ಮುನಿ ಗುಮ್ಮಟದೇವ
ಕಲ್ಯಾಣದ ಅನುಭವ ಮಂಟಪದ ಸಂದೇಶ ಅರಿತ ಅನೇಕ ಶಿವಶರಣರು ಕಲ್ಯಾಣದತ್ತ ಧಾವಿಸಿ ಬಂದರು. ಇಂಥವರಲ್ಲಿ ೧೨ ನೆಯ ಶತಮಾನದ ವಚನಕಾರರಾದ ಮನು ಮುನಿ ಗುಮ್ಮಟದೇವರು ಒಬ್ಬರಾಗಿದ್ದಾರೆ .ಇವರ ವಚನಾಂಕಿತ ‘ ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ‘ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ‘.
ಮೂಲತಃ ಜೈನರಾಗಿರಬಹುದಾದ ಇವರ ಜೀವನ ವೃತ್ತಾಂತ ಕುರಿತು ವಿವರವಾದ ಮಾಹಿತಿ ಲಭ್ಯವಿರುವುದಿಲ್ಲ. ಇವರ ವಚನಗಳನ್ನು’ ಆತ್ಮನರಿವು ಭಾವಸ್ಥಲ ‘, ‘ ಆತ್ಮ ಐಕ್ಯನಸ್ಥಲ’ , ‘ ಪಿಂಡಜ್ಞಾನಸಂಬಂಧ ‘ ಶೀರ್ಷಿಕೆಗಳ ಅಡಿಯಲ್ಲಿ ಸಂಕಲಿಸಲಾಗಿದ್ದು ,ಆರಂಭದಲ್ಲಿ ಗದ್ಯಭಾಗವನ್ನು ಜೋಡಿಸಲಾಗಿದೆ .ಇವರ ವಚನಗಳಲ್ಲಿ ಭಕ್ತಿಸಲ , ಐಕ್ಯ ಸ್ಥಲಗಳಿಗೆ ಸಂಬಂಧಿಸಿದ ವಿವೇಚನೆಯೇ ಹೆಚ್ಚಾಗಿ ಕಂಡುಬರುತ್ತದೆ. ಜೊತೆಗೆ ದಯವೇ ಧರ್ಮದ ಮೂಲ, ಏಕದೇವೋಪಾಸನೆ, ಪರಮತ ದೂಷಣೆಯಂತಹ ಸಂಗತಿಗಳನ್ನು ವಿವರಿಸಲಾಗಿದೆ.
ತಾವು ಹೇಳಬೇಕಾದ ವಿಷಯವನ್ನು ಹಲವಾರು ನಿದರ್ಶನಗಳ ಮೂಲಕ ವಿಷದೀಕರಿಸುತ್ತಾರೆ . ಸುಂದರವಾದ, ಧ್ವನಿಪೂರ್ಣವಾದ ಬೆಡಗಿನ ವಚನಗಳನ್ನೂ ರಚಿಸಿದ್ದಾರೆ.
