ಮನಸಂದ ಮಾರಿತಂದೆ
ಅಪ್ಪು ಅಪ್ಪುವ ನುಂಗಿದಂತೆ,
ವಿಚಿತ್ರ ಚಿತ್ರದೊಳಡಗಿದಂತೆ,
ಮನ ಮಹವ ಕೂಡಿ
ಬೆಳಗು ಬೆಳಗನೊಳಕೊಂಡಂತೆ,
ತಾನೆಂಬುದೇನೂ ಕುರುಹುದೋರದೆ,
ಮನಸಂದಿತ್ತು ಮಾರೇಶ್ವರಾ.
ಮನಸಂದ ಮಾರಿತಂದೆ ಬಸವ ಸಮಕಾಲೀನ ವಚನಕಾರ. ಇವರ ವಚನದಲ್ಲಿ ಆಧ್ಯಾತ್ಮಿಕ ಅನುಭವಗಳನ್ನು ನಿವೇದಿಸಿಕೊಂಡಿದ್ದಾರೆ. ಸೃಷ್ಟಿಯಲ್ಲಿನ ಬೆಳಕು ಗಾಳಿ ಸೂರ್ಯ ಜಲ ಭೂಮಿ ಹೀಗೆ ಪಂಚ ಮಹಾಭೂತಗಳಿಂದ ಹುಟ್ಟಿದ ಈ ಕಾಯ ಶರೀರವು ಹೊರಗಿನ ಪಂಚ ಮಹಾಭೂತಗಳ ಜೊತೆಗೆ ಕೂಡಿಕೊಳ್ಳುವ ಪರಿಯನ್ನು ಮನಸಂದ ಮಾರಿ ತಂದೆ ಹೇಳಿ ತನ್ನ ತಾನಾರೆಂಬುದನ್ನು ತನ್ನ ಕುರಹ ತೋರದೆ ಎಂದಿದ್ದಾರೆ.
*ಅಪ್ಪು ಅಪ್ಪುವ ನುಂಗಿದಂತೆ*
——————————–
ಕಾಯಗುಣದೊಳಗಿನ ಅಪ್ಪು ಬಾಹ್ಯಾಪ್ಪುವಿನೊಳಗೆ ವಿಲೀನವಾಗುವಂತೆ ,ಒಳಗಿನ ಶಕ್ತಿಯು ಹೊರಗಿನ ಶಕ್ತಿಯ ಜೊತೆಗೆ ಸಂಚಯನಗೊಳುತ್ತದೆ.ಆಗ ಹೊರಗಿನ ಅಪ್ಪು ಒಳಗಿನ ಅಪ್ಪುವನ್ನು ನುಂಗುತ್ತದೆ ಎಂದು ಒಳ ಅರ್ಥದಲ್ಲಿ ಹೇಳಿದ್ದಾರೆ. ಸಾಮಾನ್ಯವಾಗಿ ಶರೀರದೊಳಗಿನ ಅಪ್ಪು ಬಯಲೊಳಗಿನ ಅಪ್ಪುವಿನ ತೆಕ್ಕೆಯಲ್ಲಿ ಕರಗಿಹೋಗುವುದು ಸಹಜ ಗುಣವಾಗಿದೆ.
*ವಿಚಿತ್ರ ಚಿತ್ರದೊಳಡಗಿದಂತೆ*
——————————–
ಚಿತ್ತ ಚಂಚಲತೆಯ ವಿಷಯಾದಿಗಳು ಚಿತ್ರದ ರೂಹಿನೊಳಗೆ ಅಡಗಿತ್ತು . ವಿಷಯಾದಿ ಚಪಲತೆಗಳು ಹರಿಯುವ ಮನವು ಲಿಂಗವೆಂಬ ರೂಹಿನೊಳಗೆ ಅಡಗುವಂತೆ ಅಡಗುತ್ತದೆ .
