಬಸವಣ್ಣನವರ ಒಂದು ವಚನದಲ್ಲಿಯೂ ಕೂಡ
ಹೂಗಾರ (ಮಾಲೆಗಾರ)ರ ಆರಾಧ್ಯ ದೈವ ಮತ್ತು ಇಷ್ಟದೇವನಾದ ಬಾವಿಯ ಬೊಮ್ಮನನ್ನು ಉಲ್ಲೇಖಿಸಿದ ಉದಾಹರಣೆ ಇದೆ.

ಬಡಹಾರುವನೇಸು ಭಕ್ತನಾದಡೆಯೂ। ನೇಣಿನ ಹಂಗ ಬಿಡ ।।
ಮಾಲೆಗಾರನೇಸು ಭಕ್ತನಾದಡೆಯೂ। ಬಾವಿಯ ಬೊಮ್ಮನ ಹಂಗು ಬಿಡ |।
ಬಣಜಿಗನೇಸು ಭಕ್ತನಾದಡೆಯೂ। ಒಟ್ಟಿಲ ಬೆನಕನ ಹಂಗ ಬಿಡ ।।
ಕಂಚುಗಾರನೇಸು ಭಕ್ತನಾದಡೆಯೂ। ಕಾಳಿಕಾದೇವಿಯ ಹಂಗ ಬಿಡ ।।
ನಾನಾ ಹಂಗಿನವನಲ್ಲ। ನಿಮ್ಮ ಶರಣರ ಹಂಗಿನವ ಕೂಡಲಸಂಗಮದೇವಾ ।।
(ಸಮಗ್ರ ವಚನ ಸಂಪುಟ: ಒಂದು- 2016/ ಪುಟ ಸಂಖ್ಯೆ- 44/ ವಚನ ಸಂಖ್ಯೆ-451)

ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ – ಹೂಗಾರ ಮಾದಣ್ಣ ಮನೆ ಮನೆಗೆ ಪುಷ್ಪ, ಪತ್ರಿಗಳನ್ನ ನೀಡುತ್ತಿದ್ದನಾದರೂ ಶರಣರಿಗೆ  ಔಷಧ ರೂಪದಲ್ಲಿ ಉಪಯೋಗವಾಗುವ, ಆರೋಗ್ಯದ ದೃಷ್ಟಿಯಿಂದ ಅವಶ್ಯಕವಾಗಿರುವ ಪುಷ್ಪಗಳನ್ನು ನೀಡಿ ಜೊತೆಗೆ ಊರಿನ ಎಲ್ಲ ಮನೆಗಳಲ್ಲಿ ನಡೆಯುತ್ತಿದ್ದ ಸಾವು, ನೋವು ಇತ್ಯಾದಿ ವಿಚಾರಗಳನ್ನ ಚರ್ಚಿಸಿ ಆ ವಿಚಾರಗಳನ್ನ ಅಂದಿನ ಪ್ರಧಾನಿ ಹಾಗೂ ಅನುಭವ ಮಂಟಪದ ಶಿಲ್ಪಿಯಾದ ಬಸವಣ್ಣನ ವರಿಗೆ ತಲುಪಿಸುವ ಮುಖೇನ ಸುದ್ದಿ ವಾಹಕನ ರೂಪದಲ್ಲಿ ಕೆಲಸ ನಿರ್ವಹಿಸಿರಬಹುದು.

ಏಕೆಂದರೆ –
ಮೇದಾರ ಕೇತಯ್ಯನವರು  ಮರಣ ಹೊಂದಿದ ಸುದ್ದಿ ಯನ್ನು ಕಲ್ಯಾಣಕ್ಕೆ ಹೇಳಿದವರು ಹೂಗಾರ ಮಾದಣ್ಣನವರೇ ಅಂತಲೂ ಕೂಡ ಜನಪದರು ಹೇಳಿದ್ದಾರೆ.

ಏನೇ ಆದರೂ ಕೂಡ ವಾಸ್ತವಿಕ ನೆಲಗಟ್ಟಿನಲ್ಲಿ ಹೂಗಾರ ಮಾದಣ್ಣನವರ ಬಗ್ಗೆ ಹೆಚ್ಚು ಸಂಶೋಧನೆಯಾಗಬೇಕಾಗಿರುವುದು ಅತ್ಯವಶ್ಯವಾಗಿದೆ.

 

ಜಯಶ್ರೀ ಷ. ಆಲೂರ, ಶಿಕ್ಷಕಿ ಬಾದಾಮಿ                ವಚನ ಅಧ್ಯಯನ ವೇದಿಕೆ, ಅಕ್ಕನ ಅರಿವು
ಬಸವಾದಿ ಶರಣರ ಚಿಂತನಕೂಟ 

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group