ಡಾ.ಫ.ಗು.ಹಳಕಟ್ಟಿಯವರು ಮನುಮುನಿ ಗುಮ್ಮಟಯ್ಯ,ಎಲ್. ಬಸವರಾಜು ಅವರು ಗೊಮ್ಮಟಯ್ಯ, ಪೂಜ್ಯ ಮಾತೆ ಮಹಾದೇವಿಯವರು ಗುಮ್ಮಟದೇವ ಎಂದು ಉಲ್ಲೇಖಿಸಿದ್ದಾರೆ.( ಪುಸ್ತಕದ ಶೀರ್ಷಿಕೆ: ಕಲ್ಯಾಣದ ಶರಣರು. ೧೨ ನೇ ಶತಮಾನದ ಬಸವಾದಿ ಶರಣರ ಸೂಚಿ. (,ಪು.೨೦೬) ಡಾ.ವೀರಣ್ಣ ದಂಡೆ. )
” ಬಿಜ್ಜಳಂಗೆ ಹದಿನೆಂಟು ದೋಷಂಗಳಂ ತೀರ್ಚಿ ,ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳ ಸರ್ವ ಆತ್ಮಭೂತಹಿತನಾಗಿ ಇರೆಂದು ಆತಂಗೆ ಉಪದೇಶ ಗುರುವಾದ ಮೀಮಾಂಸಕ.ಆ ಮೀಮಾಂಸಕಂಗೆ ಸಕಲವ್ರತನೇಮ ನಿತ್ಯವರ್ತಮಾನಕೃತ್ಯ ಜಿನನೇಮ ಗುಣನಾಮವಂ ಬೋಧಿಸಿದ ಬೌದ್ಧ ಅವತಾರಕ್ಕೆ ಮುಖ್ಯ ಆಚಾರ್ಯರಾದರು,ತನ್ನ ಸಮಯಕ್ಕೆ ಸಿಂಧುಚಂದ್ರನಾದ “ಎಂಬ ಈ ವಿಷಯ ಹಾಗೂ ಮನುಮುನಿ ಗುಮ್ಮಟದೇವರ ಲಭ್ಯವಿರುವ ಒಟ್ಟು ತೊಂಭತ್ರೊಂಭತ್ತು ವಚನಗಳು ಸಂಕೀರ್ಣ ವಚನ ಸಂಪುಟ ಮೂರರಲ್ಲಿ ಪ್ರಕಟವಾಗಿರುತ್ತವೆ. ಬಸವಧರ್ಮ ಸ್ವೀಕರಿಸಿದ ಗುರು ಪ್ರಮಥರಾದ ಮನುಮುನಿ ಗುಮ್ಮಟ ದೇವರು ಧರ್ಮ ಪ್ರಚಾರ ಕಾಯಕ ನಿರತರಾಗಿದ್ದರು.
ಮುನಿ ಗುಮ್ಮಟದೇವರ ವಚನಗಳನ್ನು ವಿಶ್ಲೇಷಿಸಿದಾಗ ರೋಮಾಂಚನಕಾರಿ ಅನುಭವವುಂಟಾಗುತ್ತದೆ.
ಕೂಟದಿಂದ ಕೂಸು ಹುಟ್ಟುವಡೆ ಬ್ರಹ್ಮನ ಆಟಕೋಟಲೆಯೇಕೆ?
ಸ್ಥಿತಿ ಆಟದಿಂದ ನಡೆವಡೆ, ವಿಷ್ಣುವಿನ ಭೂತಹಿತವೇಕಯ್ಯಾ? ಘಾತಕದಿಂದ ಕೊಲುವಡೆ ರುದ್ರನ ಅಸುರವೇತಕ್ಕೆ? ಇಂತಿವೆಲ್ಲವೂ ಜಾತಿಯುಕ್ತವಲ್ಲದೆ, ತಾ ಮಾಡುವ ನೀತಿಯುಕ್ತವಲ್ಲ.
ಇದಕ್ಕಿನ್ನಾವುದು ಗುಣ ?
ಭೇದಿಸಾ, ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