*ಮನ ಮಹವ ಕೂಡಿ*
—————————-
ಸಾಧಕನ ಮನವು ಮಹಂತವ ಕೂಡಿ ಮಹಾ ಮನಕ್ಕೆ ಸಮಷ್ಟಿ ಭಾವಕ್ಕೆ ಅಣಿಯಾಗುತ್ತದೆ . ಸಮಾಜ ಸಮುದಾಯದ ಪ್ರಜ್ಞೆ ಹೊಂದುವ ಆಶಯಕ್ಕೆ ವ್ಯಕ್ತಿಯ ಮನವು ಸಿದ್ಧಗೊಳ್ಳುತ್ತದೆ.
*ಬೆಳಗು ಬೆಳಗನೊಳಕೊಂಡಂತೆ,*
————————————-
ವ್ಯಕ್ತಿಯ ಬೆಳಗು ಜ್ಞಾನವು ಸಮಗ್ರ ಭೂಗೋಳಿಕ ಜೈವಿಕ ಜ್ಞಾನದ ಬೆಳಗಿನೊಳಗೆ ಅಡಗಿಕೊಂಡಂತೆ ಅಡಗುತ್ತದೆ .
*ತಾನೆಂಬುದೇನೂ ಕುರುಹುದೋರದೆ,*
—————————————–
ಇಂತಿಪ್ಪ ಪಂಚ ಮಹಾಭೂತಗಳ ಶಬ್ದ ಸ್ಪರ್ಶ ರೂಪ ರಸ ಗಂಧಗಳ ಮೂಲಕ ಪಂಚೇಂದ್ರಿಯಿಂದ ಗ್ರಹಿಸುವ ಅನುಭವಿಸುವ ಪರಿಕ್ರಮವಿರುವಾಗ ಸಾಧಕ ಭಕ್ತ ತಾನಾರೆಂದು
ತನ್ನ ಕೈಯೊಳಗಿನ ಅರಿವಿನ ಕುರುಹದಿಂದ ತಿಳಿಯಲಾಗದೆ ಎಂದು ತಮ್ಮನ್ನೇ ಪ್ರಶ್ನಿಸುವ ಮನಸಂದ ಮಾರಯ್ಯನವರ ವಚನ ಅನುಭಾದ ಆಳಕ್ಕೆ ನಿಲುಕುವ ಅಗಾಧವಾದ ತಾತ್ವಿಕ ಚಿಂತನೆಯಾಗಿದೆ. ಎಲ್ಲಾಡೋರಾಗಿದ್ದು ಅವುಗಳಲ್ಲಿಯೇ ವಿಲೀನಗೊಂಡು ಜಗತ್ತಿನಲ್ಲಿ ಉದಾತ್ತೀಕರಣ ಹೊಂದುವ ನಿರಾಕಾರ ನಿರ್ಗುಣ ಭಾವಕ್ಕೆ ಕುರುಹೇ ಸಾಕ್ಷಿ ಅದರ ಮೂಲಕ ವ್ಯಕ್ತಿ ತನ್ನ ಹುಟ್ಟು ಆಧ್ಯಾತ್ಮಿಕ ಹಸಿವು ಮುಂತಾದವಗಳನ್ನು ಗ್ರಹಿಸುತ್ತಾನೆ ಅನುಭವಿಸುತ್ತಾನೆ ತನ್ನನ್ನು ಅರಿಯುತ್ತಾನೆ .ತನ್ನ ಇರಿವಿಗೆ ಬದುಕಿಗೆ ಆಧ್ಯಾತ್ಮಿಕ ಹಸಿವಿಗೆ ಕೊನೆಗೆ ಯಾವುದೇ ಕುರು ಹೆಜ್ಜೆ ಗುರುತು ತೋರದೆ ಮುಕ್ತಿ ಪಡೆಯುವುದೇ ಶರಣ ಸಂಸ್ಕೃತಿಯ ಮೇರು ತತ್ವವಾಗಿದೆ.
*ಡಾ.ಶಶಿಕಾಂತ.ಪಟ್ಟಣ ರಾಮದುರ್ಗ*