ಬ್ರಹ್ಮ ಸೃಷ್ಟಿಕರ್ತ,ವಿಷ್ಣು ರಕ್ಷಣಾಕರ್ತ,ರುದ್ರ ಲಯಕರ್ತ ಎಂದು ಪುರಾಣಗಳು ಸಾರುತ್ತವೆ. ಪುರಾಣದಲ್ಲಿ ಹೇಳುವ ಈ ಹೇಳಿಕೆ ನಿಜವೆಂದು ನಂಬುವುದಾದರೂ ಹೇಗೆ? ಈ ವಿಚಾರ ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ವಿಚಾರಿಸಿ ನೋಡಿ ಮತಿವಂತರು, ಪ್ರತ್ಯಕ್ಷ ಈ ಲೋಕದ ಜೀವನವನ್ನು ತೂಕ ಮಾಡಿರಿ .ವಿವೇಚನೆ ಮಾಡಿರಿ .ಪುರಾಣದ ಕಥೆಗಳನ್ನು ನಂಬುತ್ತೀರಿ .ನಿಮ್ಮ ಕಣ್ಣ ಮುಂದೆ ನಡೆಯುವುದನ್ನು ಯಾಕೆ ನಂಬುವುದಿಲ್ಲ .ಹಳೆಯದೆಲ್ಲ ಸತ್ಯ ,ನಮ್ಮ ಮುಂದೆ ನಡೆಯುವುದೆಲ್ಲ ಆಸತ್ಯ, ಗ್ರಂಥಗಳಲ್ಲಿ ಬರೆದಿರುವುದೇ ಸತ್ಯ, ನಮ್ಮ ಕಣ್ಣುಗಳ ಮುಂದೆ ನಡೆದಿರುವುದು ಸತ್ಯವಲ್ಲ ಎಂಬ ವಿಚಾರವು ಕೆಲವರದು .ತ್ರಿಮೂರ್ತಿಗಳ ಕುರಿತು ಪುರಾಣ ಪುಣ್ಯ ಕಥೆಗಳಲ್ಲಿ ನಾವು ಓದಿದ್ದೇವೆ, ನಾವು ಕೇಳಿದ್ದೇವೆ .ಬರೀ ಕೇಳುತ್ತಲೇ ನಡೆದಿದ್ದೇವೆ ಮತ್ತು ಅವುಗಳು ಸತ್ಯವೆಂದು ಹೇಳುತ್ತಲೇ ನಡೆದಿದ್ದೇವೆ .ಈ ಪುರಾಣದ ಕಥೆಗಳು ಎಷ್ಟು ಸರಿ. ಪುರಾಣಗಳು ಹುಟ್ಟಿಕೊಳ್ಳಲು ಕಾರಣಗಳೇನು? ಆ ಪುರಾಣಗಳು ಏನು ಹೇಳಲು ಹೊರಟಿದ್ದಾವೆ? ಅವುಗಳ ಉದ್ದೇಶಗಳೇನು ಎಂಬುದನ್ನು ತಿಳಿಯದೆ ಹೋದವರು ಬಹಳ ಜನರಿದ್ದಾರೆ .’ ಪುರಾಣಗಳು ಪೂರೈಸಲರಿಯದೆ ಕೆಟ್ಟವು ‘ ಎಂಬ ಅಲ್ಲಮಪ್ರಭುಗಳ ವಚನ ಸಾಲು ಕುರಿತು ನಾವು ವಿಚಾರಿಸಿದ್ದೇವೇನು?ಪುರಾಣಗಳು ಹುಟ್ಟಿಕೊಂಡಿರುವ ಬಗೆಯನ್ನು ಅರಿಯಬೇಕು .
ಸತಿಪತಿಗಳು , ಗಂಡು-ಹೆಣ್ಣುಗಳ ಸಂಬಂಧ – ಸಂಪರ್ಕದಿಂದ ಮಗು ಹುಟ್ಟುವುದು.ಇದು ಈ ಪ್ರಕೃತಿಯಲ್ಲಿನ ನಿಯಮ. ಈ ವಿಷಯ ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ಈ ಮಗು ಬ್ರಹ್ಮ ಸೃಷ್ಟಿಸಿದ ಎಂದು ಹೇಳುವ ಪುರಾಣವನ್ನು ಹೇಗೆ ನಂಬುವುದು. ಪುರುಷನಿಲ್ಲದೆ ಸ್ತ್ರೀ ಇಲ್ಲದೆ, ಆ ಕೂಸು ತಾನೆ ತಾನಾಗಿ ಹುಟ್ಟಿದರೆ,ಅದು ಬ್ರಹ್ಮನಿಂದಲೇ ಹುಟ್ಟಿತು ಎಂದು ಪುರಾಣದ ಮಾತನ್ನು ನಾವು ನಂಬಬಹುದು. ಇಬ್ಬರ ಕೂಟದಿಂದ ಹುಟ್ಟಿದ ಕೂಸು.”ಸಂಗದಿಂದಲ್ಲದೆ ದೇಹವಾಗದು” ಎಂಬ ಮಹಾದೇವಿಯಕ್ಕಗಳ ವಚನದ ಸಾಲಿದೆ
ಚಿತ್ರಕೃಪೆ : ಯೂ ಟ್ಯೂಬ್
ಪ್ರೊ ಶಕುಂತಲಾ ಸಿಂಧೂರ